Home ಅಂಕಣ `ನ್ಯಾಕ್ ಗ್ರೇಡ್’ ಎಂಬ ಬೃಹನ್ನಾಟಕ!

`ನ್ಯಾಕ್ ಗ್ರೇಡ್’ ಎಂಬ ಬೃಹನ್ನಾಟಕ!

0

ಶಿಕ್ಷಣ ಮತ್ತು ತನ್ಮೂಲಕ ಸಮಾಜವನ್ನು ಅಧೋಗತಿಗೆ ನೂಕುವ ಈ ದಂಧೆಯನ್ನು ಏನಂತ ಕರೆಯುವುದು?
ರಾಷ್ಟ್ರೀಯ ಮೌಲ್ಯ ಮಾಪನ ಮತ್ತು ಮಾನ್ಯತಾ ಮಂಡಳಿಯ (ನ್ಯಾಕ್) ಅಕ್ರಮ, ಅವ್ಯವಹಾರ, ಭಂಡತನ ಈಗ ಮತ್ತೊಮ್ಮೆ ಬಯಲಾಗಿದೆ. ಇದು ಮಾನ ಮರ್ಯಾದೆ, ನಾಚಿಕೆ ಬಿಟ್ಟವರ ಮಂಡಳಿ ಎಂದು ಮೇಲ್ಮಟ್ಟಕ್ಕೆ ಹೇಳಿ ಸುಮ್ಮನಾಗಬಹುದು.
ಆದರೆ ಈ ಸಾಮಾನ್ಯ ಟೀಕೆಯನ್ನೂ ಮೀರಿದ, ಎಷ್ಟು ಕಟುವಾಗಿ ತರಾಟೆಗೆ ತೆಗೆದುಕೊಂಡು ಶಿಕ್ಷಿಸಿದರೂ ಸಹಿಸಲಾಗದ ಈ ಕೆಟ್ಟ ಕೆಲಸಕ್ಕೆ ಕ್ರೂರ ಶಬ್ದಗಳ ಬಳಕೆ ಅನಿವಾರ್ಯ. ಏಕೆಂದರೆ ಯಾವುದೇ ಪದಮಿತಿಗೆ ಸಿಲುಕದ ಕುಕೃತ್ಯವಿದು. ಶಿಕ್ಷಣ ಸಂಸ್ಥೆಗಳು ಮಕ್ಕಳ ಭವಿಷ್ಯ, ಎಲ್ಲಕ್ಕೂ ಹೆಚ್ಚಾಗಿ ಶೈಕ್ಷಣಿಕ ಗರಿಮೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಣ್ಣುಪಾಲು ಮಾಡಿದ ಹೇಯ ಕೆಲಸವಿದು.
ಒಂದು ಶಿಕ್ಷಣ ಸಂಸ್ಥೆ ಮಾನದಂಡ ನಿರ್ಧರಿಸಿ ಗ್ರೇಡ್ ಕೊಡಲು ಕೋಟ್ಯಂತರ ರೂಪಾಯಿ ಲಂಚ ರುಷುವತ್ತು ಪಡೆದ ಹಾಗೂ ಕೊಟ್ಟ ಹತ್ತು ಮಂದಿ ಈಗ ಬಂಧನಕ್ಕೆ ಒಳಗಾಗಿದ್ದಾರೆ. ಸ್ವತಃ ನ್ಯಾಕ್ ಅಧ್ಯಕ್ಷರಾದಿಯಾಗಿ ಎಲ್ಲರೂ ಆರೋಪಿಗಳು.
ಗುಣಮಟ್ಟ, ಅಲ್ಲಿಯ ಸೌಲಭ್ಯ, ಅರ್ಹತೆ ಆಧಾರದ ಮೇಲೆ ನೀಡಬೇಕಾದ ಗ್ರೇಡ್ ಹಿಂದೆ ಹಣದ ಥೈಲಿ ಇರುವುದು ಈಗ ಬಯಲಾಗಿದೆ. ನ್ಯಾಕ್ ಸಮಿತಿಯ ಸದಸ್ಯರಾಗುವವರು ಇಡೀ ರಾಷ್ಟçದ ಶಿಕ್ಷಣದ ವ್ಯವಸ್ಥೆಯನ್ನೇ ಕಟ್ಟಿ ಗೇಲಿ ಮಾಡುತ್ತಿರುವ ಲಂಪಟರು ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಿಲ್ಲ. ಹೆಚ್ಚು ಹೆಚ್ಚು ಪದವಿ ಪಡೆದವರು, ಓದಿದವರು, ಪರಿಣಿತರು, ಸಂಶೋಧಕರು ಹೆಚ್ಚು ಭ್ರಷ್ಟರಾಗುತ್ತಿದ್ದಾರೆ ಎನ್ನುವುದನ್ನು ನ್ಯಾಕ್ ತಂಡ ರುಜುವಾತು ಮಾಡಿದೆ.
