Home ಸುದ್ದಿ ರಾಜ್ಯ ಮೈಸೂರು ದಸರಾ 2025 ವಿವಾದ: ಸರ್ಕಾರಕ್ಕೆ ಆರ್. ಅಶೋಕ 5 ಪ್ರಶ್ನೆಗಳು

ಮೈಸೂರು ದಸರಾ 2025 ವಿವಾದ: ಸರ್ಕಾರಕ್ಕೆ ಆರ್. ಅಶೋಕ 5 ಪ್ರಶ್ನೆಗಳು

0

ಮೈಸೂರು ದಸರಾ 2025 ಉದ್ಘಾಟನೆ ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಪ್ರತಿಪಕ್ಷ ನಾಯಕ ಆರ್.ಅಶೋಕ ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.

ಶನಿವಾರ ಅವರು, ‘ನಾಡಹಬ್ಬ ದಸರಾ ಸಂಭ್ರಮಕ್ಕೆ ವಿವಾದದ ಮಸಿ ಬಳಿದಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ನನ್ನ 5 ಪ್ರಶ್ನೆಗಳು’ ಎಂದು ಹೇಳಿದ್ದಾರೆ.

ಪ್ರಶ್ನೆ-1. ಇಷ್ಟಕ್ಕೂ ಬಾನು ಮುಷ್ತಾಕ್ ಅವರ ಕೈಯಲ್ಲಿ ನಾಡಹಬ್ಬ ದಸರಾ ಉದ್ಘಾಟನೆ ಮಾಡಿಸಬೇಕು ಎನ್ನುವ ಐಡಿಯಾ ಯಾರದು? ಇದು ಮುಖ್ಯಮಂತ್ರಿಗಳ ಐಡಿಯಾನೊ, ಅಥವಾ ಅವರ ಸಂಪುಟ ಸಹೋದ್ಯೋಗಿಗಳ ಐಡಿಯಾನೊ? ಅಥವಾ ಇದು ಕೂಡ ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯಲು ಕುಮ್ಮಕ್ಕು ಕೊಟ್ಟಿದ್ದ so-called ಬುದ್ಧಿಜೀವಿ, ಎಡಪಂಥೀಯ ನಗರ ನಕ್ಸಲರ ಐಡಿಯಾನೊ?

ಪ್ರಶ್ನೆ-2. ಬಾನು ಮುಷ್ತಾಕ್ ಅವರನ್ನು ಮುಂದಿನ ವರ್ಷದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಿದ್ದರೆ ಅದಕ್ಕೊಂದು ಅರ್ಥ ಇರುತ್ತಿತ್ತು. ಅದು ಅವರಿಗೂ ಗೌರವ ತರುತ್ತಿತ್ತು. ಆದರೆ ಬಾನು ಮುಷ್ತಾಕ್ ಅವರಿಗೂ ಹಿಂದೂಗಳ ಆರಾಧ್ಯ ದೇವತೆ ತಾಯಿ ದುರ್ಗೆಯ ನವರೂಪಗಳನ್ನು ಪೂಜಿಸಿ ಆರಾಧಿಸುವ ದಸರಾ, ನವರಾತ್ರಿಗೂ ಏನು ಸಂಬಂಧ?

ಪ್ರಶ್ನೆ-3. ನಮ್ಮ ತಾಯ್ನೆಲಕ್ಕೆ, ನಮ್ಮ ಜೀವನಾಡಿಯಾಗಿರುವ ನದಿಗಳಿಗೆ ಹೆಣ್ಣಿನ ಹೆಸರಿಟ್ಟು ತಾಯಿ ಸ್ಥಾನದಲ್ಲಿ ಕೂರಿಸುವುದು ನಮ್ಮ ಭಾರತೀಯ ಸಂಸ್ಕೃತಿ. ಅದಕ್ಕಾಗಿಯೇ ರಾಷ್ಟಕವಿ ಕುವೆಂಪು ಅವರು “ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ” ಎಂದು ನಮ್ಮ ನಾಡಗೀತೆಯಲ್ಲಿ ಹೇಳಿರುವುದು. ಅದಕ್ಕಾಗಿಯೇ ನಾವು “ಕನ್ನಡ ನಾಡಿನ ಜೀವ ನದಿ ಈ ಕಾವೇರಿ” ಎಂದು ಹಾಡುವುದು.

