Home ಸುದ್ದಿ ರಾಜ್ಯ ಒಂದಾಗಲಿದ್ದಾರೆ ಕುಚಿಕು ಗೆಳೆಯರು, ಶ್ರಿರಾಮುಲು ಜೊತೆ ಸಿನಿಮಾ ನೋಡಲಿದ್ದಾರೆ ರೆಡ್ಡಿ!

ಒಂದಾಗಲಿದ್ದಾರೆ ಕುಚಿಕು ಗೆಳೆಯರು, ಶ್ರಿರಾಮುಲು ಜೊತೆ ಸಿನಿಮಾ ನೋಡಲಿದ್ದಾರೆ ರೆಡ್ಡಿ!

0

ಬಳ್ಳಾರಿ: “ರಾಮುಲು ನಾನು ಒಟ್ಟಿಗೆ ಕೂತು ಸಿನಿಮಾ ನೋಡುವಷ್ಟು ಹತ್ತಿರವಾಗಿದ್ದೇವೆ ನಮ್ಮಿಬ್ಬರ ಸ್ನೇಹ ಸಂಬಂಧದಲ್ಲಿ ಮೂರನೆಯವರು ಮಧ್ಯಸ್ಥಿಕೆ ಮಾಡುವ ಅಗತ್ಯವಿಲ್ಲ” ಎಂದು ಮಾಜಿ ಸಚಿವ, ಶಾಸಕ ಜನಾರ್ಧನ ರೆಡ್ಡಿ ಇಬ್ಬರ ಮಧ್ಯದ ಸ್ನೇಹದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಬಳ್ಳಾರಿಯಲ್ಲಿ ಅವರ ಪುತ್ರ ಕಿರೀಟಿ ಅಭಿನಯದ ಚಲನಚಿತ್ರ “ಜೂನಿಯರ್” ಸಿನಿಮಾ ಬಿಡುಗಡೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ನನ್ನ ಮತ್ತು ರಾಮುಲು ನಡುವಿನ ಸ್ನೇಹ ಸಾಮಾನ್ಯವಾದುದ್ದಲ್ಲ, ಹದಿನೈದನೇ ವಯಸ್ಸಿನಿಂದ ಗೆಳತನವಿದೆ. ನಲವತ್ತು ವರ್ಷಗಳಿಂದ ಜೊತೆಗಿದ್ದೇವೆ. ಶೀಘ್ರದಲ್ಲಿ ಇಬ್ಬರು ಜತೆಗೂಡಿ ಜೂನಿಯರ್ ಸಿನಿಮಾ ನೋಡುತ್ತೇವೆ” ಎಂದು ಹೇಳಿದರು.

“ನಾಲ್ಕು ದಶಕಗಳಷ್ಟು ಹಳೆಯ ಸ್ನೇಹ ಯಾವುದೋ ಒಂದು ಘಟನೆಯಿಂದ ಬದಲಾವಣೆ ಆಗಲ್ಲ, ನಮ್ಮಿಬ್ಬರ ಮಧ್ಯದ ಪ್ರೀತಿ ಅಭಿಮಾನ ಅನ್ನೋದು ಸದಾ ಇದ್ದೇ ಇರುತ್ತದೆ. ಈಗ ಈ ಬಗ್ಗೆ ಮಾತನಾಡೋದು ಬೇಡ” ಎಂದು ಹೇಳಿದರು.

ರೆಡ್ಡಿ ತಮ್ಮ ಪತ್ನಿ ಅರಣಾ, ಸಹೋದರ ಸೋಮಶೇಖರ್ ರೆಡ್ಡಿ ಹಾಗೂ ಪುತ್ರ ಕಿರೀಟಿ ಸೇರಿದಂತೆ ಕುಟುಂಬ ಸಮೇತರಾಗಿ ‘ಜೂನಿಯರ್’ ಸಿನಿಮಾವನ್ನು ನೋಡಿದ ಅವರು, “ಸಿನಿಮಾ ಸಖತ್‌ ಆಗಿದೆ, ಚಿತ್ರದಲ್ಲಿ ಎಲ್ಲವೂ ಅದ್ಭುತವಾಗಿ ಮೂಡಿಬಂದಿವೆ. ಚಿತ್ರ ಯಶಸ್ಸು ಗಳಿಸುತ್ತದೆ” ಎಂದು ಭರವಸೆ ವ್ಯಕ್ತಪಡಿಸಿದರು.

