Home ಅಂಕಣ ವಿವಾಹ ವ್ಯವಹಾರವಲ್ಲ, ಅದು ಸಂಸ್ಕೃತಿಗೆ ಆಧಾರ

ವಿವಾಹ ವ್ಯವಹಾರವಲ್ಲ, ಅದು ಸಂಸ್ಕೃತಿಗೆ ಆಧಾರ

0

ಭಾರತೀಯ ನ್ಯಾಯದಾನ ವ್ಯವಸ್ಥೆಯ ಲೋಪದಿಂದಾಗಿ ಎದುರಾದ ಸಮಸ್ಯೆ, ಸವಾಲು, ಸಂಕಟಗಳಿಗೆ ಮೈಯೊಡ್ಡುವುದು ಕಷ್ಟವಾದ ಹಿನ್ನೆಲೆಯಲ್ಲಿ ಮನನೊಂದು ‘ನ್ಯಾಯ ಸಿಗುವುದು ಬಾಕಿಯಿದೆ’ ಎಂಬ ಹಣೆಪಟ್ಟಿಯೊಂದಿಗೆ ಇಪ್ಪತ್ನಾಲ್ಕು ದಿನಗಳ ಹಿಂದೆ ಅಮಾನವೀಯ ಆತ್ಮಹತ್ಯೆಗೆ ಶರಣಾದ ಅತುಲ್ ಸುಭಾಷ್ ಸಾವು ಪ್ರಜ್ಞಾವಂತ ಸಮಾಜದೆದುರು ಪ್ರಶ್ನೆಗಳ ಪರ್ವತವನ್ನೇ ಸೃಷ್ಟಿಸಿತ್ತು. ಕೌಟುಂಬಿಕ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಸ್ತ್ರೀಯರಿಗೆ ಸಂವಿಧಾನವಿತ್ತ ರಕ್ಷಾಕವಚವನ್ನೇ ಅಸ್ತ್ರವಾಗಿ ಪ್ರಯೋಗಿಸಿ ಗಂಡ ಮತ್ತು ಆತನ ಮನೆಯವರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಮಾನಸಿಕ ಹಿಂಸೆಯಿತ್ತು, ಸಂಧಾನದ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ ಹೊಡೆಯುವ ವಿವಾಹೋತ್ತರ ದರೋಡೆಯು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗುತ್ತಿರುವುದು ಆತಂಕದ ವಿದ್ಯಮಾನ. ನ್ಯಾಯದೃಷ್ಟಿಯ ನೇರಕ್ಕೆ ನಡೆಯುತ್ತಿರುವ ಈ ವ್ಯವಹಾರದ ಬಗ್ಗೆ ಗಮನಹರಿಸದ ಆಡಳಿತ ವ್ಯವಸ್ಥೆಯು ಪುರುಷರ ಮೇಲಿನ ಕಾನೂನುಬದ್ಧ ನರಮೇಧಕ್ಕೆ ಬೆಂಬಲವಾಗಿ ನಿಂತಿದೆ ಎಂಬರ್ಥದ ಅತುಲ್ ನುಡಿಗಳು, ಅವರು ಅನುಭವಿಸಿರಬಹುದಾದ ನೋವಿಗೆ ಸಾಕ್ಷಿ. ‘ಒಂದೊಮ್ಮೆ ನ್ಯಾಯ ಸಿಗದಿದ್ದರೆ ನನ್ನ ಅಸ್ಥಿಯನ್ನು ನ್ಯಾಯಾಲಯದೆದುರು ವಿಸರ್ಜಿಸಿ’ ಎಂಬ ಹತಾಶಭಾವ ಸುಷ್ಠು ಶರೀರಿಯಲ್ಲಿ ಮಡುಗಟ್ಟಿರಬೇಕಿದ್ದರೆ ಆ ಯಾತನೆಯ ತೀವ್ರತೆ ಅದೆಷ್ಟಿರಬಹುದು. ಹೆಣ್ಣಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ರೂಪಿತಗೊಂಡ ನೀತಿಯೊಂದು ಬಹುಸಂಖ್ಯೆಯ ಪುರುಷರ ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ, ಆರ್ಥಿಕ ಘನತೆಯನ್ನು ಹಾಳುಗೆಡವಿ, ಇರುವ ಒಂದೇ ಒಂದು ಬದುಕಿಗೆ ಸಜೀವ ಕೊಳ್ಳಿಯಿಡುತ್ತಿರುವುದು ಖೇದಕರ. ಕೋವಿಡ್ ತರುವಾಯ ದಾಖಲೆ ಪ್ರಮಾಣದಲ್ಲಿ ಸದ್ದುಮಾಡುತ್ತಿರುವ ಡಿವಿ ಪ್ರಕರಣಗಳು ತಾರ್ಕಿಕ ಅಂತ್ಯ ಕಾಣುವುದೇ ಅಪರೂಪ. ಕೇಳಿದಷ್ಟು ಹಣ ಕೊಟ್ಟು, ಸುಳ್ಳು ಕೇಸಿನಿಂದ ಹೊರಬರಲು ಸಂಧಾನದ ಅನಿವಾರ್ಯ ದಾರಿಹಿಡಿಯುವ ಗಂಡಸರ ಮರ್ಯಾದಾಪ್ರಶ್ನೆ' ಸ್ತ್ರೀಯರಿಗೆ ವರದಾನವಾಗುತ್ತಿರುವುದಕ್ಕೆ ನಮ್ಮೂರಿನ ಕೋರ್ಟ್ ಆವರಣಗಳೇ ಉದಾಹರಣೆ. ನಾರಿಸಮ್ಮಾನಕ್ಕೆಂದು ಸೃಷ್ಟಿಗೊಂಡ ವಿಧಿಯೊಂದು ಅಕ್ರಮ ಆರ್ಥಿಕ ವ್ಯವಹಾರಕ್ಕೆ ಶ್ರೀರಕ್ಷೆಯಾಗಿ, ಹಣದ ಹೊಳೆ ಹರಿಸಿದರೆ ಪ್ರಕರಣ ವಾಪಾಸು ಪಡೆಯುವ ಅಸಹಜ ವ್ಯಾಪಾರಕೇಂದ್ರಿತವಾಗಿ ಮೂಡುತ್ತಿರುವುದು ಸಂಸ್ಕಾರ - ಪರಂಪರೆಯ ನಾಡಿಗೆ ನಿಜಕ್ಕೂ ಶೋಭೆಯಲ್ಲ. ಲೈಂಗಿಕ ಬಯಕೆಯನ್ನು ಈಡೇರಿಸುವುದಕ್ಕಿರುವ ದಾರಿ ವಿವಾಹವಲ್ಲ. ಕಾಮಜೀವನವನ್ನು ಕ್ರಮಬದ್ಧಗೊಳಿಸಿ ಕಾಮವನ್ನು ಪ್ರೇಮವಾಗಿ ಪರಿವರ್ತಿಸಿ, ಧೃತಿ-ಕ್ಷಮೆ-ದಮ-ಅಸ್ತೇಯ-ಶೌಚ-ಇಂದ್ರಿಯನಿಗ್ರಹ-ಧೀ-ವಿದ್ಯೆ-ಸತ್ಯ-ಅಕ್ರೋಧಗಳೆಂಬ ದಶಧರ್ಮಲಕ್ಷಣಗಳನ್ನು ಸದಾ ಅನುಸರಿಸಿ, ಋಣತ್ರಯಗಳನ್ನು ತೀರಿಸಲು ದಾರಿತೋರಿ, ವೇದಯಜ್ಞ-ದೇವಯಜ್ಞ-ಪಿತೃಯಜ್ಞ-ಮನುಷ್ಯಯಜ್ಞ-ಭೂತಯಜ್ಞಗಳೆಂಬ ಪಂಚಯಜ್ಞಗಳಿಗೆ ಆಸರೆಯಾಗಿ, ಧರ್ಮಾರ್ಥ ಕಾಮಗಳಲ್ಲಿ ಪರಸ್ಪರ ಸಹಭಾಗಿಗಳಾಗಿ ಮೋಕ್ಷದತ್ತ ಮುಖಮಾಡಲು ನಮ್ಮ ಸಂಸ್ಕೃತಿಯಿತ್ತ ಕೊಡುಗೆಯೇ ವಿವಾಹ. ಕುಟುಂಬ ಮತ್ತು ರಾಷ್ಟ್ರಕ್ಕೆ ಆಧಾರವಾಗಿ ಬ್ರಹ್ಮಚರ್ಯ-ವಾನಪ್ರಸ್ಥ-ಸಂನ್ಯಾಸ ಆಶ್ರಮಗಳಿಗೆ ಸರ್ವರೀತಿಯಲ್ಲೂ ಶಕ್ತಿತುಂಬುವ ಗ್ರಹಸ್ಥಾಶ್ರಮವೇ ಸರ್ವಶ್ರೇಷ್ಠವೆಂದು ಶಾಸ್ತ್ರಗಳು ಸಾರಿ ಹೇಳುತ್ತವೆ. ಈ ನೆಲದ ಸರ್ವಪ್ರಥಮ ಸಂವಿಧಾನವೆಂಬ ಗೌರವಕ್ಕೆ ಪಾತ್ರವಾಗಿರುವ ಮನುಸ್ಮೃತಿಯಲ್ಲಿ,ಸರ್ವೇಷಾಮಪಿ ಚೈತೇಷಾಂ ವೇದಸ್ಮೃತಿವಿಧಾನತ:, ಗೃಹಸ್ಥ ಉಚ್ಯತೇ ಶ್ರೇಷ್ಠ: ಸ ತ್ರೀನೇತಾನ್ ಬಿಭರ್ತಿ ಹಿ’ ಎಂದು ಘೋಷಿಸಿರುವುದು ವೈವಾಹಿಕ ಬಂಧದ ಶಕ್ತಿಗೆ ಆಧಾರ. ಸನಾತನ ಧರ್ಮದ ಷೋಡಶ ಸಂಸ್ಕಾರಗಳಲ್ಲೊಂದಾದ ವಿವಾಹದ ಪರಿಕಲ್ಪನೆಯೇ ವಿಶಿಷ್ಟ. ಶಿವಶಕ್ತಿಯಂತೆ, ಲಕ್ಷ್ಮೀನಾರಾಯಣರಂತೆ ಜೊತೆಯಾಗುವ ಗಂಡುಹೆಣ್ಣಿನ ಸಂಬಂಧ ವಾಕ್ ಮತ್ತು ಅರ್ಥದಂತೆ ಬೇರ್ಪಡಿಸಲಾಗದ ಸುಬಂಧ. ಕುಟುಂಬದ ಹಿರಿಯರ ಸಮ್ಮುಖದಲ್ಲಿ ನಡೆಯುವ ನಿಶ್ಚಿತಾರ್ಥ, ದೇವತೆಗಳಿಂದಲೂ ಆದರಿಸಲ್ಪಡುವ ಪಿತೃಗಳ ಆಶೀರ್ವಾದ ಪಡೆಯುವ ನಾಂದಿ, ಅಧ್ಯಯನದಿಂದ ಮರಳಿ ಗೃಹಸ್ಥನಾಗುವ ಮೊದಲು ನಡೆಯುವ ಕಾಶೀಯಾತ್ರೆ, ಮನೋವಾಕ್ಕಾಯಗಳು ಒಂದಾಗಿರಲೆಂಬ ಶುಭಹಾರೈಕೆಯೊಂದಿಗೆ ದೇವದ್ವಿಜಾಗ್ನಿ ಸನ್ನಿಧಿಯಲ್ಲಿ ಕನ್ಯಾಪಿತನ ವಾಗ್ದಾನ, ಪಂಚಭಾಗ್ಯಗಳ ಜೊತೆಜೊತೆಗೆ ಪುತ್ರಾದಿ ಪ್ರಾಪ್ತಿಗಾಗಿ ಕನ್ಯೆ ಮಾಡುವ ವಿವಾಹಭಾಗ್ಯದೇವತೆ ಶಚಿಯ ಪೂಜೆ, ಧರ್ಮೇಚಾರ್ಥೇ ಚ ಕಾಮೇ ಚ ನಾತಿಚರಿತವ್ಯಾತ್ವಯೇಯಮ್ ಎಂಬ ಸಂದೇಶದೊಂದಿಗೆ ಎರೆಯುವ ಧಾರೆಯ ಪ್ರಕ್ರಿಯೆ ಅದ್ಭುತ, ಅನುಸರಣೀಯ.