ಎಲ್ಲಿಗೆ ಬಂತು ವ್ಯವಸ್ಥೆ ನೋಡಿ. ನ್ಯಾಕ್ ಅಕ್ರಮ ಮತ್ತು ಅದರ ಕಾರ್ಯವೈಖರಿ ದೋಷಗಳು ಇಂದು ನೆನ್ನೆಯವೇನಲ್ಲ. ಎರಡು ಮೂರು ದಶಕಗಳ ಹಿಂದೆಯೇ ಅದರ ಅಕ್ರಮ ಬೃಹತ್ ಪ್ರಮಾಣದಲ್ಲಿ ಬಯಲಾಗಿತ್ತು.
೨೦೧೦ರಲ್ಲಿ ಎಂಸಿಐ (ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ) ಮೇಲಿನ ಆರೋಪ, ಆಗಿನ ಅಧ್ಯಕ್ಷ ಡಾ.ಕೇತನ್ ದೇಸಾಯಿ ಅವರ ಬಂಧನ, ಆ ನಂತರದ ಎಂಸಿಐ ಬಗೆಗಿನ ಆಕ್ರೋಶ, ನಡೆದ ಕಾನೂನು ತಿದ್ದುಪಡಿ ಬಹುಶಃ ಈ ದೇಶದ ವೈದ್ಯಕೀಯ ಶಿಕ್ಷಣದ ಭಾರೀ ಹಗರಣದಲ್ಲಿ ಒಂದು.
ಡಾ.ಕೇತನ್ ದೇಸಾಯಿ ನೇತೃತ್ವದ ಎಂಸಿಐ ತಂಡ ನಡೆಸಿದ ಹಗರಣ ಖಾಸಗಿ ವೈದ್ಯಕೀಯ ಕಾಲೇಜುಗಳ ಮಿಲಾಪಿತನ ಮತ್ತು ಆ ಕಾಲೇಜುಗಳಿಂದ ಹೊರ ಬರುವ ವೈದ್ಯರುಗಳ ಗುಣಮಟ್ಟ ಹೇಗಾಗುತ್ತಿದೆ ಎನ್ನುವುದಕ್ಕೆ ಬಾಲಿವುಡ್, ಕಾಲಿವುಡ್, ಸ್ಯಾಂಡಲ್‌ವುಡ್ ಸಿನೆಮಾಗಳೂ ಬಂದವು.
ಇದಾದ ನಂತರ ಇಂಥವುಗಳಿಗೆ ಬ್ರೇಕ್ ಬಿದ್ದೀತು, ಪರ್ಯಾಯವಾದೀತು ಎಂದುಕೊಂಡು ರಾಷ್ಟ್ರೀಯ ವೈದ್ಯಕೀಯ ಆಯೋಗವನ್ನು ರಚಿಸಲಾಯಿತು. ಆದರೆ ಎಂಸಿಐ ಮತ್ತು ನ್ಯಾಕ್ ಇವೆಲ್ಲವುಗಳಿಗೆ ನಾಮನಿರ್ದೇಶನ ಪದ್ಧತಿ ಇರುವುದರಿಂದ ಮತ್ತು ನೇವiಕಾತಿಗೊಂದು ಸ್ಕ್ರೀನಿಂಗ್ ಕಮಿಟಿ ರಚಿಸಿ ಪ್ರಕ್ರಿಯೆಗಳನ್ನುನಡೆಸುವುದರಿಂದ ಆಗಿರುವುದೇ ಇಂದಿನ ಉನ್ನತ ಮಟ್ಟದ ಸ್ಪೆಷಲಿಸ್ಟುಗಳ' ಈ ಅವ್ಯವಹಾರ !! ಜೆಎನ್‌ಯು ದೇಶದ ಪ್ರತಿಷ್ಠಿತ ಸಂಸ್ಥೆ. ಅಲ್ಲಿಯ ಪ್ರಾಧ್ಯಾಪಕರೊಬ್ಬರು ಮೊನ್ನೆ ಸಿಬಿಐ ಬಂಧನಕ್ಕೆ ಒಳಗಾದ ನ್ಯಾಕ್ ಸಮಿತಿಯ ಸದಸ್ಯರು. ದಾವಣಗೆರೆಯ ಮಹಿಳಾ ಪ್ರೊಫೆಸರ್ ಮಾಜಿ ಉಪಕುಲಪತಿಯೂ ಆಗಿದ್ದವರು-ಇವರೂ ಬಂಧನಕ್ಕೆ ಒಳಗಾಗಿದ್ದಾರೆ. ಇಷ್ಟೇ ಅಲ್ಲ. ಈ ದೇಶದ ಶೈಕ್ಷಣಿಕ ಗುಣಮಟ್ಟವನ್ನು ನಿರ್ಧರಿಸಲು ತಮಗಿಂತ ಅರ್ಹರು ಯಾರಿದ್ದಾರೆ ಎಂದು ಘೋಷಿಸಿಕೊಂಡೇ ಪ್ರಭಾವ ಬೀರಿ ನೇಮಕ ಮಾಡಿಕೊಂಡವರು. ಎಲ್ಲರೂ ಈಗ ಬಂಧನಕ್ಕೆ ಒಳಗಾದವರೇ. ನೇಮಕ ಮಾಡುವ ಸರ್ಕಾರ ಮತ್ತು ರಾಜಕಾರಣಿಗಳಿಗೆ ಹಣ ತೆತ್ತವರು ಸುಮ್ಮನುಳಿಯುತ್ತಾರೆಯೇ? ಆಗಲೇ ಈ ಗ್ರೇಡ್‌ಗಳ ಮಾರಾಟ ಆರಂಭವಾದದ್ದು. ಈ ಮಂಡಳಿಯ ತಪಾಸಣೆ, ಭೇಟಿ, ಪರಿಶೀಲನೆ ಹೇಗಿರುತ್ತದೆಂದರೆ ಅವರೆಲ್ಲರನ್ನು ಬ್ಯುಸಿನೆಸ್ ಕ್ಲಾಸ್ ವಿಮಾನದಲ್ಲಿ ಕರೆತರಬೇಕು; ಫೈವ್ ಸ್ಟಾರ್ ಹೋಟೆಲ್‌ನಲ್ಲಿ ತಂಗಿಸಿ ರಾಯಲ್ ಟ್ರೀಟ್‌ಮೆಂಟ್ ನೀಡಬೇಕು; ಅಲ್ಲದೇ ಉತ್ಕೃಷ್ಟ ಉಡುಗೊರೆ ಹಾಗೂ ಕಾಣಿಕೆ ಎಲ್ಲವೂ ಸಂದಾಯವಾಗಬೇಕು!! ಈ ಸಂಸ್ಥೆಗಳು ನೀಡುವ ``ಮೌಲ್ಯ''ದ ಮೇಲೆ ಅವರ ಗ್ರೇಡ್ ನಿರ್ಧಾರವಾಗುತ್ತದೆ. ತಾವು ನೋಡಿರುತ್ತೀರಿ. ಹಲವು ವೈದ್ಯಕೀಯ ಕಾಲೇಜುಗಳಲ್ಲಿ, ಖಾಸಗಿ ವಿಶ್ವವಿದ್ಯಾಲಯಗಳಲ್ಲಿ, ಕಾಲೇಜುಗಳಲ್ಲಿ ಸರಿಯಾದ ಪೀಠೋಪಕರಣಗಳೂ ಇಲ್ಲ. ಉಪನ್ಯಾಸಕರೂ ಇಲ್ಲ. ಬೆಲ್ ಬಾರಿಸುವ ಅಟೆಂಡರ್ ಕೂಡ ಇರಲ್ಲ. ಅಂತಹ ಸಂಸ್ಥೆಗಳಿಗೂಎ’, ಎ+',ಎ++’ ಶ್ರೇಣಿ ದೊರಕಿದೆ!.
