ಇಂದು ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ
ಪುಟ್ಟ ಹೆಣ್ಣು ಮಗುವು ದಟ್ಟೆಗಾಲಿಟ್ಟು ನಡೆದಾಗ ಮನೆಯ ಮಂದಿಗೆ ಸಂಭ್ರಮವೋ ಸಂಭ್ರಮ! ತೊದಲು ನುಡಿ ನುಡಿದರೆ ಎಲ್ಲರಿಗೆ ಖುಷಿಯೋ ಖುಷಿ!! ವಸಂತ ಕಾಲದಲ್ಲಿ ಗಿಡಮರಗಳಲ್ಲಿ ಹೊಸ ಚಿಗುರು ಮೂಡುವಂತೆ ಮನೆಯಲ್ಲಿ ಹೊಸ ಉತ್ಸಾಹವು ತುಂಬುವುದು. ಮಗುವಿನಲ್ಲಿಯ ಮುಗ್ಧತೆ ಎಲ್ಲರನ್ನು ಆಕರ್ಷಿಸಿ ಎತ್ತಿ ಮುದ್ದಾಡುವಂತೆ ಮಾಡುತ್ತದೆ!
ಚಿಕ್ಕವಳಾಗಿದ್ದಾಗಷ್ಟೆ ಅಲ್ಲ, ಬೆಳೆದಂತೆ ವಯೋಮಾನಕ್ಕೆ ತಕ್ಕಂತೆ ಮಗುವು ಹೊಸ ಆಕರ್ಷಣೆಯನ್ನುಂಟು ಮಾಡುತ್ತದೆ. ಒಂದರಿಂದ ನಾಲ್ಕು ವಯಸ್ಸಿನ ಮಗುವನ್ನು ಹಸುಳೆ' ಎಂದು ಕರೆಯುತ್ತಾರೆ. ಐದರಿಂದ ಹತ್ತು ವಯದ ಮಗುವಿಗೆ
ಕಿಶೋರಿ’ ಎನ್ನುತ್ತೇವೆ. ಹನ್ನೊಂದರಿಂದ ಹದಿನಾರರ ವಯಸ್ಸಿನವಳಿಗೆ ಬಾಲೆ' ಎನ್ನುತ್ತೇವೆ. ಹದಿನಾರರ ನಂತರ ದೇಹದಲ್ಲಿ ಪಕ್ವತೆ, ಮನಸ್ಸಿನಲ್ಲಿ ಪ್ರಬುದ್ಧತೆ ಮೂಡಿ ಆಕೆ ಗೌರವದ
ಮಹಿಳೆ’ಯಾಗುತ್ತಾಳೆ. ಅವಳ ನಡೆ-ನುಡಿಯಲ್ಲಿ ಹೊಸ ಆಕರ್ಷಣೆಯನ್ನು ಪಡೆಯುತ್ತಾಳೆ. ಒಟ್ಟಾರೆ ಎಲ್ಲ ಹಂತದಗಳಲ್ಲೂ ಬೆಳೆಯುವ ಆಕೆಯು ಸೌಂದರ್ಯದ ಖಣಿಯಾಗುತ್ತಾಳೆ ಮತ್ತು ಮುದ್ದು ಮಾತಿನ ಗಿಣಿಯಾಗುತ್ತಾಳೆ!

