Home News ರಾಷ್ಟ್ರದ ಸ್ವಾಭಿಮಾನ ಕೆಡಿಸುವ ಮಾತು ಬಿಡಿ…

ರಾಷ್ಟ್ರದ ಸ್ವಾಭಿಮಾನ ಕೆಡಿಸುವ ಮಾತು ಬಿಡಿ…

ಬಾಯಿ ಮುಚ್ಚಿಕೊಂಡಿರಿ. ಅದೇ ತಮ್ಮಿಂದಾಗುವ ಮಹದುಪಕಾರ!
ಈ ಎಚ್ಚರಿಕೆಯ ಸಂದೇಶವನ್ನು ಪ್ರಸ್ತುತ ಪರಿಸ್ಥಿತಿಯಲ್ಲಿ ಹಲವರಿಗೆ ನೀಡಬೇಕಾದ ಅಗತ್ಯತೆ ಎದ್ದು ಕಾಣುತ್ತಿದೆ. ಇದು ಅನಿವಾರ್ಯವೂ ಏನೋ..!
ಪಹಲ್ಗಾಮ್ ಉಗ್ರರ ದಾಳಿ ಮತ್ತು ನರಮೇಧದ ನಂತರ ದೇಶದ ಹಲವರ ಮಾತು ಮತ್ತು ವರ್ತನೆ, ಅಣಕು, ಅಂಧಾಭಿಮಾನ, ಅಸತ್ಯಗಳೆಲ್ಲ ಜನಸಾಮಾನ್ಯರೇ ಅಸಹ್ಯ- ರೇಜಿಗೆ ಪಟ್ಟುಕೊಳ್ಳುವಷ್ಟರ ಮಟ್ಟಿಗೆ ಕಂಡು ಬರುತ್ತಿವೆ. ಬೇಕಿದ್ದವಾ ಇಂತಹ ಮಾತುಗಳು? ಏಕೆ ಈ ವಿವಾದ ಎಂದು ಜನರೇ ಪ್ರಶ್ನಿಸುತ್ತಿದ್ದಾರೆ.
ಕೆಲವು ನಾಯಕರು ತುಂಬ ಗಂಭೀರ, ಅಷ್ಟೇ ಪ್ರಬುದ್ಧ ಬದ್ಧತೆಯನ್ನು ಪ್ರದರ್ಶಿಸಿ ದೇಶದ ಸ್ಥಿತಿಗೆ ಧ್ವನಿಯಾಗಿದ್ದಾರೆ. ಪಹಲ್ಗಾಮ್ ದಾಳಿಯ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಇದು ಅತ್ಯಂತ ಕ್ರೂರ. ಭಯೋತ್ಪಾದಕರನ್ನು ಮುಲಾಜಿಲ್ಲದೇ ಸದೆಬಡಿಯಿರಿ. ದೇಶದ ಅಖಂಡತೆಗೆ ಕೇಂದ್ರ ಸರ್ಕಾರ ಕೈಗೊಳ್ಳುವ ಎಲ್ಲ ನಿರ್ಧಾರಗಳ ಬೆನ್ನಿಗೆ ನಾವಿದ್ದೇವೆ' ಎಂದು ಅತ್ಯಂತ ಪ್ರೌಢ ಹಾಗೂ ದಿಟ್ಟ ಮಾತನ್ನಾಡಿದರು. ಇದು ರಾಜಕಾರಣಿ ಹಾಗೂ ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷ ಆಡಬೇಕಾದ ಮಾತು. ನೀಡಬೇಕಾದ ಸಕಾರಾತ್ಮಕ ಸಂದೇಶ. ಭಯೋತ್ಪಾದಕರ ದಾಳಿ ಹಿಂದೆ ಭದ್ರತಾ ಲೋಪ, ಗುಪ್ತಚರ ವೈಫಲ್ಯ, ಆಡಳಿತದ ಅಸಡ್ಡೆ ಇವುಗಳು ಇದೆ. ಆದರೆ ಈಗಲೇ ವಿವಾದ ಮಾಡುವ ಸಂದರ್ಭ ಇದಲ್ಲವಲ್ಲ.. ಆದರೆ ಎಲ್ಲದರಲ್ಲೂ ರಾಜಕಾರಣ ನುಸುಳಿದರೆ, ಎಲ್ಲರೂ ಮಾತನಾಡಿದರೆ ಆಗುವ ಅಪಾಯ ಎಂಥದ್ದು ಎನ್ನುವುದು ಪಹಲ್ಗಾಮ್ ಘಟನೆಯ ನಂತರದ ಕೆಲವರ ಮಾತು-ನಡೆ ತೋರಿಸಿಕೊಟ್ಟಿದೆ. ದೇಶ ವಿರೋಧಿಗಳಿಗೆ, ವಿರೋಧಿ ದೇಶಗಳಿಗೆ ಈ ಸಂಘರ್ಷದ ಕಾಲದಲ್ಲಿ ಅಸ್ತ್ರವಾಗಬಾರದಲ್ಲ? ಪಹಲ್ಗಾಮ್ ಪ್ರವಾಸಿಗರ ಮೇಲೆ ನಡೆದ ದಾಳಿ ದೇಶ ವಿಭಜನೆಯ ವೇಳೆ ಬಗೆಹರಿಯದ ಹಲವು ಪ್ರಶ್ನೆಗಳ ಫಲಿತಾಂಶ ಇರಬಹುದು’ ಎಂದ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್, ಈ ಉಗ್ರತೆ ಮಾತುಕತೆಯಿಂದ ಬಗೆಹರಿಯಬೇಕೇ ಹೊರತು, ಯುದ್ಧದಿಂದಲ್ಲ. ನಾವು ನೆರೆಯ ದೇಶವಾಗಿದ್ದು ಅದನ್ನು ಬದಲಿಸಲಾಗದು ಎಂಬ ಹಿರಿಯ ನಾಯಕ ಸೈಫುದ್ದೀನ್ ಸೋಜ್ ಮಾತು ಅದೇ ಪಕ್ಷದ ನಾಯಕರ ನೀತಿ-ಬದ್ಧತೆಯ ವಿರೋಧಾಭಾಸ ಮತ್ತು ಪ್ರಸಕ್ತ ಸಂದರ್ಭದಲ್ಲಿ ಸಂಪೂರ್ಣ ಅನಗತ್ಯ ಎಂದೇ ದೇಶ ಭಾವಿಸುತ್ತದೆ ಎಂಬುದು ಸುಳ್ಳಲ್ಲ. ಯಾವುದೇ ದೇಶ ೧೦೦% (ಪರಿಪೂರ್ಣ) ಗುಪ್ತಚರ ವ್ಯವಸ್ಥೆಯನ್ನು ಹೊಂದಿಲ್ಲ. ಯಾವುದೇ ದೇಶವೂ ಇಂತಹ ದಾಳಿಯನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ. ಪಹಲ್ಗಾಮ್‌ನದ್ದು, ಹಮಾಸ್ ಸಂಘಟನೆ ನಡೆಸಿದ ಭಯೋತ್ಪಾದನೆ ದಾಳಿ ರೀತಿಯದ್ದು. ಸರ್ಕಾರ ಉತ್ತರದಾಯಿತ್ವವನ್ನು ತೋರಬೇಕು ಎಂದು ಬಿಜೆಪಿಗೆ ಅನುಕೂಲಕರವಾದ ಹೇಳಿಕೆ ನೀಡಿದ ಕಾಂಗ್ರೆಸ್‌ನ ಶಶಿ ತರೂರ್, ಪಕ್ಷದ ನಾಯಕರಿಗೆ ಅಪಥ್ಯ ಎನಿಸಿದರು. ತರೂರ್ ಒಲವು ಮೋದಿಯತ್ತ, ಬಿಜೆಪಿಯತ್ತ ಹೆಚ್ಚಿದೆ ಎಂಬ ಆರೋಪ ಕಳೆದ ವರ್ಷದಿಂದ ಈಚೆಗೆ ಇತ್ತು. ಆದರೆ ಕಾಂಗ್ರೆಸ್ ವಕ್ತಾರರೇಎಲ್ಲಿದ್ದಾರೆ ತರೂರ್? ಕಾಂಗ್ರಸ್‌ನಲ್ಲೋ, ಬಿಜೆಪಿಯಲ್ಲೋ’ ಎಂದು ಕೇಳುವ ಮಟ್ಟಿಗೆ ವಿವಾದ ಸೃಷ್ಟಿಯಾಯಿತು.
