ದಾವಣಗೆರೆ: ಹಿಂದೂ ಅನ್ನುವುದು ಶ್ರೇಷ್ಠ ಮತ್ತು ಸತ್ಯ ಸನಾತನವಾದದ್ದು, ಅದನ್ನು ಅನೇಕರು ಅವರದ್ದೇ ಆದ ರೀತಿ ವಿಮರ್ಶೆಗೊಳಿಪಡಿಸುತ್ತಾರಾದರೂ ಅದೊಂದು ಅತ್ಯಂತ ಶುದ್ಧ ಜೀವನಶೈಲಿ ಎಂದು ಹರಿಹರ ಪಂಚಮಸಾಲಿ ಪೀಠಾಧ್ಯಕ್ಷ ವಚನಾನಂದ ಶ್ರೀ ವಿಶ್ಲೇಷಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಎಂಬುದು ಮಹಾಸಾಗರ ನಾವೆಲ್ಲಾ ಆ ಮಹಾಸಾಗರದ ನದಿಗಳು. ಬಸವ ಪಥ, ಜೈನಪಥ, ಬೌದ್ಧ ಪಥ ಯಾವುದೇ ಇರಬಹುದು ಆದರೆ ಮೂಲ ಎಂಬುದು ಬಂದಾಗ ನಾವೆಲ್ಲ ಹಿಂದೂಗಳೆನ್ನುವುದು ಸತ್ಯ ಎಂದರು.
ಹಿಂದೂ ಅನ್ನುವುದು ವಟವೃಕ್ಷ, ಅದರಲ್ಲಿ ಸಾಕಷ್ಟು ರಂಬೆ-ಕೊಂಬೆಗಳಿದ್ದು, ಅದರಲ್ಲಿ ಬಸವಾದಿ ಶರಣರು, ಗೌತಮಬುದ್ಧ, ಮಹಾವೀರ, ಅಕ್ಕಮಹಾದೇವಿ, ಅಲ್ಲಮಪ್ರಭು ಅಲ್ಲಿಂದಲೇ ಬಂದವರು. ಹಾಗಾಗಿಯೇ ನಮ್ಮ ದಾಖಲೆಗಳಲ್ಲಿ ಹಿಂದೂ ಲಿಂಗಾಯತ ಅಂತಲೇ ಇದೆ. ಕೆಲವರು ಹಿಂದೂ ವೀರಶೈವರು ಅಂತ ಬರೆಸುತ್ತಾರೆ. ತಾತ್ವಿಕ ಮತ್ತು ಧಾರ್ಮಿಕವಾಗಿ ಸ್ವಲ್ಪ ವ್ಯತ್ಯಾಸ ಇದೆಯಾದರೂ ಸಾಮಾಜಿಕ, ರಾಜಕೀಯ ಮತ್ತು ಬೌದ್ಧಿಕವಾಗಿ ಇಡೀ ಅಖಂಡ ವೀರಶೈವ ಲಿಂಗಾಯತ ನಾವೆಲ್ಲಾ ಒಂದು. ಆದರೆ, ಇದು ಹಿಂದೂ ವಿಚಾರಧಾರೆಗೆ ಪೂರಕವಾದದ್ದು ಎಂಬುದೇ ನಮ್ಮ ಅಭಿಪ್ರಾಯ ಎಂದರು.
ಇದನ್ನು ಪೂರ್ವಾಧಾರ ಪೀಠಗಳಲ್ಲಿ ಬೇರೆ ರೀತಿ ನಿರೀಕ್ಷಿಸಿದರೆ ಅದು ಅವರ ಸಮಸ್ಯೆಯೇ ಹೊರತು ನಮ್ಮದಲ್ಲ. ನಾವೆಲ್ಲ ಹಿಂದೂಗಳೆಂದು ನಮ್ಮ ವಿಚಾರಗಳಿಗೆ ಹಿಂದೆಯೂ ಬದ್ಧರಿದ್ದೆವು, ಇಂದೂ ಮತ್ತು ನಾಳೆಯೂ ಬದ್ಧರಿರುತ್ತೇವೆ ಎಂದು ಹೇಳಿದರು.