Home News ಬೆಂಗಳೂರು ನಗರ‌ ನೂತನ ಪೊಲೀಸ್‌ ಆಯುಕ್ತರಾಗಿ ಸೀಮಂತ್‌ ಕುಮಾರ್‌ ಸಿಂಗ್‌

ಬೆಂಗಳೂರು ನಗರ‌ ನೂತನ ಪೊಲೀಸ್‌ ಆಯುಕ್ತರಾಗಿ ಸೀಮಂತ್‌ ಕುಮಾರ್‌ ಸಿಂಗ್‌

ಬೆಂಗಳೂರು: ನಗರದ ನೂತನ ಪೊಲೀಸ್ ಆಯುಕ್ತರಾಗಿ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರನ್ನು ರಾಜ್ಯಸರ್ಕಾರ ನೇಮಕ ಮಾಡಿದೆ.
ಈ ಮುನ್ನ ಆಯುಕ್ತರಾಗಿದ್ದ ಬಿ. ದಯಾನಂದ್ ಅವರನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಅಮಾನತು ಮಾಡುವ ನಿರ್ಧಾರವನ್ನು ಸರ್ಕಾರ ಕೈಗೊಂಡಿತು. ಈ ಹಿನ್ನೆಲೆಯಲ್ಲಿ ಸೀಮಂತ್ ಕುಮಾರ್ ಸಿಂಗ್ ನಗರದ 39ನೇ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಬಿಹಾರದ ರಾಂಚಿ ಮೂಲದ ಸೀಮಂತ್ ಕುಮಾರ್ ಸಿಂಗ್ 1970ರಲ್ಲಿ ಜನಿಸಿದ್ದು, 1996ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಈ ಹಿಂದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ಅವರು, ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಡಿಸಿಪಿ, ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ, ಕೇಂದ್ರ ವಲಯದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಸೀಮಂತ್ ಕುಮಾರ್ ಸಿಂಗ್ ಮಂಗಳೂರು ನಗರಕ್ಕೆ ಕಮಿಷನರೇಟ್ ಬಂದ ಬಳಿಕ ಮೊದಲ ಪೊಲೀಸ್ ಕಮಿಷನರ್ ಆಗಿದ್ದರು. 2000ದಿಂದ 2004ರವರೆಗೆ ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿಯಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಆ ಬಳಿಕ 2014ರಲ್ಲಿ ಪಶ್ಚಿಮ ವಲಯದ ಐಜಿಪಿಯಾಗಿದ್ದರು. ಬಳಿಕ ಎಸಿಬಿ, ಕೆಎಸ್‌ಆರ್‌ಪಿ ಹೆಚ್ಚುವರಿ ಪೊಲೀಸ್ ಹಾನಿರ್ದೇಶಕರಾಗಿದ್ದ ಸೀಮಂತ್ ಕುಮಾರ್ ಸಿಂಗ್‌ರನ್ನು ಕೆಲ ತಿಂಗಳ ಹಿಂದಷ್ಟೇ ಬಿಎಂಟಿಎಫ್ ಎಡಿಜಿಪಿಯನ್ನಾಗಿ ನೇಮಿಸಲಾಗಿತ್ತು. ಇದೀಗ ನಗರ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.

Exit mobile version