Home ಸುದ್ದಿ ರಾಜ್ಯ ಕರ್ನಾಟಕ: 2ನೇ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ, ಬಿಜೆಪಿ ಪ್ರಶ್ನೆಗಳು

ಕರ್ನಾಟಕ: 2ನೇ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ, ಬಿಜೆಪಿ ಪ್ರಶ್ನೆಗಳು

0

ಕರ್ನಾಟಕ ಸರ್ಕಾರ ಹಿಂದುಳಿದ ವರ್ಗಗಳ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಂಡಿದೆ. ಈ ಕಾರ್ಯವು ವ್ಯವಸ್ಥಿತವಾಗಿ ಯಶಸ್ವಿಗೊಳಿಸಬೇಕು ಎಂದು ಸೂಚನೆ ನೀಡಲಾಗಿದೆ.

ಆದರೆ ರಾಜ್ಯ ಸರ್ಕಾರ ಶೈಕ್ಷಣಿಕ, ಸಾಮಾಜಿಕ ಆರ್ಥಿಕ ಸಮೀಕ್ಷೆಗಳನ್ನು ಮತ್ತೊಮ್ಮೆ ನಡೆಸಲು ನಿರ್ಧರಿಸಿರುವ ಬಗ್ಗೆ ಪ್ರತಿಪಕ್ಷ ಬಿಜೆಪಿ ಪ್ರಶ್ನೆ ಮಾಡಿದೆ. ಈ ನಿಲುವಿನ ಬಗ್ಗೆ ಬಿಜೆಪಿ ನಿಯೋಗ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿ ಈ ಸಮೀಕ್ಷೆ ಕುರಿತಂತೆ ಇರುವ ಗೊಂದಲಗಳು ಪ್ರಶ್ನೆಗಳ ಬಗ್ಗೆ ವಿವರವಾಗಿ ಚರ್ಚಿಸಿದೆ.

ನಿಯೋಗ ಮಧುಸೂದನ್ ಆರ್. ನಾಯ್ಕ, ಅಧ್ಯಕ್ಷರು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅವರಿಗೆ ಮನವಿಯೊಂದನ್ನು ಸಲ್ಲಿಕೆ ಮಾಡಿದೆ. ಇದರಲ್ಲಿ ಪಕ್ಷಕ್ಕೆ ಇರುವ ಗೊಂದಲಗಳ ಕುರಿತು ವಿವರವಾಗಿ ಪ್ರಶ್ನೆ ಮಾಡಿದೆ.

ಈ ಮನವಿ ಕರ್ನಾಟಕ ಸರ್ಕಾರದ ಉದ್ದೇಶಿತ ಜಾತಿಗಳ ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆಯ ಸ್ಪಷ್ಟೀಕರಣ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ. ಕರ್ನಾಟಕ ಸರ್ಕಾರ ಮತ್ತೊಮ್ಮೆ ಎಲ್ಲ ಜಾತಿಗಳ ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆ ನಡೆಸುವುದಾಗಿ ಘೋಷಿಸಿದೆ. ಈ ಹಿಂದೆ ಇದೇ ಆಯೋಗ ಮಾನ್ಯ ಕಾಂತರಾಜು ಅವರ ನೇತೃತ್ವದಲ್ಲಿ 2014-15ರಲ್ಲಿ ಇಂತಹದೇ ಸಮೀಕ್ಷೆ ನಡೆಸಲಾಗಿತ್ತು. ಆ ಸಮೀಕ್ಷೆಯ ವರದಿ ಮತ್ತು ದತ್ತಾಂಶಗಳು ಅನ್ಯಾನ್ಯ ಕಾರಣಗಳಿಂದಾಗಿ ಸ್ವೀಕೃತಿಯಾಗಲಿಲ್ಲ. ಕೊನೆಗದು ತಿರಸ್ಕೃತವಾದ ಕಾರಣ ಈಗ ಮತ್ತೊಂದು ಸಮೀಕ್ಷೆ ಮಾಡಬೇಕಾಗಿ ಬಂದಿದೆ.

