ಭಾರತದಲ್ಲಿ ನಾವು ಬ್ರಹ್ಮಪುತ್ರ ಎಂದು ಕರೆಯುವ ನದಿಗೆ, ಚೀನಾದಲ್ಲಿ ಯಾರ್ಲುಂಗ್ ತ್ಸಾಂಗ್ಪೊ ಎಂದು ಕರೆಯುತ್ತಾರೆ. ಅರುಣಾಚಲ ಪ್ರದೇಶದ ಮೇಲ್ಭಾಗದಲ್ಲಿ ಈ ನದಿಯಲ್ಲಿ ಜಲವಿದ್ಯುತ್ ಘಟಕ ನಿರ್ಮಾಣ ಮಾಡುವುದಾಗಿ ಚೀನಾ ಕಳೆದ ಶನಿವಾರ ಹೇಳಿಕೊಂಡಿದೆ.
2025ರ ಜುಲೈ 19ರಂದು ಉದ್ಘಾಟನಾ ಸಮಾರಂಭ ನಡೆದಿದ್ದು, ಇದರಲ್ಲಿ ಚೀನಾ ಪ್ರಧಾನಿ ಮತ್ತು ಕಮ್ಯುನಿಸ್ಟ್ ಪಕ್ಷದ ರಾಜಕೀಯ ಬ್ಯೂರೋದ ಸದಸ್ಯ ಲಿ ಕಿಯಾಂಗ್ ಭಾಗವಹಿಸಿದ್ದರು. ಈ ಯೋಜನೆಯ ಒಟ್ಟು ವೆಚ್ಚ 167.8 ಶತಕೋಟಿ ಡಾಲರ್ ಎಂದು ಅಂದಾಜಿಸಲಾಗಿದೆ. ನದಿಗುಂಟ 5 ಜಲವಿದ್ಯುತ್ ಕೇಂದ್ರಗಳನ್ನು ಒಳಗೊಳ್ಳುವ ಮೂಲಕ ವಿಶ್ವದ ಅತಿ ದೊಡ್ಡ ಅಣೆಕಟ್ಟು ಯೋಜನೆಯಾಗುವ ನಿರೀಕ್ಷೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಆಕ್ಷೇಪ ವ್ಯಕ್ತಪಡಿಸಿದ ಭಾರತ: ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಈ ಯೋಜನೆಯೊಂದು ನೀರಿನ ಬಾಂಬ್ ಮತ್ತು ಗಡಿಯ ಬಳಿ ನೆಲೆಸಿರುವ ಸ್ಥಳೀಯ ಸಮುದಾಯಗಳಿಗೆ ಅಸ್ತಿತ್ವದ ಬೆದರಿಕೆ ಎಂದು ಕರೆದಿದ್ದಾರೆ. ಚೀನಾ ಇದ್ದಕ್ಕಿದಂತೆ ನೀರನ್ನು ಹರಿಸಿದರೆ ಪ್ರವಾಹ ಉಂಟಾಗಬಹುದು ಮತ್ತು ನದಿ ಒಣಗಿ ಹೋಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈಗಾಗಲೇ, ಭಾರತ ಸರ್ಕಾರ ಕೆಳಗಿನ ರಾಜ್ಯಗಳಿಗೆ ಯಾವುದೇ ಹಾನಿಯಾಗದಂತೆ ನಿಗಾವಹಿಸಬೇಕು ಮತ್ತು ನದಿಯ ಹರಿವಿಗೆ ಮತ್ತು ನಿಸರ್ಗಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮವಹಿಸಬೇಕು ಎಂದು ಎಚ್ಚರಿಸಿದೆ.
ಸಂಭಾವ್ಯ ಪರಿಣಾಮಗಳು..
- ಪರಿಸರ ಕಾಳಜಿ: ಈ ಅಣೆಕಟ್ಟು ಸಕ್ರಿಯ ಭೂಕಂಪ ಮತ್ತು ನೈಸರ್ಗಿಕವಾಗಿ ದುರ್ಬಲ ಪ್ರದೇಶದಲ್ಲಿ ನೆಲೆಗೊಂಡಿರುವುದರಿಂದ, ಅಣೆಕಟ್ಟಿನ ಸ್ಥಿರತೆ ಮತ್ತು ಸಂಭಾವ್ಯ ಪರಿಸರ ಹಾನಿಯ ಬಗ್ಗೆ ಪರಿಸರ ಸುದ್ದಿ ಸಂಸ್ಥೆ ಮೊಂಗಾಬೇ-ಇಂಡಿಯಾ ಎಚ್ಚರಿಸಿದೆ.
