Home ತಾಜಾ ಸುದ್ದಿ ಮಂಗಳೂರು ರೈಲ್ವೆ ಪ್ರದೇಶ ಒಂದು ವಿಭಾಗದ ವ್ಯಾಪ್ತಿಗೆ

ಮಂಗಳೂರು ರೈಲ್ವೆ ಪ್ರದೇಶ ಒಂದು ವಿಭಾಗದ ವ್ಯಾಪ್ತಿಗೆ

0


ಮಂಗಳೂರು: ಆಡಳಿತಾತ್ಮಕ ಅಭಿವೃದ್ಧಿಗಾಗಿ ಮಂಗಳೂರು ರೈಲ್ವೆ ಪ್ರದೇಶವನ್ನು ಒಂದು ವಿಭಾಗದ ವ್ಯಾಪ್ತಿಗೆ ಒಳಪಡಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ
ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಮಂಗಳೂರಿನ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಶನಿವಾರ ಮಂಗಳೂರು-ಕಬಕ ಪುತ್ತೂರು-ಮಂಗಳೂರು ಸೆಂಟ್ರಲ್ ರೈಲು ಸುಬ್ರಹ್ಮಣ್ಯ ಮಾರ್ಗ ವಿಸ್ತರಣೆಗೆ ಹಸಿರು ನಿಶಾನೆ ತೋರಿಸಿದ ಬಳಿಕ ಅವರು ಸುದ್ದಿಗಾರರಲ್ಲಿ ಮಾತನಾಡಿದರು.
ದಕ್ಷಿಣ, ನೈಋತ್ಯ ಹಾಗೂ ಕೊಂಕಣ ರೈಲ್ವೆ ಈ ಮೂರು ವಿಭಾಗಗಳನ್ನು ಮಂಗಳೂರು ರೈಲ್ವೆ ಪ್ರದೇಶ ಒಳಗೊಂಡಿದೆ. ಇದರಿಂದಾಗಿ ಆಡಳಿತಾತ್ಮಕ ಹಾಗೂ ಅಭಿವೃದ್ಧಿಗೆ ತೊಂದರೆ ಉಂಟಾಗುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನು ನಿವಾರಿಸಲು ಮಂಗಳೂರು ರೈಲ್ವೆ ಪ್ರದೇಶವನ್ನು ಯಾವುದಾದರೂ ಒಂದು ವಿಭಾಗದ ವ್ಯಾಪ್ತಿಗೆ ಒಳಪಡಿಸುವ ಬಗ್ಗೆ ತೀರ್ಮಾನಿಸಲಾಗಿದೆ ಎಂದರು.
ಮುಂಬಯಿ ಸಿಎಸ್‌ಟಿ ಮತ್ತು ಗೊಮಟೇಶ್ವರ ಎಕ್ಸ್‌ಪ್ರೆಸ್ ರೈಲುಗಳು ಮಂಗಳೂರು ಜಂಕ್ಷನ್‌ನಿಂದ ಹೊರಡುತ್ತಿವೆ. ಅವುಗಳನ್ನು ಮಂಗಳೂರು ಸೆಂಟ್ರಲ್‌ನಿಂದ ಹೊರಡುವಂತೆ ಮಾಡಲಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಫಾಲ್ಘಾಟ್ ವಿಭಾಗೀಯ ಅಧಿಕಾರಿಗೆ ಸೂಚಿಸಿದರು.
ಮಂಗಳೂರು ಹೊರತುಪಡಿಸಿದರೆ, ಗೋವಾದಲ್ಲಿ ಮಾತ್ರ ರೈಲ್ವೆ ಪೊಲೀಸ್(ಜಿಆರ್‌ಪಿ) ಠಾಣೆ
ಇದೆ. ಕೊಂಕಣ ಮಾರ್ಗ ಹಾಗೂ ಮಂಗಳೂರು-ಸಕಲೇಶಪುರ ವರೆಗೆ ರೈಲ್ವೆ ಪೊಲೀಸರ ಯಾವುದೇ ಠಾಣೆಗಳು ಇಲ್ಲ. ಮಂಗಳೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ಕೊರತೆ ಇದ್ದು,
ಇದರಿಂದಾಗಿ ರೈಲು ಸಂಚಾರ ವೇಳೆ ಭದ್ರತೆ ಸೇರಿದಂತೆ ಸೂಕ್ತ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ತೊಂದರೆಯಾಗುತ್ತಿರುವ ಅಂಶವನ್ನು ಗಮನಕ್ಕೆ ತಂದಾಗ ಪ್ರತಿಕ್ರಿಯಿಸಿದ ಸಚಿವರು, ಈ ನಿಟ್ಟಿನಲ್ಲಿ ರೈಲ್ವೆ ಸಚಿವ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.

Exit mobile version