Home ಸುದ್ದಿ ರಾಜ್ಯ ಕನ್ನಡ ಚಳವಳಿಗಾರರ ಮೇಲಿನ ಮೊಕದ್ದಮೆ ಹಿಂಪಡೆಯಲು ಆಗ್ರಹ

ಕನ್ನಡ ಚಳವಳಿಗಾರರ ಮೇಲಿನ ಮೊಕದ್ದಮೆ ಹಿಂಪಡೆಯಲು ಆಗ್ರಹ

1

ಸರ್ಕಾರದ ಮೌನಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ತೀವ್ರ ಆಕ್ರೋಶ

ಬೆಂಗಳೂರು: ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಚಳವಳಿಗಾರರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯುವುದಾಗಿ ಸಾರ್ವಜನಿಕ ಘೋಷಣೆ ಮಾಡಿದ್ದರೂ, ಒಂದು ತಿಂಗಳು ಕಳೆದರೂ ಈ ಸಂಬಂಧ ಯಾವುದೇ ಸ್ಪಷ್ಟ ಆದೇಶ ಹೊರಬಿದ್ದಿಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣ ಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಘೋಷಣೆ ಕೇವಲ ಘೋಷಣೆಯೇ?” – ನಾರಾಯಣ ಗೌಡ ಪ್ರಶ್ನೆ : ಸಾಮಾಜಿಕ ಜಾಲತಾಣದಲ್ಲಿ ದೀರ್ಘ ಪ್ರತಿಕ್ರಿಯೆ ನೀಡಿದ ನಾರಾಯಣ ಗೌಡ, ಕೆಲವು ಸಚಿವರು ಕನ್ನಡ ಚಳವಳಿಗಾರರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯಲು ಆಸಕ್ತಿ ತೋರಿಸುತ್ತಿಲ್ಲ ಎನ್ನುವ ಆರೋಪ ಮಾಡಿದ್ದಾರೆ.

ಸರ್ಕಾರ ಬದಲಾದಾಗ ರಾಜಕೀಯ ಮುಖಂಡರ ಮೇಲಿನ ಪ್ರಕರಣಗಳನ್ನು ಸುಲಭವಾಗಿ ಹಿಂಪಡೆಯಲಾಗುತ್ತದೆ. ಆದರೆ ರಾಜ್ಯದ ಪರ, ಭೂಮಿ, ಭಾಷೆ ಹಾಗೂ ಹಕ್ಕಿನನ್ನೇ ರಕ್ಷಿಸುವ ಕನ್ನಡ ಹೋರಾಟಗಾರರಿಗೆ ಈ ಸೌಲಭ್ಯ ನೀಡಲು ಸರ್ಕಾರ ಮುಂದಾಗುತ್ತಿಲ್ಲ. ಕನ್ನಡ ಚಳವಳಿಯ ಬಗ್ಗೆ ಕೆಲ ಅಧಿಕಾರಿಗಳಿಗೆ ನಿರ್ಲಕ್ಷ್ಯ ಹಾಗೂ ತಾತ್ಸಾರ ಮನೋಭಾವವಿದೆ ಎಂದಿದ್ದಾರೆ.

ನೈತಿಕ ಜವಾಬ್ದಾರಿ ಮುಖ್ಯಮಂತ್ರಿಯವರದು: “ಮುಖ್ಯಮಂತ್ರಿಗಳು ತಮ್ಮ ವಾಗ್ದಾನವನ್ನು ಈಡೇರಿಸಬೇಕು. ಇದು ಕನ್ನಡಿಗರ ವಿಶ್ವಾಸದ ಪ್ರಶ್ನೆ. ಕರ್ನಾಟಕ, ಕನ್ನಡ, ಕನ್ನಡಿಗ ಎಂಬ ಪರಿಕಲ್ಪನೆಯಲ್ಲಿ ಹೋರಾಡಿದವರಿಗೆ ‘ಮೊಕದ್ದಮೆ’ ಹಾಗೂ ‘ಜೈಲು’ ಎಂಬ ‘ಪ್ರಶಸ್ತಿ’ ನೀಡುತ್ತಿರುವ ಸರಕಾರ ನೈತಿಕತೆ ಕಾಪಾಡಬೇಕು. ಸಚಿವ ಸಂಪುಟ ಈ ವಿಷಯದಲ್ಲಿ ನಿರ್ಧಾರ ಕೈಗೊಳ್ಳಲು ವಿಳಂಬ ಮಾಡುತ್ತಿರುವುದು ಯಾಕೆ? ಸರ್ಕಾರವನ್ನು ಯಾವ ಶಕ್ತಿಗಳು ತಡೆಯುತ್ತಿವೆ? ಎಂದು ಪ್ರಶ್ನೆ ಹಾಕಿದ್ದಾರೆ.

