Home ತಾಜಾ ಸುದ್ದಿ ೨.೫೦ ಲಕ್ಷಕ್ಕೆ ಬೀಜದ ಹೋರಿ ಮಾರಾಟ!

೨.೫೦ ಲಕ್ಷಕ್ಕೆ ಬೀಜದ ಹೋರಿ ಮಾರಾಟ!

0

ವಿಜಯಪುರ: ಐತಿಹಾಸಿಕ ವಿಜಯಪುರದ ಶ್ರೀ ಸಿದ್ದೇಶ್ವರ ಸಂಕ್ರಮಣ ಜಾತ್ರಾ ಮಹೋತ್ಸವ ಅತ್ಯಂತ ಸಡಗರ ಸಂಭ್ರಮದಿಂದ ನಡೆಯುತ್ತಿದ್ದು, ಈ ಬಾರಿ ಸಹಸ್ರಾರು ದನಗಳು ಸೇರಿದ್ದು, ಭರ್ಜರಿ ವಹಿವಾಟು ನಡೆದಿದೆ.
ತೋರವಿ ಗ್ರಾಮದ ಅಕ್ಕ ಮಹಾದೇವಿ ಮಹಿಳಾ ವಿವಿ ಪಕ್ಕದ ಆವರಣದಲ್ಲಿ ನೆರೆದಿದ್ದ ದನಗಳ ಸಂತೆಯಲ್ಲಿ ಈ ವರ್ಷ ಖಿಲಾರಿ ಹೋರಿ, ಮೌಳಿ, ಜಾತವಾನ್ ಎತ್ತುಗಳು, ಜರ್ಸಿ ಆಕಳುಗಳು, ಸೇರಿದಂತೆ ಲಕ್ಷಕ್ಕೂ ಹೆಚ್ಚು ದನಗಳನ್ನು ರೈತರು ಜಾತ್ರೆಗೆ ತಂದಿದ್ದರು.
ಪಕ್ಕದ ಮಹಾರಾಷ್ಟ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯದಿಂದಲೂ ಸಾವಿರಾರು ದನಗಳು ಸೇರಿದ್ದವು. ಅಲ್ಲದೆ ಬಾಗಲಕೋಟೆ, ಗದಗ, ರಾಯಚೂರು, ಕಲಬುರಗಿ, ಬೆಳಗಾವಿ, ವಿಜಯಪುರ, ಅಕ್ಕಲಕೋಟ, ಜತ್ತ, ಸಂಗೋಲ, ಅಥಣಿ, ಜಮಖಂಡಿ, ಬಸವನ ಬಾಗೇವಾಡಿ, ಇಂಡಿ ಸಿಂದಗಿ ಸೋಲಾಪುರ ನೂರಾರು ಶಹರ ಪಟ್ಟಣದ ದನಕರುಗಳು ಜಾತ್ರೆಯಲ್ಲಿ ಭರ್ಜರಿ ಮಾರಾಟವಾಗಿವೆ.
ರಾಜ್ಯದ ೧೦ ಕ್ಕೂ ಹೆಚ್ಚು ಜಿಲ್ಲೆಯ ರೈತರು ತಮ್ಮ ದನಗಳನ್ನು ಮಾರಾಟ ಮಾಡಿದ್ದು, ಅಲ್ಲದೆ ಹೊಸ ಎತ್ತು, ಹೋರಿ ಆಕಳುಗಳನ್ನು ಕೊಂಡುಕೊಂಡಿದ್ದಾರೆ. ಅದರಲ್ಲೂ ಬೀಜದ ಹೋರಿ ಒಂದಕ್ಕೆ ೨.೫೦ ಲಕ್ಷ ರೂಪಾಯಿಗೆ ಮಾರಾಟವಾಗಿದ್ದು ಹೊಸ ದಾಖಲೆ ನಿರ್ಮಿಸಿದಂತಾಗಿದೆ. ಈ ವರ್ಷದ ಸಂಕ್ರಮಣ ರೈತರಿಗೂ ಸಾಕಷ್ಟು ಆದಾಯ ದೊರೆಕಿಸಿಕೊಟ್ಟಿರುವುದಂತು ಸುಳ್ಳಲ್ಲ.
ಹೈನುಗಾರಿಕೆ ಮಾಡುವ ಸಲುವಾಗಿ ಅನೇಕ ರೈತರು ಜರ್ಸಿ ಹಾಗೂ ಜವಾರಿ ಆಕಳುಗಳನ್ನು ಖರೀದಿ ಮಾಡುತ್ತಿರುವುದು ಕಂಡು ಬಂದಿದೆ. ಈ ವರ್ಷ ದನಗಳ ಬೇಡಿಕೆಯು ಹೆಚ್ಚಾಗಿದೆ. ಆಕಳುಗಳು ೪೦ ಸಾವಿರದಿಂದ ೬೦ ಸಾವಿರ ರೂಪಾಯಿವರೆಗೂ ಮಾರಾಟವಾಗಿದ್ದು ರೈತರಲ್ಲಿ ಸಂತಸ ಮೂಡಿದೆ.
ಸಣ್ಣ ಸಣ್ಣ ಹೋರಿ ಕರುಗಳು ಸಹಿತ ೪೦ ರಿಂದ ೫೦ ಸಾವಿರಕ್ಕೆ ಒಂದರಂತೆ ಮಾರಾಟವಾಗಿವೆ. ಅದರಲ್ಲೂ ದೇಸಿ ತಳಿ ಗೀರ್ ಆಕಳು ಹೆಚ್ಚು ಮಾರಾಟವಾಗಿವೆ.
ರಸೀದಿ ಪ್ರಕಾರ ೧೦೦೦ ಕ್ಕೂ ಅಧಿಕ ದನಕರುಗಳು ಮಾರಾಟವಾಗಿವೆ. ಆದರೆ ವಾಸ್ತವದಲ್ಲಿ ೭೦ ಸಾವಿರಕ್ಕೂ ಅಧಿಕ ಮೌಲ್ಯಕ್ಕೆ ದನಕರುಗಳು ಮಾರಾಟವಾಗಿವೆ. ಇಂಡಿ ತಾಲೂಕಿನ ತಂಬಾ ಗ್ರಾಮದ ಸಿದ್ದಪ್ಪ ಹಿರೇಕುರುಬರ ಅವರು ಎರಡು ಬಾಯಿಗೂಡಿದ್ದ ಎತ್ತುಗಳನ್ನು ಬೆಳಗಾವಿಯ ರೈತರೊಬ್ಬರು ೨.೫೦ ಲಕ್ಷ ರೂಪಾಯಿಗೆ ಖರೀದಿ ಮಾಡಿದ್ದಾರೆ.

Exit mobile version