ನವದೆಹಲಿ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು ದೊರೆಯುತ್ತಾ? ಎನ್ನುವ ಪ್ರಶ್ನೆಗೆ ಇನ್ನೂ ಹತ್ತು ದಿನಗಳ ಬಳಿಕ ಉತ್ತರ ದೊರೆಯಲಿದೆ.
ಕಳೆದ ಡಿಸೆಂಬರ್ 13ರಂದು ಕರ್ನಾಟಕ ಹೈಕೋರ್ಟ್ ಕೊಲೆ ಪ್ರಕರಣದ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತ್ತು. ಆರೋಪಿಗಳಾದ ನಟ ದರ್ಶನ್, ಪವಿತ್ರಗೌಡ, ಲಕ್ಷ್ಮಣ, ನಾಗರಾಜು ಮತ್ತು ಅನುಕುಮಾರ್ ಸೇರಿದಂತೆ 7 ಪ್ರಮುಖ ಆರೋಪಿಗಳಿಗೆ ಜಾಮೀನು ಮಂಜೂರಾಗಿತ್ತು.
ರಾಜ್ಯ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶವನ್ನು ಪ್ರಶ್ನಿಸಿ ಬೆಂಗಳೂರು ನಗರ ಪೊಲೀಸರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ಸುಪ್ರೀಂ ಕೋರ್ಟ್ ಸುದೀರ್ಘ ವಾದ-ವಿವಾದ ಪರಿಶೀಲಿಸಿ ತೀರ್ಪು ಕಾಯ್ದಿರಿಸಿದೆ.
ನ್ಯಾಯಮೂರ್ತಿ ಪಾರ್ದಿವಾಲಾ, ನ್ಯಾಯಮೂರ್ತಿ ಮಹದೇವನ್ ಅವರ ದ್ವಿ-ಸದಸ್ಯ ಪೀಠ ಅರ್ಜಿಯ ವಿಚಾರಣೆ ನಡೆಸಿದ್ದು, ಕರ್ನಾಟಕ ಹೈಕೋರ್ಟ್ ರೀತಿ ತರಾತುರಿಯಲ್ಲಿ ಆದೇಶ ನೀಡಲಾಗುವುದಿಲ್ಲ ಎಂದು ಹೇಳಿದೆ.
ಇಂದು ಪ್ರಾಸಿಕ್ಯೂಷನ್ ಮತ್ತು ಆರೋಪಿಗಳ ಪರ ವಕೀಲರ ವಾದವನ್ನು ಸುಮಾರು ಒಂದು ಗಂಟೆಗಳ ಕಾಲ ಸುಪ್ರೀಂ ಕೋರ್ಟ್ ಆಲಿಸಿದ್ದು, ಸದ್ಯ ವಾದ-ಪ್ರತಿವಾದ ಮುಕ್ತಾಯಗೊಂಡಿದೆ. ಆದರೆ ಒಂದು ವಾರದಲ್ಲಿ 3 ಪುಟಗಳ ಲಿಖಿತ ವಾದಾಂಶ ಸಲ್ಲಿಸಲು ಸೂಚನೆ ನೀಡಿದೆ. ಆ ಬಳಿಕ ಆದೇಶ ಪ್ರಕಟಿಸಲಾಗುವುದು ಎಂದು ತಿಳಿಸಿದೆ.
ದರ್ಶನ್ ಹಾಗೂ ಪವಿತ್ರಾ ಗೌಡ ನಡುವಿನ ಸಂಬಂಧ ಏನು? ಕೊಲೆಗೆ ಕಾರಣವೇನು? ಮುಂತಾದ ವಿಚಾರಗಳ ಬಗ್ಗೆ ನ್ಯಾಯಾಲಯ ಪ್ರಶ್ನೆ ಮಾಡಿತ್ತು. ಎರಡೂ ಕಡೆಯ ವಕೀಲರು ಪ್ರಬಲವಾಗಿ ವಾದ ಮಂಡನೆ ಮಾಡಿದ್ದು, ವಾದವನ್ನು ಆಲಿಸಿದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದೆ. ಸುಮಾರು 10 ದಿನಗಳ ಬಳಿಕ ಕೋರ್ಟ್ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.
ಹಿರಿಯ ವಕೀಲ ಸಿದ್ಧಾರ್ಥ್ ದವೆ ನಟ ದರ್ಶನ್ ಪರ ವಾದ ಮಂಡಿಸಿದ್ದು, ಸಿದ್ಧಾರ್ಥ ಲೂಥ್ರಾ ಸರ್ಕಾರಿ ವಕೀಲರಾಗಿ ಪ್ರಬಲ ವಾದ ಮಂಡಿಸಿದರು.
ಪ್ರಕರಣದ ಹಿನ್ನೆಲೆ: ನಟಿ ಪವಿತ್ರಾ ಗೌಡ ಅವರಿಗೆ ಚಿತ್ರದುರ್ಗದ ರೇಣುಕಾಸ್ವಾಮಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದ ಎಂಬ ಆರೋಪದ ಮೇಲೆ ರೇಣುಕಾಸ್ವಾಮಿಯನ್ನು ಅಪಹರಿಸಿ ಬೆಂಗಳೂರಿನ ಶೆಡ್‌ನಲ್ಲಿ ಮೂರು ದಿನಗಳ ಕಾಲ ಬಂಧಿಸಿ, ಚಿತ್ರಹಿಂಸೆ ನೀಡಲಾಗಿತ್ತು. ಆ ನಂತರ ರೇಣುಕಾಸ್ವಾಮಿ ಶವವನ್ನು ಶೆಡ್‌ನಿಂದ ಹೊರತಂದು ಚರಂಡಿಗೆ ಎಸೆದಿದ್ದಾರೆ ಎಂದು ನಟ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ 17 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಬಳಿಕ ಹೈಕೋರ್ಟ್ ಪ್ರಕರಣ ವಿಚಾರಣೆಯನ್ನು ನಡೆಸಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತ್ತು. ಆದರೆ ಈ ಜಾಮೀನು ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ರಾಜ್ಯ ಸರ್ಕಾರದ ಮನವಿಯ ಮೇರೆಗೆ ಸುಪ್ರೀಂ ಕೋರ್ಟ್ ಜನವರಿ 24ರಂದು ನಟಿ ಪವಿತ್ರಾ ಗೌಡ ಹಾಗೂ ಪ್ರಕರಣದ ಇತರ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿತ್ತು.