ಪಟ್ನಾ: ಪ್ರಧಾನಿ ನರೇಂದ್ರ ಮೋದಿ ತಾಯಿಯವರನ್ನು ಒಳಗೊಂಡ ಕೃತಕ ಬುದ್ಧಿಮತ್ತೆ ಆಧಾರಿತ ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣಗಳಿಂದ ತಕ್ಷಣವೇ ತೆಗೆದುಹಾಕುವಂತೆ ಪಟ್ನಾ ಹೈಕೋರ್ಟ್ ಮಂಗಳವಾರ ಬಿಹಾರ ಕಾಂಗ್ರೆಸ್ ಘಟಕಕ್ಕೆ ನಿರ್ದೇಶನ ನೀಡಿದೆ. ಈ ವಿಡಿಯೊದಲ್ಲಿ ಪ್ರಧಾನಿಯವರ ತಾಯಿ ಕನಸಿನಲ್ಲಿ ಬಂದು, “ಬಿಹಾರದಲ್ಲಿ ನನ್ನ ಹೆಸರನ್ನು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದೀಯಾ?” ಎಂದು ಕೇಳುವಂತೆ ಚಿತ್ರಿಸಲಾಗಿತ್ತು.
ಕಾಂಗ್ರೆಸ್ ಈ ವಿಡಿಯೊವನ್ನು ಸೆಪ್ಟೆಂಬರ್ 10 ರಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿತ್ತು. ವಿವೇಕಾನಂದ ಸಿಂಗ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಪಿ.ಬಿ. ಬೈಜಂತ್ರಿ ಅವರನ್ನೊಳಗೊಂಡ ನ್ಯಾಯಪೀಠವು ಈ ಮಹತ್ವದ ನಿರ್ದೇಶನವನ್ನು ಹೊರಡಿಸಿದೆ. ಈ ವರ್ಷದ ಕೊನೆಯಲ್ಲಿ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ.
ಕಾಂಗ್ರೆಸ್‌ನ ಈ ನಡೆಯು ಬಿಜೆಪಿ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಬಿಜೆಪಿಯ ರಾಷ್ಟ್ರೀಯ ವಕ್ತಾರ ಶಹಜಾದ್ ಪೂನಾವಾಲಾ ಅವರು, “ಬಿಹಾರ ಕಾಂಗ್ರೆಸ್ ರಾಜಕೀಯ ವಿರೋಧದ ಎಲ್ಲಾ ಸೀಮೆಗಳನ್ನು ಮೀರಿದೆ. ಇದು ಅಸಹ್ಯಕರ ರಾಜಕಾರಣದ ಪರಮಾವಧಿ” ಎಂದು ಕಟುವಾಗಿ ಟೀಕಿಸಿದ್ದರು. “ಪ್ರಧಾನಿ ತಾಯಿಯನ್ನು ನಿಂದಿಸಿದ್ದಕ್ಕೆ ಪಶ್ಚಾತ್ತಾಪ ಪಡದ ಕಾಂಗ್ರೆಸ್, ಮತ್ತೊಮ್ಮೆ ಕೆಟ್ಟದಾಗಿ ವಿಡಿಯೊ ಮಾಡಿ ತಮ್ಮ ಅಟ್ಟಹಾಸವನ್ನು ಪ್ರದರ್ಶಿಸಿದೆ. ಬಿಹಾರದ ಜನತೆ ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಸೂಕ್ತ ಸಮಯದಲ್ಲಿ ಕಾಂಗ್ರೆಸ್ ಮತ್ತು ಅದನ್ನು ಬೆಂಬಲಿಸುವ ಆರ್‌ಜೆಡಿಗೆ ತಕ್ಕ ಉತ್ತರ ನೀಡುತ್ತಾರೆ” ಎಂದು ಅವರು ಹೇಳಿದ್ದರು. ಬಿಜೆಪಿ ಹಿರಿಯ ನಾಯಕ ಅನುರಾಗ್ ಠಾಕೂರ್ ಕೂಡ ಕಾಂಗ್ರೆಸ್‌ನ ಈ ನಡೆಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.
ಅರ್ಜಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರ ಸರ್ಕಾರ ಮತ್ತು ಭಾರತೀಯ ಚುನಾವಣಾ ಆಯೋಗವನ್ನು ಪಕ್ಷಗಾರರನ್ನಾಗಿ ಮಾಡಲಾಗಿತ್ತು. ವಿಡಿಯೊ ತೆಗೆದುಹಾಕಲು ಸೂಚಿಸಿದ ನ್ಯಾಯಪೀಠವು ರಾಹುಲ್ ಗಾಂಧಿ, ಫೇಸ್‌ಬುಕ್, ಟ್ವಿಟರ್ ಮತ್ತು ಗೂಗಲ್‌ಗೆ ನೋಟಿಸ್ ಜಾರಿ ಮಾಡಿದೆ ಎಂದು ಚುನಾವಣಾ ಆಯೋಗದ ಪರ ವಕೀಲ ಸಿದ್ಧಾರ್ಥ ಪ್ರಸಾದ್ ತಿಳಿಸಿದ್ದಾರೆ. ಈ ನಿರ್ಧಾರವು ಚುನಾವಣಾ ರಾಜಕೀಯದಲ್ಲಿ ಎಐ ಬಳಕೆಯ ನೈತಿಕತೆ ಮತ್ತು ಕಾನೂನುಬದ್ಧತೆಯ ಕುರಿತು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.