ಧಾರವಾಡ: ಆರ್‌ಎಸ್‌ಎಸ್ ಪಥಸಂಚಲನ ಸೇರಿದಂತೆ ಇತರೆ ಖಾಸಗಿ ಕಾರ್ಯಕ್ರಮಗಳನ್ನು ಸರಕಾರಿ ಆವರಣದಲ್ಲಿ ನಡೆಸದಂತೆ ನೀಡಿದ್ದ ಸರಕಾರದ ಆದೇಶಕ್ಕೆ ಇಲ್ಲಿಯ ಹೈಕೋರ್ಟ್ ಪೀಠ ಮಧ್ಯಂತರ ತಡೆ ನೀಡಿದ್ದು, ಇದರ ವಿರುದ್ಧ ಸಲ್ಲಿಸಿದ್ದ ಸರಕಾರದ ಅರ್ಜಿಯನ್ನು ಹೈಕೋರ್ಟ್ ದ್ವಿಸದಸ್ಯ ಪೀಠ ವಜಾಗೊಳಿಸಿದೆ.
ಸರಕಾರದ ಆದೇಶವನ್ನು ಪ್ರಶ್ನಿಸಿ ಪುನಶ್ಚೇತನ ಸೇವಾ ಸಂಸ್ಥೆ ಸೇರಿದಂತೆ ನಾಲ್ವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇತ್ತೀಚೆಗೆ ವಾದ-ವಿವಾದ ಆಲಿಸಿದ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಸಂವಿಧಾನ ನೀಡಿರುವ ಹಕ್ಕನ್ನು ಸರಕಾರಿ ಆದೇಶ ಕಿತ್ತುಕೊಳ್ಳಲಾಗದು ಎಂದು ಅಭಿಪ್ರಾಯಪಟ್ಟು ಸರಕಾರ ಹೊರಡಿಸಿದ ಆದೇಶಕ್ಕೆ ಮಧ್ಯಂತರ ತಡೆ ನೀಡಿತ್ತು.
ಆದರೆ, ಏಕಸದಸ್ಯ ಪೀಠದ ಆದೇಶದ ವಿರುದ್ಧ ಸರಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಎಸ್.ಜಿ. ಪಂಡಿತ್ ಮತ್ತು ನ್ಯಾ. ಗೀತಾ ಕೆ.ಬಿ. ಅವರಿದ್ದ ದ್ವಿಸದಸ್ಯ ಪೀಠವು ವಾದ ವಿವಾದ ಆಲಿಸಿ ತೀರ್ಪು ಕಾಯ್ದಿರಿಸಿತ್ತು. ಗುರುವಾರ ಸರಕಾರದ ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ.
