Home ಸುದ್ದಿ ರಾಜ್ಯ ʼಗ್ಯಾರಂಟಿʼ ಕೊಂಡಾಡಿದ ಸಿಎಂ: ಸ್ವಾತಂತ್ರ್ಯೋತ್ಸವ ಭಾಷಣದ ಹೈಲೆಟ್ಸ್!

ʼಗ್ಯಾರಂಟಿʼ ಕೊಂಡಾಡಿದ ಸಿಎಂ: ಸ್ವಾತಂತ್ರ್ಯೋತ್ಸವ ಭಾಷಣದ ಹೈಲೆಟ್ಸ್!

0

ಬೆಂಗಳೂರು: ಬಸವಣ್ಣನವರ ನುಡಿದಂತೆ ನಡೆಯಬೇಕು ಎಂಬ ಧ್ಯೇಯ ವಾಕ್ಯದಲ್ಲಿ ನಂಬಿಕೆಯಿಟ್ಟ ನಮ್ಮ ಸರ್ಕಾರ ತನ್ನದೇ ಆದ ಅಭಿವೃದ್ಧಿ ಮಾದರಿಗಳನ್ನು ನಿರ್ಮಿಸಿದೆ. ಇದಕ್ಕೆ ‘ಕರ್ನಾಟಕ ಅಭಿವೃದ್ಧಿ ಮಾದರಿ’ಎಂಬ ಹೆಸರಿನಲ್ಲಿ ಮನ್ನಣೆ ದೊರೆತಿರುವುದು ಹೆಮ್ಮೆಯ ಸಂಗತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನ ಮಾಣಿಕ್‌ ಷಾ ಪರೇಡ್‌ ಮೈದಾನದಲ್ಲಿ 79ನೇ ಸ್ವಾತಂತ್ರ್ಯ ದಿನದ ಧ್ವಜಾರೋಹಣ ನೆರವೇರಿಸಿದರು. ಬಳಿಕ ಸ್ವಾತಂತ್ರೋತ್ಸವ ಭಾಷಣದಲ್ಲಿ ಮಾತನಾಡಿದ ಅವರು ಗ್ಯಾರಂಟಿ ಯೋಜನೆಗಳು ಜನರ ಜೀವನವನ್ನೇ ಬದಲಿಸಿದೆ. ವಿಶ್ವಸಂಸ್ಥೆಯ ಮುಖ್ಯಸ್ಥರಾದ ಫಿಲೆಮಾನ್ ಯಾಂಗ್ರವರು ಕರ್ನಾಟಕಕ್ಕೆ ಬಂದು ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಈ ಮೂಲಕ ನಮ್ಮ ಯೋಜನೆಗಳು ವಿಶ್ವಮಾನ್ಯಗೊಂಡಿವೆ ಎಂದು ಹೇಳಿದರು.

ದೇಶದ ಪ್ರಮುಖ ಸಂಸ್ಥೆಗಳು ಮಾಡಿರುವ ಸಮೀಕ್ಷೆಗಳ ಪ್ರಕಾರ ಶೇ. 10 ರಷ್ಟಿರುವ ಶ್ರೀಮಂತರ ಬಳಿ ಶೇ. 80ರಷ್ಟು ಸಂಪತ್ತು ಶೇಖರಣೆಯಾಗಿದೆ. ಆದರೆ ಶೇ. 10 ಜನ ಕೇವಲ ಶೇ. 3ರಷ್ಟು ಮಾತ್ರ ಜಿಎಸ್‌ಟಿ ಪಾವತಿಸುತ್ತಿದ್ದರೆಂದು ಅಧ್ಯಯನಗಳು ಹೇಳುತ್ತಿವೆ. ಉಳಿದ ಶೇ. 90ರಷ್ಟು ಜನ ಹೊಟ್ಟೆ-ಬಟ್ಟೆಗೆ ದುಡಿಯುವವರಾದ್ದರಿಂದ ಶೇ. 97 ರಷ್ಟು ಜಿಎಸ್‌ಟಿ ಪಾವತಿಸುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಯಾವ ಆರ್ಥಿಕತೆ ಮುಂದುವರೆಯಲು ಸಾಧ್ಯ? ಸಂವಿಧಾನದ ಆಶಯಗಳನ್ನು ಈಡೇರಿಸುವುದು ಹೇಗೆ? ಬೃಹದಾಕಾರವಾಗಿ ಬೆಳೆಯುತ್ತಿರುವ ಅಸಮಾನತೆಯನ್ನು ತಗ್ಗಿಸುವುದು ಹೇಗೆ? ಎಂಬ ಪ್ರಶ್ನೆಗಳು ನಮ್ಮನ್ನು ಬಾಧಿಸಲಾರಂಭಿಸಿದವು. ಈ ಬೃಹತ್ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಉದ್ದೇಶದಿಂದಲೇ ನಾವು ಗ್ಯಾರಂಟಿ ಯೋಜನೆಗಳು ಹಾಗೂ ಇನ್ನಿತರೆ ಜನ ಕಲ್ಯಾಣದ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ ಎಂದರು.

