ಭಾರತದ ಸಿರಿಸಂಪತ್ತನ್ನು ಕೊಳ್ಳೆಹೊಡೆಯಲೆಂದು ಬಂದ ಆಕ್ರಮಣಕಾರರ ವಿಭಿನ್ನ ದಾಳಿಗಳನ್ನು ಸಶಸ್ತç ಕ್ರಾಂತಿಯ ಮೂಲಕ ಸಮರ್ಥವಾಗಿ ಎದುರಿಸಿದ ಪ್ರಚಂಡ ಭಾರತೀಯರ ಸಾಹಸಗಾಥೆಗೆ ಕೊನೆಯಿಲ್ಲ. ಪ್ರತಿ ಹೆಜ್ಜೆಯಲ್ಲೂ ಭಾರತೀಯತೆಯ ಉತ್ಕೃಷ್ಟ ಆದರ್ಶಗಳನ್ನು ಪಸರಿಸಿ ಜನಜಾಗೃತಿಗೈದ ಲಕ್ಷಾಂತರ ಮಂದಿಯ ತ್ಯಾಗ, ಬಲಿದಾನಗಳೆಲ್ಲ ಸ್ವದೇಶೀ ಅಭಿಮಾನದ ರೂಪು ಪಡೆದು ಇಂದಿನ ಆತ್ಮನಿರ್ಭರ ಭಾರತದ ಕನಸಿಗೆ ಪ್ರೇರಣೆಯಾದುದು ೧೯೦೫ರ ಎಪ್ರಿಲ್ ಮೂರು. ದೇಸೀ ವಸ್ತುಗಳನ್ನೇ ಕೊಳ್ಳುವ, ದೇಸೀ ವಸ್ತುಗಳಿಗೇ ಪ್ರಾಶಸ್ತ್ಯ ನೀಡುವ ಠರಾವನ್ನು ಬಂಗಾಳದಲ್ಲಿ ಮಂಡಿಸಿ ಸಮಗ್ರ ಭಾರತದಾದ್ಯಂತ ದೇಸೀ ವಿಜಯರಥ ಪರಿಕ್ರಮಕ್ಕೆ ಚಾಲನೆ ಲಭಿಸಿದ ಆಗಸ್ಟ್ ಏಳಕ್ಕೆ ಪ್ರೇರಣೆಯಾದ ದಿನವದು. ಪ್ಲಾಸಿ ಕದನದ ಸುಮಾರಿಗೆ ಇಡೀ ಯುರೋಪಿಗೆ ಬೇಕಾಗುವಷ್ಟು ಬಟ್ಟೆ ಭಾರತದಿಂದಲೇ ಪೂರೈಕೆಯಾಗುತ್ತಿತ್ತು. ಇಲ್ಲಿಯ ಕುಶಲಕರ್ಮಿಗಳ ಕರವಿನ್ಯಾಸಕ್ಕೆ ಮನಸೋತ ವಿದೇಶೀಯರ ಆಕಾಂಕ್ಷೆ ಬ್ರಿಟಿಷರ ಮನದಲ್ಲಿ ದುರಾಸೆ ಮೂಡಿಸಿತು. ಐತಿಹಾಸಿಕ ದಾಖಲೆಯ ಪ್ರಕಾರ ಸಾವಿರಾರು ವಸ್ತ್ರವಿನ್ಯಾಸಕಾರರ ಬೆರಳುಗಳನ್ನು ಕತ್ತರಿಸಿದ ಇಂಗ್ಲಿಷ್ ರಕ್ತಪಿಪಾಸುಗಳು ತಮ್ಮ ದೇಶದಲ್ಲಿ ತಯಾರಾದ ಕಡಿಮೆ ದರ್ಜೆಯ ಬಟ್ಟೆಗಳನ್ನೇ ಭಾರತದಲ್ಲಿ ಮಾರಲು ಹವಣಿಸಿದ್ದು ಗುಟ್ಟಾಗಿ ಉಳಿದಿಲ್ಲ. ವಸ್ತ್ರೋದ್ಯಮದಲ್ಲಿ ಜಾಗತಿಕವಾಗಿ ಉನ್ನತ ಸ್ಥಾನ ಪಡೆದಿದ್ದ ಭಾರತವನ್ನು ಕೊಳ್ಳೆಹೊಡೆದು ತಮ್ಮ ಜೇಬು ತುಂಬಿಸುತ್ತಿದ್ದ ಕೆಂಪಂಗಿಗಳ ಆರ್ಥಿಕ ದರೋಡೆಯನ್ನು ಪ್ರಬಲವಾಗಿ ವಿರೋಧಿಸದೆ ಹೋದಲ್ಲಿ ಮುಂದೊಂದು ದಿನ ಭಾರತೀಯರು ಭಿಕ್ಷುಕರಾಗಬೇಕಾಗಬಹುದೆಂಬ ಭೀತಿ ಹಲವು ಮಹನೀಯರನ್ನು ಕಾಡಿದ ಪರಿಣಾಮವೇ ದೇಸೀ ಅರ್ಥಕ್ರಾಂತಿಗೆ ಸ್ಫೂರ್ತಿಯಾಯಿತು.
ಸುಮಾರಾಗಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ತರುವಾಯ ಶತ್ರುಗಳ ಒಳಗುಟ್ಟು ತಿಳಿದು, ಸಂಘಟನಾ ಶಕ್ತಿಯಿಂದ ಇಂಗ್ಲೆಂಡ್‌ನ್ನೂ ಆಳುವ ಆತ್ಮವಿಶ್ವಾಸ ಒತ್ತರಿಸಿ ಮಹಾದೇವ ಗೋವಿಂದ ರಾನಡೆ, ಗೋಪಾಲಕೃಷ್ಣ ಗೋಖಲೆ, ಬಾಲಗಂಗಾಧರ ತಿಲಕರಾದಿಯಾಗಿ ಅನೇಕರು ಸ್ವದೇಶೀ ಶಿಕ್ಷಣ ಸಂಸ್ಥೆ, ರಾಷ್ಟ್ರೀಯ ಪರಿಕಲ್ಪನೆಯ ಪತ್ರಿಕೆ ಸ್ಥಾಪಿಸಿ ರಾಜಕೀಯ ಸ್ವಾತಂತ್ರ್ಯದ ಕಹಳೆಯೂದಿದರು. ಪಂಜಾಬ್ ಪ್ರಾಂತದಲ್ಲೂ ರಾಮ್ ಸಿಂಗ್ ಕೂಕಾ ನೇತೃತ್ವದಲ್ಲಿ ನಡೆದ ದೇಸೀ ಆಂದೋಲನ ವಿದೇಶೀ ಬಟ್ಟೆ-ಶಾಲಾ ಕಾಲೇಜು-ನ್ಯಾಯಾಲಯ ವ್ಯವಸ್ಥೆಯನ್ನು ಬಹಿಷ್ಕರಿಸಿ ದೇಶಕ್ಕೇ ಮಾದರಿಯಾಯಿತು. ಸ್ಥಳೀಯರ ಸಹಕಾರದಿಂದ ಶಾಲೆಗಳನ್ನು ಆರಂಭಿಸಿ, ಪಂಚಾಯತಿ ಕಟ್ಟೆಗಳ ಮೂಲಕ ಉರೊಳಗಿನ ಸಮಸ್ಯೆಗಳನ್ನು ಪರಿಹರಿಸುವ ನಿರ್ಣಯ ಕೈಗೊಂಡು ಬ್ರಿಟಿಷ್ ಮುಕ್ತ ಭಾರತದ ಚಳುವಳಿಗೆ ವೇಗ ನೀಡಿದ ಕೂಕಾರ ಪ್ರಯೋಗ ಅತ್ಯಲ್ಪ ಕಾಲದಲ್ಲೇ ದೇಶದಾದ್ಯಂತ ಪ್ರಸಿದ್ಧಿ ಪಡೆಯಿತು. ಅದರಲ್ಲೂ ಬಂಗಾಲವನ್ನು ವಿಭಜಿಸುವ ನಿರ್ಣಯ ಹೊರಬೀಳುತ್ತಿದ್ದಂತೆ ಈ ಆಕ್ರೋಶಗಳೆಲ್ಲವೂ ಒಮ್ಮಿಂದೊಮ್ಮೆಲೇ ಸ್ಫೋಟಿಸಿ ಹಳ್ಳಿಹಳ್ಳಿಗಳಲ್ಲೂ ಸ್ವಾವಲಂಬಿ ಗ್ರಾಮದ ಕನಸು ಮೊಳಕೆಯೊಡೆಯಿತು. ಮಾರ್ಚ್ ಕೊನೆಯ ವಾರದಲ್ಲೇ ಬಂಗಾಲದಲ್ಲಿ ಒಂದಾದ ರಾಷ್ಟ್ರೀಯವಾದಿ ಹೋರಾಟಗಾರರು, ವಿದೇಶೀ ವಸ್ತುಗಳನ್ನು ಸಾರಾಸಗಟಾಗಿ ತಿರಸ್ಕರಿಸಿ ಅವುಗಳನ್ನು ಸುಟ್ಟು ಹೋಳಿ ಆಚರಿಸಿ ಖಾದಿ ಗ್ರಾಮೋದ್ಯೋಗದ ಉದಯಕ್ಕೆ ಮುನ್ನುಡಿ ಬರೆಯುವ ಸಂಕಲ್ಪ ಸ್ವೀಕರಿಸಿದ ಎಪ್ರಿಲ್ ಮೂರು ಭಾರತದ ಚರಿತ್ರೆಯ ಬಹುಮುಖ್ಯ ಘಟ್ಟ. ಬಟ್ಟೆ, ಉಪ್ಪಿನಿಂದಾರಂಭಿಸಿ ಹಡಗು ಉದ್ಯಮದವರೆಗೂ ಬೀಸಿದ ದೇಸೀ ಗಾಳಿಯ ಪ್ರಭಾವ, ನಾಲ್ಕೇ ತಿಂಗಳಲ್ಲಿ ದೇಶದಾದ್ಯಂತ ವಿಸ್ತರಿಸಿ ಸೂರ್ಯ ಮುಳುಗದ ಸಾಮ್ರಾಜ್ಯದ ಬುಡ ಅಲುಗಾಡಿಸಿದ್ದು ಇತಿಹಾಸ. ಇಂದು ತಂಟೆಕೋರ ಚೀನಾವನ್ನೇ ಮಕಾಡೆ ಮಲಗಿಸುವಷ್ಟು ಭಾರತ ಬೆಳೆಯಲು ಕಾರಣವಾದ ಐತಿಹಾಸಿಕ ಕ್ಷಣಕ್ಕೆ ನೂರಿಪ್ಪತ್ತು ವರ್ಷ ಪೂರ್ಣವಾಗುತ್ತಿದೆ. ಸ್ವಾತಂತ್ರ್ಯ ಚಳುವಳಿಗೆ ಶಕ್ತಿ ತುಂಬಿ, ಲಕ್ಷಾವಧಿ ಕ್ರಾಂತಿಕಾರರಿಗೆ ನವಚೈತನ್ಯವಿತ್ತು ಇಂದಿನ ಮೇಕ್ ಇನ್ ಇಂಡಿಯಾ, ಆತ್ಮನಿರ್ಭರತೆ, ಸ್ವಾಭಿಮಾನಿ ಭಾರತದ ಹೊಸಯೋಚನೆಗೆ ಸ್ಫೂರ್ತಿಯಾದ ಠರಾವು ದೇಸೀಪ್ರಜ್ಞೆಯ ಜಾಗೃತಿಗೆ ಶಕ್ತಿತುಂಬಲಿ.
‘ಉಪ್ಪು ನಮ್ಮ ದೇಶದ ಪ್ರಾಚೀನ ಸಂಪತ್ತು. ಅನಗತ್ಯ ತೆರಿಗೆ ವಿಧಿಸಿ ನಮ್ಮ ಪ್ರಾಕೃತಿಕ ಸಂಪತ್ತನ್ನು ಲೂಟಿಗೈಯುವ ಅವಕಾಶ ಬ್ರಿಟಿಷರಿಗಿಲ್ಲ. ಉಪ್ಪು ತಯಾರಿಸುವುದು, ಮಾರಾಟ ಮಾಡುವುದು, ಉಪಯೋಗಿಸುವುದು ನಮ್ಮ ಹಕ್ಕು. ನೆಲದ ಸಂಸ್ಕೃತಿಯನ್ನು ಮೀರಿ ಯಾವ ವಿದೇಶೀಶಕ್ತಿಯೂ ನಮ್ಮನ್ನಾಳಲು ಸಾಧ್ಯವಿಲ್ಲ. ಏಕಮನಸ್ಸಿನಿಂದ ಹೆಜ್ಜೆಹಾಕಿ ಗೆಲುವಿನೆಡೆ ಪಯಣಿಸೋಣ’. ಮೋಹನದಾಸ ಗಾಂಧಿಯವರ ಈ ಉನ್ನತ ಗಂಭೀರವಾಣಿಗೆ ದೇಶವೇ ಕಿವಿಯಾಗಿತ್ತು. ಭಾರತೀಯರ ನಿತ್ಯಜೀವನದ ಮೇಲೆ ತೆರಿಗೆಯ ಬರೆಯೆಳೆದ ಸರಕಾರದ ಕ್ರಮವನ್ನು ವಿರೋಧಿಸಿ ಲಕ್ಷಾಂತರ ಜನಸಾಮಾನ್ಯರು ಮನೆಬಿಟ್ಟು ಬೀದಿಗಿಳಿದು ಬ್ರಿಟಿಷ್ ಸತ್ತೆಯ ಸಮೂಲ ನಿರ್ನಾಮಕ್ಕಾಗಿ ದೃಢಸಂಕಲ್ಪ ಸ್ವೀಕರಿಸಿ ಸಾಬರಮತಿಯಿಂದ ಹೊರಟ ಐತಿಹಾಸಿಕ ಯಾತ್ರೆ ಭಾರತಚರಿತ್ರೆಯ ಸುವರ್ಣಾಧ್ಯಾಯ. ೧೯೩೦ರ ಮಾರ್ಚ್ ಹನ್ನೆರಡರಂದು ಆರಂಭಗೊಂಡು ಏಪ್ರಿಲ್ ಆರರವರೆಗೆ ನಡೆದ ಇಪ್ಪತ್ನಾಲ್ಕು ದಿನಗಳ ಮಹಾಭಿಯಾನ ಸ್ವಾತಂತ್ರ್ಯ ಹೋರಾಟದ ನಿರ್ಣಾಯಕ ಕಾಲಘಟ್ಟ. ವಂಗಭಂಗ ವಿರೋಧೀ ನಿಲುವು ಮೂಡಿಸಿದ ಸ್ವದೇಶೀಭಾವ, ರೌಲೆಟ್ ಆಕ್ಟ್ ವಿರುದ್ಧ ತಿರುಗಿಬಿದ್ದ ಜನತೆ, ಸೈಮನ್ ಗೋ ಬ್ಯಾಕ್ ಆಂದೋಲನದಿಂದ ಮೂಡಿದ್ದ ರಾಷ್ಟ್ರೀಯ ಭಾವ ಮತ್ತೆ ಉದಯಿಸಿದ್ದು ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ. ಸಮುದ್ರತೀರದ ಜನರ ಬಹುಮುಖ್ಯ ಆರ್ಥಿಕ ಕಸುಬು ಉಪ್ಪು ತಯಾರಿ. ಉಪ್ಪಿಲ್ಲದೆ ರುಚಿಯಿಲ್ಲವೆಂಬ ಸತ್ಯ ತಿಳಿದ ಸರಕಾರ ಉಪ್ಪಿನ ಮೇಲೆ ಕರಭಾರವೇರಿಸಿ ಜನಜೀವನದ ಮೇಲೆ ಗದಾಪ್ರಹಾರಗೈದಿತು. ತಮ್ಮದೇ ದೇಶದಲ್ಲಿ ಯಥೇಚ್ಛವಾಗಿ ಲಭಿಸುವ ಉಪ್ಪಿನ ಸಂಗ್ರಹ, ಮಾರಾಟಕ್ಕೆ ನಿಷೇಧ ಹೇರಿದ ಬ್ರಿಟಿಷರ ಕುಟಿಲ ರಾಜಕಾರಣಕ್ಕೆ ಅಂತ್ಯ ಹಾಡಲು ಧ್ವನಿಯೆತ್ತಿ ಗೆಲುವು ಸಾಧಿಸಿದ ಭಾರತೀಯರ ಪರಾಕ್ರಮಕ್ಕೆ ತೊಂಬತ್ತೈದು ವರ್ಷಗಳು ಪೂರ್ಣವಾಗಿರುವುದು ಸಂತಸದ ಸಂಗತಿ.
