Home ಸುದ್ದಿ ದೇಶ ಆಂಧ್ರ ಮುಖ್ಯಮಂತ್ರಿಗಳ ಆಪ್ತನಿಗೆ ಗೋವಾ ರಾಜ್ಯಪಾಲ ಹುದ್ದೆ!

ಆಂಧ್ರ ಮುಖ್ಯಮಂತ್ರಿಗಳ ಆಪ್ತನಿಗೆ ಗೋವಾ ರಾಜ್ಯಪಾಲ ಹುದ್ದೆ!

0

ಪಣಜಿ: ಕೇಂದ್ರದ ಮಾಜಿ ಸಚಿವ ಅಶೋಕ್ ಗಜಪತಿ ರಾಜು ಜುಲೈ 26ರಂದು ಗೋವಾ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭ ಬೆಳಗ್ಗೆ 11 ಗಂಟೆಗೆ ಗೋವಾ ರಾಜಭವನದಲ್ಲಿ ನಡೆಯಲಿದೆ. ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೂತನ ರಾಜ್ಯಪಾಲರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಜುಲೈ 14ರಂದು ಅಶೋಕ್ ಗಜಪತಿ ರಾಜು ಅವರನ್ನು ರಾಜ್ಯಪಾಲರಾಗಿ ನೇಮಕ ಮಾಡಿದ್ದರು. ಹಾಲಿ ಗೋವಾ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಬಳಿಕ ಅಶೋಕ ಗಜಪತಿ ರಾಜು ದೇಶದ ಅತಿ ಚಿಕ್ಕ ರಾಜ್ಯದ ರಾಜ್ಯಪಾಲರಾಗುತ್ತಿದ್ದಾರೆ.

ನೂತನ ರಾಜ್ಯಪಾಲರ ನೇಮಕವನ್ನು ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್, ಸಚಿವರು ಮತ್ತು ವಿರೋಧ ಪಕ್ಷದ ನಾಯಕ ಯೂರಿ ಅಲೆಮಾವು ಸ್ವಾಗತಿಸಿದ್ದಾರೆ.

ಆಂಧ್ರಪ್ರದೇಶ ವಿಧಾನಸಭೆಯಲ್ಲಿ 25 ವರ್ಷಗಳಿಗೂ ಹೆಚ್ಚು ಕಾಲ ಶಾಸಕರಾಗಿರುವ ಪುಸಾಪತಿ ಅಶೋಕ್ ಗಜಪತಿ ರಾಜು 2014 ರಿಂದ 2018 ರವರೆಗೆ ಕೇಂದ್ರ ಸಚಿವರಾಗಿದ್ದರು. ಅವರು ತೆಲುಗು ದೇಶಂ ಪಕ್ಷ ಮತ್ತು ಭಾರತೀಯ ಜನತಾ ಪಕ್ಷಕ್ಕಾಗಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ.

ಅಶೋಕ್ ಗಜಪತಿರಾಜು ಪರಿಚಯ: ತೆಲುಗು ದೇಶಂ ಪಕ್ಷದ (ಟಿಡಿಪಿ) ಹಿರಿಯ ನಾಯಕ ಮತ್ತು ಆಂಧ್ರಪ್ರದೇಶದ ಪ್ರಮುಖ ರಾಜಕೀಯ ನಾಯಕ ಅಶೋಕ್ ಗಜಪತಿ ರಾಜು, 2014ರಿಂದ 2018ರ ತನಕ ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಸಂಪುಟದಲ್ಲಿ ನಾಗರಿಕ ವಿಮಾನಯಾನ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆಪ್ತರು ಮತ್ತು ಪ್ರಾದೇಶಿಕ ಮತ್ತು ರಾಷ್ಟ್ರೀಯ ರಾಜಕೀಯದಲ್ಲಿ ದೀರ್ಘಕಾಲದ ಪ್ರಭಾವ ಹೊಂದಿದ್ದರು. ಆಂಧ್ರಪ್ರದೇಶ ರಾಜ್ಯ ಸರ್ಕಾರದಲ್ಲಿ ಹಣಕಾಸು, ಯೋಜನೆ ಮತ್ತು ಆದಾಯ ಸೇರಿದಂತೆ ಹಲವಾರು ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದಾರೆ.

ಪಿ. ಎಸ್. ಶ್ರೀಧರನ್ ಪಿಳ್ಳೈ ಜುಲೈ 15, 2021ರಂದು ಗೋವಾದ 19ನೇ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲರ ನಾಲ್ಕು ವರ್ಷಗಳ ಅವಧಿ ಪೂರ್ಣಗೊಂಡಿದ್ದು, ಹೊಸ ರಾಜ್ಯಪಾಲರ ನೇಮಕವಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version