Home News ರಾಜಕಾರಣದಲ್ಲಿ ಕೊನೆಗೂ ರೈತರೇ ಹೈರಾಣ

ರಾಜಕಾರಣದಲ್ಲಿ ಕೊನೆಗೂ ರೈತರೇ ಹೈರಾಣ

ರಾಜ್ಯದ ಬೆಳೆಗಾರರ, ರೈತರ ಭದ್ರತೆ ಮತ್ತು ಸಂರಕ್ಷಣೆ ದೃಷ್ಟಿಯಿಂದ ಮೊದಲಿನ ಕೃಷಿ ಮಾರುಕಟ್ಟೆ ನಿಯಂತ್ರಣ ಕಾಯ್ದೆ ಜಾರಿಯಾಗಲೇಬೇಕಾದ ಅವಶ್ಯಕತೆ ಇದೆ. ವಿಧಾನ ಪರಿಷತ್ತಿನಲ್ಲಿ ಸೋಲುಂಡಿರುವ ಕಾರಣ ಬಹುಶಃ ಇನ್ನಾರು ತಿಂಗಳು ಈ ತಿದ್ದುಪಡಿ ಬಿಲ್ ಪಾಸಾಗದು. ಇನ್ನೇನು ಮುಂಗಾರು ಬೆಳೆ ಫಸಲು ಬರುವ ಕಾಲ ಸನ್ನಿಹಿತವಾದರೂ ಈ ವರ್ಷವೂ ಮಾರುಕಟ್ಟೆಯಲ್ಲಿ ಹಾಲಾಹಲ ಸೃಷ್ಟಿಯಾಗುವುದಂತೂ ತಪ್ಪಿದ್ದಲ್ಲ.

ಟೊಮೇಟೊ ಕೆಜಿಗೆ ಇನ್ನೂರು ರೂಪಾಯಿ!. ದೇಶಾದ್ಯಂತ ಗ್ರಾಹಕರ ಗುಲ್ಲೋ ಗುಲ್ಲು. ಹಾಹಾಕಾರ. ಕೊಬ್ಬರಿಗೆ ಬೆಲೆ ಇಲ್ಲ. ಕ್ವಿಂಟಾಲ್‌ಗೆ ಕನಿಷ್ಠ ಹದಿನೈದು ಸಾವಿರ ರೂಪಾಯಿ ಬೆಂಬಲ ಬೆಲೆ ನೀಡಿ. ಇದು ತೆಂಗು ಬೆಳೆಗಾರರ ಒಕ್ಕೊರಲ ಆಗ್ರಹ.
ತರಕಾರಿ ಬೆಲೆ ಗಗನಕ್ಕೆ. ಅನಾವೃಷ್ಟಿ- ಅತಿವೃಷ್ಟಿ ಕಾರಣ ತರಕಾರಿ ನಾಶ. ದ್ರಾಕ್ಷಿ, ಗೋಡಂಬಿ. ಅಡಕೆ, ಭತ್ತ ಖರೀದಿ ಮಾಡಿದ ಅನ್ಯ ರಾಜ್ಯದ ವ್ಯಾಪಾರಸ್ಥರು ರೈತರಿಗೆ ಹಣ ಪಾವತಿಸದೇ ಕೋಟ್ಯಂತರ ರೂಪಾಯಿ ಪಂಗನಾಮ. ಪೊಲೀಸ್ ಠಾಣೆ ಮೆಟ್ಟಿಲು ಏರಿದ ಬೆಳೆಗಾರ ದಾಖಲೆ ಇಲ್ಲದೇ ಪರದಾಟ…
ಕಳೆದ ತಿಂಗಳಿನುದ್ದಕ್ಕೂ ನಡೆದ ಇಂತಹ ವಿದ್ಯಮಾನಗಳು ಕೇವಲ ಕರ್ನಾಟಕದಲ್ಲಷ್ಟೇ ಅಲ್ಲ. ದೇಶಾದ್ಯಂತ ವ್ಯಾಪಕವಾಗಿ ಕೇಳಿ ಬಂದ ದೂರು- ದುಮ್ಮಾನಗಳು.
