Home ಸುದ್ದಿ ರಾಜ್ಯ ಕಬ್ಬಿನ ದರ ನಿಗದಿ ಸಭೆಯಲ್ಲಿ ನಡೆದಿದ್ದೇನು?

ಕಬ್ಬಿನ ದರ ನಿಗದಿ ಸಭೆಯಲ್ಲಿ ನಡೆದಿದ್ದೇನು?

0

ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ 3,400 ರೂ. ದರ ನಿಗದಿಪಡಿಸುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ವಿಧಾನಸೌಧದಲ್ಲಿ ನಡೆದ ಸರಿಸುಮಾರು 7 ಗಂಟೆಗಳ ಮ್ಯಾರಾಥಾನ್‌ ಸಭೆಯಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರು ಮತ್ತು ರಾಜ್ಯ ಸರಕಾರದ ನಡುವೆ ಭಾರಿ ತಿಕ್ಕಾಟ ನಡೆಯಿತು.

ಸರಕಾರ ಮತ್ತು ಮಾಲೀಕರ ನಡುವೆ ಎರಡು ಸುತ್ತಿನ ಮಾತುಕತೆ ನಡೆದರೂ ಸಮಸ್ಯೆ ಇತ್ಯರ್ಥವಾಗುವ ಲಕ್ಷಣಗಳಿರ ಲಿಲ್ಲ. ಆದಾಗ್ಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರುವುದು ನಮ್ಮ ಸರಕಾರದ ಬದ್ಧತೆ. ಆದ್ದರಿಂದ ಸಕ್ಕರೆ ಕಾರ್ಖಾನೆಗಳೂ ಕೂಡ ಕೆಲಮಟ್ಟಿನ ತ್ಯಾಗಕ್ಕೆ ಮುಂದಾಗದೇ ವಿಧಿ ಇಲ್ಲ.

ಇಲ್ಲದಿದ್ದರೆ ಸರಕಾರ ತನ್ನ ಕೆಲಸ ತಾನು ಮಾಡಬೇಕಾಗುತ್ತದೆ ಎಂದು ಖಡಕ್ ಮಾತುಗಳನ್ನಾ ಡಿದ ಬಳಿಕ ಸರಕಾರ ಮತ್ತು ಕಾರ್ಖಾನೆಗಳು ಪ್ರತಿ ಮೆಟ್ರಿಕ್ ಟನ್‌ಗೆ ತಲಾ ಹೆಚ್ಚುವರಿ 50 ರೂ.ಗಳಂತೆ, ಒಟ್ಟು 100 ರೂ.ಗಳ ಹೆಚ್ಚುವರಿ ಮೊತ್ತ ನೀಡುವ ತೀರ್ಮಾನಕ್ಕೆ ಬರಲಾಯಿತು. ಸಭೆಯಲ್ಲಿ ತಮ್ಮ ಅಳಲು ತೋಡಿಕೊಂಡ ಸಕ್ಕರೆ ಕಾರ್ಖಾನೆಗಳ ಮಾಲೀಕರು, ಸಕ್ಕರೆ ಕಾರ್ಖಾನೆ ನಡೆಸುವುದು ಬಹಳ ಕ್ಲಿಷ್ಟ ಕರವಾಗಿದೆ. ಸಕ್ಕರೆ, ಎಥೆನಾಲ್, ವಿದ್ಯುತ್ ಉತ್ಪಾದನೆ ಮಾಡಿದರೂ ಸಂಕಷ್ಟದಲ್ಲಿದ್ದೇವೆ.

ಜೊತೆಗೆ ರೈತರಿಂದ ಕೆಟ್ಟ ಬೈಗುಳ ತಿನ್ನುತ್ತಿದ್ದೇವೆ. ನಾವು ಉದ್ಯೋಗ ಸೃಷ್ಟಿಸಿ ಗ್ರಾಮೀಣ ಆರ್ಥಿಕತೆಗೆ ಅಪಾರ ಕೊಡುಗೆ ನೀಡುತ್ತಿದ್ದೇವೆ. ಆದರೂ ಕೇಂದ್ರದ ನೀತಿಗಳಿಂದಲೂ ನಮಗೆ ನಷ್ಟ ಆಗುತ್ತಿದೆ. ಬೇಕಿದ್ದರೆ ಸರ್ಕಾರವೇ ಕಾರ್ಖಾನೆಗಳನ್ನು ನಡೆಸಲಿ ಎಂದು ಮಾಲೀಕರು ಸಂಕಷ್ಟ ಹೇಳಿಕೊಂಡರು. ಸಿಎಂ ಹಾರಿಸಿದ ಚಟಾಕಿ.