ಈ ಮಧ್ಯೆಯೇ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾವು ಯುದ್ಧದ ಪರವಾಗಿಲ್ಲ, ಯುದ್ಧ ಬೇಕಿಲ್ಲ; ಜನತೆಗೆ ಶಾಂತಿ-ಸೌಹಾರ್ದ ಬೇಕಾಗಿದೆ ಎಂದು ನೀಡಿದ ಹೇಳಿಕೆ ದೇಶದ ಗಡಿಯಾಚೆಗೆ, ವಿಶೇಷವಾಗಿ ಶತ್ರು ರಾಷ್ಟ್ರ ಪಾಕಿಸ್ತಾನದ ಮಾಧ್ಯಮಗಳಿಗೆ ಖುಷಿ ಕೊಟ್ಟಿದೆ. ಪಕ್ಷದ ಧೋರಣೆ-ನೀತಿ ಮೀರಿ ಸಿದ್ದರಾಮಯ್ಯ ಈ ಮಾತು ಆಡಬೇಕಾಗಿತ್ತಾ? ಪಕ್ಷದ ನಾಯಕರಿಗೆ ಸಿದ್ದರಾಮಯ್ಯ ಮೇಲೆ ಹಿಡಿತ ಇಲ್ಲ ಎಂಬ ಆಪಾದನೆ ಕೇಳಿ ಬಂತು.
ನಿನ್ನ ಧರ್ಮ ಯಾವುದು; ಕುರಾನ್ ಪಠಿಸು ಎಂದು ಕೇಳಿ ಬಿಸ್ಮಿಲ್ಲಾ ಘೋಷಣೆಯೊಂದಿಗೆ ನರಮೇಧಕ್ಕೆ ಉಗ್ರಗಾಮಿಗಳು ಇಳಿದದ್ದು ಜಗತ್ತಿಗೇ ಗೊತ್ತಾಗಿದ್ದರೂ ಕೂಡ, ಸಚಿವ ಆರ್.ಬಿ.ತಿಮ್ಮಾಪುರ, ಯಾರಾದರೂ ಧರ್ಮ ಕೇಳಿ ಗುಂಡು ಹೊಡೆಯುತ್ತಾರಾ? ಇದು ಏಕೋ ಸಂಶಯಾಸ್ಪದ' ಎಂದು ಶಂಕೆ ವ್ಯಕ್ತಪಡಿಸಿರುವುದು ಜನತೆಗೆ ಘಾಸಿ ಮಾಡಿದ ಸಂಗತಿ. ಸಿದ್ದರಾಮಯ್ಯ ಮತ್ತು ತಿಮ್ಮಾಪುರ ಆ ನಂತರ ವರಸೆ ಬದಲಿಸಿದರು. ಅನಿವಾರ್ಯವಾದರೆ ಮಾತ್ರ ಯುದ್ಧ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರೆ, ಧರ್ಮ ಕೇಳಿ ಹೊಡೆದಿಲ್ಲ ಎಂಬುದು ನನ್ನ ಮಾತಾಗಿರಲಿಲ್ಲ ಎಂದು ತಿಮ್ಮಾಪುರ ಸ್ಪಷ್ಟಪಡಿಸಿದರು. ಜನ ಎಲ್ಲವನ್ನೂ ಗಮನಿಸಿದರು! ತಾರೀಕ್ ಅಹಮದ್ ಖರ‍್ಲಾ, ಸೈಫುದ್ದೀನ್ ಸೋಜ್, ತಿಮ್ಮಾಪುರ ಹಾಗೆಯೇ ಹಲವು ಕಾಂಗ್ರೆಸ್ ನಾಯಕರ ಮಾತು, ಪಕ್ಷದ ಉನ್ನತ ಹಂತದ ನಾಯಕರಿಗೂ ಸಾಕಷ್ಟು ಮುಜುಗರ ಹುಟ್ಟಿಸಿತಲ್ಲ... ಇವರೆಲ್ಲ ಎತ್ತಿರುವ ಪ್ರಶ್ನೆಗಳು ತಪ್ಪು ಎನ್ನಲಾಗದು. ಆದರೆ ಕಾಲ ಇದಲ್ಲ. ಇದೇ ಕಾರಣಕ್ಕೆ ಹಲವು ವೈಫಲ್ಯಗಳಿದ್ದರೂ ಜನ ಮತ್ತೆ ಮತ್ತೆ ಕೇಂದ್ರ, ಪ್ರಧಾನಿ ಮೋದಿ ಬೆಂಬಲಿಸುತ್ತಿರುವುದು. ಹೇಗಿರಬೇಕು ಈ ಕಾಲದಲ್ಲಿ ಎನ್ನುವುದನ್ನು ನಿಜಕ್ಕೂ ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ತೋರಿಸಿದ್ದಾರೆ.