ಈ ಮಧ್ಯೆ ಇವೆಲ್ಲಕ್ಕೂ ಮೂಲ ಕಾರಣವಾದ ಕೃಷಿ ಮಾರುಕಟ್ಟೆ ನಿಯಂತ್ರಣ ಕಾಯ್ದೆಯಲ್ಲಾಗಿರುವ ಬದಲಾವಣೆ ಮತ್ತು ಅದು ಈ ಮೊದಲಿನಂತೆ ಪರಿವರ್ತಿಸುವ ತಿದ್ದುಪಡಿಗೆ ಕರ್ನಾಟಕ ವಿಧಾನ ಮಂಡಲದಲ್ಲಿ ನಡೆದ ರಾಜಕೀಯ. ಕಳೆದ ಮೂರು ವರ್ಷಗಳಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಡೆದ ತಲ್ಲಣ ಈ ವರ್ಷವೂ ಮುಂದುವರಿಯುವುದು ನಿಶ್ಚಿತ. ಏಕೆಂದರೆ ಹೊಸ ಸರ್ಕಾರ ರೈತರ ಆಶಯಕ್ಕೆ ಬದ್ಧವಾಗಿ ಪ್ರಸ್ತಾವನೆ ಮಂಡಿಸಲಾದ ಎಪಿಎಂಸಿ ಕಾಯ್ದೆ ತಿದ್ದುಪಡಿಗೆ (೨೦೨೩) ವಿಧಾನಸಭೆಯಲ್ಲಿ ಅಂಗೀಕಾರ ದೊರೆತರೂ ವಿಧಾನ ಪರಿಷತ್ತಿನಲ್ಲಿ ಬಹುಮತ ಇಲ್ಲದ ಕಾರಣ ಸೋಲನ್ನನುಭವಿಸಿದೆ. ಮತ್ತೆ ಸದನ ಸಮಿತಿ ಎದುರು ಚರ್ಚೆಯಾಗಬೇಕಂತೆ!
ದೇಶದ ಕೃಷಿ ಕಾಯ್ದೆಗಳಿಗೆ ಮೂರು ತಿದ್ದುಪಡಿ ತಂದ ಕೇಂದ್ರ ಸರ್ಕಾರ ಈ ಸಂಬಂಧ ೨೦೨೦ರ ಸೆಪ್ಟೆಂಬರ್ ೨೭ರಂದು ಅಧಿಸೂಚನೆ ಹೊರಡಿಸಿತ್ತು. ರೈತ ತನ್ನ ಉತ್ಪನ್ನಗಳನ್ನು ಎಲ್ಲಿಯೂ ಮಾರಬಹುದು; ಎಷ್ಟಕ್ಕೂ ಮಾರಬಹುದು ಎಂದು ಮುಕ್ತ ಸ್ವಾತಂತ್ರ್ಯವನ್ನು ನೀಡಲು ಹೊರಟಿತ್ತು. ಇದರ ದುಷ್ಪರಿಣಾಮ ಅರಿತ ರೈತ ಸಮುದಾಯ ಮತ್ತು ಸಂಘಟನೆಗಳು ಬೃಹತ್ ಆಂದೋಲನವನ್ನೇ ಕೈಗೊಂಡವು. ಮುಕ್ತವಾಗಿ ರೈತನಿಗೆ ಮನೆ ಬಾಗಿಲಿನಲ್ಲೇ ಮಾರಾಟ ಮಾಡುವ ಅವಕಾಶ ಕಲ್ಪಿಸಲಾಗಿದೆ. ಹೊಲದಲ್ಲೇ ಆತ ತನಗೆ ಯೋಗ್ಯವಾದ ದರದಲ್ಲೇ ಮಾರಬಹುದು. ಖರೀದಿದಾರನಿಗೆ ನೋಂದಣಿ ಬೇಕಿಲ್ಲ. ರೈತನ ಉತ್ಪನ್ನ, ರೈತನ ವಿಕ್ರಿ. ಇದು ಕೇಂದ್ರ ಸರ್ಕಾರದ ಬೃಹತ್- ಸುಂದರ ಘೋಷಣೆಯೊಂದಿಗೆ ದೇಶದ ಜನತೆಯ ಮುಂದೆ ಸರ್ವಾಲಂಕಾರವಾಗಿ ಬಣ್ಣಿಸಿತು. ಇದಕ್ಕಾಗಿ ಕೃಷಿ ಮಾರುಕಟ್ಟೆಯ ಮೂಲ ಕಾಯ್ದೆಗೆ ತಿದ್ದುಪಡಿ ಬಹುಮತದಿಂದ ಪಾಸಾಯಿತು.