ಕೇಂದ್ರ ಸರ್ಕಾರವೂ 2026-27ರಲ್ಲಿ ವಿವರವಾದ ಜಾತಿ ಜನಗಣತಿಗೆ ಮುಂದಾಗಿದೆ. ಆದರೆ ಕರ್ನಾಟಕ ಸರ್ಕಾರವೇ ಮತ್ತೊಮ್ಮೆ ಜಾತಿ ಸಮೀಕ್ಷೆಗೆ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಅಣಿಯಾಗಿದೆ. ಈ ಹಿನ್ನೆಲೆಯಲ್ಲಿ ಜನಮನದಲ್ಲಿರುವ ಪ್ರಶ್ನೆಗಳು, ಗೊಂದಲಗಳನ್ನು ನೇರ ಆಯೋಗದೊಂದಿಗೆ ಚರ್ಚಿಸುವ ಉದ್ದೇಶದಿಂದ ನಮ್ಮ ನಿಯೋಗ ಬಂದಿದೆ ಎಂದು ಹೇಳಿದೆ.

ನಮ್ಮ ಅಗ್ರಹಗಳು

  • ಈ ಹಿಂದಿನ ಕಾಂತರಾಜು ಆಯೋಗ, ಜಯಪ್ರಕಾಶ್‌ ಹೆಗ್ಡೆ ಆಯೋಗದ ವರದಿಯಲ್ಲಿನ ಲೋಪದೋಷಗಳ ಬಗ್ಗೆ ಪರಿಪೂರ್ಣ ಅಧ್ಯಯನ ಆಗಬೇಕು. ಅದರ ಆಧಾರದಲ್ಲಿ ಸಮೀಕ್ಷೆಗೆ ಬೇಕಾದ ತಿದ್ದುಪಡಿ, ಮಾರ್ಪಾಟುಗಳು ಆಗಬೇಕು.
  • ಸಮೀಕ್ಷೆಯ ಸ್ವರೂಪದ ಬಗ್ಗೆಯೂ ಸ್ಪಷ್ಟತೆ ಬೇಕು. ಪೂರ್ವತಯಾರಿಗೆ ಸಾಕಷ್ಟು ಸಮಯಾವಕಾಶವೂ ಬೇಕಾಗುತ್ತದೆ. ಸೆಪ್ಟೆಂಬರ್ ಕೊನೆ ಮತ್ತು ಅಕ್ಟೋಬರ್ ಮೊದಲ ವಾರದಲ್ಲಿ ಸಮೀಕ್ಷೆ ಮಾಡಲಾಗುವುದು ಎಂದು ಪ್ರಕಟಿಸಲಾಗಿದೆ. ಮೂರು ತಿಂಗಳ ಹಿಂದೆ ನ್ಯಾ. ನಾಗಮೋಹನ್‌ದಾಸ್ ಆಯೋಗ ಸಮಾಜ ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ಪರಿಶಿಷ್ಟ ಜಾತಿಗಳ ಅಂದರೆ ಶೇ.17ರ ಜನಸಂಖ್ಯೆಯ ಸಮೀಕ್ಷೆ ನಡೆಸಿತ್ತು. ಆಗಲೂ 15 ದಿನ ನಿಗದಿಪಡಿಸಲಾಗಿತ್ತು. ಕೊನೆಗೆ ಎರಡು ತಿಂಗಳಾದರೂ ಸಮೀಕ್ಷೆ ಮುಗಿಯಲಿಲ್ಲ. ಬೆಂಗಳೂರಿನಲ್ಲಿ ಶೇ.57 ರಷ್ಟು ಮಾತ್ರ ಸಮೀಕ್ಷೆ ಮಾಡಲು ಸಾಧ್ಯವಾಯಿತು. ಆಗ ಶಾಲಾ ಶಿಕ್ಷಕರನ್ನು ಬೇಸಿಗೆ ರಜೆಯ ಕಾರಣಕ್ಕೆ ತಿಂಗಳುಗಟ್ಟಲೆ ದುಡಿಸಿಕೊಂಡರೂ ಸಮೀಕ್ಷೆಗೆ ನಿರೀಕ್ಷಿತ ಯಶಸ್ಸು ಸಿಗಲಿಲ್ಲ.
  • ಈಗ ದಸರಾ ರಜೆಯ 15 ದಿನಗಳಲ್ಲಿ ಶೇ.100ರ ಸಂಖ್ಯೆಯ ಸಮೀಕ್ಷೆ ಸಾಧ್ಯವೇ? ಪೂರ್ವತಯಾರಿಗೆ ಸಮಯಾವಕಾಶ ಸಾಕಾಗುತ್ತದೆಯೇ? ಸಮೀಕ್ಷೆ ನಡೆಸುವವರಿಗೆ ತರಬೇತಿ ಕೊಡಲು ಸಿದ್ಧತೆ ಏನಾಗಿದೆ? ಈ ಸಂದರ್ಭದದಲ್ಲಿ ರಜೆಗಳು ಇರುವುದರಿಂದ ಗಣತಿ ಮಾಡಬೇಕಾದವರು ಗಣತಿಗೆ ಒಳಗಾಗಬೇಕಾದವರು ಇಬ್ಬರೂ ಒತ್ತಡದಲ್ಲಿರುತ್ತಾರೆ. ಹೀಗಾಗಿ ಪರಿಪೂರ್ಣವಾದ ಸಮೀಕ್ಷೆ ಸಾಧ್ಯವಾಗುತ್ತದೆಯೇ?.
  • ಎರಡು ತಿಂಗಳ ಹಿಂದೆ ಸರ್ಕಾರದ ಖಜಾನೆಯಿಂದ 115 ಕೋಟಿ ರೂಗಳನ್ನು ವ್ಯಯಿಸಿ ಶೇ. 17 ರಷ್ಟಿರುವ 101ಜಾತಿಗಳ ಸಮೀಕ್ಷೆ ನಡೆಸಿತ್ತು. ಈಗ ಮತ್ತೆ ಪರಿಶಿಷ್ಟ ಜಾತಿಗಳ ಸಮೀಕ್ಷೆ ಮಾಡಲಾಗುವುದೇ?
  • ಪ್ರಶ್ನೆಗಳ ಪಟ್ಟಿ ದೊಡ್ಡದಾದಷ್ಟು ಸಮೀಕ್ಷೆಯಲ್ಲಿ ಕೃತಕತೆ ಹೆಚ್ಚಾಗುತ್ತದೆ. ಗಣತಿದಾರರ ಅಷ್ಟೊಂದು ಪ್ರಶ್ನೆಗಳನ್ನು ಕೇಳದೆ ಹೋಗಬಹುದು ಎನ್ನುವುದು ಕೇಂದ್ರ ಸರ್ಕಾರದ ಜನಗಣತಿಯಲ್ಲಿ ತೊಡಗಿದವರ ಅನುಭವದ ಮಾತು. ನಮ್ಮದು ಅತ್ಯಂತ ದೊಡ್ಡ ಸಮೀಕ್ಷೆ ಎಂದು ಸಾಧಿಸಲು ಹೋಗಿ ಕಳಪೆ ಗುಣಮಟ್ಟದ ದತ್ತಾಂಶಗಳು ಹೊರಬರುತ್ತವೆ. ಈ ಬಗ್ಗೆ ಎಚ್ಚರ ವಹಿಸಬೇಕು.
  • ಕಳೆದವಾರ ಆಯೋಗ ಜಾತಿಗಳ ಪಟ್ಟಿಯನ್ನು ಜಾಹೀರಾತು ಕೊಟ್ಟು ಸಾರ್ವಜನಿಕರ ಅವಗಾಹನೆಗೆ ತಂದದ್ದು ಒಳ್ಳೆಯ ಉಪಕ್ರಮ. ಅದಕ್ಕಾಗಿ ಆಯೋಗಕ್ಕೆ ಅಭಿನಂದನೆಗಳು, ಅನೇಕ ಜಾತಿ, ಉಪಜಾತಿಗಳವರು ಸಮಾನಾಂತರ ಹೆಸರುಗಳು ಬಿಟ್ಟುಹೋಗಿರುವ ಬಗ್ಗೆ ಅಸಮಾಧಾನದಲ್ಲಿದ್ದರು. ಈ ಬಗ್ಗೆ ಇನ್ನಷ್ಟು ಕಾಲಾವಕಾಶ ನೀಡಬೇಕು.
