ಮುಂಬೈ: ಹಿರಿಯ ನಟಿ ಮತ್ತು ರಾಜ್ಯಸಭೆ ಸದಸ್ಯೆ ಜಯಾ ಬಚ್ಚನ್ ಅವರು ಮದುವೆ ಕುರಿತ ತಮ್ಮ ಹೊಸ ಹೇಳಿಕೆಯಿಂದ ಮತ್ತೊಮ್ಮೆ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ. ‘ವೀ ದಿ ವುಮೆನ್ ಮುಂಬೈ’ ಕಾರ್ಯಕ್ರಮದಲ್ಲಿ ಪತ್ರಕರ್ತೆ ಬರ್ಖಾ ದತ್ ಜೊತೆ ಸಂವಾದ ನಡೆಸಿದ ಸಂದರ್ಭದಲ್ಲಿ ಅವರು ಮದುವೆಯನ್ನು “ಹಳತಾದ ಸಂಸ್ಥೆ (Outdated Institution)” ಎಂದು ವ್ಯಾಖ್ಯಾನಿಸಿದರು.
“ನವ್ಯಾ ಮದುವೆಯಾಗಬೇಕೆಂದು ನಾನು ಬಯಸುವುದಿಲ್ಲ”: ಜಯಾ ಬಚ್ಚನ್ ಅವರು ಸ್ಪಷ್ಟವಾಗಿ, “ನವ್ಯಾ ಮದುವೆಯಾಗುವುದು ನನಗೆ ಇಷ್ಟವಿಲ್ಲ” ಎಂದು ಹೇಳಿದ್ದಾರೆ. ಮದುವೆ ಈಗ ಹಳೆಯ ಪದ್ಧತಿ ಆಗಿದೆಯೇ ಎಂದು ಕೇಳಿದಾಗ ಅವರು ತಕ್ಷಣ “ಹೌದು, ಖಂಡಿತ” ಎಂದು ಪ್ರತಿಕ್ರಿಯಿಸಿದರು.
ಇಂದಿನ ಮಕ್ಕಳು ತುಂಬಾ ಚುರುಕು: ಸಾಮಾಜಿಕ ಮೌಲ್ಯಗಳು, ಪೋಷಕರ ನಡವಳಿಕೆ ಮತ್ತು ಹೊಸ ಪೀಳಿಗೆಯ ಅಭಿಪ್ರಾಯಗಳಲ್ಲಿ ಬಂದಿರುವ ಬದಲಾವಣೆಗಳ ಬಗ್ಗೆ ಮಾತನಾಡಿದ ಅವರು, “ನಾನು ಈಗ ಅಜ್ಜಿ. ನವ್ಯಾಗೆ 28 ವರ್ಷ ಆಗಲಿದೆ. ಇಂದಿನ ಯುವತಿಯರಿಗೆ ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬ ಸಲಹೆ ನೀಡಲು ನನಗೆ ತುಂಬಾ ವಯಸ್ಸಾಗಿದೆ. ಇಂದಿನ ಮಕ್ಕಳು ನಮ್ಮನ್ನು ಮೀರಿಸುತ್ತಾರೆ ಎಂದು ಹೇಳಿದರು.
ಮದುವೆಗೆ ದೆಹಲಿಯ ಲಡ್ಡು ಹೋಲಿಕೆ: ಮದುವೆಯನ್ನು ಕುರಿತ ತಮ್ಮ ಅಭಿಪ್ರಾಯವನ್ನು ವಿವರಿಸುವಾಗ ಅವರು ಚುಟುಕಾಗಿ ಹೀಗೆ ಹೇಳಿದರು: ಮದುವೆ ಎನ್ನುವುದು “ದೆಹಲಿಯ ಲಡ್ಡು ಹಾಗೆ — ತಿಂದರೂ ಕಷ್ಟ, ತಿನ್ನದರೂ ಕಷ್ಟ! ಜೀವನವನ್ನು ಆನಂದಿಸಿ.” ಎಂದಿದ್ದಾರೆ.
ಇನ್ನು ಈ ಕುರಿತಂತೆ ಜಯಾ ಬಚ್ಚನ್ ಅವರ ಈ ಹೇಳಿಕೆಗಳು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿವೆ. ಮದುವೆ ಕುರಿತ ಇಂದಿನ ಯುವಪೀಳಿಗೆಯ ಮನೋಭಾವ, ಮಹಿಳೆಯರ ಸ್ವಾತಂತ್ರ್ಯ, ವೈಯಕ್ತಿಕ ಆಯ್ಕೆ, ಕುಟುಂಬದ ಪರಂಪರೆ—ಎಲ್ಲದರ ಕುರಿತಾದ ಚರ್ಚೆಗಳು ಜೋರಾಗಿವೆ.
