Home News ಸಿ.ಟಿ.ರವಿ ಎನ್‌ಕೌಂಟರ್‌ಗೆ ಪೊಲೀಸರ ಸಂಚು: ದೂರು

ಸಿ.ಟಿ.ರವಿ ಎನ್‌ಕೌಂಟರ್‌ಗೆ ಪೊಲೀಸರ ಸಂಚು: ದೂರು

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಕೆಲವೇ ಗಂಟೆಗಳಲ್ಲಿ ಪೊಲೀಸರು ಕೂಡ ಎನ್‌ಕೌಂಟರ್ ನಡೆಸಲು ಪ್ರಯತ್ನಿಸಿದ್ದರು. ಇದರ ಹಿಂದೆ ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಸಚಿವೆ ಹೆಬ್ಬಾಳ್ಕರ್ ಕೈವಾಡವಿದೆ. ಆದ್ದರಿಂದ ಸಿ.ಟಿ.ರವಿ ಅವರಿಗೆ ಕೂಡಲೇ ಭದ್ರತೆ ನೀಡಬೇಕು ಎಂದು ರಾಜ್ಯ ಬಿಜೆಪಿ ನಿಯೋಗ ಸೋಮವಾರ ರಾಜ್ಯಪಾಲರಿಗೆ ದೂರು ನೀಡಿದೆ.
ತಮ್ಮ ನಿಂದಿಸಿದ ಪ್ರಕರಣದಲ್ಲಿ ಕಾನೂನು ಹೋರಾಟ ನಡೆಸುವುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇತ್ತೀಚೆಗೆ ಹೇಳಿರುವ ಬೆನ್ನಲ್ಲೇ ವಿವಾದ ಇದೀಗ ರಾಜ್ಯಪಾಲರ ಅಂಗಳ ತಲುಪಿದ್ದು, ಸ್ವತಃ ಪರಿಷತ್ ಸದಸ್ಯ ಸಿ.ಟಿ.ರವಿ ರಾಜ್ಯ ಸರ್ಕಾರ ಹಾಗೂ ಪೊಲೀಸರ ವಿರುದ್ಧದ ಗಂಭೀರ ಆರೋಪಗಳನ್ನು ಒಳಗೊಂಡ ೮ ಪುಟಗಳ ದೂರನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಸಲ್ಲಿಸಲಾಗಿದೆ.
“ಸುವರ್ಣ ವಿಧಾನಸೌಧದಲ್ಲಿ ಸಚಿವೆ ಹೆಬ್ಬಾಳ್ಕರ್ ಅವರೊಂದಿಗೆ ಪರಿಷತ್‌ನಲ್ಲಿ ವಾಗ್ವಾದ ನಡೆದ ಪ್ರಕರಣದಲ್ಲಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಯಿತು. ಸಭಾಪತಿಗಳು ರೂಲಿಂಗ್ ನೀಡಿದ ಬಳಿಕವೂ ನನ್ನ ವಿರುದ್ಧ ಪೊಲೀಸರಿಗೆ ದೂರು ನೀಡಲಾಯಿತು. ದೂರು ದಾಖಲಾದ ತಕ್ಷಣ ಪೊಲೀಸರು ಸಭಾಪತಿಗಳ ಅನುಮತಿ ಇಲ್ಲದೇ ನನ್ನನ್ನು ಬಂಧಿಸಿದರು. ಇಡೀ ರಾತ್ರಿ ಬೆಳಗಾವಿ, ಧಾರವಾಡ, ಗದಗ ಹಾಗೂ ಬಾಗಲಕೋಟೆ ಜಿಲ್ಲೆಗಳ ಗಡಿಯಲ್ಲಿ ಪೊಲೀಸ್ ವಾಹನದಲ್ಲಿ ಓಡಾಡಿಸಿ ನಿರ್ಜನ ಪ್ರದೇಶದಲ್ಲಿ ಎನ್‌ಕೌಂಟರ್ ಮಾಡಿ ಮುಗಿಸುವ ದುರುದ್ದೇಶವೂ ಸರ್ಕಾರಕ್ಕಿತ್ತು. ಆದರೆ, ಪೊಲೀಸ್ ವ್ಯಾನ್‌ಗಳನ್ನು ಮಾಧ್ಯಮಗಳ ವಾಹನಗಳು ಹಿಂಬಾಲಿಸುತ್ತಿದ್ದ ಕಾರಣ ಅದು ಸಫಲವಾಗಲಿಲ್ಲ” ಎಂದು ದೂರಿನಲ್ಲಿ ಆರೋಪಿಸಲಾಗಿದೆ.
“ಸಚಿವೆ ಹೆಬ್ಬಾಳ್ಕರ್ ಜತೆ ಸದನದೊಳಗೆ ವಾಗ್ವಾದ ನಡೆದಿರುವುದರಿಂದ ಸಭಾಪತಿ ವ್ಯಾಪ್ತಿಗೆ ಘಟನೆ ಬರುತ್ತದೆ. ಅನುಮತಿ ಇಲ್ಲದೇ ಮೊಕದ್ದಮೆ ದಾಖಲು ಮಾಡಿದ್ದು ತಪುö್ಪ. ಈಗ ಎಫ್‌ಎಸ್‌ಎಲ್‌ಗೆ ಕಳಿಸುತ್ತೇವೆ ಎಂದು ಸರ್ಕಾರ ಹೇಳುತ್ತಿದೆ. ದುರುದ್ದೇಶದಿಂದ ಪೊಲೀಸರು ನನ್ನನ್ನು ಬಂಧಿಸಿದ್ದಾರೆ. ಸದ್ದಾಂ ಮತ್ತು ಸಂಗಂ ಎಂಬವರು ನನ್ನ ಕಾರಿನ ಮೇಲೆ ದಾಳಿ ಮಾಡಿದರು. ನಮ್ಮ ಜೊತೆ ಇದ್ದ ಕಿಶೋರ್ ಪುತ್ತೂರು ಸಭಾಪತಿ ಅವರಿಗೆ ದೂರು ನೀಡಿದ್ದಾರೆ. ಅವರನ್ನು ಬಂಧಿಸಿ ನಂತರ ಬಿಡುಗಡೆಗೊಳಿಸಿದರು. ನಾನು ಹೆಸರು ಹಾಕಿ ದೂರು ಕೊಟ್ಟರೂ ದೂರು ದಾಖಲಿಸಿಲ್ಲ” ಎಂದು ಆರೋಪಿಸಿದರು.
ರಾಜ್ಯಪಾಲರಿಗೆ ದೂರು ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಿ.ಟಿ.ರವಿ, “ನನ್ನನ್ನು ಕಿಡ್ನಾಪ್ ಮಾಡಿ ನಿಗೂಢ ಸ್ಥಳಗಳಿಗೆ ಫೇಕ್ ಎನ್‌ಕೌಂಟರ್ ಮಾಡಲು ಕರೆದುಕೊಂಡು ಹೋಗಿದ್ದರು. ಸಭಾಪತಿ ಅವರಿಗೆ ನನ್ನ ಮೇಲಿನ ದೌರ್ಜನ್ಯ, ಹಕ್ಕು ಚ್ಯುತಿ ಬಗ್ಗೆ ದೂರು ನೀಡಿದ್ದೇನೆ. ಮಂತ್ರಿಗಳೇ ಆರೋಪಿತ ಸ್ಥಾನದಲ್ಲಿ ಇದ್ದಾರೆ. ಬೆಳಗಾವಿ ಚಲೋ ಬಗ್ಗೆ ಪಕ್ಷ ನಿರ್ಧರಿಸಲಿದೆ. ನಾನು ಬೆಳಗಾವಿಗೆ ಹೋಗುತ್ತೇನೆ. ಅದೇನು ನಿಷೇಧಿತ ಪ್ರದೇಶ ಅಲ್ಲವಲ್ಲ?. ನನಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳುವುದಕ್ಕೆ ಹೋಗುತ್ತೇನೆ. ನನ್ನ ಬಂಧನ ಮಾಡಿದ ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಆಗಬೇಕು. ಈ ಬಗ್ಗೆ ಡಿಜಿಪಿ ಅವರಿಗೂ ದೂರು ಕೊಡುತ್ತೇನೆ” ಎಂದು ಹೇಳಿದರು.
ನಿಯೋಗದಲ್ಲಿ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸದಸ್ಯರಾದ ಕೆ.ಎಂ.ಪ್ರಾಣೇಶ್, ಎನ್.ರವಿಕುಮಾರ್, ಕೆ.ಎಸ್.ನವೀನ್, ಮಾಜಿ ಶಾಸಕ ಸಂಜಯ್ ಪಾಟೀಲ್, ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಹರೀಶ್ ಮತ್ತಿತರರಿದ್ದರು.
ಇದಕ್ಕೂ ಮೊದಲು ವಿಧಾನಸೌಧದಕ್ಕೆ ತೆರಳಿದ ಸಿ.ಟಿ.ರವಿ ನೇತೃತ್ವದ ನಿಯೋಗ ವಿಧಾನ ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮೀ ಅವರನ್ನು ಭೇಟಿಯಾಗಿ ಬೆಳಗಾವಿ ಸುವರ್ಣಸೌಧದಲ್ಲಿ ನಡೆದ ಪ್ರಕರಣದ ಕುರಿತು ಚರ್ಚೆ ನಡೆಸಿದರು. ಇತ್ತೀಚೆಗೆ ಬಿಜೆಪಿ ನಿಯೋಗವು ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ದೂರು ನೀಡಿತ್ತು.

Exit mobile version