  • ಜಾತಿ ಪಟ್ಟಿಯನ್ನು ಪ್ರವರ್ಗವಾರು ಕನ್ನಡದ ವರ್ಣಮಾಲೆಯ ಪ್ರಕಾರ ಪ್ರಕಟಿಸಬೇಕು.
  • ಕುಂಬಾರ ಕ್ರಿಶ್ಚಿಯನ್, ಮಡಿವಾಳ ಕ್ರಿಶ್ಚಿಯನ್, ನೇಕಾರ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್ ಸೇರಿದಂತೆ 100ಕ್ಕೂ ಹೆಚ್ಚು ಜಾತಿಗಳು ಈ ರೀತಿಯಾಗಿ ಜಾತಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ರೀತಿಯ ಜಾತಿಗಳು ಸರ್ಕಾರದ ಅಧಿಕೃತ SC, ST, OBC ಜಾತಿ ಪಟ್ಟಿಯಲ್ಲಿ ಇದೆಯೇ? ಈ ಪಟ್ಟಿ ಕಾಂತರಾಜು ನಾಗಮೋಹನ್‌ದಾಸ್ ಸಮೀಕ್ಷೆಯಲ್ಲಿ ಇರಲಿಲ್ಲ? ಯಾವ ಉದ್ದೇಶದಿಂದ ಈಗ ಈ ರೀತಿ ಕ್ರೈಸ್ತ ಜಾತಿಗಳನ್ನು ಸೇರಿಸಲಾಗಿದೆ? ತಕ್ಷಣ ಈ ಪಟ್ಟಿಯನ್ನು ಕೈಬಿಡಬೇಕು.
  • ಮುಸ್ಲಿಂ ಜಾತಿಗಳ ಸಮೀಕ್ಷೆ ಹೇಗೆ ಮಾಡುತ್ತೀರಿ? ಕಾಂತರಾಜು ಆಯೋಗ ಪ್ರವರ್ಗ ಮತ್ತು ಪ್ರವರ್ಗ 2Bಯಲ್ಲಿರುವ 19 ಜಾತಿಗಳ ಸಮೀಕ್ಷೆ ಮಾಡಿತ್ತು. ಆದರೆ 2Bಯಲ್ಲಿರುವ ಮುಂದುವರಿದ ಮುಸ್ಲಿಮರ ‘ಜಾತಿ ಸಮೀಕ್ಷೆ ಮಾಡದೆ ಅವರಿಗೆ ಮತೀಯವಾಗಿ ಗುರುತಿಸಿಕೊಳ್ಳಲು ಅವಕಾಶ ನೀಡಲಾಯಿತು. ಅಯೋಗದ ಅಧ್ಯಕ್ಷರಾಗಿದ್ದ ಶ್ರೀ ಜಯಪ್ರಕಾಶ್‌ ಹೆಗ್ಡೆ ಆಯೋಗದ ಪಟ್ಟಿಯಲ್ಲಿ ಮುಸ್ಲಿಮರ 99 ಜಾತಿಗಳಿವೆ ಎಂದು ಹೇಳಿದ್ದರು. ಈಗ ಜಾತಿ ಸಮೀಕ್ಷೆಯಲ್ಲಿ ಎಲ್ಲ 99 ಜಾತಿಗಳು ಹೇಗೆ ಒಳಗೊಳ್ಳುತ್ತದೆ?