ಆದರೆ ರೈತರ ವಿರೋಧ ವ್ಯಾಪಕವಾಯಿತು. ರಾಜ್ಯ ಸರ್ಕಾರಗಳು ಆಕ್ಷೇಪ ಎತ್ತಿದವು. ಒಂದು ವರ್ಷಕ್ಕಿಂತಲೂ ಅಧಿಕ ಸಮಯ ದೆಹಲಿ ಗಡಿಗಳಲ್ಲಿ ಲಕ್ಷಾಂತರ ರೈತ ಸಮುದಾಯ ಪ್ರತಿಭಟನೆ ನಡೆಸಿತು. ಲಾಠಿ ಚಾರ್ಜ್ ಮಾಡಿದರೂ ಜಗ್ಗಲಿಲ್ಲ. ಮಕ್ಕಳು- ಮರಿಗಳನ್ನು ಮಳೆ ಬಿಸಿಲು ಚಳಿ ಎನ್ನದೇ ಬೀದಿಯಲ್ಲಿ ಮಲಗಿಸಿದರು ರೈತರು. ಯಾವಾಗ ಪ್ರತಿಭಟನೆ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಗೊತ್ತಾಯಿತೋ, ಹಾಗೇ ಉತ್ತರ ಪ್ರದೇಶದ ಚುನಾವಣೆ ಸನಿಹ ಬಂತೋ ಎಚ್ಚೆತ್ತ ಸರ್ಕಾರ ಸುಗ್ರೀವಾಜ್ಞೆ ಮೂಲಕ ಈ ಮುಕ್ತ ಮಾರುಕಟ್ಟೆ (ಎಪಿಎಂಸಿ) ಕಾಯ್ದೆ ತಿದ್ದುಪಡಿಯನ್ನು ೨೦೨೧ ನವೆಂಬರ್ ೧೯ರಂದು ಹಿಂದಕ್ಕೆ ಪಡೆಯಿತು. ರೈತರ ಗೆಲವು ಇದು. ಸ್ಥೈರ್ಯವೇನೋ ರೈತರಿಗೆ ಬಂತು.
ಆದರೆ ಅಷ್ಟರಲ್ಲಾಗಲೇ ಬಿಜೆಪಿ ಸರ್ಕಾರವಿದ್ದ ಕರ್ನಾಟಕ, ಗುಜರಾತ್, ಮಧ್ಯಪ್ರದೇಶಗಳಲ್ಲಿ ಕೇಂದ್ರದ ಕೃಷಿ ಕಾಯ್ದೆಯನ್ನು ಅನುಷ್ಠಾನಗೊಳಿಸಿ ರಾಜ್ಯ ಕೃಷಿ ಕಾಯ್ದೆಗೆ ತಿದ್ದುಪಡಿ ಮಾಡಲಾಗಿತ್ತು.
