ಮನೋತತ್ವ ಶಾಸ್ತ್ರದ ಪ್ರಕಾರ ನಿಮ್ಮ ಮನಸ್ಸಿನಲ್ಲಿ ಏನಾದರೂ ಇದ್ದರೆ ಅದನ್ನು ಮಾತನಾಡಬೇಕು, ಅಭಿವ್ಯಕ್ತಗೊಳಿಸಬೇಕು. ಆಗ ಅದರಿಂದ ಮುಕ್ತರಾಗುತ್ತೀರಿ. ಭಾರತೀಯ ಪದ್ಧತಿಯು ಮಂತ್ರವು ಒಳಗೇ ಇರಬೇಕೆಂದು ಬಯಸುತ್ತದೆ, ಅದು ಅಭಿವ್ಯಕ್ತಿಯ ಕ್ಷೇತ್ರಕ್ಕೆ ಬರುವುದು ಬೇಡ ಎಂದು ಬಯಸುತ್ತದೆ. ಆ ಮಂತ್ರ ನಿಮ್ಮ ಮನಸ್ಸಿನಲ್ಲಿಯೇ ಉಳಿದು ಮನಸ್ಸನ್ನು ಆಳವಾಗಿ ತೆಗೆದುಕೊಂಡು ಹೋಗಬೇಕೆಂದು ಬಯಸುತ್ತದೆ. ಆದ್ದರಿಂದ ನಿಮ್ಮ ಮನಸ್ಸು ಆಳವಾಗಿ ಹೋಗಬೇಕೆಂದರೆ, ರಹಸ್ಯವಾದ, ಅಭಿವ್ಯಕ್ತಿಯ ಕ್ಷೇತ್ರದಲ್ಲಿರದ ಮಂತ್ರವನ್ನು ಪಡೆದುಕೊಳ್ಳುವುದು ಆವಶ್ಯಕ.
ಆದ್ದರಿಂದಲೇ ಅದನ್ನು ರಹಸ್ಯವಾಗಿ ಕೊಡುವುದು. ಒಂದು ರಹಸ್ಯವು ನಿಮ್ಮ ಹೃದಯದ ಆಳದಲ್ಲಿ, ನಿಮ್ಮ ಚೈತನ್ಯದ ಆಳದಲ್ಲಿ ನಿಲ್ಲುತ್ತದೆ. ಆದ್ದರಿಂದ, ಮನಸ್ಸು ಚೈತನ್ಯದೊಳಗೆ ಆಳವಾಗಿ ಹೊಕ್ಕಿ ನಿಲ್ಲಲು ಮಂತ್ರವು ಒಂದು ವಾಹನ. ಆದ್ದರಿಂದಲೇ ಅದನ್ನು ರಹಸ್ಯವಾಗಿ ಕೊಡಬೇಕು. ಕೊಡಲ್ಪಡುವ ಮಂತ್ರವು ಸಾಮಾನ್ಯವಾದ, ಎಲ್ಲರಿಗೂ ತಿಳಿದಂತಹ ಮಂತ್ರವೇ ಆಗಿರಬಹುದು.
ಆದರೆ ನಿಮಗೆ ಕೊಡಲ್ಪಡುವ ಮಂತ್ರವನ್ನು ನೀವು ರಹಸ್ಯವಾಗಿ ಕಾಯ್ದುಕೊಳ್ಳುವುದರಿಂದ ನೀವು ಧ್ಯಾನದೊಳಗೆ ಆಳವಾಗಿ ಹೊಕ್ಕಬಹುದು. ಎಲ್ಲವೂ ಬಹಳ ವೈಜ್ಞಾನಿಕವಾದದ್ದು. ಎಲ್ಲರೂ ಜೋರಾಗಿ ಉಚ್ಚರಿಸಬಹುದಾದ ಮಹಾಮಂತ್ರಗಳಿವೆ. ಆದರೆ ವೈಯಕ್ತಿಕವಾದ ಮಂತ್ರವನ್ನು ರಹಸ್ಯವಾಗಿರಿಸಿಕೊಳ್ಳಬೇಕು. ಆದ್ದರಿಂದಲೇ ಸಹಜ ಸಮಾಧಿಯ ಮಂತ್ರವನ್ನು ಧ್ಯಾನದ ಶಿಬಿರದಲ್ಲಿ ಕೊಡುವುದು. ಅದನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ, ಅಭಿವ್ಯಕ್ತಿಗೊಳಿಸಬೇಡಿ. ಆದರೆ ಓಂ ನಮಃ ಶಿವಾಯ' ಮತ್ತು
ಓಂ’ ನಂತಹ ಮಂತ್ರಗಳನ್ನು ಜೋರಾಗಿ ಉಚ್ಚರಿಸಬಹುದು. ಅವು ಕಂಪನಗಳನ್ನು ಹೆಚ್ಚಿಸುತ್ತವೆ.
ಮಂತ್ರದ ಮೇಲೆ ಗಮನವನ್ನಿಟ್ಟು ನಿಧಾನವಾಗಿ ಉಚ್ಚರಿಸಬಹುದಾದರೆ ಅದು ಬಹಳ ಒಳಿತು. ವೇಗವಾಗಿ ಉಚ್ಚರಿಸುತ್ತಿದ್ದರೂ ಪರವಾಗಿಲ್ಲ. ಕನಿಷ್ಟ ಪಕ್ಷ ಅದನ್ನಾದರೂ ಮಾಡುತ್ತಿರುವಿರಲ್ಲ? ಮಾಡುವುದನ್ನು ಮುಂದುವರಿಸಿ. ಮಂತ್ರವನ್ನು ೧೦೮ ಸಲ ಉಚ್ಚರಿಸುವ ಕಾರಣವೆಂದರೆ, ಒಂಭತ್ತು ಗ್ರಹಗಳಿವೆ ಮತ್ತು ಹನ್ನೆರಡು ರಾಶಿಗಳಿವೆ. ಒಂಭತ್ತು ಗ್ರಹಗಳು ಹನ್ನೆರಡು ರಾಶಿಗಳಲ್ಲಿ ಚಲಿಸಿದರೆ ೧೦೮ ರೀತಿಯ ಬದಲಾವಣೆಗಳು ಉಂಟಾಗುತ್ತವೆ. ಈ ಬದಲಾವಣೆಗಳಲ್ಲಿ ಏನಾದರೂ ತಪ್ಪಿದ್ದರೆ ಮಂತ್ರಗಳ ಸಕಾರಾತ್ಮಕ ಶಕ್ತಿಯಿಂದ ಅದನ್ನು ಸರಿಪಡಿಸಬಹುದು.