Home ತಾಜಾ ಸುದ್ದಿ ಹುಬ್ಬಳ್ಳಿ-ಶಿರಡಿ ನಡುವೆ `ಪಲ್ಲಕ್ಕಿ’ ಸಂಚಾರ

ಹುಬ್ಬಳ್ಳಿ-ಶಿರಡಿ ನಡುವೆ `ಪಲ್ಲಕ್ಕಿ’ ಸಂಚಾರ

0

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಐಶಾರಾಮಿ ಪಲ್ಲಕ್ಕಿ ಬಸ್‌ಗಳ ಸೇವೆಯನ್ನು ವಿದ್ಯುಕ್ತವಾಗಿ ಆರಂಭಿಸಲಾಗಿದ್ದು, ಮೊದಲ ಎರಡು ಬಸ್‌ಗಳು ಹುಬ್ಬಳ್ಳಿ-ಶಿರಡಿ ನಡುವೆ ಸಂಚರಿಸುತ್ತವೆ ಎಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಸಾರಿಗೆ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಎಸಿ ಸ್ಲೀಪರ್ ಅಂಬಾರಿ ಉತ್ಸವ, ನಾನ್ ಎಸಿ ಸ್ಲೀಪರ್ ಹಾಗೂ ವೇಗದೂತ ಸಾರಿಗೆಗಳು ಸೇರಿದಂತೆ ಹೊಸ ಬಸ್ಸುಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ. ಮೊದಲ ಹಂತದಲ್ಲಿ ಸಂಸ್ಥೆಗೆ ಬಂದಿರುವ ನಾಲ್ಕು ಪಲ್ಲಕ್ಕಿ ಬಸ್ಸುಗಳಲ್ಲಿ ಎರಡು ಬಸ್ಸುಗಳನ್ನು ಹುಬ್ಬಳ್ಳಿ ಗ್ರಾಮಾಂತರ ವಿಭಾಗಕ್ಕೆ ನೀಡಲಾಗಿದೆ. ಪ್ರಯಾಣಿಕರ ಬೇಡಿಕೆ ಹೆಚ್ಚಾಗಿರುವ ಹುಬ್ಬಳ್ಳಿ-ಶಿರಡಿ ಮಾರ್ಗದಲ್ಲಿ ಈ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ಹುಬ್ಬಳ್ಳಿಯಿಂದ ಶಿರಡಿಗೆ ಹೋಗುವ ಬಸ್ಸು ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ರಾತ್ರಿ ೮-೦೦ ಗಂಟೆಗೆ ಹೊರಡುತ್ತದೆ. ಧಾರವಾಡ ಹೊಸ ಬಸ್ ನಿಲ್ದಾಣದಿಂದ ೯-೦೦ಕ್ಕೆ ಹಾಗೂ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ೧೦-೧೫ಕ್ಕೆ ಹೊರಡುತ್ತದೆ. ಪುಣೆ, ಅಹ್ಮದನಗರ ಮಾರ್ಗವಾಗಿ ಮರುದಿನ ಬೆಳಿಗ್ಗೆ ೮-೪೫ ಗಂಟೆಗೆ ಶಿರಡಿಗೆ ತಲುಪುತ್ತದೆ. ಇನ್ನೊಂದು ಬಸ್ಸು ಶಿರಡಿಯಿಂದ ರಾತ್ರಿ ೮ ಗಂಟೆಗೆ ಹೊರಟು ಬೆಳಗಾವಿಗೆ ಬೆಳಿಗ್ಗೆ ೫-೧೫ಕ್ಕೆ, ಧಾರವಾಡಕ್ಕೆ ೬-೧೫ಕ್ಕೆ ಹಾಗೂ ಹುಬ್ಬಳ್ಳಿಗೆ ೭-೧೫ಕ್ಕೆ ಆಗಮಿಸುತ್ತದೆ.

ಪ್ರಯಾಣ ದರ ಎಷ್ಟು?
ಮೂಲ ಪ್ರಯಾಣ ದರ, ಅಪಘಾತ ಪರಿಹಾರ ನಿಧಿ ಶುಲ್ಕ ಹಾಗೂ ಟೋಲ್ ಫೀ ಸೇರಿ ಒಟ್ಟು ಪ್ರಯಾಣ ದರ ಹುಬ್ಬಳ್ಳಿಯಿಂದ ಶಿರಡಿಗೆ ರೂ. ೧,೨೮೦ ಧಾರವಾಡದಿಂದ ಶಿರಡಿಗೆ ರೂ. ೧,೨೩೦ ಹಾಗೂ ಬೆಳಗಾವಿಯಿಂದ ಶಿರಡಿಗೆ ರೂ.೧,೦೮೦ ನಿಗದಿಪಡಿಸಲಾಗಿದೆ.

ಮುಂಗಡ ಬುಕ್ಕಿಂಗ್‌ಗೆ ರಿಯಾಯಿತಿ
www.ksrtc.in ಅಥವ KSRTC Mobile App ಪ್ರಮುಖ ಬಸ್ ನಿಲ್ದಾಣಗಲ್ಲಿರುವ ಬುಕ್ಕಿಂಗ್ ಕೌಂಟರ್ ಹಾಗೂ ಫ್ರಾಂಚೈಸಿ ಕೌಂಟರ್ ಗಳಲ್ಲಿ ಮುಂಗಡ ಬುಕ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. ಒಂದೇ ಟಿಕೆಟ್ ನಲ್ಲಿ ನಾಲ್ಕು ಅಥವ ಹೆಚ್ಚು ಸೀಟುಗಳನ್ನು ಕಾಯ್ದಿರಿಸಿದರೆ ಪ್ರಯಾಣ ದರದಲ್ಲಿ ಶೇಕಡ ೫ರಷ್ಟು ರಿಯಾಯಿತಿ ನೀಡಲಾಗುತ್ತದೆ. ಹೋಗುವ ಹಾಗೂ ಹಿಂದಿರುಗುವ ಪ್ರಯಾಣಕ್ಕೆ ಒಂದೇ ಟಿಕೆಟ್ ಪಡೆದರೆ ಹಿಂದಿರುಗುವ ಪ್ರಯಾಣದರದಲ್ಲಿ ಶೇಕಡ ೧೦ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Exit mobile version