ಯಾವಾಗ ಕೃಷಿ ಉತ್ಪನ್ನಗಳನ್ನು ರೈತರ ಮನೆ ಬಾಗಿಲಿನಲ್ಲಾಗಲೀ ಅಥವಾ ಹೊಲದಲ್ಲಿಯೇ ರೈತರು ವಿಕ್ರಿ ಮಾಡಬಹುದು ಅಥವಾ ವ್ಯಾಪಾರಿಗೆ ಖರೀದಿಸಲು ಮುಕ್ತ ಪರವಾನಗಿ ದೊರೆಯಿತೋ ಆಗ ಮತ್ತೆ ಹೊಸ ಹೊಸ ದಲ್ಲಾಳಿಗಳು, ಮಂಡಿ ಮಾಲೀಕರು, ಏಜೆಂಟರು, ಬಡ್ಡಿ ವ್ಯಾಪಾರಿಗಳು ಹಳ್ಳಿಗಳಿಗೆ ದೌಡಾಯಿಸಿದರು. ಬೆಂಜ್, ಮರ್ಸಿಡಿಸ್, ಇನ್ನೊವಾ ಕಾರುಗಳು ರೈತ ಬೆಳೆ ಕೊಯ್ಯುವ ಮೊದಲೇ ಆತನ ಹೊಲದಲ್ಲಿ ಝಾಂಡಾ ಊರಿದವು.
ಕಾರ್ಪೋರೇಟ್ ಕಂಪನಿಗಳ, ಸೂಪರ್ ಮಾರ್ಕೆಟ್‌ಗಳ ಏಜೆಂಟರು ಹಳ್ಳಿಗಳಲ್ಲಿ ಅಡ್ಡಾಡತೊಡಗಿದರು. ಮುಕ್ತ ಮಾರುಕಟ್ಟೆಯಲ್ಲಿ ಪೈಪೋಟಿಯಾಗುತ್ತದೆಂಬ ಸರ್ಕಾರದ ಅಂದಾಜು ತಲೆ ಕೆಳಗಾಯಿತು. ರೈತನಿಗೆ ಆಮಿಷ ತೋರಿ, ಸಾಲ ನೀಡಿ ಬೆಳೆ ಖರೀದಿಸಿದ್ದು ಒಂದಾದರೆ, ಆತನನ್ನು ಬಡ್ಡಿ ಸಾಲದ ಪಾಶದಲ್ಲಿ ಸಿಲುಕಿದ ನರಕ ಇನ್ನೊಂದೆಡೆ. ಬೆಳೆ ಖರೀದಿಸಿದ ಏಜೆಂಟ್ ಹಣ ಕೊಡದೇ ಪಂಗನಾಮ ಹಾಕಿದ್ದು ಒಂದಾದರೆ, ಬೆಳೆ ಬರುವ ಮೊದಲೇ ಮುಂಗಡ ಹಣ ಕೊಟ್ಟು ರೈತರ ಉತ್ಪನ್ನವನ್ನು ಬುಕ್ ಮಾಡಿಕೊಂಡು, ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆ ಇದ್ದರೂ ರೈತನಿಗೆ ಅಗ್ಗದ ದರವನ್ನೇ ನೀಡಲಾಯಿತು. ಇಪ್ಪತ್ತೊಂದನೇ ಶತಮಾನದ ರೈತರ ಶೋಷಣೆಯ ವಾಸ್ತವ ಚಿತ್ರಣ ಜನರೆದುರು ಅನಾವರಣಗೊಂಡಿತು.