ಲಾಜಹೋಮದಿಂದ ಭಾರ್ಯೆಯಾಗಿ, ಪಾಣಿಗ್ರಹಣದಿಂದ ಪಾಣಿಗ್ರಹೀತಿಯಾಗಿ, ಸಪ್ತಪದಿಯಿಂದ ಸಹಧರ್ಮಿಣಿಯಾಗಿ, ಮಾಂಗಲ್ಯಧಾರಣೆಯಿಂದ ಪತ್ನಿಯಾಗಿ, ಗರ್ಭಧಾರಣೆಯಿಂದ ಜಾಯೆಯಾಗಿ, ಮಕ್ಕಳಿಗೆ ಜನ್ಮವಿತ್ತು ಕುಟುಂಬಿನಿಯಾಗಿ, ಮನೆಯ ಜವಾಬ್ದಾರಿಯನ್ನು ವಹಿಸುವುದರಿಂದ ಪುರಂಧ್ರಿಯಾಗಿ ಶೋಭಿಸುವ ಹೆಣ್ಣನ್ನು ಭಾರತೀಯ ಪರಂಪರೆಯಲ್ಲಿ ಪೂಜನೀಯಳೆಂದು ಪರಿಗಣಿಸಿದ್ದಷ್ಟೇ ಅಲ್ಲ, ಆ ಸ್ಥಾನದಲ್ಲಿ ಆಕೆಯನ್ನು ಪ್ರತಿಷ್ಠಾಪಿಸಿ ಆರಾಧಿಸಿದೆ ಕೂಡ. ಸಂಸಾರವನ್ನು ಆನಂದಸಾಗರವನ್ನಾಗಿಸುವ ವಧುವನ್ನು ವಿಶೇಷವಾಗಿ ಮನೆಗೆ ಕರೆದೊಯ್ಯುವ ವಿವಾಹದ ಎರಡು ಚಿಂತನೆಗಳು ನಿಜಕ್ಕೂ ವಿಶೇಷ. ಅಗ್ನಿಯ ಬಳಿ ಕಲ್ಲಿಟ್ಟು ಪೂಜಿಸಿ, ಮುಂದೆ ಬಾಳದಾರಿಯಲ್ಲಿ ಎದುರಾಗುವ ಕಷ್ಟಗಳಿಗೆ ಅಂಜದೆ ಗಟ್ಟಿಯಾಗಿ ನಿಲ್ಲಬೇಕೆಂಬ ಸಂದೇಶ ಸಾರುವ ಅಶ್ಮಾರೋಹಣ ಒಂದಾದರೆ, ಸಪ್ತಪದಿ ಇನ್ನೊಂದು. ಅನ್ನಾಹಾರ ಸಮೃದ್ಧಿಯೊಂದಿಗೆ ಒಬ್ಬರನ್ನೊಬ್ಬರು ಸರ್ವರೀತಿಯಲ್ಲೂ ಅರಿತು ಬೆರೆತು ಪೋಷಿಸಲು ಮೊದಲ ಹೆಜ್ಜೆ, ಶಾರೀರಿಕ ಮಾನಸಿಕ ಬಲವರ್ಧನೆಯಿಂದ ಶಕ್ತಿಯುತರಾಗಿ ಬೆಳೆಯಲು ಎರಡನೆಯ ಹೆಜ್ಜೆ, ಆರ್ಥಿಕ ಸುಖಸಂತೋಷ ವೃದ್ಧಿಸಿ ಸಮಸ್ತ ಐಶ್ವರ್ಯ ಹೊಂದಲು ಮೂರನೆಯ ಹೆಜ್ಜೆ, ಭವ್ಯಸುಖದ ಪ್ರಾಪ್ತಿಗಾಗಿ ನಾಲ್ಕನೆಯ ಹೆಜ್ಜೆ, ಉತ್ತಮ ಸಂತಾನ ಪಡೆದು ಪಾರಿವಾರಿಕ ಸುಖ ಸಂತೋಷಕ್ಕೆ ಕಾರಣರಾಗಲು ಐದನೆಯ ಹೆಜ್ಜೆ, ಸರ್ವ ಋತುಗಳ ಸಾಂಗತ್ಯದೊಂದಿಗೆ ಕಣ್ರೆಪ್ಪೆಗಳಂತೆ ಸದಾಕಾಲವೂ ಅಭಿನ್ನವಾಗಿರಲು ಆರನೆಯ ಹೆಜ್ಜೆ ಹಾಗೂ ಆಜೀವ ಸ್ನೇಹಿತರಂತೆಯೇ ಬಾಳುವ ಶುದ್ಧಸಂಕಲ್ಪದೊಂದಿಗೆ ಏಳನೆಯ ಹೆಜ್ಜೆಯನ್ನಿಟ್ಟು ಒಂದಾಗುವ ಜೋಡಿಗಳ ವಿವಾಹ ದೀಕ್ಷೆ' ನಮ್ಮ ಪರಂಪರೆಯ ಶ್ರೀಮಂತಿಕೆಗೆ ಹಿಡಿದ ಕೈಗನ್ನಡಿ. ಮನುಸ್ಮೃತಿಯಲ್ಲಿ ಹೇಳುವಂತೆ,ವಿವಾಹದಲ್ಲಿ ಒಂದಾಗುವ ಸ್ತ್ರೀ ಮತ್ತು ಪುರುಷರ ಪರಸ್ಪರ ನಿಷ್ಠೆ ಸಾವಿನ ತನಕ ಮುಂದುವರೆಯಲಿ’ ಎಂಬ ಮಾತಿಗೆ ಯಥಾವತ್ತಾಗಿ ಬಾಳಿದ ಪೂರ್ವಿಕರ ಬದುಕು ಈ ತಲೆಮಾರಿಗೆ ಆದರ್ಶವಾಗದಿರುವುದೇ ಅಪಸವ್ಯಗಳಿಗೆ ಕಾರಣ. ಭಾರತೀಯರು ವಿವಾಹಕ್ಕೆ ನೀಡುವ ಮಹತ್ವವನ್ನು ವಿದೇಶೀಯರೂ ಅರಿತು ಆ ಪಥದಲ್ಲಿ ನಡೆಯುತ್ತಿರುವಾಗ ನಾವು ವಿರುದ್ಧ ದಿಕ್ಕಿನತ್ತ ಮುಖಮಾಡಿರುವುದು ಸೋಜಿಗ. ಗಂಡು – ಹೆಣ್ಣು ಹಾಗೂ ಹಣ ಸಿದ್ಧವಿದ್ದರೆ ರಾತ್ರಿ ಬೆಳಗಾಗುವುದರೊಳಗೆ ರಾಜವೈಭೋಗದ ಮದುವೆಗಳನ್ನು ನಡೆಸುವಷ್ಟು ಸಾಮರ್ಥ್ಯ ಪಡೆದಿದ್ದರೂ ಪ್ರೀತಿಯ ಒರತೆ ದಂಪತಿಗಳ ನಡುವೆ ಕೊರತೆಯಾಗಿ ಅಹಮಿಕೆ ಅಡ್ಡಗೋಡೆಯಾಗಿದೆ. ಅಮೆರಿಕಾ, ಇಂಗ್ಲೆಂಡ್, ಫ್ರಾನ್ಸ್ ದೇಶಗಳಲ್ಲಿ ಮಾತ್ರ ನಡೆಯುತ್ತವೆಯೆಂದು ಕೇಳಿದ್ದ ವಿಚ್ಛೇದನಗಳು ಇಂದು ನಮ್ಮ ಮನೆ ಬಾಗಿಲು ಬಡಿಯುತ್ತಿರುವುದು ಸಾಮಾಜಿಕ ಜವಾಬ್ದಾರಿಯ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಸುಮಾರಾಗಿ ತೊಂಭತ್ತರ ದಶಕದಲ್ಲಿ ಬಹಳ ಅಪರೂಪವೆಂಬಂತೆ ಸಾವಿರಕ್ಕೆ ಒಂದು ವಿಚ್ಛೇದನ ಪ್ರಕರಣಗಳು