ನವದೆಹಲಿ: ಆಪರೇಷನ್ ಸಿಂದೂರ್ ಕಾರ್ಯಾಚರಣೆ ವೇಳೆ ತಾನೇ ಭಾರತ ಮತ್ತು ಪಾಕಿಸ್ತಾನ ನಡುವಣ ಯುದ್ಧ ನಿಲ್ಲಿಸಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಹೇಳಿಕೊಳ್ಳುತ್ತಿದ್ದಾರೆ. ಇದನ್ನು ಅವರು 35ಕ್ಕೂ ಹೆಚ್ಚು ಬಾರಿ ಹೇಳಿಕೊಂಡಿದ್ದಾರೆ. ಆದರೆ ಭಾರತವು ಟ್ರಂಪ್ ಮಾತನ್ನು ಸ್ಪಷ್ಟೋಕ್ತಿಯಲ್ಲಿ ನಿರಾಕರಿಸುತ್ತಲೇ ಬಂದಿದೆ. ಇದೀಗ ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಅವರೂ ಆಪರೇಷನ್ ಸಿಂದೂರ್ ಕಾರ್ಯಾಚರಣೆ ನಂತರ ಏರ್ಪಟ್ಟ ಕದನವಿರಾಮವು ಅಮೆರಿಕ ಮಧ್ಯಸ್ಥಿಕೆಯಿಂದ ನಡೆದಿರುವುದಲ್ಲ ಎಂದು ಬಹಿರಂಗವಾಗಿ ಒಪ್ಪಿಕೊಳ್ಳುವ ಮೂಲಕ ಟ್ರಂಪ್ ಹೇಳಿದ್ದು ಸುಳ್ಳು ಎಂದು ಸಾದರಪಡಿಸಿದ್ದಾರೆ.
ಆಪರೇಷನ್ ಸಿಂದೂರ್ ಕಾರ್ಯಾಚರಣೆ ನಂತರ ಪಾಕಿಸ್ತಾನ ಕದನವಿರಾಮಕ್ಕೆ ಮನವಿ ಮಾಡಿದ ನಂತರ ಯುದ್ಧ ಸ್ಥಗಿತಗೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.
ಪಾಕ್ ಸಚಿವ ಇಶಾಕ್ ದಾರ್ ಅಲ್ ಜಜೀರಾ ಟಿವಿಗೆ ನೀಡಿದ ಸಂದರ್ಶನದ ಪ್ರಕಾರ, “ಮೇ 10ರಂದು ಕದನವಿರಾಮದ ಪ್ರಸ್ತಾವ ಬಂದಾಗ ಆ ದಿನ ಬೆಳಗ್ಗೆ 8.17 ಅಥವಾ ಆನಂತರ ಭಾರತ ಮತ್ತು ಪಾಕಿಸ್ತಾನ ಮಧ್ಯೆ ತಟಸ್ಥ ಸ್ಥಳದಲ್ಲಿ ಶೀಘ್ರವೇ ಮಾತುಕತೆ ನಡೆಯಲಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೋ ನನಗೆ ಹೇಳಿದ್ದರು. ಜುಲೈ 25ರ ವೇಳೆಗೆ ನಾನು ಆ ಬಗ್ಗೆ ಅವರಲ್ಲಿ ಕೇಳಿದಾಗ ಉಭಯದೇಶಗಳ ನಡುವಿನ ವಿವಾದ ದ್ವಿಪಕ್ಷೀಯ ವಿಷಯ ಎಂದು ಭಾರತ ಪ್ರತಿಪಾದಿಸುತ್ತಿದೆ ಎಂಬುದಾಗಿ ರೂಬಿಯೋ ತಿಳಿಸಿದ್ದರು. ದ್ವಿಪಕ್ಷೀಯ ಮಾತುಕತೆಗೆ ಪಾಕಿಸ್ತಾನದ ಅಭ್ಯಂತರ ಇಲ್ಲ. ಆದರೆ ಆ ಮಾತುಕತೆಗಳು ಸಮಗ್ರವಾಗಿರಬೇಕು. ಇದರಲ್ಲಿ ಭಯೋತ್ಪಾದನೆ, ವ್ಯಾಪಾರ, ಆರ್ಥಿಕತೆ, ಜಮ್ಮು-ಕಾಶ್ಮೀರ ಎಲ್ಲವೂ ಚರ್ಚೆಯಾಗಬೇಕು. ನಾವು ಯಾರನ್ನೂ ಮಾತುಕತೆಗೆ ಬನ್ನಿ ಎಂದು ಬೇಡಿಕೊಳ್ಳುವುದಿಲ್ಲ. ಯಾವುದೇ ದೇಶ ಶಾಂತಿ ಬಯಸಿದರೆ ನಾವು ಅದನ್ನು ಸ್ವಾಗತಿಸುತ್ತೇವೆ. ನಮ್ಮದು ಶಾಂತಿಪ್ರಿಯ ದೇಶ. ಮಾತುಕತೆಯೇ ಮುಂದಿನ ದಾರಿ ಎಂದು ನಾವು ನಂಬಿದ್ದೇವೆ. ಮಾತುಕತೆಗೆ ಎರಡೂ ಕಡೆಯಿಂದಲೂ ಸಿದ್ಧತೆ ನಡೆದಿರಬೇಕು. ಭಾರತ ಮಾತುಕತೆಗೆ ಒಪ್ಪದಿದ್ದರೆ ಅದು ನಡೆಯುವುದಿಲ್ಲ” ಎಂದವರು ವಿವರಿಸಿದರು.
ದಾರ್ ಈಗ ಬಹಿರಂಗಪಡಿಸಿದ ಮಾತುಗಳನುಸಾರ, ನೆರೆಹೊರೆಯ ದೇಶಗಳ ಮಧ್ಯೆ ಕದನವಿರಾಮಕ್ಕೆ ಅಮೆರಿಕ ಮಧ್ಯಸ್ಥಿಕೆ ವಹಿಸಿದೆ ಎಂಬ ಟ್ರಂಪ್ ಪದೇಪದೇ ಹೇಳುತ್ತಿದ್ದ ಮಾತುಗಳು ಸುಳ್ಳುವೆಂಬುದು ಸಾಬೀತಾದಂತಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರೂ ಆ ಸಮಯದಲ್ಲಿ ಅಮೆರಿಕ ಅಧ್ಯಕ್ಷರಿಗೆ ದೂರವಾಣಿ ಕರೆ ಮಾಡಿದ್ದಲ್ಲದೆ, ಪಾಕಿಸ್ತಾನ ವಿಷಯದಲ್ಲಿ ಮೂರನೇ ದೇಶದ ಮಧ್ಯಸ್ಥಿಕೆಯನ್ನು ಎಂದಿಗೂ ಸಹಿಸುವುದಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
“ಭಾರತ ಮತ್ತು ಪಾಕಿಸ್ತಾನ ಮಧ್ಯೆ ಮೂರನೇ ವ್ಯಕ್ತಿ ಮಧ್ಯಸ್ಥಿಕೆ ವಹಿಸುವುದಿದ್ದರೆ ನಮ್ಮದೇನೂ ಅಭ್ಯಂತರ ಇಲ್ಲ. ಆದರೆ ಭಾರತವು ದ್ವಿಪಕ್ಷೀಯ ಮಾತುಕತೆಗೆ ಮಾತ್ರ ಪಟ್ಟು ಹಿಡಿಯುತ್ತಿದೆ” ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಇಶಾಕ್ ದಾರ್ ಹೇಳಿದ್ದಾರೆ.