ಹುಬ್ಬಳ್ಳಿ: ಮುಡಾ ಹಗರಣವಾಗಿದ್ದರೆ ಅದಕ್ಕೆ ಮೊದಲು ಬಿಜೆಪಿ ಸರ್ಕಾರ ಉತ್ತರ ಕೊಡಲಿ ಎಂದು ಸಚಿವ ಸಂತೋಷ ಲಾಡ್ ಹೇಳಿದ್ದಾರೆ.
ಶುಕ್ರವಾರ ನಗರದ ಕಿಮ್ಸ್ ಗೆ ಭೇಟಿ ನೀಡಿದ ನಂತರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, 2018 ರಲ್ಲಿ ಬಿಜೆಪಿ ಸರ್ಕಾರ ಇತ್ತು. ಹಗರಣವಾಗಿದ್ದರೆ ಬಿಜೆಪಿಯವರು ಭ್ರಷ್ಟಾಚಾರ ಮಾಡಿದ್ದಾರೆ ಎಂಬ ಅರ್ಥನಾ ಎಂದು ಪ್ರಶ್ನಿಸಿದರು. ಅವರು ಮಾಡಿರುವುದು ಕಾನೂನು ಬಾಹೀರನಾ ಅಥವಾ ಕಾನೂನು ಪ್ರಕಾರ ಮಾಡಿದ್ದಾರೆಯೇ ಎಂಬುದಕ್ಕೆ ಉತ್ತರಿಸಲಿ. ಬಿಜೆಪಿ ಸರಕಾರ ಇದ್ದಾಗಲೇ ಆಗಿರುವುದು . ಬಿಜೆಪಿಯವರು ಇದನ್ನು ಒಪ್ಪುತ್ತಾರೆಯೇ, ರಾಜ್ಯದ ಜನತೆಗೆ ತಾವೇ ಮೋಸ ಮಾಡಿದ್ದೇವೆ ಎಂದು ಒಪ್ಪುತ್ತಾರೆಯೇ ಎಂದರು.
ಅವರೇ ಸೈಟ್ ಕೊಟ್ಟು ಅವರೇ ಹಗರಣ ಆಗಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಇವರದೇ ಸರ್ಕಾರ ಇದ್ದಾಗ ಸೈಟ್ ಹಂಚಿಕೆ ಮಾಡಿ ಈಗ ಪ್ರತಿಭಟನೆ ಮಾಡಿದರೆ ಏನರ್ಥ ಎಂದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಸಿದ್ದರಾಮಯ್ಯ ರಾಜಿನಾಮೆ ಕೊಡಬೇಕು ಎಂಬ ಹೇಳಿಕೆಗೆ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ರಾಜಿನಾಮೆ ಕೊಡಲಿ. ಜೋಶಿ ಅವರು ಕಲ್ಲಿದ್ದಲು ಹಗರಣದ ಬಗ್ಗೆ ಚರ್ಚೆ ಮಾಡುತ್ತಾರೆಯೇ? ಪ್ರಧಾನಿ ಅವರು ಉದ್ಘಾಟಿಸಿದ ಸೇತುವೆ, ವಿಮಾನ ನಿಲ್ದಾಣ ಸೋರುತ್ತಿವೆ ಇದಕ್ಕೆ ಉತ್ತರಿಸುತ್ತಾರಾ? ನೀಟ್ ಬಗ್ಗೆ ಉತ್ತರಿಸಿ ರಾಜಿನಾಮೆ ಕೊಡುತ್ತಾರೆಯೇ ಎಂದರಲ್ಲದೇ ಬಿಜೆಪಿ ಮೊದಲು ಸ್ಪಷ್ಟಿಕರಣ ಕೊಡಲಿ ಎಂದರು.