“ಸಕ್ಕರೆ ಕಾರ್ಖಾನೆ ನಡೆಸುವುದು ನೀವು ಹೇಳುವಷ್ಟೇ ಕಷ್ಟ ಆಗಿದ್ದರೆ ಒಂದು ಕಾರ್ಖಾನೆ ಇದ್ದವರು ಎರಡು, ಮೂರು ಕಾರ್ಖಾನೆ ಮಾಲೀಕರಾಗಿದ್ದು ಹೇಗೆ ಎನ್ನುವ ರೈತರ ಪ್ರಶ್ನೆಗೆ ಏನು ಉತ್ತರ ಹೇಳೀರಿ? ಎಂದು ಸಿಎಂ ಸಿದ್ದರಾಮಯ್ಯ ಮಾಲೀಕರನ್ನು ಪ್ರಶ್ನಿಸಿದರು.

ಆಗ ಮಧ್ಯಪ್ರವೇಶಿಸಿದ ಸಕ್ಕರೆ ಸಚಿವ ಶಿವಾನಂದ ಪಾಟೀಲ್, ಹಾಗಾದರೆ ನೀವೆಲ್ಲಾ (ಸಕ್ಕರೆ ಕಾರ್ಖಾನೆಗಳ ಮಾಲೀಕರು) ಒಟ್ಟಾಗಿ ಮಾಧ್ಯಮಗಳ ಮುಂದೆ ಸತ್ಯ ಹೇಳಿ. ಈ ಸಮಸ್ಯೆ ಸೃಷ್ಟಿ ಆಗಿರುವುದು, ನೀವುಗಳು ಸಮಸ್ಯೆಯಲ್ಲಿ ಇರುವುದು ಕೇಂದ್ರ ಸರ್ಕಾರದ ಕಾರಣದಿಂದ ಎನ್ನುವ ಹೇಳಿಕೆ ನೀಡಿ, ಕೇಂದ್ರಕ್ಕೆ ಪತ್ರ ಬರೆಯಿರಿ ಎಂದು ಸಲಹೆ ನೀಡಿದರು..

ರೈತರ ಜತೆ ನಡೆಸಿದ ಮಾತುಕತೆ ವೇಳೆ ಸಿಎಂ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ಸಮಸ್ಯೆ ಬಗೆಹರಿಸಲು ನಾವು ಸಿದ್ಧರಿದ್ದೇವೆ. ಕೇಂದ್ರ ಸರ್ಕಾರ ಪರಿಹರಿಸಬೇಕಾದ ಸಮಸ್ಯೆಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರೆ ಹೇಗೆ ಎಂದು ರೈತ ಮುಖಂಡರನ್ನು ಪ್ರಶ್ನಿಸಿದರು.

ನಿರಾಣಿ ವಾದವೇನು: ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿ ಒಪ್ಪಂದವನ್ನು ರಾಜ್ಯ ಸರ್ಕಾರ ನವೀಕರಣ ಮಾಡಿಲ್ಲ. ಮಹಾರಾಷ್ಟ್ರದಲ್ಲಿ ಸಕ್ಕರೆ ಕಾರ್ಖಾನೆಯವರಿಂದ ಖರೀದಿಸುವ ವಿದ್ಯುತ್ ಪ್ರತಿ ಯುನಿಟ್‌ಗೆ 6 ರೂ. ಪಾವತಿಸಲಾಗುತ್ತಿದೆ. ಇದೇ ಮಾದರಿಯಲ್ಲಿ ರಾಜ್ಯ ಸರ್ಕಾರ ಒಪ್ಪಂದ ಮಾಡಬೇಕಿದೆ. ಕಾರ್ಖಾನೆಗಳು ಮಾರಾಟ ಮಾಡುವ ವಿದ್ಯುತ್ ಮೇಲೆ ಪ್ರತಿ ಯುನಿಟ್‌ಗೆ 60 ಪೈಸೆ ತೆರಿಗೆ ನಿಗದಿಪಡಿಸಿರುವುದನ್ನು ಕೈಬಿಡಬೇಕು.

