Home ಸುದ್ದಿ ರಾಜ್ಯ ವಿಧಾನ ಪರಿಷತ್: ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ, ಹೆಸರು ಸೇರಿಸಿ

ವಿಧಾನ ಪರಿಷತ್: ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ, ಹೆಸರು ಸೇರಿಸಿ

0

ಕರ್ನಾಟಕ ವಿಧಾನ ಪರಿಷತ್‌ನ ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ನೋಂದಣಿ ಕಾರ್ಯ ಆರಂಭಗೊಂಡಿದೆ. ಅರ್ಹ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳುವಂತೆ ನಿರ್ದೇಶನ ನೀಡಬೇಕು ಎಂದು ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರ ಮತದಾರರ ನೋಂದಣಿ ಅಧಿಕಾರಿಯೂ ಆದ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಜಹೀರಾ ನಸೀಮ್ ಹೇಳಿದ್ದಾರೆ.

ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ನೋಂದಣಿ ಕುರಿತಂತೆ ಕಲಬುರಗಿ ವಿಭಾಗದ 7 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ, ಎಡಿಸಿ ಮತ್ತು ರಾಜಕೀಯ ಪಕ್ಷದ ಮುಖಂಡರೊಂದಿಗೆ ವರ್ಚುವಲ್ ಮೂಲಕ ಅವರು ಸಭೆ ನಡೆಸಿ ಮಾತನಾಡಿದರು.

ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಅವಧಿ 11.11.2026ರಂದು ಮುಕ್ತಾಯಗೊಳ್ಳಲಿದೆ. ಅರ್ಹತಾ ದಿನಾಂಕ 01.11.2025ಕ್ಕೆ ಅನ್ವಯಿಸುವಂತೆ ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯು ನೂತನವಾಗಿ ಸಿದ್ಧಪಡಿಸುವ ಕಾರ್ಯವು ಈಗಾಗಲೇ ಪ್ರಾರಂಭವಾಗಿದೆ.

ಈ ಹಿಂದಿನ ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಮತದಾರರು ಸಹ ನಮೂನೆ 19 ಮತ್ತು ಅನುಬಂಧ-2ರಲ್ಲಿ ಸೂಕ್ತ ಮಾಹಿತಿ ಭರ್ತಿ ಮಾಡಿ, ಅರ್ಜಿ ಸಲ್ಲಿಸಬೇಕು. ಈಗಾಗಲೇ ಅರ್ಜಿಗಳನ್ನು ವಿತರಿಸಲಾಗಿದೆ.

ಹೆಸರು ನೋಂದಣಿ ವೇಳಾಪಟ್ಟಿ

  • 6/11/2025 (ಗುರುವಾರ). ಅರ್ಜಿ ನಮೂನೆ 19ರಲ್ಲಿ ಅರ್ಜಿ ಸ್ವೀಕರಿಸುವ ಕೊನೆ ದಿನ
  • 25/11/2025 (ಮಂಗಳವಾರ) ಕರಡು ಮತದಾರರ ಪಟ್ಟಿ ಪ್ರಕಟಿಸುವ ದಿನ
  • 25/11/2025 (ಮಂಗಳವಾರ) ರಿಂದ 10.12.2025 (ಬುಧವಾರ) ಹಕ್ಕು ಮತ್ತು ಆಕ್ಷೇಪಣೆಗಳಿಗಾಗಿ ನಿಗದಿಪಡಿಸಿದ ಅವಧಿ
  • 30/12/2025 (ಮಂಗಳವಾರ) ಅಂತಿಮ ಮತದಾರರ ಪಟ್ಟಿ ಪ್ರಕಟಿಸುವ ದಿನ

ಸ್ವೀಪ್ ಚಟುವಟಿಕೆ ಕೈಗೊಳ್ಳಿ: ಅರ್ಹ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾನ ಪ್ರಕ್ರಿಯೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವ ವಿಭಾಗದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ವ್ಯಾಪಕವಾಗಿ ಪ್ರಚಾರ ಹಾಗೂ ಕ್ರಿಯಾತ್ಮಕವಾಗಿ ನೋಂದಣಿ ಮಾಡುವಲ್ಲಿ ಜಿಲ್ಲಾವಾರು, ತಾಲ್ಲೂಕುವಾರು ಸ್ವೀಪ್ ಸಮಿತಿ ರಚಿಸಲಾಗಿದ್ದು, ಹೆಚ್ಚಾಗಿ ಸ್ವೀಪ್ ಚಟುವಟಿಕೆ ಆಯೋಜಿಸಬೇಕು.

ಹೆಸರು ನೋಂದಾಯಿಸಲು ಅರ್ಹತೆ: 1ನೇ ನವೆಂಬರ್ 2025ಕ್ಕೆ ಮೊದಲ 6 ವರ್ಷಗಳ ಅವಧಿಯಲ್ಲಿ ಸೆಕೆಂಡರಿ ದರ್ಜೆಯಲ್ಲಿ ಪ್ರೌಢಶಾಲೆಗಿಂತ ಕಡಿಮೆ ಇಲ್ಲದ ನಿರ್ದಿಷ್ಟಪಡಿಸಿದಂತಹ ರಾಜ್ಯದೊಳಗಿನ ಯಾವುದೇ ಸರ್ಕಾರದಿಂದ ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಟ್ಟು ಕನಿಷ್ಠ 3 ವರ್ಷ ಬೋಧನಾ ವೃತ್ತಿಯಲ್ಲಿ ನಿರತರಾಗಿರುವ ಪ್ರತಿಯೊಬ್ಬ ವ್ಯಕ್ತಿಯು ಮತದಾರರ ಪಟ್ಟಿಯಲ್ಲಿ ತನ್ನ ಹೆಸರನ್ನು ಸೇರಿಸಲು ಅರ್ಹರು ಎಂದು ತಿಳಿಸಿದರು.

ಬಲ್ಕ (ಗುಚ್ಚಗಳಲ್ಲಿ) ಅರ್ಜಿಗಳನ್ನು ಸಲ್ಲಿಸುವಂತಿಲ್ಲ. ಅರ್ಜಿಯಲ್ಲಿ ತಪ್ಪು ಮಾಹಿತಿ ಭರ್ತಿ ಮಾಡುವಂತಿಲ್ಲ. ತಪ್ಪೆಂದು ತಿಳಿದರೆ ಅಂತಹವರನ್ನು ಪ್ರಜಾಪ್ರಾತಿನಿಧ್ಯ ಅಧಿನಿಯಮ 1950ರ 31ನೇ ಪ್ರಕರಣದ ಮೇರೆಗೆ ಶಿಕ್ಷೆಗೆ ಅರ್ಹರಾಗುತ್ತಾರೆ.

ಚುನಾವಣಾ ಆಯೋಗದ ನಿರ್ದೇಶನದನ್ವಯ 16 ಕಿ.ಮೀ.ವ್ಯಾಪ್ತಿಗೊಳಪಡುವ ಹಾಗೂ ಕನಿಷ್ಠ 30 ಮತದಾರರು ಹೊಂದಿದ್ದಲ್ಲಿ ಅಂತಹ ಸ್ಥಳದಲ್ಲಿ ಮತದಾನ ಕೇಂದ್ರ ಸ್ಥಾಪಿಸಲು ಅವಕಾಶವಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version