  • ಕಾಂತರಾಜು ಅವರ ವರದಿಯಲ್ಲಿ ಮುಸ್ಲಿಮರ ಒಟ್ಟು ಜನಸಂಖ್ಯೆ 2011ರ ರಾಷ್ಟ್ರೀಯ ಜನಸಂಖ್ಯೆಗಿಂತ ಕಡಿಮೆ ಇತ್ತು. ಇದು ಹಾಸ್ಯಾಸ್ಪದ ಮಾತ್ರವಲ್ಲ ಸಮೀಕ್ಷೆ ನಡೆಸಿದ ಆಯೋಗದ credibility/ ವಿಶ್ವಾಸಾರ್ಹತೆಯನ್ನು ಕುಂದಿಸುತ್ತದೆ. ಈ ಬಗ್ಗೆ ಯಾವ ಎಚ್ಚರಿಕೆಯನ್ನು ವಹಿಸಲಾಗಿದೆ?.
  • ನಮಗೆ ಜಾತಿ ಇಲ್ಲ, ಜಾತಿಯಿಂದ ಗುರುತಿಸಿಕೊಳ್ಳುವುದಿಲ್ಲ ಎನ್ನುವವರನ್ನು ಸಮೀಕ್ಷೆ ಹೇಗೆ ಒಳಗೊಳ್ಳುತ್ತದೆ. ಅಂತರ್ ಜಾತಿ ವಿವಾಹಿತರನ್ನು ಹೇಗೆ ಪರಿಗಣಿಸುತ್ತೀರಿ?.
  • ಅನ್ಯಾನ್ಯ ಕಾರಣಗಳಿಂದ ಹೊರ ದೇಶದವರೂ ಕರ್ನಾಟಕದಲ್ಲಿ ನೆಲೆಸಿದ್ದಾರೆ. ಇವರಲ್ಲಿ ಅನಧಿಕೃತವಾಗಿ ನುಸುಳಿಬಂದ ಬಾಂಗ್ಲಾದೇಶಿಗರು ಇದ್ದಾರೆ. ಅಕ್ರಮ ನುಸುಳುಕೋರರು ಆಧಾರ್ ಕಾರ್ಡ್ ಪಡೆದವರೂ ಇರುತ್ತಾರೆ. ಇವರನ್ನು ಹೇಗೆ ನಿಭಾಯಿಸಬೇಕೆಂಬುದು ಅತ್ಯಂತ ಗಂಭೀರವಾದ ಪ್ರಶ್ನೆ. ಈ ಬಗ್ಗೆ ಆಯೋಗ ತುರ್ತಾಗಿ ಕೇಂದ್ರ ಸರ್ಕಾರವನ್ನು ಸಂಪರ್ಕಿಸಿ ಮಾರ್ಗಸೂಚಿಯನ್ನು ಪಡೆಯಬೇಕು.
  • ಒಂದೇ ಮನೆಸಂಖ್ಯೆಯಲ್ಲಿ 20ಕ್ಕೂ ಹೆಚ್ಚು ಜನರಿದ್ದರೆ ಸಮೀಕ್ಷೆ ಹೇಗೆ ಮಾಡುತ್ತೀರಿ. ಅಲ್ಲಿ ಬಹುತೇಕ ಅಕ್ರಮವಾಗಿ ನೆಲೆಸಿದವರೇ ಇರುತ್ತಾರೆ. ಇದು ಅತ್ಯಂತ ಗಂಭೀರವಾದ, ರಾಷ್ಟ್ರಮಟ್ಟದ ಚರ್ಚೆಗೂ ಕಾರಣವಾಗಿರುವುದನ್ನು ಆಯೋಗ ಗಮನಕ್ಕೆ ತಂದುಕೊಳ್ಳಬೇಕು. ಕೃತಕವಾಗಿ ಉಬ್ಬಿರುವ ಜನಸಂಖ್ಯೆಯ ಮನೆಗಳನ್ನು ಪ್ರತ್ಯೇಕಿಸಬೇಕು. ಅಗತ್ಯ ಬಿದ್ದರೆ ಪೋಲೀಸ್ ಸಹಾಯವನ್ನು ಗಣತಿದಾರರಿಗೆ ಒದಗಿಸಬೇಕು.
