Home ಸುದ್ದಿ ವಿದೇಶ ಅಮೆರಿಕದಿಂದ ಈಗ ಡಿಜಿಟಲ್ ಸೇವಾತೆರಿಗೆ ಹೇರಿಕೆಯ ಬೆದರಿಕೆ

ಅಮೆರಿಕದಿಂದ ಈಗ ಡಿಜಿಟಲ್ ಸೇವಾತೆರಿಗೆ ಹೇರಿಕೆಯ ಬೆದರಿಕೆ

0

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಗತ್ತಿನ ಹಲವು ದೇಶಗಳಿಗೆ ಮನಬಂದಂತೆ ಸುಂಕ ಹೇರಿರುವ ಜೊತೆಗೆ ಈಗ ಡಿಜಿಟಲ್ ಸೇವಾ ತೆರಿಗೆ ವಿಧಿಸುವುದಾಗಿಯೂ ಬೆದರಿಕೆ ಹಾಕಿದ್ದಾರೆ.

ಅಮೆರಿಕದ ಟೆಕ್ ಸಂಸ್ಥೆಗಳ ಮೇಲೆ ಡಿಜಿಟಲ್ ಸೇವಾ ತೆರಿಗೆ ಅಥವಾ ಸಂಬಂಧಿತ ನಿಯಮಗಳನ್ನು ವಿಧಿಸುವ ದೇಶಗಳಿಗೆ ಅಮೆರಿಕದ ಚಿಪ್ ನಿರ್ಬಂಧಿಸುವ ಹೊಸ ಸುಂಕ ವಿಧಿಸುವುದಾಗಿ ಟ್ರಂಪ್ ಸೂಚನೆ ನೀಡಿದ್ದಾರೆ. ಅಲ್ಫಾಬೆಟ್, ಮೆಟಾ ಮತ್ತು ಅಮೆಜಾನ್‌ನಂತಹ ಪ್ರಮುಖ ಕಂಪನಿಗಳನ್ನು ಗುರಿಯಾಗಿರಿಸಿಕೊಂಡು ಹೇರಿರುವ ತೆರಿಗೆ ಕೈಬಿಡುವಂತೆ ಪಾಲುದಾರ ದೇಶಗಳ ಮೇಲೆ ಒತ್ತಡ ಹೇರುವ ಸಲುವಾಗಿ ಡಿಜಿಟಲ್ ಸೇವಾ ತೆರಿಗೆ ಹೇರುವ ಬೆದರಿಕೆ ಹಾಕಿದ್ದಾರೆ.

