Home ಸುದ್ದಿ ರಾಜ್ಯ ಸೈಬರ್ ಕ್ರೈಂನಲ್ಲಿ ಕರ್ನಾಟಕ ನಂಬರ್-1: ಬೆಂಗಳೂರಲ್ಲೇ ಅತಿ ಹೆಚ್ಚು ಅಪರಾಧ

ಸೈಬರ್ ಕ್ರೈಂನಲ್ಲಿ ಕರ್ನಾಟಕ ನಂಬರ್-1: ಬೆಂಗಳೂರಲ್ಲೇ ಅತಿ ಹೆಚ್ಚು ಅಪರಾಧ

1

ಕರ್ನಾಟಕವು ದೇಶದ ಸೈಬರ್ ಅಪರಾಧ ರಾಜಧಾನಿಯಾಗಿ ಹೊರಹೊಮ್ಮಿದೆ. 2023ರಲ್ಲಿ ದೇಶದಲ್ಲಿ ಅತಿ ಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿದ್ದು, ದೇಶದಲ್ಲಿ ವರದಿಯಾದ ಒಟ್ಟು ಸೈಬ‌ರ್ ಅಪರಾಧ ಪ್ರಕರಣಗಳಲ್ಲಿ ಶೇ.25.57 ರಷ್ಟು ಪಾಲು ಕರ್ನಾಟಕದ್ದಾಗಿದೆ. ಇದಲ್ಲದೆ, ದೇಶದ 19 ಮಹಾನಗರಗಳಲ್ಲಿ ದಾಖಲಾದ ಸೈಬ‌ರ್ ಅಪರಾಧಗಳ ಒಟ್ಟು ಪ್ರಕರಣಗಳಲ್ಲಿ ಶೇ.51 ರಷ್ಟು ಪ್ರಕರಣಗಳು ಕೇವಲ ಬೆಂಗಳೂರು ಮಹಾನಗರವೊಂದರಲ್ಲೇ ವರದಿಯಾಗಿವೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, 2023ರಲ್ಲಿ ರಾಜ್ಯದಲ್ಲಿ ಒಟ್ಟು 21,889 ಸೈಬ‌ರ್ ಅಪರಾಧ ಪ್ರಕರಣಗಳು ದಾಖಲಾಗಿದ್ದು, ಇದು ಎರಡನೇ ಸ್ಥಾನದಲ್ಲಿರುವ ತೆಲಂಗಾಣಕ್ಕಿಂತ (18,236 ಪ್ರಕರಣಗಳು) ಶೇ. 20 ರಷ್ಟು ಹೆಚ್ಚಾಗಿದೆ. ಕರ್ನಾಟಕದ ಸೈಬರ್ ಅಪರಾಧ ಹೆಚ್ಚಳಕ್ಕೆ ಬೆಂಗಳೂರು ಕೇಂದ್ರ ಬಿಂದುವಾಗಿದೆ.

ಐಟಿ ಕೇಂದ್ರವಾಗಿರುವ ಬೆಂಗಳೂರಿನಲ್ಲಿ ರಾಜ್ಯದ ಒಟ್ಟು ಪ್ರಕರಣಗಳಲ್ಲಿ ಬರೋಬ್ಬರಿ 17,631 ಪ್ರಕರಣಗಳು ವರದಿಯಾಗಿದ್ದು, ದೇಶದಲ್ಲಿ ಅತೀ ಹೆಚ್ಚು ಸೈಬರ್ ಅಪರಾಧ ಸಂಭವಿಸಿದ ನಗರ ಎಂಬ ಕಳಂಕಕ್ಕೆ ಪಾತ್ರವಾಗಿದೆ. ಮೆಟ್ರೋಪಾಲಿಟನ್ ನಗರಗಳ ಪೈಕಿ, 19 ಮಹಾನಗರಗಳಲ್ಲಿನ ಒಟ್ಟು ಪ್ರಕರಣಗಳಲ್ಲಿ ಶೇ. 51.92 ರಷ್ಟು ಪಾಲು ಬೆಂಗಳೂರಿನದ್ದಾಗಿದೆ.