ಪರಿಣಾಮ ಹತ್ತಾರು ದಶಕಗಳ ಕಾಲ ಶಿಸ್ತುಬದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದ ಕೃಷಿ ಉತ್ಪನ್ನ ಮಾರುಕಟ್ಟೆಗಳು ಬಿಕೋ ಎನ್ನತೊಡಗಿದವು. ವರ್ಷಕ್ಕೆ ಆರು ನೂರಾ ಎಪ್ಪತ್ತು ಕೋಟಿ ಸೆಸ್ ಸಂಗ್ರಹಿಸಿ, ಲಕ್ಷಾಂತರ ಕೋಟಿ ವಹಿವಾಟು ನಡೆಸುತ್ತಿದ್ದ ೧೬೭ಎಪಿಎಂಸಿಗಳು ಕೇವಲ ೧೯೯ ಕೋಟಿ ರೂ. ತೆರಿಗೆಗೆ ಕುಸಿದವು. ವಹಿವಾಟು ನಂಬಿದ ಹಮಾಲರು, ಕೂಲಿಕಾರರು, ಸಂಸ್ಕರಣಾ ಸಿಬ್ಬಂದಿ ಎಲ್ಲ ಕೆಲಸ ಅರಸಿ ಬೇರೆಡೆ ಹೋಗುವ ಪರಿಸ್ಥಿತಿ ಉದ್ಭವವಾಯಿತು. ಈಗ ಟೊಮೇಟೊ ಬೆಲೆ ಎರಡು ನೂರು ರೂ., ವಹಿವಾಟು ಕಂಡಿತಲ್ಲ. ಇದಕ್ಕೆ ಕಾರಣ ಸೂಪರ್ ಮಾರ್ಕೆಟ್ ಕಾರ್ಪೋರೇಟ್ ಕಂಪನಿಗಳು ಮತ್ತು ಕೃಷಿ ಸಂಸ್ಕರಣಾ ಘಟಕಗಳು! ಈ ಸೂಪರ್ ಮಾರ್ಕೆಟ್ ಕಂಪನಿಗಳು ಎಲ್ಲ ತಾಲ್ಲೂಕು, ಹೋಬಳಿಗಳಿಗೆ ಏಜೆಂಟರನ್ನು ಸೃಷ್ಟಿಸಿ ಅಲ್ಲಿಂದ ತರಕಾರಿ, ಲಿಂಬು, ಹಣ್ಣು, ಟೊಮೇಟೊ, ಆಲೂಗಡ್ಡೆ, ಬಿಟ್ರೋಟ್ ಎಲ್ಲವನ್ನೂ ನೇರವಾಗಿ ಖರೀದಿಸಿ ಪ್ರಸಕ್ತ ಮಾರುಕಟ್ಟೆಯ ಹೆಚ್ಚಳದ ಬೆಲೆಗೆ ಮಾರಿಕೊಂಡು ದುಡ್ಡು ಮಾಡಿದವು. ಅಲ್ಲೋ ಇಲ್ಲೋ ರೈತ ಕೆಜಿಗೆ ನೂರು ರೂಪಾಯಿಗೆ ಟೊಮೇಟೊ ಮಾರಿದರೆ, ಬಹುತೇಕ ರೈತರಿಗೆ ಸಿಕ್ಕಿದ್ದು ಹತ್ತೋ ಇಪ್ಪತ್ತೋ ರೂಪಾಯಿ! ಏಕೆಂದರೆ ಇವರೆಲ್ಲ ಈ ಏಜೆಂಟರ ಮುಷ್ಟಿಯಲ್ಲಿ ಸಿಕ್ಕು ಒದ್ದಾಡಿದವರು.
ಈ ಕೆಚಪ್, ಸಾಸ್, ಜ್ಯೂಸ್ ಫ್ಯಾಕ್ಟರಿಗಳು ತಮ್ಮ ಏಜೆಂಟರನ್ನು ಬಿಟ್ಟು ನೇರವಾಗಿ ರೈತರಿಂದಲೇ ಖರೀದಿಸಿದವು. ಹಾಗೆಯೇ ಪ್ರಸಕ್ತ ಬೆಲೆಗೆ ಅನುಗುಣವಾಗಿ ತಮ್ಮ ಬೆಲೆಯನ್ನು ಕೂಡ ಏರಿಸಿಕೊಂಡವು. ಇದು ಮುಕ್ತ ಮಾರುಕಟ್ಟೆಯ ದೊಡ್ಡ ನಕಾರಾತ್ಮಕ ಪರಿಣಾಮ!