ಅನ್ಯ ದೇಶಗಳ ಡಿಜಿಟಲ್ ತೆರಿಗೆ, ಡಿಜಿಟಲ್ ಸೇವೆಗಳ ಶಾಸನ ಮತ್ತು ಡಿಜಿಟಲ್ ಮಾರುಕಟ್ಟೆ ನಿಯಮಗಳೆಲ್ಲವೂ ಅಮೆರಿಕನ್ ತಂತ್ರಜ್ಞಾನಕ್ಕೆ ಹಾನಿ ಅಥವಾ ತಾರತಮ್ಯ ಮಾಡುವ ಉದ್ದೇಶದಿಂದ ರೂಪಿಸಲ್ಪಟ್ಟವು ಎಂದು ಟ್ರಂಪ್ ಸೋಮವಾರ ಟ್ರುತ್ ಸೋಶಿಯಲ್ ತಾಣದಲ್ಲಿ ಹೇಳಿಕೊಂಡಿದ್ದಾರೆ. ಚೀನಾದ ಅತಿದೊಡ್ಡ ಕಂಪನಿಗಳಿಗೆ ಸಂಪೂರ್ಣ ವಿನಾಯಿತಿಯನ್ನು ಅತಿರೇಕದ ರೀತಿಯಲ್ಲಿ ನೀಡುತ್ತಾರೆ. ಇದು ಕೊನೆಗೊಳ್ಳಬೇಕು ಮತ್ತು ಈಗಲೇ ಅಂತ್ಯವಾಗಬೇಕು ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟ್ರಂಪ್ ಆಡಳಿತ ಸದ್ಯ ನಡೆಸುತ್ತಿರುವ ವ್ಯಾಪಾರ ಮಾತುಕತೆಯಲ್ಲಿ ಡಿಜಿಟಲ್ ಸೇವಾ ತೆರಿಗೆಗಳು ಅತಿದೊಡ್ಡ ತೊಡಕಾಗಿ ಪರಿಣಮಿಸಿವೆ. ಕಳೆದ ಜೂನ್‌ನಲ್ಲಿ ಇದೇ ತೆರಿಗೆ ವಿಚಾರದಲ್ಲಿ ಕೆನಡಾ ಜೊತೆ ವ್ಯಾಪಾರ ಕುರಿತ ಮಾತುಕತೆ ಸ್ಥಗಿತಗೊಳಿಸುವುದಾಗಿ ಟ್ರಂಪ್ ಘೋಷಿಸಿದ್ದರು. ಇದರ ಬೆನ್ನಲ್ಲೇ ಕೆನಡಾ ತನ್ನ ತೆರಿಗೆಯನ್ನು ತ್ವರಿತಗತಿಯಲ್ಲಿ ರದ್ದು ಮಾಡಿದಾಗ ಈ ದೇಶ ಅಮೆರಿಕದ ಒತ್ತಡಕ್ಕೆ ಮಣಿದಿದೆ ಎಂದು ಅಮೆರಿಕ ಆಡಳಿತ ಹೇಳಿಕೊಂಡಿತ್ತು. ಕೆನಡಾದಂತಹ ದೇಶಗಳಲ್ಲಿ ಡಿಜಿಟಲ್ ಸೇವಾ ತೆರಿಗೆ ಅಮೆರಿಕ ಆಡಳಿತ ವಿರುದ್ಧ ಟೀಕೆಗೆ ಕಾರಣವಾಗಿದೆ. ಏಕೆಂದರೆ ಅಮೆರಿಕದ ಕಂಪನಿಗಳೇ ಅಂತಹ ತೆರಿಗೆಗೆ ಒಳಗಾಗಿವೆ.

ಡಿಜಿಟಲ್ ಸೇವಾ ತೆರಿಗೆ ಎಂದರೇನು?: ಡಿಜಿಟಲ್ ಸೇವಾ ತೆರಿಗೆ (ಡಿಎಸ್‌ಟಿ)ಎನ್ನುವುದು ದೇಶಗಳು ಸ್ಥಳೀಯ ಬಳಕೆದಾರರಿಗೆ ಡಿಜಿಟಲ್ ಸೇವೆ ಒದಗಿಸುವುದಕ್ಕಾಗಿ ದೊಡ್ಡ ತಂತ್ರಜ್ಞಾನದ ಸಂಸ್ಥೆಗಳ ಮೇಲೆ ವಿಧಿಸುವ ಆದಾಯ ಆಧಾರಿತ ತೆರಿಗೆಯಾಗಿದೆ. ಇದು ಆದಾಯ ತೆರಿಗೆ ಅಥವಾ ಆನ್‌ಲೈನ್ ಮಾರಾಟ ತೆರಿಗೆ ಇಲ್ಲವೇ ವ್ಯಾಟ್ ತೆರಿಗೆಯಲ್ಲ. ಲಾಭವನ್ನು ಆಧರಿಸಿ ಸಾಂಪ್ರದಾಯಿಕ ಕಾರ್ಪೋರೇಟ್ ತೆರಿಗೆ ಹೇರುವುದಕ್ಕಿಂತ ಭಿನ್ನವಾಗಿ ಒಟ್ಟು ಆದಾಯ ಮೇಲೆ ಲೆಕ್ಕಹಾಕಿ ವಿಧಿಸುವ ತೆರಿಗೆಯಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version