ಶ್ರೀಕಾಂತ ಸರಗಣಾಚಾರಿ
ಕೊಪ್ಪಳ: ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ 1,53,943 ಮಕ್ಕಳಿಗೆ ದೃಷ್ಟಿದೋಷ ಇರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ಬಾಲ ಸ್ವಸ್ಥ ಕಿರಣ (ಆರ್‌ಬಿಎಸ್‌ಕೆ) ಯೋಜನೆ ಅಡಿ – 2024-25ನೇ ಸಾಲಿನಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಸರ್ಕಾರಿ, ಅನುದಾನಿತ ಶಾಲೆಗಳ ಮಕ್ಕಳ ಕಣ್ಣುಗಳ ಆರೋಗ್ಯ ತಪಾಸಣೆ ನಡೆಸಿದಾಗ ಈ ಅಂಶ ಬೆಳಕಿಗೆ ಬಂದಿದೆ.
6-16 ವರ್ಷ ವಯಸ್ಸಿನ ಮಕ್ಕಳಲ್ಲಿ ದೃಷ್ಟಿದೋಷ: ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಓದುತ್ತಿರುವ 6-16 ವರ್ಷ ವಯಸ್ಸಿನ ಮಕ್ಕಳಲ್ಲಿ ದೃಷ್ಟಿದೋಷ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಬಾಲಕರಿಗಿಂತ ಬಾಲಕಿಯರಲ್ಲೇ ಹೆಚ್ಚು ದೃಷ್ಟಿದೋಷ ಇರುವುದು ಪತ್ತೆಯಾಗಿದೆ.
64,425 ವಿದ್ಯಾರ್ಥಿಗಳು ಮತ್ತು 89,518 ವಿದ್ಯಾರ್ಥಿನಿಯರಿಗೆ ದೃಷ್ಟಿದೋಷ ಇದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಅಂದರೆ 16,763 ಮಕ್ಕಳಿಗೆ ದೃಷ್ಟಿದೋಷ ಇದ್ದು, ಕೊಪ್ಪಳ ಜಿಲ್ಲೆಯಲ್ಲಿ 2,256 ಮಕ್ಕಳಲ್ಲಿ ಕಂಡುಬಂದಿದೆ.
ಅತಿಯಾದ ಮೊಬೈಲ್ ಬಳಕೆ, ಟಿವಿ, ವಿಟಮನ್ ಎ ಕೊರತೆ ಮತ್ತು ಜನಿಸುವಾಗಲೇ ಕಣ್ಣಿನಲ್ಲಿ ತೊಂದರೆ ದೃಷ್ಟಿದೋಷಕ್ಕೆ ಪ್ರಮುಖ ಕಾರಣ ಎಂದು ನೇತ್ರ ತಜ್ಞ ಸುಶೀಲೇಂದ್ರ ಕಾಖಂಡಕಿ `ಸಂಯುಕ್ತ ಕರ್ನಾಟಕ’ಕ್ಕೆ ಮಾಹಿತಿ ನೀಡಿದ್ದಾರೆ.
ಆರ್‌ಬಿಎಸ್‌ಕೆ ವೈದ್ಯರು ಮತ್ತು ನೇತ್ರ ತಜ್ಞರು ರಾಜ್ಯದ ಸರ್ಕಾರಿ ಶಾಲೆಗೆ ಭೇಟಿ ನೀಡಿದಾಗ ಶಾಲೆಯಲ್ಲಿ ಹಾಜರಿರುವ ಮಕ್ಕಳ ಕಣ್ಣುಗಳನ್ನು ಪರಿಶೀಲಿಸಿದ್ದಾರೆ. ಆಗ ಸಮಸ್ಯೆ ಕಂಡುಬಂದಿದೆ. ಆದರೆ, ಶಾಲೆಗೆ ಬರದೇ ಇರುವ ಮಕ್ಕಳ ಕಣ್ಣು ಪರೀಕ್ಷಿಸಲು ಆಗುವುದಿಲ್ಲ. ಇಂತಹ ಎಷ್ಟೋ ಮಕ್ಕಳ ಲೆಕ್ಕ ಸಿಗುವುದು ಕಷ್ಟ. ವೈದ್ಯರ ತಂಡ ವೈದ್ಯಕೀಯ ಉಪಕರಣಗಳೊಂದಿಗೆ ಶಾಲೆಗೆ ಭೇಟಿ ನೀಡಿ ಮಕ್ಕಳ ಕಣ್ಣುಗಳನ್ನು ತಪಾಸಣೆ ನಡೆಸಿದ್ದು, ಕೆಲವು ಮಕ್ಕಳಿಗೆ ಸಾಮಾನ್ಯ ದೃಷ್ಟಿದೋಷ ಇರುವುದು ಕಂಡುಬಂದಿದ್ದರೆ, ಇನ್ನು ಹಲವು ಮಕ್ಕಳಲ್ಲಿ ಗಂಭೀರತೆ ಕಂಡುಬಂದಿದ್ದು, ಚಿಕಿತ್ಸೆ ಅನಿವಾರ್ಯವಾಗಿದೆ. ಇಂತಹ ಮಕ್ಕಳನ್ನು ಜಿಲ್ಲಾ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಗುತ್ತಿದೆ ಎನ್ನುತ್ತಾರೆ ವೈದ್ಯರು.