ಶತಮಾನಗಳು ಕಳೆದಿವೆ, ನಮ್ಮ ಸಾಮಾಜಿಕ ಪರಿಸರದಲ್ಲಿ ಹೊಸ ರೂಪಾಂತರಗಳಾಗಿವೆ. ಸುಮಾರು ಐದಾರುನೂರು ವರ್ಷಗಳ ಹಿಂದೆ ಹಳೆಯ ಸಂಪ್ರದಾಯಗಳು ಚಾಲತಿಯಲ್ಲಿದ್ದವು. ಹೆಣ್ಣು ಹುಟ್ಟಿದರೆ ಅನಿಷ್ಟ' ಹುಟ್ಟಿತೆಂದು ಹಡೆದ ತಾಯಿ ಸಹ ಕಡೆಗಾಣಿಸುತ್ತಿದ್ದಳು. ಹಿರಿಯರೂ ಮನೆಗೆ ಅನಿಷ್ಟ ಬಂದಿದೆ ಎಂದು ನಿಷ್ಕಾರಣವಾಗಿ ಮಗುವಿನ ಆಗಮನವನ್ನು ಅನಾದರದಿಂದ ಕಾಣುತ್ತಿದ್ದರು. ಹಿರಿಯರಿಗೆ ದೀಪ ಹಚ್ಚಿ ಮನೆತನ ಮುಂದುವರೆಸುವ ಗಂಡು ಮಗ ಬೇಕು ಎನ್ನುತ್ತಿದ್ದರು. ಜನನದಿಂದಲೇ ಹೆಣ್ಣು ಮಗುವನ್ನು ತಾರತಮ್ಯ ಭಾವದಿಂದ ನೋಡುತ್ತಿದ್ದರು. ಅವಳಿಗೆ ಬುದ್ಧಿ ಕಡಿಮೆ, ಆದ್ದರಿಂದ ಹಿರಿಯರು ಹೇಳಿದ್ದನ್ನು ಕೇಳಿಕೊಂಡು ಇದ್ದು ಮದುವೆ ಮಾಡಿಕೊಂಡು ತಮಗೆ ಸರಿ ಕಂಡ ಗಂಡನ್ನು ಜೀವನ ಸಂಗಾತಿ ಎಂದು ಆಕೆ ಒಪ್ಪಿಕೊಳ್ಳಬೇಕು. ತನ್ನ ವಿಚಾರಗಳನ್ನೇನಾದರೂ ಹೇಳಿದರೆ ಆಕೆಯನ್ನು
ಉದ್ಧಟ’ ಎಂದು ಬೈಯುತ್ತಿದ್ದರು. ಹೀಗೆ ಮಗಳ ಅಸ್ತಿತ್ವಕ್ಕೆ ಒಂದು ಕವಡಿ ಕಾಸಿನ ಬೆಲೆ ಇರಲಿಲ್ಲ. ಹೆಣ್ಣು ಮಗು ಒಂದು ವಸ್ತು' ಮಾತ್ರ. ಅವಳ ಸಂರಕ್ಷಣೆ ಭಾರ ಏಕೆ ಹೊರಬೇಕು ಎಂದು ಬೇಗನೆ ಏಳೆಂಟು ವರ್ಷದ ಕಿಶೋರಿಯನ್ನು ಯಾವುದೇ ವಯಸ್ಸಿನ ಗಂಡಿಗೆ ಮದುವೆ ಮಾಡಿ ಕೈ ತೊಳೆದುಕೊಳ್ಳುತ್ತಿದ್ದರು. ಹೀಗೆ ಬಾಲವಿವಾಹದ ಶಿಕ್ಷೆಯನ್ನು ಆ ಎಳೆ ಮಗುವಿಗೆ ನಿರ್ದಾಕ್ಷಿಣ್ಯದಿಂದ ಹೇರುತ್ತಿದ್ದರು. ಗಂಡ ತೀರಿಕೊಂಡರೆ ತೀರೇ ಹೋಯ್ತು. ಅವಳನ್ನು ವಿಧವೆಯನ್ನಾಗಿಸಿ ತಲೆ ಬೋಳಿಸಿ ಕನ್ಯತ್ವದ ಎಲ್ಲ ಗುರುತುಗಳನ್ನು ಕಳೆದು ಬ್ಲೌಜನ್ನು ತೊಡಿಸದೆ ಕೆಂಪು ಸೀರೆ ಉಡಿಸಿ ಒಂದೊಪ್ಪತ್ತು ಊಟ ಹಾಕಿ, ಆಕೆ ಯಾವ ಶುಭ ಕಾರ್ಯದಲ್ಲಿ ಮುಖ ತೋರಿಸಬಾರದು ಎಂದು ನಿಯಮವನ್ನಿಟ್ಟರು. ಅಡುಗೆಮನೆಯಲ್ಲಿ ಮಾತ್ರ ಮುಖ ತೋರಿಸಬೇಕು. ಆಳಿನಂತೆ ದುಡಿಯಬೇಕು. ಇಂಥ ಕ್ರೂರ ಅವೈಜ್ಞಾನಿಕ ಸಂಪ್ರದಾಯಗಳು ಇಂದು ಇಲ್ಲ. ಈ ಅವೈಜ್ಞಾನಿಕ ಸಂಪ್ರದಾಯಿಕ ನೀತಿಗಳನ್ನು ವಿರೋಧಿಸಿ ಬಂಡೆದ್ದವರು ಧೀಮಂತ ಹೆಣ್ಣುಮಕ್ಕಳಷ್ಟೇ ಅಲ್ಲ, ಪ್ರಜ್ಞಾವಂತ ಪುರುಷರೂ ಹೋರಾಡಿ ಹೆಣ್ಣು ಮಗುವಿಗೆ ಅವಳ ಎಲ್ಲ ಹಕ್ಕು ಕೊಡಿಸಿ ಎಲ್ಲ ಬಗೆಯ ಸ್ವಾತಂತ್ರ್ಯಗಳನ್ನು ನೀಡಿದರು. ಇಂದು ಹೆಣ್ಣು ಮಗುವಿಗೆ ಅವಳ ಮಾನಸಿಕ, ದೈಹಿಕ ಬೆಳವಣಿಗೆಗೆ ಬೇಕಾದ ಎಲ್ಲ ಹಕ್ಕುಗಳನ್ನು, ಸ್ವಾತಂತ್ರ್ಯಗಳನ್ನು ನಮ್ಮ ಸಂವಿಧಾನವು ನೀಡಿ ಉಪಕರಿಸಿದೆಯಾದ್ದರಿಂದ ಇಂದು ಹೆಣ್ಣು ಗಂಡು ಎಂಬ ತಾರತಮ್ಯ ಭಾವದಿಂದ ನೋಡುತ್ತಿಲ್ಲ. ಅವಳು ಬಯಸಿದ ಎಲ್ಲ ವಿದ್ಯೆ ಪಡೆದು ಪುರುಷರೊಂದಿಗೆ ಉಚ್ಚ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತ ಹೆಣ್ಣು ಜೀವಕ್ಕೆ ಇಂದು ಉನ್ನತ ಗೌರವವನ್ನು ತಂದಿದ್ದಾಳೆ.
