Home ತಾಜಾ ಸುದ್ದಿ ಯುಪಿಎಸ್ ಸಿ: ಸಾಗರದ ವಿಕಾಸ್‌ಗೆ 288ನೇ ರ‍್ಯಾಂಕ್

ಯುಪಿಎಸ್ ಸಿ: ಸಾಗರದ ವಿಕಾಸ್‌ಗೆ 288ನೇ ರ‍್ಯಾಂಕ್

0

ಶಿವಮೊಗ್ಗ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್’ಸಿ) ದ ಪರೀಕ್ಷೆ ಫಲಿತಾಂಶ ಏ. ೨೨ ರಂದು ಪ್ರಕಟಗೊಂಡಿದ್ದು, ಸಾಗರ ಪಟ್ಟಣದ ಯುವಕನೋರ್ವ ಮೊದಲ ಪ್ರಯತ್ನದಲ್ಲಿಯೇ ೨೮೮ ನೇ ರ‍್ಯಾಂಕ್ ಪಡೆದುಕೊಂಡು ತೇರ್ಗಡೆ ಹೊಂದಿದ್ದಾರೆ.
ಸಾಗರದ ಅಣಲೆಕೊಪ್ಪದ ನಿವಾಸಿ, ಪ್ರಸ್ತುತ ದೆಹಲಿಯ ಕೇಂದ್ರ ರಕ್ಷಣಾ ಇಲಾಖೆಯ ಡಿಆರ್‌ಡಿಓ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ೨೮ ರ ವಯೋಮಾನದ ವಿಕಾಸ್ ವಿ ಯುಪಿಎಸ್’ಸಿ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲೆ ಯಶಸ್ವಿಯಾಗಿದ್ದಾರೆ. ಈ ಮೂಲಕ ಜಿಲ್ಲೆಯ ಕೀರ್ತಿ ಪತಾಕೆಯನ್ನು ಮತ್ತಷ್ಟು ಉತ್ತುಂಗಕ್ಕೆ ಹಾರಿಸಿದ್ದಾರೆ.
ವಿಕಾಸ್ ವಿ ಅವರ ತಂದೆ ವಿ.ಸಿ. ಪಾಟೀಲ್ ಅವರು ಸಾಗರದ ಸರ್ಕಾರಿ ಪದವಿ ಪೂರ್ವ ಕಾಲೇಜ್ ನ ಇತಿಹಾಸ ಉಪನ್ಯಾಸಕರಾಗಿದ್ದಾರೆ. ಹಾಗೆಯೇ ಅವರ ತಾಯಿ ಮಹಾಲಕ್ಷ್ಮೀ ಹೆಗಡೆ ಅವರು, ಅದೇ ಕಾಲೇಜ್ ನ ಹೈಸ್ಕೂಲ್ ವಿಭಾಗದಲ್ಲಿ ಸಹ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮೊದಲ ಪ್ರಯತ್ನದಲ್ಲಿಯೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಪುತ್ರನ ಸಾಧನೆಗೆ ತಂದೆ ವಿ.ಸಿ. ಪಾಟೀಲ್ ಅವರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಆತನ ಸತತ ಸಾಧನೆ, ಪರಿಶ್ರಮವೇ ಯಶಸ್ಸಿಗೆ ಕಾರಣವೆಂದು ಹೇಳುತ್ತಾರೆ.
ಪುತ್ರ ವಿಕಾಸ್ ಹೊಸನಗರದಲ್ಲಿ ಪ್ರಾಥಮಿಕ, ಸಾಗರದ ಎಂಜಿಎನ್ ಪೈ ಶಾಲೆಯಲ್ಲಿ ಹೈಸ್ಕೂಲ್, ಶಿವಮೊಗ್ಗದ ಪೇಸ್ ಕಾಲೇಜ್ ನಲ್ಲಿ ಪ್ರಥಮ ವರ್ಷದ ಪಿಯುಸಿ ಹಾಗೂ ಸಾಗರದ ಸರ್ಕಾರಿ ಪದವಿ ಪೂರ್ವ ಕಾಲೇಜ್ ನಲ್ಲಿ ದ್ವಿತೀಯ ಪಿಯುಸಿ ಅಭ್ಯಾಸ ಮಾಡಿದ್ದ. ಮೈಸೂರಿನ ನ್ಯಾಷನಲ್ ಇನ್ಸ್’ಟ್ಯೂಟ್ ಆಫ್ ಎಜುಕೇಷನ್ ಸಂಸ್ಥೆಯಲ್ಲಿ ಬಿಇ ಅಭ್ಯಾಸ ಮಾಡಿದ್ದ. ನಂತರ ಉತ್ತರಖಂಡದ ರೂರ್‌ಕೆಯಲ್ಲಿ ಎಂಟೆಕ್ ಓದಿದ್ದು, ನಂತರ ಡಿಆರ್‌ಡಿಓ ಸಂಸ್ಥೆಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಎಂದು ತಂದೆ ವಿ.ಸಿ. ಪಾಟೀಲ್ ಅವರು ಮಾಹಿತಿ ನೀಡುತ್ತಾರೆ.

Exit mobile version