ಚಳವಳಿಗೆ ಸಿದ್ಧತೆ: ಕರ್ನಾಟಕ ರಕ್ಷಣಾ ವೇದಿಕೆ ಈಗಾಗಲೇ ಹೋರಾಟ ರೂಪುರೇಷೆಯನ್ನು ಸಿದ್ಧಗೊಳಿಸಿದೆ. ಡಿಸೆಂಬರ್ 5ರಂದು ವೇದಿಕೆಯ ನಿಯೋಗ ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರನ್ನು ಭೇಟಿ ಮಾಡಲಿದೆ. ಆದರೆ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳದಿದ್ದರೆ ಬೆಳಗಾವಿ ಅಧಿವೇಶನಕ್ಕೆ ಮುತ್ತಿಗೆ ಹಾಗೂ ಸಚಿವ-ಶಾಸಕರ ಮನೆಗಳ ಮುಂದೆ ಪ್ರತಿಭಟನೆ – ಘೇರಾವ್ ಇವುಗಳನ್ನು ಹಮ್ಮಿಕೊಳ್ಳುವ ಎಚ್ಚರಿಕೆ ನೀಡಲಾಗಿದೆ.

“ಈ ಬಾರಿ ಮೌನ ಸಾದ್ಯವಿಲ್ಲ” : ಕನ್ನಡ ಹೋರಾಟಗಾರರ ವಿರುದ್ಧ ಬಳಕೆಯಾದ ‘ಗಂಭೀರ ಸೆಕ್ಷನ್’ಗಳನ್ನು ಹಿಂಪಡೆಯದೆ ಇರಲು ಕಾರಣವೇನು ಎಂದು ನಾರಾಯಣ ಗೌಡ ಪ್ರಶ್ನಿಸಿದ್ದಾರೆ. ರಾಜ್ಯದ ಕನ್ನಡಪರ ಚಳವಳಿ ದೀರ್ಘ ಇತಿಹಾಸ ಹೊಂದಿದೆ, ಮತ್ತು ಚಳವಳಿಗಾರರನ್ನೇ ‘ಕ್ರಿಮಿನಲ್’ಗಳಂತೆ ಬಿಂಬಿಸುವ ಪ್ರಯತ್ನವು ನೋವಿನ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.

ಸರ್ಕಾರದ ನಿರ್ಣಯದತ್ತ ಎಲ್ಲರ ಕಣ್ಣು: ಮುಖ್ಯಮಂತ್ರಿಗಳ ಘೋಷಣೆಯ ಮೇಲೆ ಕನ್ನಡಪರ ಸಂಘಟನೆಗಳ ವಿಶ್ವಾಸವಿದ್ದರೂ, ನಿರ್ಧಾರದ ವಿಳಂಬ ಈಗ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಮುಂದೆ ಸರ್ಕಾರ ಯಾವ ದಿಶೆಯಲ್ಲಿ ಹೆಜ್ಜೆ ಇಡುತ್ತದೆ ಎಂಬುದರ ಮೇಲೆ ಕನ್ನಡಪರರ ಮುಂದಿನ ಹೋರಾಟದ ತೀವ್ರತೆಯೂ ನಿಂತಿದೆ.

1 COMMENT

LEAVE A REPLY

Please enter your comment!
Please enter your name here

Exit mobile version