ಗ್ಯಾರಂಟಿ ಯೋಜನೆಗಳು ರಾಜ್ಯದ ಅಭಿವೃದ್ಧಿಯ ದಿಕ್ಕನ್ನೆ ಬದಲಾಯಿಸುತ್ತಿವೆ. 2023ರ ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಆರಂಭಿಸಿದೆವು. ಅನ್ನಭಾಗ್ಯ, ಶಕ್ತಿ, ಗೃಹಲಕ್ಷ್ಮಿ, ಗೃಹ ಜ್ಯೋತಿ, ಯುವನಿಧಿ ಯೋಜನೆಗಳಿಗೆ ಈ ವರೆಗೆ 96,000 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತವನ್ನು ವಿನಿಯೋಗಿಸಿದ್ದೇವೆ. ಶಕ್ತಿ ಯೋಜನೆಯಲ್ಲಿ 500 ಕೋಟಿ ಟ್ರಿಪ್ಪುಗಳ ಮೂಲಕ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದನ್ನು ಇತ್ತೀಚೆಗೆ ಆಚರಣೆ ಮಾಡಿದ್ದೇವೆ. ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಜನರಿಗೆ ತಲುಪುವ ಈ ಯೋಜನೆಗಳು ರಾಜ್ಯದ ಜನರ ತಲಾದಾಯವನ್ನು ಹೆಚ್ಚಿಸುತ್ತಿರುವುದಲ್ಲದೆ ಕಾರ್ಮಿಕ ಶಕ್ತಿಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಶೇ. 23ರಷ್ಟು ಹೆಚ್ಚಿಸಿವೆ ಎಂದು ಹಲವು ಅಧ್ಯಯನಗಳು ಹೇಳುತ್ತಿವೆ. ನಾವು ಶಕ್ತಿ ಯೋಜನೆಯನ್ನು ಜಾರಿಗೊಳಿಸುವುದರ ಜೊತೆಗೆ ಸಾರಿಗೆ ಇಲಾಖೆಗೆ ವಿವಿಧ ಮಾದರಿಯ ವಾಹನಗಳು ಸೇರಿದಂತೆ ಒಟ್ಟು 5,049 ಹೊಸ ಬಸ್ಸುಗಳ ಖರೀದಿ ಮತ್ತು 8,473 ಸಿಬ್ಬಂದಿ ನೇಮಕ ಮಾಡಿಕೊಂಡಿದ್ದೇವೆ ಎಂದರು.

ಕೈಗಾರಿಕಾ ಕ್ಷೇತ್ರದ ಬೆಳವಣಿಗೆಗೆ ಆದ್ಯತೆ: ಕೈಗಾರಿಕಾ ಕ್ಷೇತ್ರದ ಬೆಳವಣಿಗೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಯಾವತ್ತೂ ಹಿಂದೆ ಬಿದ್ದಿಲ್ಲ. ರಾಜ್ಯದಲ್ಲಿರುವ ಅತಿ ದೊಡ್ಡ ಕೈಗಾರಿಕಾ ಪ್ರದೇಶಗಳನ್ನು ನಿರ್ವಹಿಸಲು ಮತ್ತು ಜಾಗತಿಕ ಉತ್ಪಾದನಾ ತಾಣಗಳಾಗಿ ಅಭಿವೃದ್ಧಿ ಪಡಿಸಲು, ವಿಶ್ವ ದರ್ಜೆಯ ಮೂಲಸೌಕರ್ಯವನ್ನು ಒದಗಿಸುವ ಉದ್ದೇಶದಿಂದ 44,166 ಎಕರೆ ಪ್ರದೇಶವುಳ್ಳ 18 ಕೈಗಾರಿಕಾ ಪ್ರದೇಶಗಳನ್ನು ವಿಶೇಷ ಹೂಡಿಕೆ ಪ್ರದೇಶಗಳೆಂದು ಘೋಷಿಸಲಾಗಿದೆ.

