Home ನಮ್ಮ ಜಿಲ್ಲೆ ರಾಹುಲ್ ಗಾಂಧಿ ಭರವಸೆ ಕೊಟ್ಟಿದ್ದ ಬಳ್ಳಾರಿ ‘ಜೀನ್ಸ್ ಪಾರ್ಕ್’ ಕೆಲಸ ಶುರು, ವಿಶೇಷತೆಗಳು?

ರಾಹುಲ್ ಗಾಂಧಿ ಭರವಸೆ ಕೊಟ್ಟಿದ್ದ ಬಳ್ಳಾರಿ ‘ಜೀನ್ಸ್ ಪಾರ್ಕ್’ ಕೆಲಸ ಶುರು, ವಿಶೇಷತೆಗಳು?

0

ಬಳ್ಳಾರಿ: ‌ಬಳ್ಳಾರಿಯ ʻಜೀನ್ಸ್ ಪಾರ್ಕ್’ ಸ್ಥಾಪಿಸುವ ಕಾರ್ಯ ವೇಗ ಪಡೆದುಕೊಂಡಿದೆ. ಈಗಾಗಲೇ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮೂಲಕ ರೈತರ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಭೂಮಿ ನೀಡಿದ ರೈತರಿಗೂ ಪರಿಹಾರ ಹಣ ಪಾವತಿಸಲಾಗಿದೆ.

ಜೀನ್ಸ್‌ ಪಾರ್ಕ್‌ನಲ್ಲಿ 500ಕ್ಕೂ ಅಧಿಕ ಜೀನ್ಸ್‌ ಉದ್ದಿಮೆದಾರರಿಗೆ ನೆಲೆ ಒದಗಿಸಲು ಯೋಜನೆ ರೂಪಿಸಲಾಗಿದ್ದು, ಇದಕ್ಕಾಗಿ ರೈತರಿಂದ 154 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಪ್ರತಿ ಎಕರೆಗೆ 40 ಲಕ್ಷ ರೂ. ಪರಿಹಾರವಾಗಿ ರೈತರಿಗೆ ನೀಡಲಾಗಿದೆ.

154 ಎಕರೆ ವಿಶಾಲವಾದ ಪ್ರದೇಶದಲ್ಲಿ ನಿರ್ಮಾಣವಾಗುವ ಜೀನ್ಸ್‌ ಪಾರ್ಕ್‌ನಲ್ಲಿ ಎಲ್ಲ ಮೂಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಅಲ್ಲದೇ ಉದ್ದಮ ಆರಂಭಿಸಿದ ಉದ್ಯಮಿಗಳಿಗೆ ಅಲ್ಲಿಯೇ ಕಡಿಮೆ ದರದಲ್ಲಿ ನಿವೇಶನವನ್ನು ಒದಗಿಸಲಾಗುತ್ತದೆ.

ಒಂದೇ ಸೂರಿನಡಿ ಯೋಜನೆ: ಜೀನ್ಸ್‌ ಉದ್ಯಮದಲ್ಲಿ ಸ್ಟಿಚಿಂಗ್‌, ವಾಷಿಂಗ್‌ ಮತ್ತು ಮಾರಾಟ ಸೇರಿದಂತೆ ಹಲವು ಹಂತಗಳನ್ನು ಒಂದೇ ಸೂರಿನಡಿ ತರಲು ಯೋಜನೆಯನ್ನು ಮಾಡಲಾಗಿದೆ. ಜತೆಗೆ ಮಾರಾಟಕ್ಕೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಾರುಕಟ್ಟೆಯ ಸವಲತ್ತು ದೊರೆಯುವಂತೆ ಮಾಡಲಾಗುತ್ತಿದೆ. ಮಾರುಕಟ್ಟೆಯ ದರದಲ್ಲಿ ಉದ್ಯಮಿಗಳಿಗೆ ಯಾವುದೇ ಅನಾರೋಗ್ಯಕರ ಪೈಪೋಟಿ ನಡೆಯದಂತೆ ಪ್ರಸ್ತಾವಗಳು ಯೋಜನೆಯಲ್ಲಿವೆ.

ನೀರು ಸಂಸ್ಕರಣಾ ಘಟಕ: ನೂತನವಾಗಿ ನಿರ್ಮಾಣವಾಗುತ್ತಿರುವ ಜೀನ್ಸ್‌ ಪಾರ್ಕ್‌ನಲ್ಲಿ ಕೆಐಎಡಿಬಿಯಿಂದ ಸಂಸ್ಕರಣಾ ಘಟಕ ನಿರ್ಮಿಸಲಾಗುತ್ತಿದೆ. ಹೀಗಾಗಿ ಪ್ರತ್ಯೇಕ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿಕೊಳ್ಳುವ ಅಗತ್ಯ ಇರುವುದಿಲ್ಲ. ಸದ್ಯ ಬಳ್ಳಾರಿ ಜಿಲ್ಲೆಯಲ್ಲಿರುವ ಜೀನ್ಸ್ ಡೈಯಿಂಗ್ ಘಟಕಗಳು ಪ್ರತ್ಯೇಕ ಕಲುಷಿತ ನೀರು ಸಂಸ್ಕರಣ ಘಟಕಗಳನ್ನು (ಇಟಿಪಿ) ಮತ್ತು ಸಾಮಾನ್ಯ ಸಂಸ್ಕರಣಾ ಘಟಕಗಳನ್ನು (ಸಿಇಟಿಪಿ) ಮಾಡಿಕೊಳ್ಳದೇ ಇರುವುದರಿಂದಾಗಿ ಕಲುಷಿತ ನೀರನ್ನು ಪರಿಸರಕ್ಕೆ ಬಿಡಲಾಗುತ್ತಿದೆ. ಇದರ ಪರಿಣಾಮವಾಗಿ ಜಿಲ್ಲೆಯಲ್ಲಿ ಮಾಲಿನ್ಯ ಹೆಚ್ಚಿದೆ. ಪರಿಸರ ಮಾಲಿನ್ಯ ತಪ್ಪಿಸಲೆಂದು ಕೆಐಎಡಿಬಿಯಿಂದ ಸಂಸ್ಕರಣಾ ಘಟಕ ನಿರ್ಮಿಸಲಾಗುತ್ತಿದೆ.

ರಾಹಲ್‌ ಗಾಂಧಿ ಭರವಸೆ: ‘ಭಾರತ್ ಜೋಡೋ’ ಯಾತ್ರೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ಸ್ಥಾಪಿಸುವ ಭರವಸೆ ನೀಡಿದ್ದರು. ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ 2024-25ರ ಬಜೆಟ್‌ನಲ್ಲಿ ಇದನ್ನು ಘೋಷಿಸಿದ್ದರು.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಮತ್ತೊಮ್ಮೆ ಜೀನ್ಸ್‌ ಪಾರ್ಕ್‌ ನಿರ್ಮಾಣದ ಭರವಸೆ ನೀಡಿದ್ದರು. ಹೀಗಾಗಿ ರಾಹುಲ್ ಗಾಂಧಿ ಅವರಿಂದ ಅಡಿಗಲ್ಲು ಕಾರ್ಯಕ್ರಮ ನೆರವೇರಿಸಲು ಸರ್ಕಾರ ಪ್ರಯತ್ನ ನಡೆಸಿದೆ. ಕಾಮಗಾರಿ ಒಂದರಿಂದ ಒಂದೂವರೆ ವರ್ಷದಲ್ಲಿ ಪೂರ್ಣವಾಗಬಹುದು ಎಂದು ಅಂದಾಜಿಸಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version