ಉಡುಪಿ: ಮೀನು ಕದ್ದ ಆರೋಪದ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ಲಂಬಾಣಿ ಜನಾಂಗಕ್ಕೆ ಸೇರಿದ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿದ ಪ್ರಕರಣದ ತನಿಖೆ ಮುಂದುವರಿಸಿರುವ ಮಲ್ಪೆ ಪೊಲೀಸರು, ಮತ್ತೀರ್ವರು ಮಹಿಳೆಯರನ್ನು ಬಂಧಿಸಿದ್ದಾರೆ. ಪ್ರಕರಣದ ಮಾಹಿತಿಯನ್ನು ಸೂಕ್ತವಾಗಿ ಕಲೆಹಾಕದ ಹಿನ್ನೆಲೆಯಲ್ಲಿ ಈರ್ವರು ಬೀಟ್ ಕಾನ್‌ಸ್ಟೇಬಲ್‌ಗಳನ್ನು ಎಸ್.ಪಿ. ಡಾ.ಅರುಣ್ ಅಮಾನತು ಮಾಡಿದ್ದಾರೆ.
ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿದ ಸಂಬಂಧ ಇಬ್ಬರು ಆರೋಪಿಗಳಾದ ಲೀಲಾ ಮತ್ತು ಪಾರ್ವತಿ ಎಂಬವರನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿಯುತ್ತಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಮಹಿಳಾ ಆಯೋಗ, ಘಟನೆಯನ್ನು ಖಂಡಿಸಿ ಪ್ರಕರಣಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು, ಸಮಗ್ರ ವರದಿಯನ್ನು ಶೀಘ್ರದಲ್ಲಿ ಆಯೋಗಕ್ಕೆ ಸಲ್ಲಿಸುವಂತೆ ತಿಳಿಸಿದೆ.