ಬೆಳೆಯುವ ಸಿರಿಯನ್ನು ಮೊಳಕೆಯಲ್ಲಿ ನೋಡು’ ಎನ್ನುವಂತೆ ಹೆಣ್ಣು ಮಗು ಎಳೆತನದಲ್ಲಿಯೇ ತೋರಿದ ಒಲವನ್ನು ಗುರುತಿಸಿದ ಮಾತಾ-ಪಿತರು ಅವಳು ಬೇಕೆನ್ನುವ ವಿಷಯದಲ್ಲಿ ವಿದ್ಯೆ ನೀಡಿದ್ದರಿಂದ ಇಂದು ಎಲ್ಲ ಕ್ಷೇತ್ರಗಳಲ್ಲೂ ಉನ್ನತ ಅಧಿಕಾರಿಗಳಾಗಿದ್ದಾಳೆ. ನಮ್ಮ ಮೊದಲ ಪ್ರಧಾನಿ ಪಂಡಿತ ಜವಾಹರಲಾಲ ನೆಹರೂ ಅವರು ತಮ್ಮ ಮುದ್ದಿನ ಮಗಳು ಇಂದಿರೆಗೆ ಅವಳ ಒಲವಿನಂತೆ ವಿದ್ಯೆ ಕಲಿಸಿ ಪರಂಪರಾಗತವಾಗಿ ಬಂದ ರಾಜಕೀಯ ಜ್ಞಾನ ಕೊಟ್ಟಿದ್ದರಿಂದ ಇಂದಿರಾ ಗಾಂಧಿಯವರು ಒಬ್ಬ ಉತ್ತಮ ರಾಜಕಾರಣಿ ಎಂದು ಪ್ರಸಿದ್ಧರಾದರು. ಇಂಥ ಉದಾಹರಣೆಗಳು ಬೇಕಾದಷ್ಟು ಇವೆ.
ಇಪ್ಪತ್ತೊಂದನೆ ಶತಮಾನವು ಹೆಣ್ಣು ಮಗುವಿನ ಬೆಳವಣಿಗೆಗೆ ಪ್ರಶಸ್ತವಾಗಿದೆ. ಈಗ ಪ್ರೋತ್ಸಾಹದಾಯಿ ವಾತಾವರಣವಿದೆ. ದೇಶದ ಪ್ರಗತಿಗೆ, ಹೆಣ್ಣು ಮಕ್ಕಳು ಮೌಲಿಕವಾದ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ತಾವೂ ಉತ್ತಮವಾದ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಸಮಾಜದಲ್ಲಿ ಗೌರವದ ಮಹಿಳೆಯಾಗಿ ಬೆಳೆಯುತ್ತಿದ್ದಾರೆ. ಆದ್ದರಿಂದ ಎಲ್ಲ ಮಾತಾಪಿತರಿಗೆ ಒಂದು ಭಿನ್ನಹವಿದೆ. `ನಿಮ್ಮ ಮಕ್ಕಳಿಗೆ ಸುಂದರವಾದ ಬಾಲ್ಯ ಕೊಡಿರಿ. ಅವರ ಬೇಡಿಕೆಗಳನ್ನು ಪೂರೈಸುತ್ತ ಆಕೆಗೆ ಬೇಕಾದ ಶಿಕ್ಷಣವನ್ನು ಕೊಡುವ ಎಲ್ಲಾ ಪ್ರಯತ್ನಗಳನ್ನು ಮಾಡಿರಿ’ ಎಂದು.