  • ಜನತೆ ಕೊಡುವ ಮಾಹಿತಿಯಲ್ಲಿ ನಿಖರತೆಯ ಸಮಸ್ಯೆಗಳಿವೆ. ಜಾತಿ ಜನಗಣತಿ ವಿಪರೀತವಾಗಿ ರಾಜಕಾರಣಗೊಂಡಿದೆ. ಜಾತಿ, ಸಮುದಾಯಗಳ ನಡುವೆ ಪೈಪೋಟಿಯೂ ಇದೆ. ಹೀಗಾಗಿ ದಾಖಲೆ ಇಲ್ಲದ ಸುಳ್ಳು ಮಾಹಿತಿ ಒದಗಿಸುತ್ತಾರೆ. ಇದು ದತ್ತಾಂಶಗಳ ಗುಣಮಟ್ಟವನ್ನು ತಗ್ಗಿಸುತ್ತದೆ. ಇದಕ್ಕೆ ಯಾವ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುತ್ತದೆ?.
  • ಸಮೀಕ್ಷೆ ಒಳಪಟ್ಟ ಮನೆಗಳಿಗೆ ಸ್ವೀಕೃತಿ ಪತ್ರ ಕೊಡಬಹುದೇ? ಸಮೀಕ್ಷೆ ಕುರಿತು ಸ್ವೀಕೃತಿ ಪತ್ರವನ್ನು ಜಾರಿ ಮಾಡುವ ಬಗ್ಗೆ ನಾವು ಆಗ್ರಹಿಸುತ್ತೇವೆ. ಇದರಿಂದ ಸಮೀಕ್ಷೆ ಅತ್ಯಂತ ನಿಖರವಾಗಿ ಮತ್ತು ಯಾವ ಆಕ್ಷೇಪದ ಧ್ವನಿಯೂ ಹೊರಹೊಮ್ಮದಂತೆ ಕಾರ್ಯನಿರ್ವಹಣೆ ಆಗುವ ಅನಿಸಿಕೆಯಾಗಿದೆ. ಸ್ಟಿಕ್ಕರ್ ಅಂಟಿಸುವುದರ ಹೊರತಾಗಿ ಸ್ವೀಕೃತಿ ಪತ್ರ ಒಂದು ಅಧಿಕೃತ ದಾಖಲೆಯಾಗಿ ಉಳಿಯಲು ಸಹಾಯವಾಗುತ್ತದೆ. ವಿದ್ಯುತ್‌ ಮೀಟರ್‌ಗಳನ್ನು ಟ್ಯಾಗ್ ಮಾಡಲಾಗುವುದು ಹೇಗೆ?

ಆಯೋಗ ಅತ್ಯಂತ ಮಹತ್ವದ ಜವಾಬ್ದಾರಿ ಹೊತ್ತಿದೆ. ಇಡೀ ಸಮೀಕ್ಷೆಯ ಹೊಣೆ ಹೊರಬೇಕಾದ ಹಿಂದುಳಿದ ವರ್ಗಗಳ ಇಲಾಖೆ ಸಮಾಜ ಕಲ್ಯಾಣ ಇಲಾಖೆಯಷ್ಟು ಸಶಕ್ತವಾಗಿಲ್ಲ. ಹೀಗಾಗಿ ಪೂರ್ವ ತಯಾರಿಯಲ್ಲಿ ಕೊರತೆಗಳಿದ್ದರೆ ಆಯೋಗ ಈ ದಸರಾ ರಜೆಯಲ್ಲಿ ಸಮೀಕ್ಷೆ ನಡೆಸುವುದು ಸಾಧ್ಯವಿಲ್ಲ ಎಂದು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು. ಇನ್ನಷ್ಟು ಸಮಯಾವಕಾಶ ಪಡೆದು ಎಲ್ಲ ರೀತಿಯ ಅಗತ್ಯ ಸಿದ್ಧತೆಯೊಂದಿಗೆ ಸಮೀಕ್ಷೆಗೆ ಮುಂದಾಗಬೇಕೆಂದು ನಮ್ಮ ಮನವಿ ಎಂದು ಬಿಜೆಪಿ ನಿಯೋಗ ಹೇಳಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version