ಚಿಕ್ಕಮಗಳೂರು: ದತ್ತಜಯಂತಿ ಅಂಗವಾಗಿ ನಗರದ ನಾರಾಯಣಪುರ ಬಡಾವಣೆಯಲ್ಲಿ ಶುಕ್ರವಾರ ಬೆಳಗ್ಗೆ ದತ್ತಮಾಲಾಧಾರಿ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ನೇತೃತ್ವದಲ್ಲಿ ದತ್ತಮಾಲಾಧಾರಿಗಳು ಪಡಿ ಸಂಗ್ರಹ(ಬಿಕ್ಷಾಟನೆ) ಮಾಡಿದರು.
ನಾರಾಯಣಪುರದ ೯ ಮನೆಗಳಿಗೆ ತೆರಳಿದ ೨೦ಕ್ಕೂ ಹೆಚ್ಚು ಮಾಲಾಧಾರಿಗಳು ಅಕ್ಕಿ, ತೆಂಗಿನಕಾಯಿ, ಬೆಲ್ಲ ಸೇರಿದಂತೆ ಇತರೆ ಆಹಾರ ಪದಾರ್ಥಗಳನ್ನು ಪಡಿ ರೂಪದಲ್ಲಿ ಸಂಗ್ರಹಿಸಿದರು.
ತಮ್ಮ ಮನೆಗೆ ಪಡಿ ಸಂಗ್ರಹಿಸಲು ಬಂದ ದತ್ತಮಾಲಾಧಾರಿಗಳ ಪಾದ ತೊಳೆದ ಮಹಿಳೆಯರು ಪಡಿ ನೀಡುತ್ತಿದ್ದ ದೃಷ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಮಾಜಿ ಸಚಿವ ಸಿ.ಟಿ.ರವಿ ನೇತೃತ್ವದಲ್ಲಿ ಮಾತ್ರವಲ್ಲದೆ ನಗರದ ಇತರ ಬಡಾವಣೆಗಳಲ್ಲಿಯೂ ದತ್ತಮಾಲಾಧಾರಿಗಳು ಪಡಿ ಸಂಗ್ರಹಿಸಿದರು.
ದತ್ತಮಾಲಾಧಾರಿಗಳು ಪಡಿ ಸಂಗ್ರಹಕ್ಕೆ ಬರುತ್ತಿದ್ದ ಹಿನ್ನೆಲೆಯಲ್ಲಿ ವಿವಿಧ ಬಡಾವಣೆಗಳ ಮನೆಗಳ ಎದುರು ರಂಗೋಲಿ ಹಾಕಿ ಸಿಂಗರಿಸಲಾಗಿತ್ತು. ಇದರಿಂದಾಗಿ ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ದತ್ತಜಯಂತಿಯ ಅಂಗವಾಗಿ ಶನಿವಾರ ದತ್ತಪೀಠದಲ್ಲಿ ದತ್ತ ಪಾದುಕೆ ದರ್ಶನ ಹಾಗೂ ವಿವಿಧ ಹೋಮಹವನಗಳು ನಡೆಯಲಿದ್ದು, ಈ ವೇಳೆ ದತ್ತಮಾಲಾಧಾರಿಗಳು ತಾವು ಸಂಗ್ರಹಿಸಿದ ಪಡಿಯಲ್ಲಿ ಅಲ್ಲಿಗೆ ಅರ್ಪಣೆ ಮಾಡಲಿದ್ದಾರೆ. ಶ್ರೀ ಗುರು ದತ್ತಾತ್ರೆಯರಿಗೆ ಪಡಿ ಸಂಗ್ರಹಣೆ ಅತ್ಯಂತ ಪ್ರಿಯವಾಗಿದೆ ಎಂದರು.
ದತ್ತಮಾಲೆ ಧಾರಣೆ ಮಾಡಿದ ಬಳಿಕ ಬಿಕ್ಷಾಟನೆ ಮಾಡಿ ಪಡಿ ಸಂಗ್ರಹಿಸಿದರೆ ಮನಸ್ಸಿನಲ್ಲಿರುವ ಲೋಭ, ಮದ, ಮತ್ಸರ, ಅಹಂಕಾರ ಎಲ್ಲವೂ ನಿವಾರಣೆಯಾಗುತ್ತದೆ ಎಂಬುದು ಗುರುಗಳ ಅಭಿಪ್ರಾಯವಾಗಿತ್ತು. ಹೀಗಾಗಿಯೇ ದತ್ತಮಾಲಾಧಾರಿಗಳು ಪ್ರತಿವರ್ಷವೂ ಮಾಲಾಧಾರಣೆ ಬಳಿಕ ಪಡಿ ಸಂಗ್ರಹ ಮಾಡುವುದು ವಿಶೇಷ.