Home News ವೈಕುಂಠದ ರೂಟ್‌ಮ್ಯಾಪ್….

ವೈಕುಂಠದ ರೂಟ್‌ಮ್ಯಾಪ್….

ವೈಕುಂಠ ಏಕಾದಶಿಯಂದು ಸ್ವರ್ಗದ ಬಾಗಿಲು ತೆಗೆದಿರುತ್ತದೆ ಎಂದು ಬಲವಾಗಿ ನಂಬಿದ್ದ ಕರಿಲಕ್ಷಂಪತಿ ಈ ಕುರಿತಂತೆ ಎಲ್ಲರಿಗೂ ತಿಳಿಸುತ್ತಿದ್ದ. ನೋಡ್ರೆಪಾ ಅವತ್ತು ಸ್ವರ್ಗದ ಬಾಗಿಲಿಗೆ ಕೀಲಿ ಹಾಕುವುದೇ ಇಲ್ಲ. ಬಾಗಿಲಿಗೆ ಹಾಕಿದ್ದ ಕೀಲಿಯನ್ನು ಹಿಂದಿನ ದಿನ ಸಾಯಂಕಾಲವೇ ತೆಗೆದು ಅದನ್ನು ಮಾಳಿಗೆ ಮೇಲೆ ಇಟ್ಟಿರುತ್ತಾರೆ. ರಾತ್ರಿ ೧೨ ರವರೆಗೆ ತೆರೆದಿರುವ ಈ ಬಾಗಿಲ ಮೂಲಕ ಯಾರಾದರೂ ಪ್ರವೇಶಿಸಬಹುದು ಎಂದು ಹೇಳುತ್ತಿದ್ದ. ಕೆಲವರು ಕರಿಲಕ್ಷಂಪತಿ ಧರ್ಮ ಕರ್ಮ ತಿಳಿದ ವ್ಯಕ್ತಿ ನಿಜವಿದ್ದರೂ ಇರಬಹುದು ಎಂದು ಅಂದುಕೊಂಡರೆ ಇನ್ನು ಕೆಲವರು ಕರಿಲಕ್ಷಂಪತಿ ಏನು ಕಂಡು ಬಂದಿದ್ದಾನಾ? ನಾನೂ ಬೇಕಾದ್ದು ಹೇಳುತ್ತೇನೆ ಅವನು ಸುಮ್ಮನೇ ಹೇಳುತ್ತಾನೆ ಎಂದು ಆಡಿಕೊಂಡರು. ಹುಚ್ಚುಲುಗ ಹಾಗೂ ಆತನ ಗೆಳೆಯರು ಸೇರಿ ಕರಿಲಕ್ಷಂಪತಿಯ ಹತ್ತಿರ ಹೋಗಿ.. ಬುದ್ಧಿ ಅವತ್ತು ಸ್ವರ್ಗದ ಬಾಗಿಲು ಫುಲ್‌ಓಪನ್ ಅಂತೆ ಹೌದಾ ಎಂದು ಕೇಳಿದರು ಅದಕ್ಕೆ ಕರಿಲಕ್ಷಂಪತಿ ನೂರಕ್ಕೆ ನೂರರಷ್ಟು ಹೌದು ಅಂದ. ಅವತ್ತೊಂದಿನಾನಾ ಅಥವಾ? ಎಂದಾಗ ಉಳಿದ ದಿನ ಖಾತ್ರಿ ಇಲ್ಲ ಅವತ್ತು ಮಾತ್ರ ನೀವು ಹೇಗೆ ಬೇಕಾದರೂ ಹೋಗಬಹುದು ಎಂದು ಹೇಳಿದ. ಹೌದೂ ನೀವು ಇದೆಲ್ಲ ಯಾಕೆ ಕೇಳುತ್ತಿದ್ದೀರಿ ಎಂದು ಕೇಳಿದ..ಏನಿಲ್ಲ ನಾವು ಅಲ್ಲಿಗೆ ಹೋಗಬೇಕು ಅಂದುಕೊಂಡಿದ್ದೇವೆ. ಸ್ವಲ್ಪ ರೂಟ್‌ಮ್ಯಾಪ್ ಹಾಕಿಕೊಟ್ಟರೆ ನಾವು ತೆರಳುತ್ತೇವೆ. ಇಲ್ಲವಾದರೆ ಅಲ್ಲಿಗೆ ಹೇಗೆ ಹೋಗಬೇಕು ಎಂದು ತಿಳಿಸಿಕೊಡಿ ಆ ರೀತಿ ನಾವು ಅಲ್ಲಿಗೆ ಹೋಗುತ್ತೇವೆ ಅಂದರು. ಇರ‍್ಯಾಕೋ ನನಗೆ ಗೇಲಿ ಮಾಡಲು ಬಂದಿರಬಹುದು ಎಂದು ಕರಿಲಕ್ಷಂಪತಿ ಯಾಕೆ ಮನೆಯಲ್ಲಿ ಹೇಳಿಬಂದಿದ್ದೀರಾ? ನಿಮಗೆ ಏನು ಬುದ್ಧಿ ಇಲ್ಲವೇ? ನನ್ನನ್ನು ಗೇಲಿ ಮಾಡುತ್ತೀರಾ ಎಂದು ಕೇಳಿದ. ಅಲ್ಲ ಸ್ವಾಮಿ ತಾವು ಸಾಕ್ಷಾತ್ ಪಂಡಿತರು. ಎಷ್ಟೋ ಜನರಿಗೆ ಸ್ವರ್ಗದ ದಾರಿ ಹೀಗೆಯೇ ಇದೆ ಎಂದು ತೋರಿಸಿದವರು. ನಮಗೆ ತೋರಿಸುವುದಿಲ್ಲವೇ ಎಂದು ಕೇಳಿದರು. ಆಗ ಕರಿಲಕ್ಷಂಪತಿ ಹುಚ್ಚುಲಗನ ಕಿವಿಯಲ್ಲಿ ಏನೋ ಮೆಲ್ಲನೇ ಹೇಳಿ, ಇದೇ ಅದಕ್ಕೆ ರೂಟ್‌ಮ್ಯಾಪ್ ಎಂದು ಜೋರಾಗಿ ಹೇಳಿದ. ಹುಚ್ಚುಲಗ ಅಲ್ಲಿಂದ ಎದ್ದು ಹೋದ. ಅದಾಗಿ ಮೂರ್ನಾಲ್ಕು ದಿನಕ್ಕೆ ಪೊಲೀಸರ ಜೀಪು ಬಂದು ಕರಿಲಕ್ಷಂಪತಿಯನ್ನು ದರಾದರಾ ಎಳೆದುಕೊಂಡು ಹೋದರು. ಯಾಕೆಂದರೆ ಹುಚ್ಚುಲುಗ ಕರಿಲಕ್ಷಂಪತಿ ನಮ್ಮನ್ನು ಆತ್ಮಹತ್ಯೆಗೆ ಪ್ರಚೋದಿಸುತ್ತಿದ್ದಾನೆ ಎಂದು ಕಂಪ್ಲೇಂಟ್ ಕೊಟ್ಟಿದ್ದ.

Exit mobile version