ಆದರೆ, “ಕನ್ನಡಾಂಬೆಯನ್ನು ಭುವನೇಶ್ವರಿಯ ಸ್ಥಾನದಲ್ಲಿ ಕೂರಿಸಿ ಕನ್ನಡಮ್ಮನನ್ನು ದೌರ್ಜನ್ಯ ಮಾಡುತ್ತಿದ್ದೀರಿ” ಎನ್ನುವ ಅಭಿಪ್ರಾಯ, ಮನಸ್ಥಿತಿ ಇರುವ ವ್ಯಕ್ತಿಯೊಬ್ಬರಿಂದ ದಸರಾ ಉದ್ಘಾಟನೆ ಮಾಡಿಸಿದರೆ, ಅವರು ನಾಳೆ ತಾಯಿ ಚಾಮುಂಡೇಶ್ವರಿಯನ್ನು ಆನೆಯ ಅಂಬಾರಿ ಮೇಲೆ ಕೂರಿಸುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿ ಕ್ಯಾತೆ ತೆಗೆಯುವುದಿಲ್ಲ ಎನ್ನುವದಕ್ಕೆ ಏನು ಗ್ಯಾರೆಂಟಿ?

ಪ್ರಶ್ನೆ-4. ನಮ್ಮ ನೆಲ, ಜಲ, ಸಂಸ್ಕೃತಿಯ ಬಗ್ಗೆ ಗೌರವ, ಸಂವೇದನೆಯೇ ಇಲ್ಲದ ಒಬ್ಬ ವ್ಯಕ್ತಿಯಿಂದ ನಾಡಹಬ್ಬ ಉದ್ಘಾಟನೆ ಮಾಡಿಸುವುದು ಎಷ್ಟು ಸರಿ? ಇದು ತಾಯಿ ಚಾಮುಂಡೇಶ್ವರಿಯ ಅಸಂಖ್ಯಾತ ಆಸ್ತಿಕ ಭಕ್ತರಿಗೆ, ಚಾಮುಂಡಿ ಬೆಟ್ಟವನ್ನು ಪವಿತ್ರ ಶಕ್ತಿಪೀಠ ಎಂದು ನಂಬಿರುವ ಹಿಂದುಗಳಿಗೆ ಮಾಡುವ ಅಪಮಾನ ಅಲ್ಲವೇ?

ಪ್ರಶ್ನೆ-5. ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದರೆ ಅದು ಸಹಜವಾಗಿ ವಿವಾದವಾಗುತ್ತದೆ, ಅದಕ್ಕೆ ವಿರೋಧ ವ್ಯಕ್ತವಾಗುತ್ತದೆ ಎಂಬ ವಿಷಯ ಸರ್ಕಾರಕ್ಕೆ ತಿಳಿಯದೆ ಏನೂ ಇಲ್ಲ. ಆದರೂ ಹಠಕ್ಕೆ ಬಿದ್ದವರಂತೆ, ಉದ್ದೇಶಪೂರ್ವಕವಾಗಿ ವಿವಾದಕ್ಕೆ ಎಡೆಮಾಡಿಕೊಡುವ ವ್ಯಕ್ತಿಯನ್ನೇ ಆಯ್ಕೆ ಮಾಡಿದ್ದು ಯಾಕೆ? ಇದರಿಂದ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ನಾಡಿನ ಜನತೆಗೆ, ಅದರಲ್ಲೂ ವಿಶೇಷವಾಗಿ ಹಿಂದೂಗಳಿಗೆ ಏನು ಸಂದೇಶ ಕೊಡಲು ಹೊರಟಿದೆ? ಧರ್ಮಸ್ಥಳ, ಚಾಮುಂಡಿ ಬೆಟ್ಟ ಇವೆಲ್ಲವೂ ಒಂದಲ್ಲ ಒಂದು ದಿನ ಕಾಂಗ್ರೆಸ್ ಪಕ್ಷದ ತುಷ್ಟೀಕರಣ ರಾಜಕಾರಣದ ಮುಂದೆ ತಲೆ ಬಾಗಲೇಬೇಕು ಬೇಕು ಎನ್ನುವ ಎಚ್ಚರಿಕೆಯೋ? ಅಥವಾ ನಾವು ಎಷ್ಟೇ ಬಹಿರಂಗವಾಗಿ, ಹಿಂದೂಗಳನ್ನು ಅಣಕಿಸುವಂತೆ ತುಷ್ಟೀಕರಣ ರಾಜಕಾರಣ ಮಾಡಿದರೂ, ವೋಟ್ ಬ್ಯಾಂಕ್ ರಾಜಕಾರಣದಿಂದ ಗೆದ್ದು ಬರುತ್ತೇವೆ ಎನ್ನುವ ಅಹಂಕಾರದ ಧೋರಣೆಯೋ?

ಜೈ ತಾಯಿ ಭುವನೇಶ್ವರಿ
ಜೈ ತಾಯಿ ಚಾಮುಂಡೇಶ್ವರಿ ಎಂದು ಪೋಸ್ಟ್ ಹಾಕಿದ್ದಾರೆ ಅಶೋಕ.

NO COMMENTS

LEAVE A REPLY

Please enter your comment!
Please enter your name here

Exit mobile version