ಬೆಂಗಳೂರು: ಬೆಂಗಳೂರು- ವಿಜಯಪುರ ರೈಲು ಪ್ರಯಾಣದ ಅವಧಿಯನ್ನು 10ಗಂಟೆಗೆ ಇಳಿಸುವ ಸಂಬಂಧ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಅವರು ಕೇಂದ್ರ ರೈಲ್ವೆ ಸಹಾಯಕ ಸಚಿವ ವಿ.ಸೋಮಣ್ಣ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಣದಲ್ಲಿ ಪೋಸ್ಟ್ ಮಾಡಿ
ರಾಜಧಾನಿಯಿಂದ ವಿಜಯಪುರ ಮತ್ತು ಬಾಗಲಕೋಟೆಗೆ ಈಗಿರುವ 15 ಗಂಟೆಗಳ ಪ್ರಯಾಣದ ಅವಧಿಯನ್ನು ಹತ್ತು ಗಂಟೆಗಳಿಗೆ ಇಳಿಸುವ ಸಂಬಂಧ ಕೇಂದ್ರ ರೈಲ್ವೆ ಸಹಾಯಕ ಸಚಿವರಾದ ಶ್ರೀ ವಿ. ಸೋಮಣ್ಣ ಅವರೊಂದಿಗೆ ಇಂದು ದೂರವಾಣಿಯಲ್ಲಿ ಮಾತನಾಡಿದೆ.
ಈಗ ವಿಜಯಪುರ, ಬಾಗಲಕೋಟೆಗೆ ಹೋಗುವ ರೈಲುಗಳು ಹುಬ್ಬಳ್ಳಿ ಮತ್ತು ಗದಗಿನಲ್ಲಿ ಎಂಜಿನ್ ಬದಲಿಸಿಕೊಳ್ಳಲು ಗಂಟೆಗಟ್ಟಲೆ ನಿಲ್ಲಬೇಕಾಗಿದೆ. ಎರಡೂ ಕಡೆ ಬೈಪಾಸ್ ಮೂಲಕ ರೈಲುಗಳು ಸಾಗಿಹೋಗುವ ವ್ಯವಸ್ಥೆ ಆಗಬೇಕು. ಇದರಿಂದ ಗದಗ ಭಾಗದ ಜನತೆಗೂ ಅನುಕೂಲವಾಗುತ್ತದೆ. ಒಂದು ವೇಳೆ ಈಗಾಗಲೇ ಓಡುತ್ತಿರುವ ರೈಲುಗಳನ್ನು ಬೈಪಾಸ್ ಮೂಲಕ ಓಡಿಸುವುದು ಅಸಾಧ್ಯವಾದರೆ, ಹೊಸ ರೈಲುಗಳ ಸೇವೆಯನ್ನಾದರೂ ಆರಂಭಿಸಬೇಕು ಎಂದು ಕೇಳಿದ್ದು, ಶ್ರೀ ಸೋಮಣ್ಣನವರು ಈ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಶೀಘ್ರದಲ್ಲೇ ದೆಹಲಿಗೆ ತೆರಳುವ ಯೋಚನೆಯಿದ್ದು, ಸಚಿವ ಸೋಮಣ್ಣನವರನ್ನು ಭೇಟಿಮಾಡಿ, ಮತ್ತೊಂದು ಸುತ್ತಿನ ಮಾತುಕತೆ ನಡೆಸಿ ನಮ್ಮ ಈ ಪ್ರಸ್ತಾಪವನ್ನು ಮುಂದಿನ ಹಂತಕ್ಕೆ ಒಯ್ಯಲಾಗುವುದು ಎಂದಿದ್ದಾರೆ.