ಹೊಸದಿಲ್ಲಿ: ಗುಜರಾತ್‌ನ ಜಾಮ್‌ನಗರದಲ್ಲಿರುವ ʼವಂತಾರಾʼ ಪ್ರಾಣಿಗಳ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರದ ವ್ಯವಹಾರಗಳ ಕುರಿತ ತನಿಖೆಗೆ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ಚೆಲಮೇಶ್ವರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ(SIT) ರಚಿಸಿ ಆದೇಶಿಸಿದೆ.
ಗಾಯಾಳು ವನ್ಯಜೀವಿಗಳ ರಕ್ಷಣೆ, ಆರೈಕೆ, ಚಿಕಿತ್ಸೆಗೆಂದು ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ರಿಲಯನ್ಸ್ ಫೌಂಡಷನ್ನಿಂದ ಆರಂಭಿಸಲಾಗಿರುವ ‘ವಂತಾರ’ ಕೇಂದ್ರದಲ್ಲಿ ಪ್ರಾಣಿಗಳ ಕಳ್ಳಸಾಗಣೆ, ವನ್ಯಜೀವಿಗಳ ಅಕ್ರಮ ಸಾಕಣೆ, ವಿಶೇಷವಾಗಿ ಆನೆಗಳನ್ನು ಕಾನೂನುಬಾಹಿರವಾಗಿ ಸ್ವಾಧೀನಪಡಿಸಿಕೊಂಡ ಗಂಭೀರ ಆರೋಪಗಳು ಕೇಳಿಬಂದ ಹಿನ್ನಲೆಯಲ್ಲಿ ಸತ್ಯಾಸತ್ಯತೆ ಅರಿಯಲು ಸುಪ್ರೀಂ ಕೋರ್ಟ್ ಸೋಮವಾರ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಿ ಆದೇಶಿಸಿದೆ.
ಗುಜರಾತ್‌ನ ಜಾಮ್‌ನಗರದಲ್ಲಿರುವ ಪ್ರಾಣಿ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರವಾದ ವಂತಾರ ಎನ್‌ಜಿಒಗಳು ಮತ್ತು ವನ್ಯಜೀವಿ ಸಂಸ್ಥೆಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಪಂಕಜ್ ಮಿಥಲ್ ಮತ್ತು ಪಿ.ಬಿ.ವರಾಲೆ ಅವರಿದ್ದ ಪೀಠ ಉತ್ತರಾಖಂಡ ಮತ್ತು ತೆಲಂಗಾಣ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ರಾಘವೇಂದ್ರ ಚೌಹಾಣ್, ಮುಂಬೈನ ಮಾಜಿ ಪೊಲೀಸ್ ಆಯುಕ್ತರಾದ ಹೇಮಂತ್ ನಾಗ್ರಾಲೆ, ಕಸ್ಟಮ್ಸ್ ಹೆಚ್ಚುವರಿ ಆಯುಕ್ತರಾದ ಅನೀಶ್ ಗುಪ್ತಾ ಅವರನ್ನು ಎಸ್ಐಟಿಗೆ ಸುಪ್ರೀಂ ಕೋರ್ಟ್ ನೇಮಿಸಿದೆ.
“ಭಾರತ ಮತ್ತು ವಿದೇಶಗಳಿಂದ ಪ್ರಾಣಿಗಳನ್ನು, ವಿಶೇಷವಾಗಿ ಆನೆಗಳನ್ನು ತರಿಸುವ ವೇಳೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಮತ್ತು ಇತರ ಸಂಬಂಧಿತ ಕಾನೂನುಗಳ ನಿಬಂಧನೆಗಳ ಅನುಸರಣೆ ಬಗ್ಗೆ ತನಿಖೆ ನಡೆಸಬೇಕು” ಅಳಿವಿನಂಚಿನಲ್ಲಿರುವ ಪ್ರಾಣಿ ಪ್ರಭೇದಗಳ ಸಂರಕ್ಷಣೆ ಕಾಯ್ದೆ, ಜೀವಂತ ಪ್ರಾಣಿಗಳ ಆಮದು ಮತ್ತು ರಫ್ತಿಗೆ ಸಂಬಂಧಿಸಿದ ಇತರ ಶಾಸನಬದ್ಧ ನಿಯಮಗಳ ಕುರಿತು ಎಸ್ಐಟಿ ಪರಿಶೀಲಿಸಿ ಸೆಪ್ಟೆಂಬರ್ 12 ರೊಳಗೆ ವರದಿಯನ್ನು ಸಲ್ಲಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.