ಸಕ್ಕರೆ ಕಾರ್ಖಾನೆಗಳ ನಡುವಿನ ಅಂತರ ಕನಿಷ್ಠ 25 ಕಿಮೀ ನಿಗದಿಪಡಿಸಬೇಕು. ಏವಿಯೇಷನ್ ಇಂಧನಕ್ಕೆ ಎಥೆನಾಲ್ ಮಿಶ್ರಣ ಅನುಮತಿಯನ್ನು ಆದಷ್ಟು ಬೇಗನೆ ನೀಡುವಂತೆ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಬೇಕು. ಪ್ರಸ್ತುತ ರೈತರಿಗೆ ಎಫ್‌ಆರ್‌ಪಿ ಪ್ರಕಾರ ದರ ನೀಡಲಾಗುವುದು. ಹೆಚ್ಚುವರಿ ಆದಾಯ ಸಾಧ್ಯವಾದರೆ ಸೀಸನ್ ಮುಗಿದ ಬಳಿಕ ಅದನ್ನು ರೈತರಿಗೆ ಹಂಚಿಕೆ ಮಾಡಲು ಸಿದ್ಧರಿದ್ದೇವೆ.

ಸಂಘದ ಅಧ್ಯಕ್ಷರ ನಿಲುವೇನು: ಎಥೆನಾಲ್ ಎಂಎಸ್ಪಿ ಹೆಚ್ಚಳ ಕುರಿತು ಕೇಂದ್ರಕ್ಕೆ ಮನವಿ ಮಾಡಿದರೂ ಇದುವರೆಗೆ ಹೆಚ್ಚಳ ಮಾಡಿಲ್ಲ. ಇದರಿಂದ ಕರ್ನಾಟಕ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯವಾಗಿದೆ. ಇದೇ ರೀತಿ ಸಕ್ಕರೆ ರಫ್ತನ ಮೇಲೆ ನಿರ್ಬಂಧ ಹೇರಿರುವುದರಿಂದ ಸಕ್ಕರೆ ಕಾರ್ಖಾನೆಗಳಿಗೆ ಆರ್ಥಿಕವಾಗಿ ನಷ್ಟ ಉಂಟಾಗಿದೆ. ಇಡೀ ದೇಶಕ್ಕೆ ಕೇವಲ 10ಲಕ್ಷ ಮೆ. ಟನ್ ಮಾತ್ರ ರಫ್ತಗೆ ಅನುಮತಿ ನೀಡಲಾಗಿದೆ.

ಕಳೆದ ಆರು ವರ್ಷಗಳಿಂದ ಸಕ್ಕರೆ ದರವನ್ನು ಸಹ ಪರಿಷ್ಕರಿಸಿಲ್ಲ. ಆದರೆ ಕಬ್ಬಿನ ದರ ಪ್ರತಿ ವರ್ಷ ಹೆಚ್ಚುತ್ತಾ ಹೋಗುತ್ತಿದೆ. ಈ ಎಲ್ಲಾ ಕಾರಣಗಳಿಂದ ಸಕ್ಕರೆ ಕಾರ್ಖಾನೆಗಳಿಗೆ ಈಗ ಎಫ್‌ಆರ್‌ಪಿ ಪ್ರಕಾರ ರೈತರಿಗೆ ಪಾವತಿ ಮಾಡಲು ಕಷ್ಟ ಪಡಬೇಕಾದ ಪರಿಸ್ಥಿತಿಯಿದೆ. ಆದರೆ ಈ ದರ ಕಾನೂನಾತ್ಮಕವಾಗಿ ನೀಡಬೇಕಾಗಿರುವ ಹಿನ್ನೆಲೆಯಲ್ಲಿ ಕಾರ್ಖಾನೆಗಳು ಪಾವತಿಸುತ್ತಿವೆ ಕೇಂದ್ರ ಸರ್ಕಾರ ಎಫ್‌ಆರ್‌ಪಿ ದರಕ್ಕೆ ಪೂರಕವಾಗಿ ಎಂಎಸ್‌ಪಿ ದರ ಏರಿಸುತ್ತಿಲ್ಲ.

2019 ರಿಂದ ಕೇಂದ್ರ ಎಂಎಸ್‌ಪಿ ದರ ಏರಿಸಿಲ್ಲ. ಎಥೆನಾಲ್ ದರವನ್ನೂ ಏರಿಸಿಲ್ಲ. ಈ ಸಮಸ್ಯೆ ಬಗ್ಗೆಯೂ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದು ಒತ್ತಾಯಿಸಬೇಕು.

ರೈತ ಮುಖಂಡರು ಏನಂದ್ರು: ರಾಜ್ಯ ಸರಕಾರ ಕೇಂದ್ರದ ಮೇಲೆ ಒತ್ತಡ ಹೇರಿ ಸಮಸ್ಯೆ ಬಗೆಹರಿಯಬೇಕು. ಕಾರ್ಖಾನೆಗಳು ತೂಕದಲ್ಲಿ ಮೋಸ ಮಾಡುತ್ತಿವೆ: ಇಳುವರಿ ಕಡಿಮೆ ತೋರಿಸುತ್ತಿವೆ. ಎಫ್‌ಆರ್‌ಪಿ ದರ ನಿಗದಿ ಮಾಡುವಾಗ ಕೇಂದ್ರ ಸರಕಾರ ಅವೈಜ್ಞಾನಿಕ ಕ್ರಮ ಅನುಸರಿಸಿದೆ. ಉತ್ಪಾದನಾ ವೆಚ್ಚ ಹಿಂದಿನ ವರ್ಷಗಳಿಗಿಂತ 4 ಸಾವಿರ ಕಡಿಮೆ ತೋರಿಸಿದ್ದಾರೆ. ಇದ್ಯಾವ ಲೆಕ್ಕಾಚಾರ? ಬಾಗಲಕೋಟೆ ಜಿಲ್ಲೆಯಲ್ಲಿ ಕಾರ್ಖಾನೆಯೊಂದು ಹಿಂದಿನ ವರ್ಷದ ಬಾಕಿ ಉಳಿಸಿಕೊಂಡಿದೆ. ಕೆಲವು ಕಾರ್ಖಾನೆಗಳು ಹಳೆಯ ಬಾಕಿಯನ್ನು ಉಳಿಸಿಕೊಂಡಿದ್ದು, ಇದರ ಪಾವತಿಗೆ ಕ್ರಮ ಕೈಗೊಳ್ಳಬೇಕು.

ರಾಜ್ಯದ ನಿಲುವೇನು: ರೈತರ ಬೇಡಿಕೆ ಈಡೇರಿಸುವುದರಲ್ಲಿ ಕೇಂದ್ರ ಸರ್ಕಾರದ ಜವಾಬ್ದಾರಿ ಪ್ರಮುಖವಾಗಿದೆ ಮತ್ತು ಕಾರ್ಖಾನೆಗಳ ಜವಾಬ್ದಾರಿಯೂ ಇದೆ. ರಾಜ್ಯ ಸರಕಾರ ರೈತರ ಪರವಾಗಿ ನಿಲ್ಲುತ್ತದೆ. ರೈತರ ಸಮಸ್ಯೆ ಬಗೆಹರಿಸಲು ಕಾರ್ಖಾನೆಗಳೂ ಸಿದ್ಧರಿರಬೇಕು: ಕಾರ್ಖಾನೆ ಮಾಲೀಕರ ಸಮಸ್ಯೆಗಳಲ್ಲಿ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆಯೂ ಪರಿಶೀಲಿಸೋಣ.

ಸಕ್ಕರೆ ಕಾರ್ಖಾನೆ ಮಾಲೀಕರು ಹೇಳಿದ್ದೇನು: ಸಕ್ಕರೆ ಉತ್ಪಾದನೆ ಮತ್ತು ಮಾರಾಟ, ಎಥೆನಾಲ್ ಉತ್ಪಾದನೆ ಮತ್ತು ಬೆಲೆ ನಿಗಧಿ, ಸಕ್ಕರೆ ರಫ್ತು ಮತ್ತು ಬೆಲೆ ನಿಗಧಿ ಎಲ್ಲವೂ ಕೇಂದ್ರ ಸರ್ಕಾರದ ಕೈಯಲ್ಲಿದೆ. ಕೇಂದ್ರದ ನೀತಿಯಿಂದ ದಕ್ಷಿಣ ಭಾರತದ ಕಾರ್ಖಾನೆಗಳು ಸಮಸ್ಯೆಯಲ್ಲಿವೆ, ಉತ್ತರ ಭಾರತದ ಕಾರ್ಖಾನೆಗಳು ಅನುಕೂಲಕರವಾಗಿವೆ.

NO COMMENTS

LEAVE A REPLY

Please enter your comment!
Please enter your name here

Exit mobile version