ದ್ರಾಕ್ಷಿ, ಅಡಕೆ, ಕಬ್ಬು, ದಾಳಿಂಬೆ, ರಾಗಿ, ಗೋಧಿ, ಆಲೂಗಡ್ಡೆ ದರ ಕುಸಿತ- ಏರಿಕೆಗಳಲ್ಲಿ ಒಂದೊಂದು ಕಥೆ ಇದೆ. ಕೇಂದ್ರ ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆಯನ್ನು ತಿದ್ದುಪಡಿ ಮಾಡುವಾಗ ಬಹುತೇಕ ಪ್ರತಿಪಕ್ಷಗಳು ವಿರೋಧಿಸಿದ್ದವು. ನಮ್ಮ ಗೌಡರ ಪಾರ್ಟಿ ಜೆಡಿಎಸ್ ಕೂಡ. ಎಪಿಎಂಸಿಗಳು, ಸೊಸೈಟಿಗಳು ಎಲ್ಲ ಸತ್ತು ಹೋಗ್ತಾವೆ' ಎಂದು ಗುಡುಗಿದ್ದು ದೇವೇಗೌಡರೇ. ಹಾಗೇ ಆಯಿತು ಕೂಡ. ವರ್ಷಕ್ಕೆ ಹನ್ನೆರಡು ಕೋಟಿ ರೂಪಾಯಿಗಳನ್ನು ಕೃಷಿ ತೆರಿಗೆ ವಸೂಲಿ ಮಾಡುವ ಹುಬ್ಬಳ್ಳಿ ಎಪಿಎಂಸಿ ಆರೇಳು ಕೋಟಿಗೆ ಕುಸಿಯಿತು. ತುಮಕೂರಿನ ಕೊಬ್ಬರಿ ಮಾರುಕಟ್ಟೆ ತೆರಿಗೆ ಆರೆಂಟು ಕೋಟಿಯಿಂದ ಒಂದೂವರೆ ಕೋಟಿಗೆ ಕುಸಿಯಿತು. ವಿಜಯಪುರ, ರಾಮನಗರ, ಮಂಡ್ಯ, ರಾಯಚೂರಿನ ಭತ್ತ, ಕಲಬುರಗಿ ತೊಗರಿ ಎಲ್ಲವೂ ಎಪಿಎಂಸಿಗೆ ಬಾರದೇ, ಹೊರಗೆಲ್ಲೋ ರೈತ ಇವನ್ನು ಮಾರಾಟ ಮಾಡಿ ನಷ್ಟದ ಸುಳಿಗೆ ಸಿಲುಕಿದ್ದಲ್ಲದೇ ಇವರ ಬದುಕು ನಿಯಂತ್ರಣ ಇಲ್ಲದ ಗಾಳಿ ಪಟದಂತೆ ಆಗಿ ಹೋಯಿತು. ಎಪಿಎಂಸಿ ೨೦೨೧ರ ಕಾಯ್ದೆಗೆ ತಿದ್ದುಪಡಿ ತರುತ್ತೇವೆ. ಮತ್ತೆ ನಿಯಂತ್ರಣ ಮಾರುಕಟ್ಟೆಯಲ್ಲೇ ಕೃಷಿ ಉತ್ಪನ್ನ ಮಾರಬೇಕು ಎಂಬುದಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದ್ದು ದಲ್ಲಾಳಿಗಳಲ್ಲಿ ನಡುಕ ಹುಟ್ಟಿತು. ಎಪಿಎಂಸಿ ಕಾಯ್ದೆ ತಿದ್ದುಪಡಿ ಬಿಲ್ ಅನ್ನು ವಿಧಾನ ಮಂಡಲದಲ್ಲಿ ಮಂಡಿಸಿದಾಗಲೇ ಭಾಜಪಕ್ಕೆ ಇರಸು ಮುರಸಾಯಿತು. ಕಾರಣ ಕೇಂದ್ರದ ಮಸೂದೆಯನ್ನು ಯಥಾವತ್ತಾಗಿ ಜಾರಿಗೊಳಿಸಿದ್ದು ಬಿಜೆಪಿ ಸರ್ಕಾರ. ಅದರ ವೈಫಲ್ಯದ ಎಲ್ಲ ಅರಿವಿದ್ದರೂ ಈಗಿನ ತಿದ್ದುಪಡಿಯನ್ನು ವಿರೋಧಿಸುವುದಕ್ಕೆ ಮತ್ಯಾವ ಸೈದ್ಧಾಂತಿಕ ಕಾರಣವೂ ಇಲ್ಲ. ಹಾಗಂತ ಅತಿ ಹೆಚ್ಚು ಟೀಕೆಗೆ ಗುರಿಯಾಗಿದ್ದು ಇದೇ ಸಂಗತಿ. ಇದೇ ವೇಳೆಯಲ್ಲಿ ಅಲ್ಲವೇ ಬಿಲ್‌ಗಳನ್ನು ಹರಿದು ಹಾಕಿ ಸ್ಪೀಕರ್ ಮೇಲೆ ತೂರಾಡುವ ಮಟ್ಟಕ್ಕೆ ಹೋಗಿದ್ದು ! ಈ ರಾಜಕಾರಣವೇ ವಿಚಿತ್ರ. ಕೇಂದ್ರ ಸರ್ಕಾರ ಕೃಷಿ ಕಾಯ್ದೆ ತಂದಾಗ ತೀವ್ರವಾಗಿ ವಿರೋಧಿಸಿದ್ದು ಜೆಡಿಎಸ್. ಅದನ್ನು ಬಿಜೆಪಿ ರಾಜ್ಯದಲ್ಲಿ ಅನುಷ್ಠಾನಗೊಳಿಸುವಾಗಲೂ ವಿರೋಧಿಸಿತ್ತು. ತಮಾಷೆ ಎಂದರೆ ಅಂದು ಕೃಷಿ ಕಾಯ್ದೆಗೆ ವಿರೋಧಿಸಿದ್ದ ಜೆಡಿಎಸ್ ಈಗ ಅದೇ ಎಪಿಎಂಸಿ ಕಾಯ್ದೆಯ ಮೂಲ ತಿದ್ದುಪಡಿ ವಿರೋಧಕ್ಕೆ ಬಿಜೆಪಿ ಜೊತೆ ಕೈಜೋಡಿಸಿತು!. ವಿಧಾನ ಪರಿಷತ್ತಿನಲ್ಲಿ ವಿಧೇಯಕ ಮಂಡನೆಯಾದಾಗ ಮರಿತಿಬ್ಬೇಗೌಡರನ್ನು ಹೊರತುಪಡಿಸಿ, ಜೆಡಿಎಸ್ ಸದಸ್ಯರು ನೂತನ ತಿದ್ದುಪಡಿಗೆ ವಿರೋಧಿಸಿ ಮತ ಹಾಕಿದರು. ಪರಿಣಾಮ ಸೋಲುಂಟಾಯಿತು. ಕೇಂದ್ರ ಸರ್ಕಾರವೇ ಕೃಷಿ ಕಾಯ್ದೆಯನ್ನು ಹಿಂದೆಗೆದುಕೊಂಡರೂ ರಾಜ್ಯದ ಬಿಜೆಪಿ ನಾಯಕರು ಮಾತ್ರ ಇದನ್ನು ಬೆಂಬಲಿಸುತ್ತಿರುವುದು ಏಕೋ? ಇದರ ಇನ್ನೊಂದು ಮುಖವೆಂದರೆ ಬೆಂಬಲ ಬೆಲೆ. ಅದೊಂದು ದೊಡ್ಡ ಕಥೆಯೇ. ಬೆಂಬಲ ಬೆಲೆ ಘೋಷಣೆಗೆ ಈಗ ಹಣ ಸಂಗ್ರಹವೇ ಆಗುತ್ತಿಲ್ಲ. ಕಾರಣ ಮಾರುಕಟ್ಟೆಗೆ ರೈತರು ಬೆಳೆ ಹಾಕುತ್ತಿಲ್ಲ. ಹೊಸ ತಿದ್ದುಪಡಿಗೆ ಮೂಲ ಕಾರಣಗಳಲ್ಲಿ ಇದೊಂದು. ರಾಜಕಾರಣ ಏನೇ ಇರಲಿ ಬಿಡಿ. ರಾಜ್ಯದ ಬೆಳೆಗಾರರ, ರೈತರ ಭದ್ರತೆ ಮತ್ತು ಸಂರಕ್ಷಣೆ ದೃಷ್ಟಿಯಿಂದ ಮೊದಲಿನ ಕೃಷಿ ಮಾರುಕಟ್ಟೆ ನಿಯಂತ್ರಣ ಕಾಯ್ದೆ ಜಾರಿಯಾಗಲೇಬೇಕಾದ ಅವಶ್ಯಕತೆ ಇದೆ. ವಿಧಾನ ಪರಿಷತ್ತಿನಲ್ಲಿ ಸೋಲುಂಡಿರುವ ಕಾರಣ ಬಹುಶಃ ಇನ್ನಾರು ತಿಂಗಳು ಈ ತಿದ್ದುಪಡಿ ಬಿಲ್ ಪಾಸಾಗದು. ಇನ್ನೇನು ಮುಂಗಾರು ಬೆಳೆ ಫಸಲು ಬರುವ ಕಾಲ ಸನ್ನಿಹಿತವಾದರೂ ಈ ವರ್ಷವೂ ಮಾರುಕಟ್ಟೆಯಲ್ಲಿ ಹಾಲಾಹಲ ಸೃಷ್ಟಿಯಾಗುವುದಂತೂ ತಪ್ಪಿದ್ದಲ್ಲ. ಪ್ರಾಜ್ಞ ರೈತರೇನೋ ಮಾರುಕಟ್ಟೆಗೆ ಬೆಳೆ ತರಬಹುದು. ಆದರೆ ಅಲ್ಲಿ ಟೆಂಡರ್ ಹಾಕುವವರು ಬೇಕಲ್ಲ? ಕಾರ್ಪೋರೇಟ್ ಜಾಲದ ಮಸಲತ್ತಿನ ಹುಟ್ಟಡಗಿಸುವುದು ಸುಲಭವಲ್ಲ ತಾನೇ? ಈ ಹಿಂದೊಂದು ಗಾದೆ ಇತ್ತು. ಹೊಟ್ಟೆ ತುಂಬಿದವರಿಗೆಲ್ಲಿ ಗೊತ್ತು ಹಸಿದವನ ಸಂಕಷ್ಟ ಎಂದು. ಈಗ ರಾಜಕಾರಣಿಗೇನು ಗೊತ್ತು ರೈತರ ಸಂಕಷ್ಟ? ಎನ್ನುವಂತಹ ದುಸ್ಥಿತಿ ನಿರ್ಮಾಣವಾಗಿದೆ. ಎಪಿಎಂಸಿಗಳ ಅಸ್ತಿತ್ವದ ಪ್ರಶ್ನೆಯೂ ಕೂಡ ಈಗ ಉದ್ಭವವಾಗಿದೆಯಲ್ಲವೇ...? ಕಾರ್ಪೋರೇಟ್ವ್ಯವಹಾರ’ದೆದರು ರೈತರ ಬೆವರಿಗೆ ಎಲ್ಲಿದೆ ಬೆಲೆ…ಅಲ್ಲವೇ.

Exit mobile version