ಬೀದರ್: ಜಿಲ್ಲೆಯ ಯುವ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಮಾಡಿಕೊಳ್ಳುವ ಬರೆದ ಮರಣ ಪತ್ರವನ್ನು ಸರ್ಕಾರಿ ರೈಲ್ವೆ ಪೊಲೀಸರು ಹೈದರಾಬಾದ್‌ನಲ್ಲಿಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮರಣ ಪತ್ರದಲ್ಲಿನ ಕೈ ಬರಹಗಳ ಸಾಲುಗಳು ಸಚಿನ್ ಪಾಂಚಾಳ್ ಬರೆದಿದ್ದಾಗಿವಿಯೇ ಅಥವಾ ಇಲ್ಲವೆ ಎಂಬುದರ ಖಚಿತತೆಗಾಗಿ `ಡೆತ್ ನೋಟ್’ನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ ಎಂದು ಸರ್ಕಾರಿ ರೈಲ್ವೆ ಪೊಲೀಸರು ಖಾಸಗಿಯಾಗಿ ತಿಳಿಸುತ್ತಾರೆ. ಪ್ರಕರಣದ ತನಿಖೆಗೆ ಮರಣ ಪತ್ರವೇ ಆಧಾರವಾಗಿದೆ ಎಂಬುದು ಇಲ್ಲಿ ಗಮನಾರ್ಹ ಸಂಗತಿ. ಎಫ್‌ಎಸ್‌ಎಲ್ ವರದಿ ರೈಲ್ವೆ ಪೊಲೀಸರ ಕೈ ಸೇರಬೇಕಾದರೆ ಕನಿಷ್ಠ ಮೂರು ದಿನಗಳು ಬೇಕಾಗುತ್ತವೆ. ಪ್ರಕರಣದ ತನಿಖೆಗಾಗಿ ಸರ್ಕಾರಿ ರೈಲ್ವೆ ಪೊಲೀಸರು ಬೀದರ್‌ನಲ್ಲಿಯೇ ಬಿಡಾರ ಹೂಡಿದ್ದಾರೆ.
ವಿರಾಳತಿ ವಿರಳ ಪ್ರಸಂಗ
ವ್ಯಕ್ತಿ ಕಾಣೆ (ಮಿಸ್ಸಿಂಗ್ ಕೇಸ್) ಪ್ರಕರಣದಲ್ಲಿ ನೊಂದ ಅರ್ಜಿದಾರರಿಂದ ಭಾಲ್ಕಿ ತಾಲ್ಲೂಕಿನ ಕಟ್ಟಿತುಗಾಂವ್ ಗ್ರಾಮದಲ್ಲಿ ಡಿ. ೨೮ರಂದು ಬೀದರ್ ಜಿಲ್ಲೆಯ ಪೊಲೀಸರು ಛೀಮಾರಿಗೆ ಒಳಗಾಗಿರುವುದು ಹಾಗೂ ಆ ಮಟ್ಟದ ಫಜೀತಿ, ಮುಜುಗರಕ್ಕೆ ಒಳಗಾಗಿರುವುದು ವಿರಳಾತಿ ವಿರಳ ಪ್ರಸಂಗ. ನಾಗರಿಕ ಸಮಾಜದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಪೊಲೀಸ್ ಸಬ್-ಇನ್ಸ್ಪೆಕ್ಟರ್ ಇಬ್ಬರೂ ಕೆಲಸದ ನಿಮಿತ್ತ ಪೊಲೀಸ್ ಠಾಣೆಯಿಂದ ಹೊರ ಹೋದಾಗ ತಾವು ಠಾಣೆಗೆ ಹಿಂತಿರುವವರೆಗೆ ಆ ಠಾಣೆಯಲ್ಲಿನ ಓರ್ವ ಇಲ್ಲವೆ ಇಬ್ಬರು ದಫೇದಾರರಿಗೆ `ಸ್ಟೇಷನ್ ಹೆಡ್ ಆಫೀಸರ್’ (ಎಸ್‌ಎಚ್‌ಓ) ನೇಮಕ ಮಾಡಿರುತ್ತಾರೆ. ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಠಾಣೆಯಲ್ಲಿ ಇಲ್ಲದಿದ್ದಾಗ ಪೊಲೀಸ್ ಠಾಣೆಯಲ್ಲಿನ ಎಲ್ಲಾ ಆಗು-ಹೋಗುಗಳಿಗೆ ಎಸ್‌ಎಚ್‌ಓ ನೇರ ಹೊಣೆಗಾರರಾಗಿರುತ್ತಾರೆ. ಜಟಿಲ ಮತ್ತು ಸಂಕೀರ್ಣ ಪ್ರಕರಣಗಳಲ್ಲಿ ಪೊಲೀಸ್ ಇನ್ಸ್ಪೆಕ್ಟರ್, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅವರನ್ನು ತಂತ್ರಜ್ಞಾನದ ಮೂಲಕ ಸಂಪರ್ಕ ಹೊಂದಿ ಅವರಿಂದ ಎಸ್‌ಎಚ್‌ಓ ಸಲಹೆ ಮತ್ತು ಮಾರ್ಗದರ್ಶನ ಪಡೆದು ಮುಂದುವರೆಯುವುದು ಪೊಲೀಸ್ ವ್ಯವಸ್ಥೆಯ ಒಂದು ಪ್ರಮುಖವಾಗಿದೆ ಎಂದು ಬಲ್ಲವರು ತಿಳಿಸುತ್ತಾರೆ.