ಇವುಗಳ ಜೊತೆಗೆ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೂ ಆದ್ಯತೆ ನೀಡುತ್ತಿದ್ದೇವೆ. 10 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚಿನ ಹೂಡಿಕೆ ಮಾಡಲು ಕೈಗಾರಿಕೋದ್ಯಮಿಗಳು ಆಸಕ್ತಿ ತೋರಿಸಿದ್ದಾರೆ. ಕೈಗಾರಿಕಾ ಕ್ಷೇತ್ರದಲ್ಲಿ ರಾಜ್ಯವು ದೇಶದ ಮುಂಚೂಣಿ ರಾಜ್ಯಗಳ ಹಾದಿಯಲ್ಲಿದ್ದು ರಾಜ್ಯದ ಜಿ.ಎಸ್.ಡಿ.ಪಿ.ಗೆ ಶೇ.23.6 ರಷ್ಟು ಕೊಡುಗೆಯನ್ನು ನೀಡುತ್ತಿದೆ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ರಾಜ್ಯವು ಎರಡನೇ ಸ್ಥಾನದಲ್ಲಿದೆ ಎಂದರು.

ಶಿಕ್ಷಣ ಕ್ಷೇತ್ರದ ಬಲವರ್ಧನೆ: ಶಿಕ್ಷಣ ಕ್ಷೇತ್ರದ ಬಲವರ್ಧನೆಗಾಗಿ ಈ ಸಾಲಿನಲ್ಲಿ 65,000 ಕೋಟಿ ರೂ.ಗಳಷ್ಟು ಬೃಹತ್ ಪ್ರಮಾಣದ ಸಂಪನ್ಮೂಲಗಳನ್ನು ವಿನಿಯೋಗಿಸುತ್ತಿದ್ದೇವೆ. ನಮ್ಮ ವಸತಿ ಶಾಲೆಗಳು, ವಸತಿ ನಿಲಯಗಳಲ್ಲಿ 8.36 ಲಕ್ಷಕ್ಕೂ ಹೆಚ್ಚಿನ ಮಕ್ಕಳು ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ. ವಸತಿ ಶಾಲೆಗಳ ವಿದ್ಯಾರ್ಥಿಗಳ ಉತ್ತೀರ್ಣತೆಯ ಪ್ರಮಾಣ ಶೇ. 98-99 ರಷ್ಟಿದೆ ಎಂಬುದು ಸಂತೋಷದ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಗತ್ಯ ಇರುವ ಕಡೆಗಳಲ್ಲಿ ಹೊಸದಾಗಿ ವಸತಿ ಶಾಲೆಗಳು, ವಸತಿ ನಿಲಯಗಳನ್ನು ಸ್ಥಾಪಿಸುತ್ತಿದ್ದೇವೆ ಎಂದು ತಿಳಿಸಿದರು.

ಈ ವರ್ಷ 2,500 ಕೋಟಿ. ರೂ. ವೆಚ್ಚದಲ್ಲಿ 500 ಕರ್ನಾಟಕ ಪಬ್ಲಿಕ್ ಸ್ಕೂಲ್-ಕೆಪಿಎಸ್ ಶಾಲೆಗಳನ್ನು ಸ್ಥಾಪಿಸುತ್ತಿದ್ದೇವೆ. 53 ಲಕ್ಷ ಮಕ್ಕಳಿಗೆ ರಾಗಿ ಮಾಲ್ಟ್, ಹಾಲು, ವಾರದ ಎಲ್ಲಾ ದಿನ ಮೊಟ್ಟೆ ಅಥವಾ ಬಾಳೆಹಣ್ಣು, ಮಧ್ಯಾಹ್ನದ ಬಿಸಿಯೂಟ ನೀಡುತ್ತಿದ್ದೇವೆ. ಅತಿಥಿ ಶಿಕ್ಷಕರಿಗೆ ಮತ್ತು ಬಿಸಿಯೂಟ ತಯಾರಿಸುವ ಸಿಬ್ಬಂದಿಗಳಿಗೆ ಗೌರವಧನ ಹೆಚ್ಚಿಸಿದ್ದೇವೆ. ಶಿಕ್ಷಕರ ನೇಮಕಾತಿಗೂ ಆದ್ಯತೆ ನೀಡುತ್ತಿದ್ದೇವೆ. 2,500 ಕೋಟಿ ರೂ. ವೆಚ್ಚದಲ್ಲಿ ಪ್ರಥಮ ದರ್ಜೆ ಕಾಲೇಜುಗಳು, ಪಾಲಿಟೆಕ್ನಿಕ್ಗಳನ್ನು ಉನ್ನತೀಕರಿಸುತ್ತಿದ್ದೇವೆ. 13 ಹೊಸ ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುತ್ತಿದ್ದೇವೆ ಎಂದರು.

NO COMMENTS

LEAVE A REPLY

Please enter your comment!
Please enter your name here

Exit mobile version