“ಚಿಕ್ಕಂದಿನಿಂದ ಪುನೀತ್ ರಾಜಕುಮಾರ್, ಎನ್‌ಟಿಆರ್ ಅವರನ್ನು ನೋಡುತ್ತಾ ಬೆಳೆದಿರುವ ಕಿರೀಟಿ, ಅವರಿಂದ ಪ್ರೇರಣೆಯಾಗಿ ಇಂದು ಈ ಮಟ್ಟಕ್ಕೆ ಬೆಳೆದಿದ್ದಾನೆ. ಮನೆಯಲ್ಲಿ ರಾಜಕೀಯ ಇದ್ದರೂ ಕೂಡ ಅವನಿಗೆ ರಾಜಕೀಯ ಬಗ್ಗೆ ಆಸಕ್ತಿಯೇ ಇರಲ್ಲಿಲ್ಲ, ಸಿನಿಮಾ ಕಡೆಗೆ ಅವನ ಒಲವು ಹೆಚ್ಚಾಗಿತ್ತು. ಆ ಸಿನಿಮಾ ಹುಚ್ಚು ಅವನನ್ನು ಇಲ್ಲಿಯವರೆಗೆ ತಂದಿದೆ” ಎಂದರು.

ಪ್ರೇಕ್ಷಕರಿಂದ ಫುಲ್‌ ಮಾರ್ಕ್ಸ್‌
ಬಳ್ಳಾರಿಯ ರಾಧಿಕಾ, ನಟರಾಜ್, ಎಸ್ಎಲ್ಎನ್ ಮಾಲ್ ಸೇರಿದಂತೆ ನಾಲ್ಕು ಥಿಯೇಟರ್‌ಗಳಲ್ಲಿ ʼಜೂನಿಯರ್‌ʼ ಬಿಡುಗಡೆಯಾಗಿದೆ. ಕಿರೀಟಿಯ ಎನರ್ಜಿಟಿಕ್ ಡ್ಯಾನ್ಸ್‌, ಫೈಟ್, ಅಭಿನಯಕ್ಕೆ ವೀಕ್ಷಕರು ಫುಲ್‌ ಮಾರ್ಕ್ಸ್‌ ನೀಡಿದ್ದಾರೆ. ಚಿತ್ರಮಂದಿರದ ಮುಂದೆ ಕಿರೀಟಿ ಅಭಿಮಾನಿಗಳು ಪಟಾಕಿ ಸಿಡಿಸಿ, ತಮಟೆ ಬಾರಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಕನ್ನಡದ ಜೊತೆ ಜೊತೆಗೆ ತೆಲುಗು ಭಾಷೆಯಲ್ಲಿಯೂ `ಜೂನಿಯರ್’ ಪ್ರದರ್ಶನ ಕಾಣುತ್ತಿರುವುದು ಮತ್ತೊಂದು ವಿಶೇಷ. ಎರಡು ಭಾಷೆಯಲ್ಲಿ ನಿರ್ಮಾಣವಾಗಿರುವ ಸಿನಿಮಾವಾಗಿರುವುದರಿಂದ ತಾರಾಬಳಗವೂ ಎಲ್ಲೆಡೆ ಸಲ್ಲುವಂತೆ ಸೇರ್ಪಡೆಯಾಗಿದೆ. ಖ್ಯಾತ ನಟಿ ಜೆನಿಲಿಯಾ, ತೆಲುಗಿನಲ್ಲಿ ಸಂಚಲನ ಮೂಡಿಸಿರುವ ಶ್ರೀಲೀಲಾ, ಹಿರಿಯ ನಟ ರವಿಚಂದ್ರನ್ ಈ ಸಿನಿಮಾದ ತೂಕ ಹೆಚ್ಚಿಸಿದ್ದಾರೆ.

ಖ್ಯಾತ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಸಿನಿಮಾಗೆ ಸಂಗೀತ ನೀಡಿದ್ದು, ಬಾಹುಬಲಿ, ಆರ್‌ಆರ್‌ಆರ್ ಸಿನಿಮಾಗಳ ಛಾಯಾಗ್ರಾಹಕ ಕೆ.ಕೆ. ಸೆಂದಿಲ್ ಕುಮಾರ್ ಜೂನಿಯರ್ ಸಿನಿಮಾದ ಫೋಟೋಗ್ರಫಿ ನಿರ್ವಹಿಸಿದ್ದಾರೆ. ಹೆಸರಾಂತ ಆ್ಯಕ್ಷನ್ ಕೊರಿಯೋಗ್ರಾಫರ್ ಪೀಟರ್ ಹೇನ್ಸ್ ಈ ಚಿತ್ರದ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version