ಕೊಪ್ಪಳ ಜಿಲ್ಲೆಯ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರದಲ್ಲಿ ಮಂಗಳವಾರ ಸಂಜೆ ನಡೆದ ‘ತುಂಗಾರತಿ’ ಮಹೋತ್ಸವವು ವಿಜೃಂಭಣೆಯಿಂದ ಜರುಗಿತು. ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆಯುವ ‘ಗಂಗಾರತಿ’ ಮಾದರಿಯಲ್ಲಿ ಇದೇ ಮೊದಲ ಬಾರಿಗೆ ಕೊಪ್ಪಳದಲ್ಲಿ ‘ತುಂಗಾರತಿ’ ಆಯೋಜನೆ ಮಾಡಲಾಗಿತ್ತು.
ಹಿಂದೂ ಧಾರ್ಮಿಕ ದತ್ತಿ ಇಲಾಖೆ, ಕೊಪ್ಪಳ ಜಿಲ್ಲಾಡಳಿತ ಹಾಗೂ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಜಂಟಿಯಾಗಿ ಇದೇ ಪ್ರಥಮ ಬಾರಿಗೆ ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರದ ತುಂಗಭದ್ರಾ ನದಿತೀರದಲ್ಲಿ ತುಂಗಭದ್ರಾ ನದಿಗೆ ‘ತುಂಗಾರತಿ’ ಮಹೋತ್ಸವ ನಡೆಸಿದವು.
ಈ ಕಾರ್ಯಕ್ರಮವನ್ನು ಪವಿತ್ರ ತೀರ್ಥ ಕ್ಷೇತ್ರ ಕಾಶಿಯಲ್ಲಿ ನಡೆಯುವ ‘ಗಂಗಾರತಿ’ ಮಾದರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ‘ಗಂಗಾರತಿ’ಯ 15 ಅರ್ಚಕರು ಈ ‘ತುಂಗಾರತಿ’ ಮಹೋತ್ಸವವನ್ನು ನೆರವೇರಿಸಿದರು. ಕಾರ್ಯಕ್ರಮ ವಾರಣಾಸಿಯ ಗಂಗಾರತಿಯನ್ನು ನೆನಪಿಸುವಂತಿತ್ತು. ತುಂಗಭದ್ರಾ ಆರತಿಗಾಗಿ ಸಾರ್ವಜನಿಕರಿಗೂ ಅವಕಾಶ ಕಲ್ಪಿಸುವ ಉದ್ದೇಶದಿಂದ ಶ್ರೀ ಕ್ಷೇತ್ರದ ವತಿಯಿಂದ ಸುಮಾರು 2 ಸಾವಿರ ಆರತಿಗಳನ್ನು ಭಕ್ತಾದಿಗಳಿಗೆ ಉಚಿತವಾಗಿ ನೀಡಲಾಗಿತ್ತು.
ತುಂಗಾರತಿಗೂ ಮುನ್ನ ಸಾರಿಗೆ ಮತ್ತು ಮುಜರಾಯಿ ಇಲಾಖೆಯ ಸಚಿವರು ಹಾಗೂ ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಮಲಿಂಗಾ ರೆಡ್ಡಿ ಮತ್ತು ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರು ಆಗಿರುವ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹಾಗೂ ರಾ.ಬ.ಕೊ.ವಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಮತ್ತು ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹಾಗೂ ಸಂಸದ ಕೆ.ರಾಜಶೇಖರ ಹಿಟ್ನಾಳ ಮತ್ತು ವಿಧಾನ ಪರಿಷತ್ ಸದಸ್ಯ ಹೇಮಲತಾ ನಾಯಕ ಹಾಗೂ ಇತರೆ ಜನಪ್ರತಿನಿಧಿಗಳು ತುಂಗಭದ್ರಾ ನದಿಗೆ ಬಾಗಿನ ಸಮರ್ಪಣೆ ಮಾಡಿದರು.
ತುಂಗಭದ್ರ ಆರತಿ ಮಹೋತ್ಸವದ ಪ್ರಯುಕ್ತ ಚಂಡಿಕಾ ಹೋಮ, ಭಕ್ತರಿಗೆ ವಿಶೇಷ ಅನ್ನ ಸಂತರ್ಪಣೆ ಕಾರ್ಯಕ್ರಮ, ಮಾಹಿಳೆಯರಿಂದ ವಿಶೇಷ ಕುಂಭ ಮೆರೆವಣಿಗೆ, ನದಿತೀರದಲ್ಲಿ ದೇವಸ್ಥಾನದ ಉತ್ಸವ ಮೂರ್ತಿಯ ಪ್ರತಿಷ್ಠಾಪನೆ ಮತ್ತು ವಿಶೇಷ ಪೂಜೆ ನಡೆಯಿತು.

ಇದಲ್ಲದೆ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಹೊಸಪೇಟೆಯ ಅಂಜಲಿ ಕಲಾತಂಡದವರಿಂದ ಭರತನಾಟ್ಯ ಹಾಗೂ ನದಿ ತಟದ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ಪಂಚಮಸಾಲಿ ಜಗದ್ಗುರು ಪೀಠ ಹರಿಹರದ ವಚನಾನಂದ ಸ್ವಾಮಿಗಳು ಹಾಗೂ ವಿವಿಧ ಮಠಾಧೀಶರು, ಮಾಜಿ ಸಂಸದರಾದ ಕರಡಿ ಸಂಗಣ್ಣ, ಮಾಜಿ ಶಾಸಕರಾದ ಕೆ.ಬಸವರಾಜ ಹಿಟ್ನಾಳ ಹಾಗೂ ಅಮರೆಗೌಡ ಪಾಟೀಲ ಬಯ್ಯಾಪುರ, ಮುನಿರಾಬಾದ್ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ತುಂಗಭದ್ರಾ ಯೋಜನೆಯ ಅಧ್ಯಕ್ಷರಾದ ಹಸನಸಾಬ ನಭಿಸಾಬ ದೋಟಿಹಾಳ ಮುಂತಾದವರು ಪಾಲ್ಗೊಂಡಿದ್ದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೆಗೀ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್. ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ತಹಶಿಲ್ದಾರ್ ವಿಠ್ಠಲ ಚೌಗಲಾ ಹಾಗೂ ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಯಂ.ಹೆಚ್. ಪ್ರಕಾಶ್ ರಾವ್, ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಉಪಸ್ಥಿತರಿದ್ದರು.