ಮತಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ರಾಹುಲ್ ಗಾಂಧಿಗೆ ಪತ್ರ ಬರೆದಿರುವ ನ್ಯಾ. ಎಸ್.ಎನ್ ಧಿಂಗ್ರಾ, ನಿರ್ಮಲ್ ಕೌರ್ ಸೇರಿದಂತೆ 272 ಬುದ್ಧಿಜೀವಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ, ಆಳಂದ ಶಾಸಕ ಬಿ.ಆರ್. ಪಾಟೀಲ್ ಅವರು, ಅವರೆಲ್ಲ ಆಳಂದಗೆ ಬಂದರೆ ಮತಗಳ್ಳತನ ಪ್ರಕರಣ ಸಾಬೀತುಪಡಿಸಿವೆ ಎಂದು ಸವಾಲು ಹಾಕಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಎಸ್ಐಟಿ ತನಿಖೆ ನಡೆಸಿರುವ ವೇಳೆ ಈ ರೀತಿ ಪತ್ರ ಬರೆದಿರುವುದು ಸರಿಯಲ್ಲ ಎಂದರು.
ಮತಗಳ್ಳತನ ಆರೋಪದ ಬಗ್ಗೆ ಪತ್ರ ಬರೆದಿರುವ ಬುದ್ಧಿಜೀವಿಗಳು, ನಿವೃತ್ತ ನ್ಯಾಯಾಧೀಶರು ನಮ್ಮ ತಾಲೂಕಿನ ಸ್ಥಳಗಳಿಗೆ ಭೇಟಿ ನೀಡಲಿ, ಹೇಗೆ ಮತಗಳ್ಳತನ ಆಗಿದೆ, ಮತಗಳ್ಳತನಕ್ಕೆ ಮಾಡಿರುವ ತಂತ್ರಗಳೆಲ್ಲವೂ ಖುದ್ದಾಗಿ ತಿಳಿದುಕೊಳ್ಳಲಿ, ಇದಕ್ಕೆ ಬೇಕಾಗುವ ಎಲ್ಲಾ ರೀತಿಯ ಖರ್ಚು ವೆಚ್ಚಗಳನ್ನು ಭರಿಸುತ್ತೇನೆ ಎಂದು ಎಲ್ಲರನ್ನು ಆಳಂದಗೆ ಆಹ್ವಾನ ಮಾಡಿದರು.
ತನಿಖೆಯ ಹಂತದಲ್ಲಿ ಬುದ್ಧಿಜೀವಿಗಳು ಪತ್ರ ಬರೆದು ಹೇಳಿಕೆ ನೀಡುವುದು ಸರಿಯಲ್ಲ, ಒಂದು ವೇಳೆ ಹಾಗೆ ಹೇಳುವುದಾದರೆ ತನಿಖೆ ಸಂಪೂರ್ಣ ಮುಗಿದ ಬಳಿಕ ಹೇಳಿಕೆ ಕೊಡಲಿ ಎಂದ ಅವರು, ನಾನೀಗ ಬಹಿರಂಗ ಪತ್ರ ಬರೆದಿದ್ದೇನೆ, ಇಲ್ಲಿಗೆ ಬಂದು ನೋಡಲಿ, ಮತಗಳ್ಳತನ ಆಗಿರುವ ಬಗ್ಗೆ ಸಂಪೂರ್ಣವಾಗಿ ಸಾಬೀತು ಪಡಿಸುತ್ತೇನೆ ಎಂದು ಸವಾಲು ಹಾಕಿದರು.
ಆಳಂದದಲ್ಲಿ ಮತಗಳ್ಳತನ ಆಗಿದೆ ಎಂದು ನಾನಷ್ಟೇ ದೂರು ಕೊಟ್ಟಿಲ್, ನಾನು ದೂರ ಕೊಟ್ಟ ಬಳಿಕ ಆಗಿನ ಚುನಾವಣೆ ಅಧಿಕಾರಿ ದೂರನ್ನು ಪರಿಶೀಲಿಸಿ , ಮನವರಿಕೆ ಆದ ಬಳಿಕವೇ ಈ ಬಗ್ಗೆ ಸ್ವತಃ ಚುನಾವಣಾ ಅಧಿಕಾರಿಯೇ ದೂರು ನೀಡಿದ್ದಾರೆ, ಇದು ನಿಜ ಎಂದು ಗೊತ್ತಾದ ಬಳಿಕವೇ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾದ ಬಳಿಕ ತನಿಖೆಗೆ ನಾನು ಒತ್ತಾಯಿಸಿದ್ದೇನೆ ಎಂದರು.
ಎಸ್ಐಟಿ ತನಿಖೆ ನಡೆಸುತ್ತಿದ್ದಾರೆ ಆದರೆ ನಾನು ಇದಕ್ಕೆ ಹಸ್ತಕ್ಷೇಪ ಮಾಡಿ ತನಿಖೆ ಪೂರ್ಣಗೊಳಿಸುವಂತೆ ಒತ್ತಡ ಹೇರುವುದಿಲ್ಲ. ಆದರೆ ರಾಜ್ಯ ಸರ್ಕಾರ ಈ ತನಿಖೆ ಪ್ರಕರಣ ಪೂರ್ಣಗೊಳಿಸಿ, ಸತ್ಯಾಂಶ ಬಯಲುಗೊಳಿಸಬೇಕು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡ ದತ್ತರಾಜ್ ಗುತ್ತೇದಾರ್ ಇದ್ದರು.