ಮೊಬೈಲ್ ಬಳಕೆ ಹೆಚ್ಚಾಗಿ ದೃಷ್ಟಿದೋಷ: ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿ ದೃಷ್ಟಿದೋಷ ಹೆಚ್ಚುತ್ತಿದೆ. ಶಿಕ್ಷಣಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಮೊಬೈಲ್ ಬಳಸಬೇಕು. ಪಾಲಕರು ಮಕ್ಕಳ ಮೇಲೆ ನಿಗಾ ಇಡಬೇಕು. ಈ ಬಗ್ಗೆ ಮಕ್ಕಳಿಗೆ ವ್ಯಾಪಕ ತಿಳಿವಳಿಕೆ ಮೂಡಿಸಬೇಕಿದೆ. ಕಣ್ಣು ಸೂಕ್ಷ್ಮವಾಗಿದ್ದು, ಈ ಬಗ್ಗೆ ಜಾಗೃತಿ ವಹಿಸಬೇಕು ಎಂದು ನೇತ್ರ ತಜ್ಞ ಸುಶೀಲೇಂದ್ರ ಕಾಖಂಡಕಿ ತಿಳಿಸಿದ್ದಾರೆ
ಕರ್ನಾಟಕದ ಜಿಲ್ಲಾವಾರು ದೃಷ್ಟಿದೋಷ ಹೊಂದಿದ ಮಕ್ಕಳ ಅಂಕಿ ಸಂಖ್ಯೆ ವಿವರ ಇಲ್ಲಿದೆ.
ಬಾಗಲಕೋಟೆ 4,371
ಬೆಂಗಳೂರು ಮಹಾನಗರ (ಬಿಬಿಎಂಪಿ) 16,763
ಬಳ್ಳಾರಿ 2,403
ಬೆಳಗಾವಿ 15,222
ಬೀದರ್ 3,609
ಚಾಮರಾಜನಗರ 3,517
ಚಿಕ್ಕಬಳ್ಳಾಪುರ 2,085
ಚಿಕ್ಕಮಗಳೂರು 3,766
ಚಿತ್ರದುರ್ಗ 4,153
ದಕ್ಷಿಣ ಕನ್ನಡ 4,955
ದಾವಣಗೆರೆ 4,023
ಧಾರವಾಡ 7,854
ಗದಗ 2,735
ಹಾಸನ 4,152
ಹಾವೇರಿ 5,693
ಕಲಬುರಗಿ 10,796
ಕೊಡಗು 1,385
ಕೋಲಾರ 3,568
ಕೊಪ್ಪಳ 2,256
ಮಂಡ್ಯ 2,903
ಮೈಸೂರು 6,402
ರಾಯಚೂರು 1,984
ರಾಮನಗರ 3,233
ಶಿವಮೊಗ್ಗ 3,709
ತುಮಕೂರು 7,832
ಉಡುಪಿ 4,827
ಉತ್ತರ ಕನ್ನಡ(ಕಾರವಾರ) 4,970
ವಿಜಯನಗರ 6,646
ವಿಜಯಪುರ 2,774
ಯಾದಗಿರಿ 1,616