ಗಾಂಧೀಜಿ ನೇತೃತ್ವದಲ್ಲಿ ಸಾಗಿದ ಎಪ್ಪತ್ತೆಂಟು ಮಂದಿಯ ತಂಡದ ಗುರಿಯಿದ್ದುದು ಆತ್ಮವಿಶ್ವಾಸದ ಕೊರತೆಯೆದುರಿಸುತ್ತಿದ್ದ ಲಕ್ಷಾಂತರ ಭಾರತೀಯರೆದೆಯಲ್ಲಿ ಅನಂತ ಆತ್ಮವಿಶ್ವಾಸದ ಬೆಳಕು ಮೂಡಿಸುವುದು. ಅವಿನಾಶಿ ಭಾರತದ ದಾಸ್ಯಮುಕ್ತಿಯ ನಿರ್ಣಾಯಕ ಹೆಜ್ಜೆಯೆಂದೇ ಗುರುತಿಸಲ್ಪಟ್ಟು ಸಾಮೂಹಿಕ ಕಾಯಿದೆ ಭಂಗ, ಜನ ಅಸಹಕಾರ, ಕರ ನಿರಾಕರಣೆ, ಉಪ್ಪಿನ ಸತ್ಯಾಗ್ರಹದ ಭಿನ್ನ ಭಿನ್ನ ರೂಪ ಪಡೆದ ದಂಡಿಯಾತ್ರೆ, ಲಾಹೋರ್ ಅಧಿವೇಶನದಲ್ಲಿ ರಾರಾಜಿಸಿದ ಸ್ವತಂತ್ರ ಭಾರತದ ಧ್ವಜದ ವಿಸ್ತಾರಕ್ಕೆ ನಾಂದಿ ಹಾಡಿತು. ಚಿಟಿಕೆ ಉಪ್ಪನ್ನು ಕೈಯಲ್ಲಿ ಹಿಡಿದು ಇಡೀ ದೇಶಕ್ಕೆ ಸ್ವದೇಶೀಮಂತ್ರ ಬೋಧಿಸಿದ ಗಾಂಧೀಜಿ ನಾಯಕತ್ವಕ್ಕೆ ದೇಶದೆಲ್ಲೆಡೆ ಮನ್ನಣೆ ದೊರೆಯಿತಲ್ಲದೆ ಸ್ವತಂತ್ರ ಭಾರತದ ಸಾಕಾರತೆ ಕನಸಲ್ಲವೆಂಬ ನಂಬಿಕೆ ಹುಟ್ಟುಹಾಕಿತು. ಹೊರಡುವಾಗ ಎರಡಂಕೆಯಲ್ಲಿದ್ದ ಸಂಖ್ಯೆ ಗುರಿ ತಲುಪುವ ವೇಳೆಗೆ ಉತ್ಸವದಂತೆ ನಡೆದು ಕೋಟ್ಯಂತರ ಮನಸ್ಸುಗಳನ್ನು ಸ್ಪರ್ಶಿಸಿತು. ನಾಡಿನಾದ್ಯಂತ ಬೀಸಿದ ದೇಸೀಭಾವಕ್ಕೆ ಇಂಗ್ಲೆಂಡ್ ಪ್ರಭುತ್ವ ದಶಕಗಳೊಳಗೆ ಮಣಿಯಲೇಬೇಕಾಯಿತು. ಭಾರತೀಯರೆಲ್ಲರ ಧ್ವನಿ ಒಂದೇ ಆದರೆ ನಮ್ಮನ್ನಾಳುವುದಲ್ಲ, ನಮ್ಮ ದಿಕ್ಕಿನತ್ತ ತಲೆಯಿಟ್ಟು ಮಲಗಲೂ ವಿದೇಶೀಯರು ಹಲವು ಬಾರಿ ಯೋಚಿಸಬೇಕೆಂಬ ಪ್ರಖರ ಸಂದೇಶವಿತ್ತ ದಂಡಿ ಸಂಭ್ರಮ, ಧಾರ್ಮಿಕ-ಸಾಮಾಜಿಕ-ಸಾಂಸ್ಕೃತಿಕ-ಶೈಕ್ಷಣಿಕ ವಲಯಗಳಲ್ಲಿ ಮೂಗುತೂರಿಸಲು ಹವಣಿಸುತ್ತಿರುವ ಹೊಸದಾಸ್ಯ ಪರಂಪರೆಯ ವಿರುದ್ಧ ಹೋರಾಡಲು ಶಕ್ತಿ ನೀಡಲಿ.