ಚಿತ್ರ: ಕೋಣ
ನಿರ್ದೇಶನ: ಹರಿಕೃಷ
ನಿರ್ಮಾಣ: ತನಿಷಾ ಕುಪ್ಪಂಡ
ತಾರಾಗಣ: ಕೋಮಲ್, ತನಿಷಾ ಕುಪ್ಪಂಡ, ರಿತ್ವಿ, ರಘು ರಾಮನಕೊಪ್ಪ, ಜಗ್ಗಪ್ಪ ಹಾಗೂ ಸುಶ್ಮಿತಾ ಇತರರು.
ರೇಟಿಂಗ್ಸ್: 3
ಕೆಲವೊಂದು ಆಚರಣೆಗಳು, ಧಾರ್ಮಿಕ ಪದ್ಧತಿಗಳು ಹಾಗೂ ಮೂಢನಂಬಿಕೆಗಳು ಯಾರೇನೇ ಹೇಳಿದರೂ ಅದನ್ನು ಬದಲಾಯಿಸುವುದು ಕೊಂಚ ಕಷ್ಟ. ವಾಮಮಾರ್ಗದಲ್ಲಾದರೂ ಸರಿಯೇ ಅದನ್ನು ಪಾಲಿಸುವುದು ಆಯಾ ವರ್ಗದ ನಂಬಿಕೆ ಮತ್ತು ಅವರ ತಲೆಮಾರುಗಳು ಅದನ್ನು ಪಾಲಿಸಿಕೊಂಡು ಬಂದಿರುವುದನ್ನು ಈಗಿನ ಜನಾಂಗವೂ ಅದಕ್ಕೆ ಕಟಿಬದ್ಧವಾಗಿದೆ.
ಕೆಲವೊಂದು ಊರಿನಲ್ಲಿ ಈಗಲೂ ಪ್ರಾಣಿವಧೆ ನಿಂತಿಲ್ಲ. ಹೀಗೆ ಆದರೆ ನಿಲ್ಲುವ ಮುನ್ಸೂಚನೆಯೂ ಇದ್ದಂತಿಲ್ಲ ಎಂಬುದನ್ನು ಸೂಚ್ಯವಾಗಿ ಹೇಳುತ್ತಾ ಮನರಂಜನೆ ಹಾಗೂ ಸಂದೇಶದ ಮೂಲಕ ‘ಕೋಣ’ ದರ್ಶನ ಮಾಡಿಸುತ್ತಾರೆ ನಿರ್ದೇಶಕ ಹರಿಕೃಷ್ಣ. ಇಲ್ಲಿ ಕಡಿಯುವುದು ತಪ್ಪು-ಒಪ್ಪು ಎಂಬ ವಾದ ನಡೆಯುತ್ತದೆ. ಅದನ್ನು ತಡೆಯುವ ಪ್ರಯತ್ನವೂ ನಿತ್ಯ ನಿರಂತರ… ಆದರೆ ಇಲ್ಲಿ ತಡೆದವರಿಗೆ ಆದ ಲಾಭವೇನು..? ಕಡಿದವರಿಗೆ ಆದ ಶಿಕ್ಷೆಯೇನು ಎಂಬುದಕ್ಕೆ ‘ಕೋಣ’ವನ್ನು ಒಮ್ಮೆ ಕಣ್ತುಂಬಿಕೊಳ್ಳಬೇಕು.
ಕೋಮಲ್ ಸಿನಿಮಾ ಎಂದಮೇಲೆ ಅಲ್ಲಿ ನಗು ಕಟ್ಟಿಟ್ಟಬುತ್ತಿ. ಇದರ ಜತೆ ‘ಸರ್ಪೈಸ್ ಪ್ಯಾಕೇಜ್’ ಎಂಬಂತೆ ಕೋಮಲ್ ಇಲ್ಲಿ ನಗಿಸುವುದರ ಜತೆಗೆ ಕೆಲವೊಮ್ಮೆ ಭಾವುಕತೆಯಲ್ಲಿ ತೇಲಿಸುತ್ತಾರೆ. ಆಗಾಗ ‘ಭಯಂಕರ’ವಾಗಿ ದಿಗಿಲು ಹುಟ್ಟಿಸುತ್ತಾರೆ. ಕಥೆಗೆ ಪೂರಕವಾಗಿ ಅವರ ವೇಷ-ಭೂಷಣವಿದೆ. ಭಾಷೆಯೂ ಎಂದಿನಂತೆ ಅಚ್ಚುಕಟ್ಟು ಮತ್ತು ಸೊಗಸು. ಅವರ ನಟನೆ ಒಂಥರಾ ಊಟ ಕೇಳಿದವರಿಗೆ ಊಟ… ಬಾಡುಟ ಕೇಳಿದವರಿಗೆ ಬಾಡುಟ..!
ಈವರೆಗಿನ ತನಿಷಾ ಬೇರೆ… ಈಗಿನ ತನಿಷಾ ಬೇರೆ ಎಂಬಂತೆ ತನ್ಮಯಳಾಗಿಯೇ ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ ತನಿಷಾ ಕುಪ್ಪಂಡ.
ಮೌನದಲ್ಲೇ ಎಲ್ಲವನ್ನೂ ದಾಟಿಸಿರುವುದು ಅವರ ಪ್ರತಿಭೆಗೆ ಹಿಡಿದ ಕನ್ನಡಿ.
ಇನ್ನು ಚಿತ್ರದಲ್ಲಿ ಸಾಕಷ್ಟು ಕಲಾವಿದರ ದಂಡೇ ಇದೆ. ರಿತ್ವಿ, ರಘು ರಾಮನಕೊಪ್ಪ, ಜಗ್ಗಪ್ಪ ಹಾಗೂ ಸುಶ್ಮಿತಾ ಸೇರಿದಂತೆ ಹಲವಾರು ಕಲಾವಿದರು ಆಯಾ ಪಾತ್ರಕ್ಕೆ ನ್ಯಾಯ ಸಲ್ಲಿಸುವ ಕೆಲಸ ಮಾಡಿದ್ದಾರೆ. ಕೆಲವೊಂದು ಸಣ್ಣ-ಪುಟ್ಟ ದೋಷಗಳನ್ನು ಪಕ್ಕಕ್ಕಿಟ್ಟು ‘ಕೋಣ’ವನ್ನು ಕಣ್ತುಂಬಿಕೊಂಡರೆ ಕೊಟ್ಟ ಕಾಸಿಗೆ ಮೋಸವಿಲ್ಲ..!