Home News ಮಂಗಳೂರಿನಲ್ಲಿ ಅಬ್ಬರಿಸಿದ ಮಳೆ: ವಿವಿಧಡೆ ಜಲಾವೃತ

ಮಂಗಳೂರಿನಲ್ಲಿ ಅಬ್ಬರಿಸಿದ ಮಳೆ: ವಿವಿಧಡೆ ಜಲಾವೃತ

ಸಂ. ಕ. ಸಮಾಚಾರ, ಮಂಗಳೂರು: ಕಳೆದೆರಡು ದಿನಗಳಿಂದ ಸ್ವಲ್ಪ ತಗ್ಗಿದ್ದ ಮಳೆ ಶನಿವಾರ ಮಧ್ಯಾಹ್ನದಿಂದ ಮತ್ತೆ ಅಬ್ಬರಿಸಿದೆ. ನಿರಂತರವಾಗಿ ಸುರಿದ ಪರಿಣಾಮ ಮಂಗಳೂರು ಸೇರಿದಂತೆ ಜಿಲ್ಲೆಯಾದ್ಯಂತ ಕೃತಕ ನೆರೆಯಾಗಿದ್ದು, ವಿವಿಧ ಪ್ರದೇಶಗಳು ಜಲಾವೃತಗೊಂಡಿದೆ. ಮನೆಗಳಿಗೆ ನೀರು ನುಗ್ಗಿದೆ.
ಇಂದು ಬೆಳಿಗ್ಗೆ ಬಿಸಿಲಿನ ವಾತಾವರಣವಿತ್ತು, ಎರಡನೇ ಶನಿವಾರ ರಜೆಯೂ ಇದ್ದುದರಿಂದ ಮಂಗಳೂರು ನಗರದೆಲ್ಲೆಡೆ ವಾಹನ ಸಂಚಾರ, ಜನಸಂಚಾರ ಹೆಚ್ಚಿತ್ತು. ಆದರೆ ಮಧ್ಯಾಹ್ನದ ಬಳಿಕ ಸುರಿದ ಅಬ್ಬರದ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು.
ಮಂಗಳೂರಿನ ಪಂಪ್‌ವೆಲ್ ವೃತ್ತ, ಪಡೀಲ್ ರೈಲ್ವೇ ಕೆಳ ಸೇತುವೆ ಜಲಾವೃತಗೊಂಡು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಪಂಪ್‌ವೆಲ್ ವೃತ್ತ ಜಲಾವೃತಗೊಂಡಿರುವ ಕಾರಣ ಸುತ್ತಮುತ್ತಲಿನ ಎಲ್ಲಾ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಕಳೆದ ಸುಮಾರು ಒಂದು ತಾಸಿನಿಂದ ಈ ರಸ್ತೆಗಳಲ್ಲಿ ವಾಹನಗಳ ಸರಾಗ ಸಂಚಾರಕ್ಕೆ ಸಾಧ್ಯವಾಗದೆ ವಾಹನ ದಟ್ಟಣೆ ಉಂಟಾಗಿದೆ.
ಈ ನಡುವೆ ಎಕ್ಕೂರು, ಜಪ್ಪಿನಮೊಗರುವಿನ ರಾಜಕಾಲುವೆಯೂ ತುಂಬಿ ಹರಿಯುತ್ತಿದ್ದು, ಸುತ್ತಮುತ್ತಲಿನ ಮನೆಗಳಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ. ಭಾರೀ ಮಳೆಯಿಂದಾಗಿ ರಸ್ತೆಗಳಲ್ಲೇ ಭಾರೀ ಪ್ರಮಾಣದ ನೀರು ಹರಿಯುತ್ತಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಮಂಗಳೂರಿನ ಕೊಟ್ಟಾರ, ರಥಬೀದಿ, ಕೊಡಿಯಾಲಬೈಲ್, ಎಂ. ಜಿ. ರಸ್ತೆ ಸೇರಿದಂತೆ ವಿವಿಧ ಪ್ರಮುಖ ರಸ್ತೆಗಳಲ್ಲಿ ನೆರೆಯಾಗಿದ್ದು ವಾಹನ ಸಂಚಾರವೇ ದುಸ್ತರವಾಗಿತ್ತು.

ಕಲಬುರಗಿ ಆವೃತ್ತಿ ರಜತ ಸಂಭ್ರಮ
Exit mobile version