ದಾಖಲಾಗುತ್ತಿದ್ದ ಭಾರತದಲ್ಲಿ ಇಂದು ಆ ಪ್ರಮಾಣ ನೂರಕ್ಕೆ ಹತ್ತಾಗಿದೆ. ಸುಮಾರು ಹನ್ನೊಂದು ಲಕ್ಷ ಡಿವಿ ಪ್ರಕರಣಗಳ ವಿಚಾರಣೆ ಬಾಕಿಯಿದ್ದು ಕೌಟುಂಬಿಕ ನ್ಯಾಯಾಲಯಗಳು ತುಂಬಿ ತುಳುಕಿ ಹೊಸ ಕಟ್ಟಡಗಳಿಗೆ ಬೇಡಿಕೆ ಹೆಚ್ಚಿರುವುದು ಭಾರತದ ಕುಟುಂಬ ಜೀವನ ಪದ್ಧತಿಗೆ ಸವಾಲಾಗಿ ಪರಿಣಮಿಸುವುದರಲ್ಲಿ ಅನುಮಾನವಿಲ್ಲ. ನಮ್ಮ ನ್ಯಾಯಾಲಯಗಳಲ್ಲಿ ದಾಖಲಾಗಿರುವ ದಾವೆಗಳು, ವಕೀಲರ ಕಚೇರಿಗಳಲ್ಲಿ ಕೊಳೆಯುತ್ತಿರುವ ಆರೋಪ – ಪ್ರತ್ಯಾರೋಪಗಳ ರಾಶಿ ರಾಶಿ ದೋಷಸೂಚಿಗಳು ನಾವು ಸಾಗುತ್ತಿರುವ ಹಾದಿಗೆ ಹಿಡಿದ ಕೈಗನ್ನಡಿಯಂತಿದೆ. ಕೌಟುಂಬಿಕ ಸಮರಸತೆಯನ್ನು ವಿಶ್ವಕ್ಕೆ ಬೋಧಿಸಿದ ಭಾರತದಲ್ಲಿ ಅರ್ಧನಾರೀಶ್ವರ ಪರಿಕಲ್ಪನೆ ಅರ್ಥ ಕಳೆದುಕೊಳ್ಳುತ್ತಿರುವುದರ ಹಿಂದೆ ಅದಾವ ಕಾರಣವಿದೆಯೋ, ದೇವರೇ ಬಲ್ಲ.
ಸಿರಿತನ ಬಡತನದ ಬವಣೆಯಿಲ್ಲದೆ ಸಮಾಜೋಪಕಾರಿಯಾಗಿ ಬಾಳಿ ಇಂದಿಗೂ ನವಜೋಡಿಗಳಿಗೆ ಆಶೀರ್ವಾದ ನೀಡುವ ಆರುಂಧತಿ ವಸಿಷ್ಠರ ಸುಮಧುರ ದಾಂಪತ್ಯ ನಮ್ಮ ಸಂಸ್ಕೃತಿಯ ಹೆಮ್ಮೆ. ಎಲ್ಲಾ ಕ್ಲೇಶಗಳನ್ನೂ, ಸುಖಗಳನ್ನೂ ಜೊತೆಯಾಗಿ ಎದುರಿಸುತ್ತೇವೆ ಮತ್ತು ಅನುಭವಿಸುತ್ತೇವೆ ಎಂದು ಒಂದಾದ ನನಗೆ ನೀನಿರುವ ಸ್ಥಳವೇ ಅಯೋಧ್ಯೆ. ನಿನ್ನ ಜೊತೆ ವಾಸಿಸುವ ಪ್ರತಿಕ್ಷಣವೂ ಸುಂದರವೇ. ವೈಭವದ ಅರಮನೆಯಾದರೂ, ಕಾಡಿನ ಪರ್ಣಕುಟೀರವಾದರೂ ಸರಿ. ನಿನ್ನ ಸಾಮೀಪ್ಯವೇ ಸ್ವರ್ಗ' ಎಂದು ನುಡಿದ ಸೀತಾಮಾತೆಯ ಆದರ್ಶ ನಮ್ಮದು. ದ್ಯುಮತ್ಸೇನನ ಮಗನಾದ ಸತ್ಯವಾನನನ್ನು ವರಿಸಿ, ಆತ ಸಾವಿಗೀಡಾದಾಗ ಯಮನನ್ನೇ ಹಿಂಬಾಲಿಸಿ, ಆತನನ್ನು ಸೋಲಿಸಿ, ತನ್ನ ಪತಿವ್ರತಾ ಧರ್ಮದ ಬಲದಿಂದ ಗಂಡನಿಗೆ ಮರುಹುಟ್ಟಿತ್ತ ಪರಮಪಾವನಿ ಸಾವಿತ್ರಿ ಭರತಕುಲಕ್ಕೆ ಪ್ರೇರಣೆ. ಸಾಲು ಸಾಲು ಸವಾಲುಗಳನ್ನೆದುರಿಸಿ, ನೋವು ಅವಮಾನಗಳನ್ನೆಲ್ಲ ನುಂಗಿ, ಪಡಬಾರದ ಕಷ್ಟಗಳಿಗೆಲ್ಲ ಹೆಬ್ಬಂಡೆಯಂತೆ ನಿಂತು ಧೈರ್ಯತೋರಿ,ಭೂಮಿಯಲ್ಲೇ ಇಂತಹವರಿಲ್ಲ’ ಎಂಬ ಗೌರವಕ್ಕೆ ಪಾತ್ರರಾಗಿ ಜೀವನಸಮರ ಗೆದ್ದ ನಳದಮಯಂತಿಯರ ಪ್ರೇಮ ಹೊಸ ತಲೆಮಾರಿಗೆ ನಿತ್ಯಸ್ಫೂರ್ತಿಯಲ್ಲವೇ? ತಾರುಣ್ಯದ ಹದಿನೆಂಟು ವರ್ಷಗಳನ್ನು ತನ್ನ ಸೇವೆಗೆಂದೇ ಮೀಸಲಿಟ್ಟ ಪತ್ನಿ ಭಾಮತಿಯ ಹೆಸರನ್ನೇ ತಾನು ರಚಿಸಿದ ಬ್ರಹ್ಮಸೂತ್ರ ಭಾಷ್ಯಕ್ಕಿಟ್ಟ ವಾಚಸ್ಪತಿಯ ಪ್ರೀತಿ ನಮಗೆ ಅರ್ಥವಾಗುವುದೆಂದು?
ಹೌದು. ವೈಯಕ್ತಿಕ ಸ್ವಾತಂತ್ರ‍್ಯದ ಮಿತಿಯನ್ನರಿಯದೆ ಅತಿಯಾಗಿ ವರ್ತಿಸಿ ವೈವಾಹಿಕ ಸಂಬಂಧದ ಹಿಂದಿರುವ ಉದಾತ್ತ ಆಶಯಗಳನ್ನು ಮರೆತು ಮೂಢರಾಗಿರುವ ಬುದ್ಧಿವಂತ ವರ್ಗವನ್ನು ಸರಿದಾರಿಗೆ ತರುವ ಕಾರ್ಯವನ್ನು ಕುಟುಂಬದ ಹಿರಿಯರು ಮತ್ತು ಸಮಾಜ ಮಾಡಲೇಬೇಕಾದ ಅಗತ್ಯವಿದೆ. ಹಣ ಗಳಿಸಲು ಸುಲಭದಾರಿಯಾಗಿ ಬದಲಾಗುತ್ತಿರುವ ಡಿವಿ ಪ್ರಕರಣಗಳು ಎರಡೂ ಕುಟುಂಬಗಳ ಹಿರಿಯರ ಮಾನಸಿಕ ಆರೋಗ್ಯಕ್ಕೆ, ದೈಹಿಕ ಆಯುಷ್ಯಕ್ಕೆ ಸಂಚಕಾರ ತಂದೊಡ್ಡುತ್ತಿವೆ. ಅಭಿಪ್ರಾಯ ವ್ಯತ್ಯಾಸ ಮತ್ತು ಸಣ್ಣಪುಟ್ಟ ಮನಸ್ತಾಪವನ್ನೇ ನೆಪಮಾಡಿ ಗಂಡನನ್ನೂ, ಆತನ ಹೆತ್ತವರನ್ನೂ, ಉದರ ಸಂಬಂಧಿಗಳನ್ನೂ ನ್ಯಾಯಾಲಯಕ್ಕೆಳೆದು ಸಂಧಾನದ ನೆಪದಲ್ಲಿ ಕೋಟಿ ಬಾಚಿ ವಿಕೃತ ಆನಂದ ಅನುಭವಿಸಿ ಅದಕ್ಕೆ ಮಹಿಳಾ ಸಮಾನತೆಯ ಪಟ್ಟಿ ಹಚ್ಚುವ ವ್ಯವಸ್ಥೆ ಬದಲಾಗದಿದ್ದರೆ ಭವಿಷ್ಯ ಬರಡಾಗುವುದು ನಿಶ್ಚಿತ. ಸುಳ್ಳು ಆಪಾದನೆಗಳಿಂದ ನೊಂದು ಬೆಂದು ಕುಗ್ಗುವ ಹಿರಿಜೀವಗಳ ನೋವಿಗೆ ನ್ಯಾಯಾಲಯವೂ ಕಿವಿಯಾಗದಿದ್ದರೆ ಭಾವೀಬದುಕಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಡಿವಿ ಪ್ರಕರಣಗಳನ್ನು ಅತ್ಯಂತ ಸೂಕ್ಷ್ಮವೆಂದು ಪರಿಗಣಿಸಿ, ತಕ್ಷಣವೇ ತನಿಖೆಗೆ ಒಳಪಡಿಸಿ, ಶೀಘ್ರ ಪರಿಹಾರಕ್ಕೆ ನ್ಯಾಯಾಲಯಗಳು ಆದ್ಯತೆ ನೀಡದಿದ್ದರೆ ಅತುಲ್ ಸುಭಾಷ್ ಆತ್ಮಹತ್ಯೆಯು ಸುಳ್ಳು ಡಿವಿಯಿಂದ ನೊಂದವರಿಗೆ ಮಾದರಿಯಾಗಿ ಕೆಟ್ಟ ಪರಿಣಾಮ ಬೀರಬಹುದು. ವರ್ಷಾನುಗಟ್ಟಲೆ ಮುಂದೂಡುವ ಪದ್ಧತಿ ಕೈಬಿಟ್ಟು ಕೌಟುಂಬಿಕ ಸಮಸ್ಯೆಗಳ ಪರಿಹಾರಕ್ಕೆ ನಿಗದಿತ ಸಮಯ ಗೊತ್ತುಮಾಡಿ ನ್ಯಾಯ ಒದಗಿಸದಿದ್ದರೆ ದೇಸೀ ಸಂಸ್ಕೃತಿಯ ಬೇರು ದುರ್ಬಲವಾದೀತು. ಯೌವನದ ಉತ್ಕೃಷ್ಟ ಕಾಲವನ್ನು ನ್ಯಾಯಾಲಯದಲ್ಲಿ ಕಳೆಯುವ ಜೋಡಿಗಳಿಗೆ ತಿಳಿಹೇಳಿ, ನೂರು ಜನ್ಮಕೂ ಒಲವೊಂದೇ ನಿಮಗಾಸರೆಯೆಂಬ ಸತ್ಯವನ್ನು ಅರ್ಥೈಸುವ ಕಾರ್ಯವನ್ನು ಮಠಮಾನ್ಯಗಳು – ಜಾತಿ ಸಂಘಟನೆಗಳು ನಡೆಸದಿದ್ದರೆ ಮುಂದಿನ ದಿನಗಳು ಕೌಟುಂಬಿಕ ಅಧೋಗತಿಯ ಅಂತಿಮ ನಿಲ್ದಾಣವಾಗಬಹುದು.2

Exit mobile version