Home ತಾಜಾ ಸುದ್ದಿ ಹಿಮಾಚಲ ಪ್ರದೇಶದಲ್ಲಿದ್ದ ಮಹಿಳೆ ಕರೆತರಲು ಅಧಿಕಾರಿಗಳ ತಂಡ

ಹಿಮಾಚಲ ಪ್ರದೇಶದಲ್ಲಿದ್ದ ಮಹಿಳೆ ಕರೆತರಲು ಅಧಿಕಾರಿಗಳ ತಂಡ

0

ಬಳ್ಳಾರಿ: ಹಲವು ವರ್ಷಗಳ ಹಿಂದೆ ದಾರಿ ತಪ್ಪಿ ಹಿಮಾಚಲ ಪ್ರದೇಶಕ್ಕೆ ತೆರಳಿದ್ದ ಹೊಸಪೇಟೆಯ ದನನಾಯಕನಹಳ್ಳಿ ಮೂಲದ ಸಾಕಮ್ಮ ಎನ್ನುವ ಮಹಿಳೆಯನ್ನು ಬಳ್ಳಾರಿಯ ಅಧಿಕಾರಿಗಳ ತಂಡ ಕರೆ ತರುತ್ತಿದೆ.
ಸಮಾಜ ಕಲ್ಯಾಣ ಇಲಾಖೆಯ ವಾರ್ಡ್‌ಗಳಾದ ಬಸವರಾಜ, ಮಣಿಕಂಠ ಮತ್ತು ಭಾರತಿ ಎನ್ನುವ ಮಹಿಳೆಯರು ಸಮಾಜ ಕಲ್ಯಾಣ ಇಲಾಖೆ ಆಯುಕ್ತರು, ಬಳ್ಳಾರಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಗೆ ತೆರಳಿ ಮಹಿಳೆಯನ್ನು ಕರೆ ತರುತ್ತಿದ್ದಾರೆ. ಸದ್ಯ ಮಂಡಿಯ ನಿರಾಶ್ರಿತ ಕೇಂದ್ರದಲ್ಲಿರುವ ಸಾಕಮ್ಮಳನ್ನು ಭೇಟಿ ಮಾಡಿರುವ ಅಧಿಕಾರಿಗಳ ತಂಡ ಅಲ್ಲಿನ ಸರಕಾರದ ಜತೆ ಮಾತುಕತೆ ನಡೆಸಿ ಎಲ್ಲ ಶಿಷ್ಟಾಚಾರಗಳನ್ನು ಪೂರೈಸಿಕೊಂಡಿದೆ. ಸೋಮವಾರ ರಾತ್ರಿ ಮಂಡಿಯಿಂದ ಹೊರಡಲಿದೆ. ಮಂಡಿಯಿಂದ ದೆಹಲಿ-ದೆಹಲಿಯಿಂದ ಬೆಂಗಳೂರು ಮೂಲಕ ಬಳ್ಳಾರಿಗೆ ಮಂಗಳವಾರ ಸಾಕಮ್ಮ ಸಹಿತ ಅಧಿಕಾರಿಗಳ ತಂಡ ಆಗಮಿಸಲಿದೆ.
ಏನಿದು ಸಾಕಮ್ಮ ಕಥೆ: ಹೊಸಪೇಟೆಯ ದನನಾಯಕನಹಳ್ಳಿ ನಿವಾಸಿ ಆಗಿರುವ ಸಾಕಮ್ಮ ಹಲವು ವರ್ಷಗಳ ಹಿಂದೆ ಸಂಬಂಧಿಗಳ ಜತೆಗೂಡಿ ಹೊಸಪೇಟೆ ರೈಲು ಸ್ಟೇಷನ್‌ನಿಂದ ಬೆಂಗಳೂರಿಗೆ ತೆರಳುವಾಗ ದಾರಿ ತಪ್ಪಿದ್ದಾಳೆ. ಸ್ಟೇಷನ್‌ವೊಂದರಲ್ಲಿ ಸಂಬಂಧಿಗಳು ಇರುವ ರೈಲು ಗಾಡಿ ಬಿಟ್ಟು ಗೊತ್ತಾಗದೇ ಅನ್ಯ ರೈಲು ಹಿಡಿದಿದ್ದಾಳೆ. ದೆಹಲಿಗೆ ತೆರಳಿದ ಸಾಕಮ್ಮ ಬಳಿಕ ಹಿಮಾಚಲ ಪ್ರದೇಶದ ಮಂಡಿಗೆ ಹೋಗಿದ್ದಳು. ದಾರಿ ತೋಚದೆ ಹಲವು ವರ್ಷಗಳಿಂದ ಅಲ್ಲಿನ ನಿರಾಶ್ರಿತ ಕೇಂದ್ರದಲ್ಲಿಯೇ ಇಷ್ಟು ವರ್ಷ ಕಾಲ ಕಳೆದಿದ್ದರು. ಆದರೆ ಮಂಡಿಯಲ್ಲಿ ಕೆಲಸ ಮಾಡುತ್ತಿರುವ ಹಾಸನ ಮೂಲದ ಐಎಎಸ್ ಅಧಿಕಾರಿ ರವಿನಂದನ್ ಇತ್ತೀಚೆಗೆ ಮಂಡಿಯ ನಿರಾಶ್ರಿತ ಕೇಂದ್ರದಲ್ಲಿ ಕನ್ನಡ ಮಾತನಾಡುತ್ತಿರುವ ಸಾಕಮ್ಮಳನ್ನು ಗಮನಿಸಿ ವಿಡಿಯೋ ಮಾಡಿ ಅವರ ಸ್ನೇಹಿತರ ಬಳಿ ಹಂಚಿಕೊಂಡಿದ್ದರು. ವಿಜಯ್‌ಕುಮಾರ್ ಎನ್ನುವ ಅವರ ಸ್ನೇಹಿತರೊಬ್ಬರ ಈ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದರು. ಇದನ್ನು ಗಮನಿಸಿದ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ.ಮಣಿವಣ್ಣನ್ ಸಾಕಮ್ಮಳನ್ನು ಕರೆತರಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸಂಬಂಧಿಗಳಲ್ಲಿ ಹರ್ಷ: ಹಿಮಾಚಲ ಪ್ರದೇಶದಲ್ಲಿರುವ ಸಾಕಮ್ಮ ಈಗ ಹಲವು ವರ್ಷಗಳ ಬಳಿಕ ತನ್ನೂರಿಗೆ ಆಗಮಿಸುತ್ತಿದ್ದಾಳೆ. ಈ ವಿಷಯ ತಿಳಿದು ಈಗ ಸಾಕಮ್ಮ ಕುಟುಂಬದವರು ಕೂಡ ಸಂತಸಗೊಂಡಿದ್ದಾರೆ. ಇಷ್ಟು ವರ್ಷ ಏನು ಆಗಿದ್ದಾಳೋ? ಎಂದುಕೊಂಡಿದ್ದ ಕುಟುಂಬದವರಿಗೆ ಸಾಕಮ್ಮ ಬರುತ್ತಿರುವ ಸುದ್ದಿ ಖುಷಿ ನೀಡಿದೆ. ಬಳ್ಳಾರಿ ಜಿಲ್ಲಾಡಳಿತ ಕೂಡ ಈ ಬಗ್ಗೆ ಹರ್ಷ ವ್ಯಕ್ತಪಡಿಸಿದೆ.

Exit mobile version