ನನ್ನ ರಾಜ್ಯಕ್ಕೆ ಬಂದ ಪ್ರವಾಸಿಗರನ್ನು ರಕ್ಷಿಸಿಕೊಳ್ಳಲಾಗಲಿಲ್ಲ. ಮುಖ್ಯಮಂತ್ರಿಯಾಗಿ ರಕ್ಷಣೆ ಕೊಡಲು ವಿಫಲನಾಗಿದ್ದೇನೆ’ ಎಂದು ಅವರು ವಿಧಾನಸಭೆಯಲ್ಲಿ ಹೇಳಿರುವ ಮಾತು ಮತ್ತು ಈ ವೇಳೆ ಅವರ ಬಾಡಿ ಲ್ಯಾಂಗ್ವೇಜ್ (ವರ್ತನೆ) ಇಡೀ ದೇಶ ಮೆಚ್ಚುವಂತಿತ್ತು.
ಇದೇ ರೀತಿ ಎಐಎಂಐಎಂನ ಹೈದರಾಬಾದ್ ಸಂಸದ ಅಸಾವುದ್ದೀನ್ ಓವೈಸಿ ಮಾತುಗಳನ್ನೂ ದೇಶದ ಎಲ್ಲರೂ ಗಮನಿಸಬೇಕಿರುವ ಸಮಯವಿದು. ಉಳಿದ ಸಮಯದಲ್ಲಿ ಒಂದಲ್ಲ ಒಂದು ವಿವಾದಕ್ಕೆ ಸಿಲುಕುವ ಈ ಸಂಸದ, ರಾಷ್ಟ್ರದ ಈ ಬಿಕ್ಕಟ್ಟಿನ ಸಮಯದಲ್ಲಿ ಆಡಿರುವ ಮಾತುಗಳು ಪ್ರತಿಯೊಬ್ಬ ದೇಶಪ್ರೇಮಿಗೂ ಮಾದರಿ.
ಬಿಡ್ರಿ. ಆ ಭುಟ್ಟೋನ ಮೊಮ್ಮಗನ(ಅಲ್ಲಿನ ಈಗಿನ ರಕ್ಷಣಾ ಸಚಿವ) ಮಾತನ್ನು ಏನು ನನ್ನ ಮುಂದೆ ಹೇಳ್ತೀರಿ. ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಇನ್ನೆಂದೂ ತಲೆ ಎತ್ತದಂತೆ ಪ್ರಧಾನಿ ಮೋದಿ ಆ ದೇಶಕ್ಕೆ ಪಾಠ ಕಲಿಸಬೇಕೆಂಬುದಷ್ಟೇ ಪ್ರತಿ ಹಿಂದೂಸ್ತಾನಿಯ ಬಯಕೆ. ಸ್ವಾತಂತ್ರ್ಯ ಸಿಕ್ಕು 70 ವರ್ಷ ಗತಿಸಿದ್ದರೂ ಒಂದು ಮಲೇರಿಯಾ ಔಷಧಿ ತಯಾರಿಸುವ ಸಾಮರ್ಥ್ಯ ಇಲ್ಲದ ಪಾಕ್, ಮುಳುಗಿ ಹೋಗಲಿ. ನಮಗೇನು? ಹಿಂದೂಸ್ತಾನದ ಸಮಸ್ತರೂ ಬಯಸುವುದು ಆ ದೇಶ ಮುಳುಗಿ ಸರ್ವನಾಶ ಆಗಿ ಹೋಗಲಿ ಎಂಬುದಾಗಿಯೇ. ನಾವು ಪಹಲ್ಗಾಮ್ ಹುತಾತ್ಮರಿಗೆ ನ್ಯಾಯ ನೀಡದೇ ಬಿಡಲ್ಲ. ಏ ಪಾಕಿಗಳೇ, ನಿಮ್ಮ ಒಡಲಿನ ಬಲೂಚಿಸ್ತಾನ ಸಮಸ್ಯೆ, ಬಡತನ ಮತ್ತಿತರ ಸಮಸ್ಯೆಗಳನ್ನು ನೋಡಿಕೊಳ್ಳಿ. ಹಿಂದೂಸ್ತಾನದ ತಂಟೆಗೆ ಇನ್ನೆಂದೂ ಬರದಂತೆ ಮಾಡಲಿದ್ದೇವೆ ಎಚ್ಚರ ವಹಿಸಿ' ಎಂದಿರುವ ಓವೈಸಿ ಈಗ ದೇಶದ ಎಲ್ಲರಿಗೆ ಅನುಕರಣೀಯನಾಗಿಬಿಟ್ಟ. ಲಿಬರಲ್ ಹೆಸರಿನಲ್ಲಿ ಪ್ರಜಾಪ್ರಭುತ್ವದ ದುರುಪಯೋಗ ಮತ್ತು ರಾಷ್ಟ್ರೀಯತೆಯ ನಾಶ ಆಗದಿರಲಿ ಎಂಬುದಕ್ಕೆ ಓವೈಸಿ ಕೆಲವಾರು ದಿನಗಳಿಂದ ನೀಡುತ್ತಿರುವ ಹೇಳಿಕೆಗಳು ಮೆಚ್ಚತಕ್ಕವಾಗಿವೆ. ಸರ್ವಪಕ್ಷದ ಸಭೆಯಲ್ಲಿ, ಆನಂತರವೂ ಪ್ರತಿಪಕ್ಷದ ನಾಯಕರಾದ ಖರ್ಗೆ, ರಾಹುಲ ಅವರ ನಡೆ ನುಡಿ ರಾಷ್ಟ್ರ ಮೊದಲು ಆನಂತರ... ಎನ್ನುವುದಾಗಿದೆ.. ಹಾಗೇ, ಸರ್ವಪಕ್ಷದ ಸಭೆಗೆ ಬಾರದೆ ಬಿಹಾರಕ್ಕೆ ಪ್ರಧಾನಿ ಹೋಗಿರುವುದನ್ನು ಅಷ್ಟೇ ತೀವ್ರವಾಗಿ ಖಂಡಿಸಿದರು... ಸಂಸತ್ ಅಧಿವೇಶನ ಕರೆಯುವಂತೆ ಆಗ್ರಹಿಸಿದರು. ಇದು ಅವರಾಡಬೇಕಾದ್ದೇ.. ಪ್ರಶ್ನೆ ಎದ್ದಿರುವುದು ಬಾಯಿ ಹರಕುತನದ್ದು. ರಾಷ್ಟ್ರದ ಪ್ರಶ್ನೆ ಬಂದಾಗ ನಾಯಕತ್ವ ಹೇಗಿರಬೇಕು? ನಾಯಕನಾದವನು ಹೇಗಿರಬೇಕು ಎನ್ನುವುದನ್ನು ಸ್ಪಷ್ಟಪಡಿಸುವ ಕಾಲವಿದು. ಹಾಗೆಯೇ ಬಿಹಾರ ಚುನಾವಣೆಗೆ ಪಹಲ್ಗಾಮ್ ನರಮೇಧವನ್ನು ಬಿಜೆಪಿ ಅಥವಾ ಬೇರೆ ಪಕ್ಷ ಬಳಸಿಕೊಳ್ಳುವುದೂ ತಪ್ಪು. ಇಷ್ಟಕ್ಕೂ ಯಾರು ಮಾತನಾಡಬೇಕು? ಅವರಾಡಿದರೆ ಗಾಂಭರ‍್ಯ-ಘನತೆ. ಸೇನಾ ಮುಖ್ಯಸ್ಥರು, ನಿವೃತ್ತ ಸೇನಾಧಿಕಾರಿಗಳು, ತಂತ್ರಜ್ಞರು, ನೌಕಾದಳ, ವಾಯುದಳ ಪರಿಣಿತರು, ಈ ದೇಶದ ಸಾರ್ವಭೌಮ ಸೇನಾ ಬಲ ಗೊತ್ತಿದ್ದವರು, ರಾಜ ತಾಂತ್ರಿಕರು ಹಾಗೂ ಇಂತಹ ವಿಷಯಗಳ ಪರಿಣಿತರು ಮಾತನಾಡಬೇಕು. ಉತ್ತರ ಕೊಡಬೇಕು. ದುರಂತ ಎಂದರೆ ನಮ್ಮ ಮಾಧ್ಯಮಗಳು ಕೂಡ ಪಂಚಾಯಿತಿ ನಾಯಕರಿಂದ ಹಿಡಿದು ಮಂತ್ರಿ ಮಹೋದಯರವರೆಗೆ ಎಲ್ಲರೆದುರು ಮೈಕ್ ಹಿಡಿಯುತ್ತವೆ.ಪಾಕಿಸ್ತಾನದ ಮೇಲೆ ಯುದ್ಧ ಸಾರಿ’ ಎಂದು ಸ್ಥಳೀಯ ಪಂಚಾಯ್ತಿ ಮೇಂಬರ್ ಕೂಡ ಅಣತಿ ಮಾಡುವವನೇ!. ಪಾಕಿಸ್ತಾನಕ್ಕೆ ಎಲ್ಲಿದೆ ಬಲ; ಹೊಸಕಿ ಹಾಕಿ ಬಿಟ್ಟೇವು ಎಂದು ಬಾಯಿ ಬಲ ಪ್ರದರ್ಶಿಸುವರೇ ಹೆಚ್ಚು.