- ನೀರಿನ ಹರಿವಿನಲ್ಲಿ ಅಡಚಣೆ: ಕೆಳಮುಖವಾಗಿ ಹರಿಯುವ ನೀರಿನ ಪ್ರಮಾಣ ಮತ್ತು ಸಮಯವನ್ನು ನಿಯಂತ್ರಿಸಬಹುದು, ಇದು ಭಾರತ ಮತ್ತು ಬಾಂಗ್ಲಾದಲ್ಲಿ ಕೃಷಿ ಮತ್ತು ನೀರಿನ ಲಭ್ಯತೆಯ ಮೇಲೆ ಪರಿಣಾಮ ಬೀರಬಹುದು.
ಭೌಗೋಳಿಕ-ರಾಜಕೀಯ ಸಾಧನ: ಈ ಯೋಜನೆಯು ಚೀನಾ ಮತ್ತು ಭಾರತದ ನಡುವೆ ಔಪಚಾರಿಕ ನೀರು ಹಂಚಿಕೆ ಒಪ್ಪಂದ ಇಲ್ಲದಿರುವುದನ್ನು ಎತ್ತಿ ತೋರಿಸುತ್ತದೆ. ಕೆಲವು ವಿಶ್ಲೇಷಕರು ಚೀನಾವು ಭೌಗೋಳಿಕ-ರಾಜಕೀಯ ಹತೋಟಿಗಾಗಿ ಅಣೆಕಟ್ಟನ್ನು ಒಂದು ಸಾಧನವಾಗಿ ಬಳಸಿಕೊಳ್ಳಬಹುದು ಎಂದು ಸೂಚಿಸಿದ್ದಾರೆ.
ಭಾರತದ ಗಡಿಯಾಚೆ ಬ್ರಹ್ಮಪುತ್ರ ನದಿಯಲ್ಲಿ ವಿಶ್ವದ ಅತಿದೊಡ್ಡ ಡ್ಯಾಮ್ ನಿರ್ಮಾಣ ಮಾಡುವುದಕ್ಕೆ ಚೀನಾ ಸಿದ್ದಗೊಂಡಿದ್ದು. ಇದು ನದಿ ಹರಿಯುವ ಭಾರತ ಮತ್ತು ಬಾಂಗ್ಲಾದೇಶದಲ್ಲಿ ಆತಂಕ ಮೂಡಿಸಿದೆ. ಭಾರತದ ಅರುಣಾಚಲ ಪ್ರದೇಶ ಪ್ರವೇಶಿಸುವ ಮುನ್ನ ಬ್ರಹ್ಮಪುತ್ರ ನದಿಯು ದೊಡ್ಡದಾಗಿ ತಿರುವು (U-Turn) ಪಡೆಯುವ ಹಿಮಾಲಯದ ಆಳವಾದ ಕಮರಿ ಪ್ರದೇಶದಲ್ಲಿ ಚೀನಾ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿದೆ. ಅರುಣಾಚಲ ಪ್ರದೇಶದಲ್ಲಿ ಭಾರತ ಕೂಡಾ ಬ್ರಹ್ಮಪುತ್ರ ನದಿಗೆ ಡ್ಯಾಮ್ ನಿರ್ಮಿಸಲು ಮುಂದಾಗಿದೆ.
ಅರುಣಾಚಲ ಪ್ರದೇಶದಲ್ಲಿ ಸಿಯಾಂಗ್ ಮೇಲ್ದಂಡೆ ಬಹೂಪಯೋಗಿ ಯೋಜನೆಯನ್ನು ಭಾರತ ತ್ವರಿತಗೊಳಿಸಿದೆ. ಇದು ನೀರಿನ ಹರಿವನ್ನು ಮತ್ತು ಚೀನಾದ ಅಣೆಕಟ್ಟಿನಿಂದ ಬಿಡುಗಡೆಯಾಗುವ ನೀರನ್ನು ನಿಯಂತ್ರಿಸಲಿದೆ. ಜೊತೆಗೆ ಈಶಾನ್ಯ ರಾಜ್ಯಗಳಲ್ಲಿ ಪ್ರವಾಹವನ್ನು ತಡೆಯುವ ಉದ್ದೇಶವಿದೆ.