Home ಸುದ್ದಿ ದೇಶ ತಮಿಳುನಾಡು ವಿಧಾನಸಭೆ ಚುನಾವಣೆ 2026: ಕೆ.ಅಣ್ಣಾಮಲೈ ಸ್ಪರ್ಧಿಸಲ್ಲ?

ತಮಿಳುನಾಡು ವಿಧಾನಸಭೆ ಚುನಾವಣೆ 2026: ಕೆ.ಅಣ್ಣಾಮಲೈ ಸ್ಪರ್ಧಿಸಲ್ಲ?

0

ಚೆನ್ನೈ: ನಿವೃತ್ತ ಪೊಲೀಸ್ ಅಧಿಕಾರಿ, ಬಿಜೆಪಿ ನಾಯಕ ಕೆ.ಅಣ್ಣಾಮಲೈ ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ರಾಜ್ಯದಲ್ಲಿ ಸದ್ಯ ಡಿಎಂಕೆ ಅಧಿಕಾರದಲ್ಲಿದ್ದು, 2026ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

ತಮಿಳುನಾಡು ಬಿಜೆಪಿಯ ನಿಕಟಪೂರ್ವ ಅಧ್ಯಕ್ಷ ಕೆ.ಅಣ್ಣಾಮಲೈ 2026ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಪಕ್ಷದ ಉನ್ನತ ಮೂಲಗಳ ಮಾಹಿತಿ ಹೇಳಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

2021ರ ವಿಧಾನಸಭೆ ಚುನಾವಣೆಯಲ್ಲಿ ತಮಿಳುನಾಡಿನ ಅರಾವಕುರಿಚಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕೆ.ಅಣ್ಣಾಮಲೈ ಸ್ಪರ್ಧಿಸಿದ್ದರು. ಆದರೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು.

ರಾಷ್ಟ್ರೀಯ ಮಟ್ಟದ ಹುದ್ದೆ: 2026ರ ತಮಿಳುನಾಡು ವಿಧಾನಸಭೆ ಚುನಾವಣೆಗೆ ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿ ಮಾಡಿಕೊಳ್ಳಲಿದ್ದು, ಈ ಕುರಿತು ಮಾತುಕತೆಗಳು ನಡೆದಿವೆ.

ಈ ಮೈತ್ರಿ ಮಾತುಕತೆ ಪ್ರಾರಂಭದ ಹಂತದಲ್ಲಿಯೇ ಕೆ.ಅಣ್ಣಾಮಲೈರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಮತ್ತು ಮಾಜಿ ಸಚಿವ (ಎಐಎಡಿಎಂಕೆ) ನೈನಾರ್ ನಾಗೇಂದ್ರನ್‌ರನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮಾಡಲಾಗಿತ್ತು.

ಬುಧವಾರ ತಮಿಳುನಾಡು ಬಿಜೆಪಿ ಉನ್ನತ ಮೂಲಗಳ ಮಾಹಿತಿ ಪ್ರಕಾರ ಕೆ.ಅಣ್ಣಾಮಲೈ ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಅವರಿಗೆ ರಾಷ್ಟ್ರಮಟ್ಟದ ಹುದ್ದೆಯನ್ನು ನೀಡಲಾಗುತ್ತದೆ.

ಕೇಂದ್ರ ಗೃಹ ಸಚಿವ, ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ ಕೆ.ಅಣ್ಣಾಮಲೈ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಅವಧಿಯಲ್ಲಿ ಮಾಡಿದ ಹೋರಾಟಗಳನ್ನು ಶ್ಲಾಘಿಸಿದ್ದಾರೆ. ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಲು ಮತ್ತು ಡಿಎಂಕೆ ಸರ್ಕಾರದ ವಿರುದ್ಧ ಅವರು ಮಾಡಿದ ಹೋರಾಟಗಳಿಗೆ ಮೆಚ್ಚುಗೆ ಸೂಚಿಸಿದ್ದಾರೆ.

ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಸಂಘಟನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುತ್ತಿದೆ. ಆದ್ದರಿಂದ ಕೆ.ಅಣ್ಣಾಮಲೈರನ್ನು ರಾಷ್ಟ್ರ ರಾಜಕೀಯಕ್ಕೆ ಕರೆಸಿಕೊಳ್ಳಲಾಗುತ್ತದೆ ಎಂಬ ಸುದ್ದಿಗಳು ಹಬ್ಬಿವೆ. ರಾಜ್ಯಸಭೆ ಚುನಾವಣೆ ಸಮಯದಲ್ಲಿಯೂ ಅಣ್ಣಾಮಲೈರನ್ನು ಆಂಧ್ರ ಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆ ಮಾಡಲಾಗುತ್ತದೆ ಎಂಬ ಸುದ್ದಿ ಹಬ್ಬಿತ್ತು. ಬಳಿಕ ಬೇರೆ ನಾಯಕರಿಗೆ ಟಿಕೆಟ್ ನೀಡಲಾಗಿತ್ತು.

ಅಣ್ಣಾಮಲೈ ರಾಷ್ಟ್ರ ರಾಜಕೀಯಕ್ಕೆ ಬರುವ ಕುರಿತು ಬಿಜೆಪಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಪಕ್ಷದ ಉನ್ನತ ಮೂಲಗಳ ಮಾಹಿತಿ ಪ್ರಕಾರ ರಾಷ್ಟ್ರಮಟ್ಟದಲ್ಲಿ ಪ್ರಮುಖ ಹುದ್ದೆಗೆ ಅಣ್ಣಾಮಲೈ ನೇಮಕಗೊಳ್ಳಲಿದ್ದಾರೆ. ಆದ್ದರಿಂದ ಅವರು 2026ರ ತಮಿಳುನಾಡು ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ.

ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ 2020ರಲ್ಲಿ ಬಿಜೆಪಿ ಸೇರಿದರು. 2021ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದರು. ಕೊಯಮತ್ತೂರು ಕ್ಷೇತ್ರದಿಂದ 2024ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಅಣ್ಣಾಮಲೈ 450,132 ಮತಗಳನ್ನು ಪಡೆದು ಸೋಲು ಕಂಡಿದ್ದರು.

2021ರ ಚುನಾವಣೆಯಲ್ಲಿ ಕೆ.ಅಣ್ಣಾಮಲೈ 68,553 ಮತಗಳನ್ನು ಪಡೆದು ಅರಾವಕುರಿಚಿ ವಿಧಾನಸಭಾ ಕ್ಷೇತ್ರದಲ್ಲಿ ಡಿಎಂಕೆ ಅಭ್ಯರ್ಥಿ ವಿರುದ್ಧ ಸೋಲು ಕಂಡಿದ್ದರು. ಆದರೂ ಸಹ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು. 2024ರ ಲೋಕಸಭೆ ಚುನಾವಣೆಯಲ್ಲಿ ಅವರು ಮತ್ತೆ ಸೋಲು ಕಂಡರು.

ಕೆಲವು ದಿನಗಳ ಹಿಂದೆ ಅಣ್ಣಾಮಲೈ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಲಿದ್ದಾರೆ. ಒಂದು ರಾಜ್ಯದ ಉಸ್ತುವಾರಿಯನ್ನು ಅವರಿಗೆ ನೀಡಲಾಗುತ್ತದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹಬ್ಬಿದ್ದವು. ಈಗ ಪುನಃ ಅಣ್ಣಾಮಲೈ ರಾಷ್ಟ್ರ ರಾಜಕೀಯಕ್ಕೆ ಎಂಬ ಸುದ್ದಿಗಳು ಕೇಳಿಬಂದಿವೆ.

2026ರ ಚುನಾವಣೆಯ ಹಿನ್ನಲೆಯಲ್ಲಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವನ್ನು ಸ್ಥಾಪನೆ ಮಾಡುವ ಮೂಲಕ ನಟ ದಳಪತಿ ವಿಜಯ್ ರಾಜಕಾರಣಕ್ಕೆ ಬಂದಿದ್ದಾರೆ. ಡಿಎಂಕೆ ಎಂ.ಕೆ.ಸ್ಟಾಲಿನ್, ಉದಯನಿಧಿ ಸ್ಟಾಲಿನ್ ನೇತೃತ್ವದಲ್ಲಿ ಚುನಾವಣೆಗೆ ಹೋಗಲಿದೆ. ಬಿಜೆಪಿ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಚುನಾವಣೆ ಎದುರಿಸಲಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version