ಶಿವಮೊಗ್ಗ: ಕರ್ನಾಟಕದಲ್ಲಿ ಕೂಲಿಗಾಗಿ ವಲಸೆ ಬರುವ ಹೊರ ರಾಜ್ಯದ ಕೂಲಿಕಾರ್ಮಿಕರ ಬಗ್ಗೆ ದತ್ತಾಂಶ ಕ್ರೋಢೀಕರಿಸುವುದು ಸರ್ಕಾರದ ಹೊಣೆಗಾರಿಕೆ ಆಗಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊರ ರಾಜ್ಯದ ಕೂಲಿ ಕಾರ್ಮಿಕರ ಬಗ್ಗೆ ಸರ್ಕಾರದ ಹೊಣೆಗಾರಿಕೆ ಕುರಿತು ಬರುವ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸುವುದಾಗಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ಪೊಲೀಸ್ ಎನ್‌ಕೌಂಟರ್‌ಗೆ ಪ್ರತಿಕ್ರಿಯಿಸಿದ ಸಚಿವರು, ಈ ಘಟನೆ ನಡೆಯಬಾರದಾಗಿತ್ತು. ಇದು ಅತ್ಯಂತ ದುರದೃಷ್ಟಕರ ಸಂಗತಿ. ಆ ಘಟನೆಯನ್ನು ಖಂಡಿಸುತ್ತೇನೆ. ತಪ್ಪಿತಸ್ಥರು ಯಾರೇ ಇದ್ದರೂ ಕಾನೂನು ರೀತ್ಯ ಅವರಿಗೆ ಕಠಿಣ ಶಿಕ್ಷೆ ಆಗಲೇಬೇಕು ಎಂದ ಅವರು, ಪಾಲಕರು, ಪೋಷಕರು, ಶಿಕ್ಷಕರು ಜಾಗೃತರಾಗಿರಬೇಕು ಎಂದರು.
ಅನುತ್ತೀರ್ಣಗೊಂಡ ಪಿಯುಸಿ ವಿದ್ಯಾರ್ಥಿಗಳಿಗೆ ಇನ್ನೂ ಎರಡು ಬಾರಿ ಉಚಿತವಾಗಿ ಪರೀಕ್ಷೆ ಬರೆಯಲು ಅವಕಾಶ ಕೊಡಲಾಗುವುದು. ಅನೇಕ ವಿದ್ಯಾರ್ಥಿಗಳು ತಮಗೆ ಉಚಿತ ಅವಕಾಶ ಕೊಡಬೇಕೆಂದು ವಾಟ್ಸಾಪ್ ಮಾಡಿದ್ದಾರೆ. ಮರು ಪರೀಕ್ಷೆಗೆ ಇದು ಕೊನೆಯ ಅವಕಾಶ. ಏ. 24 ಮತ್ತು ಮೇ 9ರಂದು ಮರು ಪರೀಕ್ಷೆ ನಡೆಸಲಾಗುವುದು. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.