ಹುಬ್ಬಳ್ಳಿ: ಪ್ರಸಕ್ತ ಸಾಲಿನ ೨.೫೨ ಲಕ್ಷ ಕೋಟಿ ರೈಲ್ವೆ ಬಜೆಟ್‌ನಲ್ಲಿ ಕರ್ನಾಟಕಕ್ಕೆ ದೊರಕಿರುವ ನಿಗದಿಯಾಗಿರುವ ೭೫೬೪ ಕೋಟಿ ಈ ಹತ್ತು ವರ್ಷಗಳ ಅತ್ಯಧಿಕ ಮೊತ್ತವಾಗಿದೆ. ಕಳೆದ ದಶಕದಲ್ಲಿ ರಾಜ್ಯಕ್ಕೆ ಕೊಡಲಾಗಿದ್ದ ಮೊತ್ತಕ್ಕಿಂತ ೯ ಪಟ್ಟು ಹೆಚ್ಚಿನ ಹಣ ಕರ್ನಾಟಕಕ್ಕೆ ದೊರಕಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.
ಕಳೆದ ಒಂದು ವರ್ಷದಲ್ಲಿ ರಾಜ್ಯದ ೧೬೫೨ ಕಿಮೀ ಹೊಸ ಮಾರ್ಗಗಳ ನಿರ್ಮಾಣ ಪೂರ್ಣಗೊಂಡಿದೆ. ಶೇಕಡಾ ೯೫ರಷ್ಟು (ವಾರ್ಷಿಕ ೩೦೦ ಕಿಮೀ ಸರಾಸರಿಯಂತೆ) ವಿದ್ಯುದೀಕರಣ ಮುಗಿದಿದ್ದು, ಇದು ಯುಪಿಎ ಸರ್ಕಾರಕ್ಕೆ ಹೋಲಿಸಿದರೆ ೧೬ ಪಟ್ಟು ಹೆಚ್ಚು ಎಂದು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ರಾಜ್ಯದಲ್ಲಿ ಪ್ರಸ್ತುತ ೬೧ ರೈಲ್ವೆ ನಿಲ್ದಾಣಗಳನ್ನು `ಅಮೃತ್ ಭಾರತ್’ ಹೈಟೆಕ್ ನಿಲ್ದಾಣಗಳಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ಈ ವರ್ಷ ದೊರಕಿರುವ ಮೊತ್ತವೂ ಸೇರಿದಂತೆ ಒಟ್ಟು ೫೧,೪೭೯ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕರ್ನಾಟಕ ರೈಲ್ವೆಯ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ.
೩೨ ಸಾವಿರ ಕೋಟಿ ವೆಚ್ಚದಲ್ಲಿ ಹೊಸ ಮಾರ್ಗಗಳು ನಿರ್ಮಾಣವಾಗಲಿವೆ. ೨೦೦೯-೧೪ರ ನಡುವೆ ಇದಕ್ಕಾಗಿ ಕೇವಲ ೩,೦೮೮ ಕೋಟಿ ರೂಪಾಯಿ ತೆಗೆದಿಡಲಾಗಿತ್ತು. ಡಬ್ಲಿಂಗ್‌ಗೆ ೩೨ ಸಾವಿರ ಕೋಟಿ ಮೀಸಲಿಡಲಾಗಿದೆ. ಯುಪಿಎ ಅವಧಿಯಲ್ಲಿ ಕೇವಲ ೨,೪೬೧ ಕೋಟಿ ನೀಡಲಾಗಿತ್ತು ಎಂದು ಮನಮೋಹನ್ ಸಿಂಗ್ ಸರ್ಕಾರವನ್ನು ಟೀಕಿಸಿದರು.