ಬೆಲೆ ತೆತ್ತಬೇಕಾಯಿತು
ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬರುವುದಕ್ಕಿಂತ ಮುನ್ನ ಸಚಿನ್ ಕಾಣೆಯಾಗಿದ್ದಾರೆ ಎಂದು ತಿಳಿಸಿ ಆತನ ಸಹೋದರಿಯರು ಬೀದರ್ ಗಾಂಧಿ ಗಂಜ್ ಪೊಲೀಸ್ ಠಾಣೆಗೆ ಭೇಟಿ ನೀಡಿದಾಗ ಅವರಿಂದ ದೂರು ಅರ್ಜಿಯನ್ನು ತಕ್ಷಣ ಸ್ವೀಕರಿಸದ್ದಿದ್ದಕ್ಕೆ ಪೊಲೀಸರು ಭಾರಿ ಬೆಲೆ ತೆತ್ತಬೇಕಾಯಿತು. ಈ ಸಂಬಂಧ ಗಾಂಧಿ ಗಂಜ್ ಪೊಲೀಸ್ ಠಾಣೆ ಹೆಡ್ ಕಾನ್‌ಸ್ಟೇಬಲ್ ಶಾಮಲಾ ಬಾಯಿ ಹಾಗೂ ಇನ್ನೊರ್ವ ಹೆಡ್ ಕಾನ್ಸ್ಟಬಲ್ ರಾಜೇಶ್ ಎಂಬ ಇಬ್ಬರನ್ನು ಸೇವೆಯಿಂದ ಸ್ಪಸ್ಪೆಂಡ್ ಮಾಡಿ ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟೆ ಈಗಾಗಲೇ ಆದೇಶ ಹೊರಡಿಸಿದ್ದಾರೆ. `ಮಿಸ್ಸಿಂಗ್ ಕೇಸ್ ಕಂಪ್ಲೆಂಟ್’ ಬೇಗನೆ ಸ್ವೀಕರಿಸದೆ ನಿರ್ಲಕ್ಷ್ಯತನ ತೋರಿದುದರ ಹಾಗೂ ಕರ್ತವ್ಯಲೋಪ ಎಸಗಿದುದರ ಬಗ್ಗೆ ಇಲಾಖಾ ವಿಚಾರಣೆ ಮುಂದುವೆರೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತಂತೆ ಇನ್ನೂ ಇಬ್ಬರು ಪೊಲೀಸರು ಪೇಚಿಗೆ ಸಿಲುಕಿದರು ಕೂಡ ಅಚ್ಚರಿಯೇನಿಲ್ಲ ಎನ್ನಲಾಗುತ್ತಿದೆ. ತೋರಿದ ನಿರ್ಲಕ್ಷ್ಯತನ ಮತ್ತು ಎಸಗಿದ ಕರ್ತವ್ಯ ಲೋಪದಿಂದಾಗಿಯೇ ಸಚಿನ್ ಪಾಂಚಾಳರ ಸಹೋದರಿಯರಿಂದ ಪೊಲೀಸರು ಛೀಮಾರಿಗೆ ಒಳಗಾಗಬೇಕಾಯಿತು ಹಾಗೂ ತೀವ್ರ ಮುಜುಗರದ ಪ್ರಸಂಗ ಎದುರಿಸಬೇಕಾಯಿತು ಎಂಬುದನ್ನು ಇಲ್ಲಿ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.