ವಿಜಯಪುರ: ಮಾಜಿ ಸಚಿವ ರಮೇಶ ಜಾರಕಿಹೊಳಿ ಮಾತನಾಡಿದ್ದು ಸತ್ಯ, ನಾನು ಸದಾಕಾಲ ಅವರ ಪರವಾಗಿದ್ದೇನೆ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಲಾಯಕ್ ಅಲ್ಲ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಿ.ವೈ. ವಿಜಯೇಂದ್ರ ವಿರುದ್ಧ ತಮ್ಮ ಅಸಮಾಧಾನ ಮುಂದುವರೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ ಜಾರಕಿಹೊಳಿ ಅವರ ಎಲ್ಲ ಹೇಳಿಕೆಗಳಿಗೂ ನಾನು ಪರವಾಗಿದ್ದೇನೆ, ಸದಾಕಾಲ ಅವರ ಬೆಂಬಲವಾಗಿ ನಿಲ್ಲಲಿದ್ದೇನೆ, ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷನಾಗಲು ಅರ್ಹನಲ್ಲ, ಈ ವಿಜಯೇಂದ್ರನ ಕಾರಣದಿಂದಾಗಿಯೇ ಸುನೀಲಕುಮಾರ ಅವರು ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂದಿದೆ ಎಂದರು.
ಬಿ.ವೈ. ವಿಜಯೇಂದ್ರನ ನಾಯಕತ್ವವನ್ನು ನಾವು ಒಪ್ಪಲ್ಲ, ವಿಜಯೇಂದ್ರ ಕೂಡಲೇ ತನ್ನ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದರು.
ನಾವು ಯಾರಿಗೂ ಹೆದರಲ್ಲ, ವಿಜಯೇಂದ್ರ ಮಾಡಿದ ತಪ್ಪಿನಿಂದಲೆ ಯಡಿಯೂರಪ್ಪ ಅವರು ಜೈಲಿಗೆ ಹೋಗಬೇಕಾಯಿತು ಎಂದು ಆರೋಪಿಸಿದ ಯತ್ನಾಳ ಯಡಿಯೂರಪ್ಪನವರನ್ನು ಹೊರಗಡೆ ಪೂಜ್ಯ ತಂದೆ ಎಂದು ವಿಜಯೇಂದ್ರ ಕರೆಯುತ್ತಾನೆ, ಮನೆಯಲ್ಲಿ ಮುದಿಯಾ ಎಂದು ಕರೆಯುತ್ತಾನೆ. ಈ ವಿಜಯೇಂದ್ರನಿಂದಲೇ ಯಡಿಯೂರಪ್ಪ ಅವರು ಹಾಳಾಗಿದ್ದು, ಮಗನ ವ್ಯಾಮೋಹವನ್ನು ಯಡಿಯೂರಪ್ಪ ಕಡಿಮೆ ಮಾಡಲಿ, ಯಡಿಯೂರಪ್ಪ ಅವರಿಗೆ ತಮ್ಮ ಮನೆಯಲ್ಲಿ ಕಿಮ್ಮತ್ತಿಲ್ಲ ಎಂದು ದೂರಿದರು.
ಬಿ.ಎಸ್. ಯಡಿಯೂರಪ್ಪ ವಿರುದ್ಧವೂ ಅಸಮಾಧಾನ ಹೊರಹಾಕಿದ ಯತ್ನಾಳ, ಯಡಿಯೂರಪ್ಪ ಕೂಡ ಎಷ್ಟು ಜನರಿಗೆ ಮೋಸ ಮಾಡಿಲ್ಲ, ಬಿ.ಬಿ. ಶಿವಪ್ಪ, ಮಲ್ಲಿಕಾರ್ಜುನಯ್ಯ ಸೇರಿದಂತೆ ಅನೇಕರಿಗೆ ಮೋಸ ಮಾಡಿದ್ದಾರೆ, ಅನ್ಯಾಯ ಮಾಡಿದ್ದಾರೆ, ತಮ್ಮ ಸ್ವಾರ್ಥಕ್ಕಾಗಿ ಅನೇಕರ ರಾಜಕೀಯ ಜೀವನ ಅಂತ್ಯಗೊಳಿಸಿದ್ದಾರೆ, ಈಗಲಾದರೂ ಯಡಿಯೂರಪ್ಪ ಮೊಮ್ಮಕ್ಕಳ ಜೊತೆ ಆಟ ಆಡುತ್ತಾ ಕುಳಿತುಕೊಳ್ಳಲಿ ಎಂದು ಸಲಹೆ ನೀಡಿದರು.