ಬಿಜೆಪಿಯವರು, ಮೋದಿ ತಕ್ಕ ಪಾಠ ಕಲಿಸುತ್ತಾರೆ; ಪಾಕಿಸ್ತಾನವನ್ನು ಸದೆ ಬಡೆದುಬಿಡುವ ಶಕ್ತಿವಂತ ಎನ್ನುತ್ತಾರೆ. ಕಾಂಗ್ರೆಸ್‌ನ ಪಂಚಾಯ್ತಿ ಮೇಂಬರ್ ಕೂಡ, ಭದ್ರತಾ ವೈಫಲ್ಯ ಎನ್ನುತ್ತಾನೆ. ದುರಂತ ಎಂದರೆ ಮಾಧ್ಯಮ ಗಾಂಭರ‍್ಯತೆ ಕಳೆದುಕೊಂಡು ಅಜ್ಞಾನ ಪ್ರದರ್ಶಿಸುತ್ತ ಇವರಿಗೆಲ್ಲ ಬಾಯಿಯಾಗುತ್ತಿದೆ.
ಯಾರನ್ನು, ಯಾವಾಗ, ಎಷ್ಟು ಮಾತನಾಡಿಸಬೇಕು ಎನ್ನುವ ಕಲ್ಪನೆ ಇಲ್ಲದಿರುವುದು ಅಪಾಯಕಾರಿ. ಇಪ್ಪತ್ನಾಲ್ಕು ಗಂಟೆಗಳ ಕಾಲವೂ ಟಿಆರ್‌ಪಿ ಕನವರಿಕೆಯಲ್ಲಿ ಸಿಕ್ಕಸಿಕ್ಕವರನ್ನೆಲ್ಲ ಅಭಿಪ್ರಾಯ ಕೇಳಿದರೆ, ಮರ್ಯಾದೆಗೆ ಕುತ್ತು ಬರುವುದು ಮಾಧ್ಯಮದ್ದು ಮತ್ತು ಹೇಳಿದವರದ್ದು. ಸ್ವಯಂ ನಿಯಂತ್ರಣ ಇಲ್ಲದಿರುವುದೇ ಇದಕ್ಕೆಲ್ಲ ಕಾರಣ. ಮಾತು ಮನೆ ಕೆಡಿಸಿದ್ದಷ್ಟೇ ಅಲ್ಲ. ರಾಷ್ಟ್ರದಲ್ಲಿ ಶಾಂತಿ, ಪ್ರಸಕ್ತ ಸನ್ನಿವೇಶದ ಗಾಂಭರ‍್ಯ ಮತ್ತು ಸುಮ್ಮನಿರಬೇಕಾದ ರಾಷ್ಟ್ರಧರ್ಮ ಇವುಗಳನ್ನೆಲ್ಲ ಕೆಡಿಸಿದೆ ಈಗ. ಎಚ್ಚರದಿಂದ ಇರಬೇಕಾದ ಕಾಲಘಟ್ಟವಿದು. ಅಲ್ಲವೇ?

Exit mobile version