2023 ರಲ್ಲಿ 4,855 ಪ್ರಕರಣಗಳೊಂದಿಗೆ ಹೈದರಾಬಾದ್ ಎರಡನೇ ಸ್ಥಾನದಲ್ಲಿದೆ. ಬೆಂಗಳೂರಿನ ಸೈಬರ್ ಅಪರಾಧ ದರವು ಪ್ರತಿ ಲಕ್ಷ ಜನಸಂಖ್ಯೆಗೆ 207.4 ಪ್ರಕರಣಗಳಷ್ಟಿದ್ದು, ಇದು ರಾಷ್ಟ್ರೀಯ ಸರಾಸರಿಗಿಂತ ಏಳು ಪಟ್ಟು ಹೆಚ್ಚು ಅಪಾಯಕಾರಿಯಾಗಿದೆ. ನಗರದಲ್ಲಿ ಸೈಬ‌ರ್ ಪ್ರಕರಣಗಳ ಸಂಖ್ಯೆ 2021 ರಲ್ಲಿ 6,423 ರಿಂದ 2022 ರಲ್ಲಿ 9,940ಕ್ಕೆ ಮತ್ತು 2023 ರಲ್ಲಿ 17,631 ಕ್ಕೆ ಏರಿಕೆಯಾಗಿದೆ. ವಂಚನೆ ಮತ್ತು ಲೈಂಗಿಕ ಶೋಷಣೆ ಸೈಬರ್ ಅಪರಾಧಗಳಿಗೆ ಎರಡು ಪ್ರಮುಖ ಉದ್ದೇಶಗಳಾಗಿವೆ ಎಂದು ದತ್ತಾಂಶ ಹೇಳುತ್ತದೆ.

2024 ರಲ್ಲಿ ರಾಜ್ಯದಲ್ಲಿ 22,468 ಸೈಬರ್ ಅಪರಾಧಗಳು ದಾಖಲಾಗಿದ್ದು, ಸ್ವಲ್ಪ ಹೆಚ್ಚಳ ಕಂಡುಬಂದಿದೆ. ಆದರೆ, 2025ರ ಮೊದಲಾರ್ಧದಲ್ಲಿ (ಅರ್ಧ ವರ್ಷದಲ್ಲಿ) 7,293 ಪ್ರಕರಣಗಳು ದಾಖಲಾಗಿದ್ದು, ಇದು ಹಿಂದಿನ ವರ್ಷಗಳಿಗಿಂತ ಕನಿಷ್ಠ 2,000 ಕಡಿಮೆ ಎಂದು ರಾಜ್ಯ ಅಪರಾಧ ದಾಖಲೆಗಳು ತಿಳಿಸಿವೆ. ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದರೂ, ಅಪರಾಧಗಳ ಸಂಕೀರ್ಣತೆ ಮತ್ತು ನಷ್ಟವಾಗುತ್ತಿರುವ ಹಣದ ಪ್ರಮಾಣ ಮಾತ್ರ ಹೆಚ್ಚುತ್ತಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸೈಬ‌ರ್ ಸುರಕ್ಷತಾ ತಜ್ಞ ಶಿವಾಲಿಂಗ್ ಸಲಕ್ಕಿ ಮಾತನಾಡಿ, ವಂಚಕರು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿರುವುದರಿಂದ, ಹೆಚ್ಚಿನ ಜನರು ಸೈಬ‌ರ್ ಅಪರಾಧಗಳಲ್ಲಿ ಭಾಗಿಯಾಗುತ್ತಿದ್ದಾರೆ. ಶಿಕ್ಷೆಯ ಪ್ರಮಾಣವನ್ನು ಸುಧಾರಿಸಲು ನುರಿತ ಸೈಬರ್ ಅಪರಾಧ ತನಿಖಾಧಿಕಾರಿಗಳ ಕೊರತೆಯನ್ನು ನೀಗಿಸಬೇಕು. ಹೂಡಿಕೆ, ಆನ್‌ಲೈನ್ ವ್ಯಾಪಾರ ಮತ್ತು ಇ-ಕಾಮರ್ಸ್ ಹೆಚ್ಚಳದಿಂದ ಇಲ್ಲಿನ ಜನರು ಸೈಬ‌ರ್ ಅಪರಾಧಗಳಿಗೆ ಹೆಚ್ಚು ಗುರಿಯಾಗುತ್ತಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ, ಶಿಕ್ಷಿತ ವ್ಯಕ್ತಿಗಳು ಕೂಡ ತಮ್ಮ ತಮ್ಮ ಉಳಿತಾಯವನ್ನು ಕಳೆದುಕೊಳ್ಳುವ ಹೂಡಿಕೆ ವಂಚನೆ ಮತ್ತು ಕೊರಿಯರ್ ಹಗರಣಗಳಲ್ಲಿ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ. ಇತರ ರಾಜ್ಯಗಳಿಗಿಂತ ನಮ್ಮಲ್ಲಿ ಉತ್ತಮ ವರದಿ ಮಾಡುವ ಕಾರ್ಯವಿಧಾನಗಳಿವೆ.

