Home News ರಸ್ತೆಗೆ ಬಿದ್ದ ಮರದ ಕೊಂಬೆ: ಇಬ್ಬರು ಸಾವು

ರಸ್ತೆಗೆ ಬಿದ್ದ ಮರದ ಕೊಂಬೆ: ಇಬ್ಬರು ಸಾವು

ನಾಗಮಂಗಲ: ಮಳೆಗೆ ಮರದ ಕೊಂಬೆ ರಸ್ತೆಗೆ ಬಿದ್ದಿದ್ದ ಪರಿಣಾಮ ಕೆ.ಆರ್. ಪೇಟೆ ಕಡೆಯಿಂದ ನಾಗಮಂಗಲ ಮಾರ್ಗವಾಗಿ ಬರುತ್ತಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಗಡಿಭಾಗ ಕೆಸುವಿನಕಟ್ಟೆ ಗ್ರಾಮದ ಗೇಟ್ ಬಳಿ ಶನಿವಾರ ರಾತ್ರಿ ನಡೆದಿದೆ.
ಕೆ.ಆರ್. ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿಯ ಲಿಂಗಾಪುರ ಗ್ರಾಮದ ರೇವಣ್ಣ(೩೦) ಮತ್ತು ಕಿಕ್ಕೇರಿಯ ಕೃಷ್ಣ(೩೦) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಯುವಕರಿಬ್ಬರು ಕೆ.ಆರ್. ಪೇಟೆ ಕಡೆಯಿಂದ ನಾಗಮಂಗಲ ಕಡೆಗೆ ಮಾಗಡಿ-ಜಲಸೂರು ರಾಜ್ಯ ಹೆದ್ದಾರಿಯಲ್ಲಿ ಹೊಂಡ ಸ್ಪೆಂಡರ್ ಬೈಕ್‌ನಲ್ಲಿ ಬರುತ್ತಿದ್ದ ಸಂದರ್ಭ ಮಳೆಯಿಂದ ಮರದ ಕೊಂಬೆ ರಸ್ತೆಗೆ ಬಿದ್ದಿದ್ದರಿಂದ ಕತ್ತಲೆಯಲ್ಲಿ ಮರದ ಕೊಂಬೆ ಬಿದ್ದಿದ್ದು ಹಾಗೂ ರಸ್ತೆ ತಿರುವು ಇದ್ದಿದ್ದರಿಂದ ಸರಿಯಾಗಿ ಮರದ ಕೊಂಬೆ ಕಾಣದ ಪರಿಣಾಮ ಬೈಕ್ ಕೊಂಬೆಯ ಮೇಲೆ ಹತ್ತಿಸಿದ್ದು ಬೈಕ್ ನಿಯಂತ್ರಣ ತಪ್ಪಿ ರಸ್ತೆಯ ಬದಿಗೆ ಬಿದ್ದಿದೆ. ಮರದ ಕೊಂಬೆಗೆ ಡಿಕ್ಕಿ ಹೊಡೆದ ರಭಸಕ್ಕೆ ರಸ್ತೆಯಿಂದ ಸುಮಾರು ದೂರಕ್ಕೆ ಬೈಕ್ ಬಿದ್ದಿದ್ದು ಬೈಕ್ ಸವಾರ ಕೃಷ್ಣ ರಸ್ತೆಯಲ್ಲಿ ಮೃತಪಟ್ಟರೆ, ಹಿಂಬದಿ ಸವಾರ ರೇವಣ್ಣ ರಸ್ತೆಯ ಬದಿಗೆ ಬಿದ್ದಿದ್ದಾರೆ. ಇಬ್ಬರಿಗೂ ತಲೆಗೆ ಗಂಭೀರವಾಗಿ ಪೆಟ್ಟುಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇಬ್ಬರು ಯುವಕರು ಆಕ್ರೇಸ್ಟ್ರಾ ಡ್ಯಾನ್ಸರ್‌ಗಳಾಗಿದ್ದರು ಎಂಬುದಾಗಿ ಗುರುತಿಸಲಾಗಿದೆ.
ಅರಣ್ಯ ಇಲಾಖೆ ವೈಫಲ್ಯ:
ರಸ್ತೆಗೆ ಬಿದ್ದ ಮರ ಒಣಗಿ ಹಲವು ತಿಂಗಳು ಕಳೆದಿದ್ದು ಮರ ಕಡಿಯಲು ಗುರುತಿಸಿ ನಂಬರ್ ಹಾಕಿ ಹಲವು ತಿಂಗಳು ಕಳೆದಿದ್ದರು ರಸ್ತೆಬದಿಯ ಒಣಮರವನ್ನು ಕತ್ತರಿಸುವಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯ ಮಾಡಿದ್ದರಿಂದಲೇ ಈ ಅವಘಡ ನಡೆದಿದೆ ಎಂದು ಸ್ಥಳೀಯರು ಸ್ಥಳದಲ್ಲಿ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಸಿಪಿಐ ನಿರಂಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಘಟನೆಯು ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Exit mobile version