ಉಗ್ರರ ಮುಖಂಡ ರಾಣಾನನ್ನು ಕೊನೆಗೂ ಹೆಡಮುರಿ ಕಟ್ಟಿ ಕರೆದುತಂದಂತೆ ೧೩೫೦೦ ಕೋಟಿ ರೂ. ನುಂಗಿ ಪರಾರಿಯಾಗಿ ಈಗ ಬೆಲ್ಜಿಯಂ ಜೈಲಿನಲ್ಲಿರುವ ಮೆಹುಲ್ ಚೋಕ್ಸಿಯನ್ನೂ ಕರೆದು ತರಬೇಕು. ಅದಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಿಬಿಐ-ಇಡಿ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಇದರಲ್ಲಿ ಸಫಲವಾದರೆ ಈ ರೀತಿ ಕೋಟ್ಯಂತರ ರೂ. ವಂಚನೆ ಮಾಡಿ ವಿದೇಶಗಳಿಗೆ ಓಡಿ ಹೋಗುವವರಿಗೆ ಹೆದರಿಕೆ ಹುಟ್ಟುತ್ತದೆ. ಚೋಕ್ಸಿ ಮನೆಯವರೆಲ್ಲ ವಜ್ರದ ವ್ಯಾಪಾರಿಗಳು. ಜೋಕ್ಸಿ ಮತ್ತು ನೀರವ್ ಮೋದಿ ಇಬ್ಬರೂ ಸೋದರ ಮಾವ-ಅಳಿಯ. ವಂಚನೆಯಲ್ಲೂ ಪಾಲುದಾರರು. ಈಗ ಇಬ್ಬರೂ ವಿದೇಶದಲ್ಲಿದ್ದಾರೆ. ಇಬ್ಬರ ಮೇಲೂ ಇಂಟರ್‌ಪೋಲ್ ನೋಟಿಸ್ ಹೊರಡಿಸಿದೆ. ಇಬ್ಬರೂ ಸೇರಿ ಮುಂಬೈನ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ನಾಮ ಹಾಕಿದವರು. ಇವರ ಹಗರಣವನ್ನು ಬೆಳಕಿಗೆ ತಂದವರು ಬೆಂಗಳೂರಿನ ಹರಿಪ್ರಸಾದ್. ಅವರು ಪ್ರಧಾನಿಗೆ ಬರೆದ ಪತ್ರ ಈ ಹಗರಣ ಹೊರಬರಲು ಕಾರಣವಾಯಿತು. ಇದರಲ್ಲಿ ಬ್ಯಾಂಕ್ ಅಧಿಕಾರಿಗಳೂ ಶಾಮೀಲು ಎಂಬುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ. ೨೦೧೮ರಲ್ಲೇ ಇದು ಬಹಿರಂಗೊಂಡಿತು. ಜನವರಿ ೨೯, ೨೦೧೮ರಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಿಬಿಐಗೆ ಒಪ್ಪಿಸಿ ಎಫ್‌ಐಆರ್ ದಾಖಲಿಸಿತು. ಚೋಕ್ಸಿ ಗೀತಾಂಜಲಿ ಗ್ರೂಪ್ ಮಾಲೀಕ. ದೇಶಾದ್ಯಂತ ೪ ಸಾವಿರ ಶಾಖೆಗಳನ್ನು ಈ ಕಂಪನಿ ಹೊಂದಿದೆ. ಈಗ ಈತ ಬೆಲ್ಜಿಯಂನಲ್ಲಿ ರಕ್ತದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾನೆ. ಸಣ್ಣ ದೇಶಗಳಲ್ಲಿ ಹಣ ಕೊಟ್ಟರೆ ಪೌರತ್ವ ಕೊಡುತ್ತಾರೆ. ಈ ಲೂಟಿಕೋರರು ಅಲ್ಲಿಯ ಪ್ರಜೆಗಳಾಗಿ ರಕ್ಷಣೆ ಪಡೆಯುತ್ತಾರೆ. ಬೆಲ್ಜಿಯಂ ಜತೆ ನಮ್ಮ ಸರ್ಕಾರ ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡಿರುವುದರಿಂದ ನಮ್ಮ ದೇಶದ ಕಳ್ಳರು ಅಲ್ಲಿಗೆ ಹೋದರೆ ಹಿಂದಕ್ಕೆ ಕರೆಸಿಕೊಳ್ಳುವುದು ಕಷ್ಟವಿಲ್ಲ. ಚೋಕ್ಸಿ ಬಳಿ ರಾಶಿಗಟ್ಟಲೆ ಹಣ ಇರುವುದರಿಂದ ವಕೀಲರಿಗೆ ಹಣ ಸುರಿದು ಭಾರತಕ್ಕೆ ಗಡಿಪಾರಾಗುವುದನ್ನು ತಪ್ಪಿಸಿಕೊಳ್ಳುತ್ತಾನೆ ಎಂಬುದೇ ಈಗ ಕೇಳಿ ಬರುತ್ತಿರುವ ಮಾತು. ಆದರೆ ಕೇಂದ್ರ ಸರ್ಕಾರ ಬೆಂಬಿಡದ ಬೇತಾಳದಂತೆ ಬೆನ್ನತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈತ ಆರ್ಥಿಕ ಅಪರಾಧಿ ಎಂದು ಘೋಷಿಸಲಾಗಿದೆ. ಈತನ ಸೋದರನ ಮೇಲೂ ಬೆಲ್ಜಿಯಂ ಮತ್ತು ಯುಕೆನಲ್ಲಿ ಕ್ರಿಮಿನಲ್ ಮೊಕದ್ದಮೆಗಳಿವೆ. ಈಗ ಕ್ಯಾನ್ಸರ್ ರೋಗಿ ಎಂದು ಹೇಳಿ ಪಾರಾಗಲು ಯತ್ನಿಸುತ್ತಿದ್ದಾನೆ. ಆದರೆ ಈಗಿನ ಕಾಯ್ದೆಗಳಲ್ಲಿ ತಪ್ಪಿಸಿಕೊಳ್ಳುವುದು ಕಷ್ಟ.
ಈ ರೀತಿ ಹಗರಣಗಳು ನಡೆದ ಮೇಲೆ ರಿಸರ್ವ್ ಬ್ಯಾಂಕ್ ಎಲ್ಲ ನಿಯಮಗಳನ್ನು ಬದಲಿಸಿ ಬಿಗಿಗೊಳಿಸಿದೆ. ಈಗ ಆರ್ಥಿಕ ಅಪರಾಧಗಳು ನಡೆದಲ್ಲಿ ಕೂಡಲೇ ಬಂಧಿಸುವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವಿದೇಶಗಳಲ್ಲಿ ಇಂಥ ಕ್ರಿಮಿನಲ್‌ಗಳು ಆಶ್ರಯ ಪಡೆಯಲು ಉತ್ತಮ ಅವಕಾಶಗಳಿವೆ. ಅಲ್ಲಿಯ ವಕೀಲರು ಇಂಥ ವ್ಯಕ್ತಿಗಳಿಂದ ಹೆಚ್ಚು ಹಣ ವಸೂಲು ಮಾಡಿ ಅಲ್ಲೇ ನೆಲೆಸಲು ಬೇಕಾದ ವ್ಯವಸ್ಥೆ ಮಾಡಿಕೊಡುತ್ತಾರೆ. ಹಿಂದೆ ಸ್ವಿಸ್ ಬ್ಯಾಂಕ್‌ನಲ್ಲಿ ಹಣ ಇಟ್ಟವರ ಹೆಸರನ್ನು ಗೋಪ್ಯವಾಗಿಡಲಾಗುತ್ತಿತ್ತು. ಈಗ ದ್ವಿಪಕ್ಷೀಯ ಒಪ್ಪಂದಗಳಾದ ಮೇಲೆ ಸ್ವಿಸ್ ಬ್ಯಾಂಕ್‌ನಲ್ಲಿ ಕಪ್ಪು ಹಣ ಇಡುವವರ ಸಂಖ್ಯೆ ಕಡಿಮೆಯಾಗಿದೆ. ವಿದೇಶಾಂಗ ಇಲಾಖೆ ಮತ್ತು ರಿಸರ್ವ್ ಬ್ಯಾಂಕ್ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಲ್ಲಿ ಇವುಗಳನ್ನು ತಡೆಗಟ್ಟಬಹುದು. ಏಕೆಂದರೆ ಅವರ ಗಮನಕ್ಕೆ ಈ ಹಗರಣಗಳು ಕೂಡಲೇ ಬಂದುಬಿಡುತ್ತದೆ. ಅಲ್ಲಿಯ ಅಧಿಕಾರಿಗಳು ಕ್ಷಿಪ್ರವಾಗಿ ಕ್ರಮಕೈಗೊಂಡಲ್ಲಿ ಅದು ದೊಡ್ಡ ಹಗರಣವಾಗುವುದು ತಪ್ಪುತ್ತದೆ. ಈ ವಿಷಯದಲ್ಲಿ ರಾಜಕಾರಣಿಗಳು ಯಾರಿಗೂ ಬೆಂಬಲ ನೀಡಬಾರದು. ಸಣ್ಣ ಸಣ್ಣ ದೇಶಗಳೂ ಇಂಥ ವ್ಯಕ್ತಿಗಳಿಗೆ ಪೌರತ್ವ ನೀಡುವ ಪದ್ಧತಿಯನ್ನು ಕೈಬಿಡಬೇಕು. ಆಗ ವಂಚನೆ ಮಾಡುವ ದ್ರೋಹಿಗಳು ಸುಲಭವಾಗಿ ಸಿಕ್ಕಿಬೀಳುತ್ತಾರೆ. ಕಾನೂನಿಗಿಂತ ಜನರ ಸರಪಳಿ ಬಿಗಿಯಾಗಿರಬೇಕು. ಆಗ ಸರ್ಕಾರವೂ ಬಗ್ಗುತ್ತದೆ. ಬೆಂಗಳೂರಿನ ವ್ಯಕ್ತಿಯೊಬ್ಬರು ಕೈಗೊಂಡ ಕ್ರಮ ಇಡೀ ದೇಶದ ಹಣಕಾಸಿನ ಮೇಲೆ ಬೀಳುತ್ತಿದ್ದ ಕೊಡಲಿ ಪೆಟ್ಟನ್ನು ತಪ್ಪಿಸಿದೆ ಎಂದರೆ ಪ್ರಜಾಪ್ರಭುತ್ವದಲ್ಲಿ ಜನಸಾಮಾನ್ಯರ ಪಾತ್ರ ಹಿರಿದಾಗಿದೆ ಎಂಬುದು ಸ್ಪಷ್ಟ. ಅದೇರೀತಿ ಪ್ರಧಾನಿ ಕಾರ್ಯಾಲಯ ಒಬ್ಬ ವ್ಯಕ್ತಿ ಬರೆದ ಪತ್ರಕ್ಕೆ ಮಹತ್ವ ನೀಡಿದ್ದೂ ಮುಖ್ಯ. ಇಂಥ ಹಗರಣಗಳಲ್ಲಿ ಎಚ್ಚರಿಕೆ ಗಂಟೆ ದೊಡ್ಡದಾಗಿ ಕೇಳಿಸುವುದಿಲ್ಲ. ಒಂದು ಸಣ್ಣ ಎಚ್ಚರಿಕೆಯ ಗಂಟೆಗೂ ಸ್ಪಂದಿಸುವ ಮನಸ್ಸು ಇರಬೇಕು. ಚೋಕ್ಸಿ ಈಗ ಇರುವ ದೇಶ ಪತ್ತೆಯಾಗಿದೆ. ಭಾರತೀಯ ವಿದೇಶಾಂಗ ಸಚಿವಾಲಯ ಮತು ಸಿಬಿಐ ತಮ್ಮ ಪ್ರಭಾವ ಬಳಸಿ ಆತನನ್ನು ಭಾರತಕ್ಕೆ ಹಿಡಿದು ತರುವ ಕೆಲಸ ಮಾಡದೇ ಬಿಡುವುದಿಲ್ಲ. ಇದೂವರೆಗೆ ಕೇಂದ್ರದ ಮೇಲಿದ್ದ ಆರೋಪಗಳೆಲ್ಲ ಮಂಜಿನಲ್ಲಿ ಕರಗಿ ಹೋಗುವುದರಲ್ಲಿ ಸಂದೇಹವಿಲ್ಲ. ನಮ್ಮ ನೆಲದ ಕಾನೂನಿನಂತೆ ಆತನಿಗೆ ಶಿಕ್ಷೆ ವಿಧಿಸಬೇಕು. ಆ ಕಾಲ ದೂರವಿಲ್ಲ ಎಂಬ ಆಶಾಭಾವನೆ ಈಗ ಮೂಡಿದೆ. ಉಪ್ಪು ತಿಂದವನು ನೀರು ಕುಡಿಯಲೇಬೇಕು. ಅದೇರೀತಿ ಚೋಕ್ಸಿ ಭಾರತದ ಕಾನೂನಿಗೆ ಕುಣಿಕೆಗೆ ಕೊರಳೊಡ್ಡುವ ಕಾಲ ದೂರವೇನೂ ಇಲ್ಲ. ಜಾಗತಿಕ ಮಟ್ಟದಲ್ಲಿ ಈಗ ಭಾರತದ ಘನತೆ ಗೌರವ ಅಧಿಕಗೊಂಡಿರುವುದರಿಂದ ಯಾವ ದೇಶವೂ ಭಾರತದ ಆಶಯಗಳಿಗೆ ವಿರುದ್ಧವಾಗಿ ಹೋಗಲು ಬಯಸುವುದಿಲ್ಲ.