ಉದಾಹರಣೆಗೆ, ಕರ್ನಾಟಕದಲ್ಲಿ ಆರ್ಥಿಕ ನಷ್ಟವಿಲ್ಲದ ಪ್ರಕರಣಗಳನ್ನು ಸಹ ದಾಖಲಿಸಲಾಗುತ್ತದೆ ಮತ್ತು ಸಂತ್ರಸ್ತರಿಗೆ ಎಲ್ಲಾ ಠಾಣೆಗಳಲ್ಲಿ ದೂರು ದಾಖಲಿಸಲು ಪ್ರೋತ್ಸಾಹಿಸಲಾಗುತ್ತದೆ.ಆದರೆ, ಒಂದು ಲಕ್ಷಕ್ಕಿಂತ ಕಡಿಮೆ ಆರ್ಥಿಕ ನಷ್ಟವಿರುವ ಪ್ರಕರಣಗಳನ್ನು ಹಲವಾರು ರಾಜ್ಯಗಳು ದಾಖಲಿಸುವುದಿಲ್ಲ ಎಂದು ಮತ್ತೊಬ್ಬ ಹಿರಿಯ ಅಧಿಕಾರಿ ವಿವರಿಸಿದಾರೆ.

ಶಿಕ್ಷೆ ಪ್ರಮಾಣ ಅತ್ಯಂತ ಕಡಿಮೆ

* ಸೈಬರ್ ಅಪರಾಧಗಳನ್ನು ವರದಿ ಮಾಡುವವರ ಸಂಖ್ಯೆ ಹೆಚ್ಚಿದ್ದರೂ, ಅಪರಾಧಿಗಳಿಗೆ ಶಿಕ್ಷೆಯಾಗುವುದು ಮಾತ್ರ ಕಡಿಮೆಯಾಗಿದೆ.

* 2023ರಲ್ಲಿ ಕರ್ನಾಟಕದಲ್ಲಿ ಕೇವಲ 44 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ.

* ಬೆಂಗಳೂರಿಗೆ ಸಂಬಂಧಿಸಿದಂತೆ, ಶೇ.೦.3 ಕ್ಕಿಂತ ಕಡಿಮೆ ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ ವಿಧಿಸಲಾಗುತ್ತದೆ.

ಸೈಬ‌ರ್ ಕ್ರೈಮ್ ಹೆಚ್ಚಲು ಕಾರಣವೇನು?: ಐಟಿ ಹಬ್ ಆಗಿರುವ ಬೆಂಗಳೂರಿನಲ್ಲಿ ಡಿಜಿಟಲ್ ವಹಿವಾಟು ಹೆಚ್ಚಿರುವುದರಿಂದ ಸೈಬರ್ ವಂಚನೆ ಪ್ರಕರಣಗಳು ತೀವ್ರಗೊಂಡಿವೆ. ಐಟಿ ವೃತ್ತಿಪರರು ಮತ್ತು ಶ್ರೀಮಂತರು ಸೈಬ‌ರ್ ವಂಚಕರ ಮುಖ್ಯ ಗುರಿಯಾಗಿದ್ದಾರೆ. ವಂಚಕರು’ಡಿಜಿಟಲ್ ಅರೆಸ್ಟ್, ಆನ್‌ಲೈನ್ ಹೂಡಿಕೆ ಹಾಗೂ ಉದ್ಯೋಗದಂತಹ ನೂತನ ತಂತ್ರಗಳನ್ನು ಬಳಸುತ್ತಿದ್ದಾರೆ.

ಉತ್ತರ ಪ್ರದೇಶ, ರಾಜಸ್ಥಾನದಂತಹ ಹೊರ ರಾಜ್ಯಗಳಿಂದ ಸಂಘಟಿತ ಜಾಲಗಳು ಮ್ಯೂಲ್ ಖಾತೆ ಮತ್ತು ಟೆಲಿಗ್ರಾಂ ಬಳಸಿ ಕಾರ್ಯಾಚರಣೆ ನಡೆಸುತ್ತಿರುವುದು ತನಿಖೆಗೆ ಸವಾಲಾಗಿದೆ. ಹೆಚ್ಚುತ್ತಿರುವ ಪ್ರಕರಣಗಳಿಗೆ ಹೋಲಿಸಿದರೆ, ಪತ್ತೆ ಮತ್ತು ಶಿಕ್ಷೆ ಪ್ರಮಾಣ ಕಡಿಮೆಯಾಗಿರುವುದು ವಂಚಕರಿಗೆ ಮತ್ತಷ್ಟು ಪ್ರೋತ್ಸಾಹ ನೀಡಿದೆ.

1 COMMENT

LEAVE A REPLY

Please enter your comment!
Please enter your name here

Exit mobile version