ಈ ಸಮಿತಿ ಬಂದಾಗ ಯರ‍್ಯಾರನ್ನೋ ಕರೆತಂದು ಪ್ರದರ್ಶಿಸಿ, ಇವರೆಲ್ಲ ನಮ್ಮ ಘನತೆವೆತ್ತ ಪ್ರಾಧ್ಯಾಪಕರು, ಉಪನ್ಯಾಸಕರು, ಪರಿಣಿತರು, ತಂತ್ರಜ್ಞರು, ಸಿಬ್ಬಂದಿ' ಎಂದು ಆಡಳಿತ ಮಂಡಳಿಗಳು ಫ್ಯಾಷನ್ ಶೋಗಳಂತೆ ತೋರಿಸುತ್ತವೆ. ಅವೆಲ್ಲವೂ ಇವರದಲ್ಲ ಎನ್ನುವುದು ಬಹುತೇಕ ಸದಸ್ಯರಿಗೂ ಗೊತ್ತು. ಆದರೆ ಆ ನಂತರ ಕುದುರುವ ವ್ಯವಹಾರಗ್ರೇಡ್’ ನಿರ್ಧರಿಸುತ್ತದೆ. ಆಂಧ್ರಪ್ರದೇಶದ ಕೆ.ಎಲ್. ಶಿಕ್ಷಣ ಪ್ರತಿಷ್ಠಾನದ ಹಗರಣ ಕೇವಲ ನಾಮಕೇವಾಸ್ತೆ ಅಷ್ಟೇ. ಬಹುತೇಕ ಗ್ರೇಡ್ ಪಡೆದ ಎಲ್ಲ ಸಂಸ್ಥೆಗಳ ಬಾಗಿಲು ಬಡಿದು, ವಿಚಕ್ಷಕ ದೃಷ್ಟಿಯನ್ನು ಹರಿಸಿ ಪರಿಶೀಲಿಸಿ; ಅಲ್ಲಿಯ ಆಡಳಿತ ಮಂಡಳಿಯ ಮುಖ್ಯಸ್ಥರ ಆಂತರಿಕ ಅಭಿಪ್ರಾಯ ಕೆದಕಿ. ಆಗ ಹೊರಬರುತ್ತದೆ ಒಟ್ಟಾರೆ ಹಗರಣದ ಹೂರಣ. ನ್ಯಾಕ್- ಎಂಸಿಐಗಳಿಗೆ ಸದಸ್ಯರದು ಕೋಟ್ಯಂತರ ರೂಪಾಯಿ ವಿಕ್ರಿ- ಹರಾಜು ನಡೆದಂತೆ, ಇವರು ಕಕ್ಕಿಸುವುದೂ ಹಾಗೇ.
ಉನ್ನತ ಶಿಕ್ಷಣ ಯಾವ ಮಟ್ಟಕ್ಕಿಳಿದಿದೆ ಎಂದರೆ ವಿಶ್ವವಿದ್ಯಾಲಯದ ಕುಲಪತಿಗಳ ನೇಮಕ ಇತ್ತೀಚೆಗೆ ರಾಜಕೀಯ ಮತ್ತು ಜಾತಿ ಜೊತೆಗೆ ಕುದುರಿಸಿಕೊಳ್ಳುವ ವ್ಯವಹಾರದಿಂದ ಕೂಡಿದೆ. ಕರ್ನಾಟಕದಲ್ಲಿಯೇ ಬಹುತೇಕ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಹತ್ತಾರು ಹಗರಣಗಳು ನಡೆದಿರುವುದು, ಇವಕ್ಕೊಂದು ತನಿಖಾ ಸಂಸ್ಥೆ ರಚಿಸಿ ವರದಿ ಪಡೆದಿರುವುದು, ಹಾಗೇ ಈ ವರದಿಗಳೆಲ್ಲ ಶೈತ್ಯಾಗಾರ ಸೇರಿರುವುದು ಮತ್ತು ಅವೆಲ್ಲವೂ ರಾಜಕೀಯ ದಾಳವಾಗಿರುವುದು ಸ್ಪಷ್ಟ.
ಕುಲಪತಿಗಳ ನೇಮಕ ರಾಜಭವನದ ಅಂಗಳದಲ್ಲಿ ಬಿಕರಿಯಾಗಿದೆ ಎನ್ನುವ ಆರೋಪ ಈ ಹಿಂದಿನಿಂದಲೂ ಇದೆ. ಎರಡೂ ಸರ್ಕಾರಗಳು (ಕೇಂದ್ರ ಹಾಗೂ ರಾಜ್ಯದಲ್ಲಿ) ಭಿನ್ನವಾಗಿದ್ದರೂ, ರಾಜ್ಯಪಾಲರುಗಳ ಮೇಲಿನ ಕುಲಪತಿಗಳ ನೇಮಕ, ಕಪ್ಪು ವ್ಯವಹಾರ ಆರೋಪ ಕುಂದಾಗಿಲ್ಲ. ಹಾಗೇ ಕಪ್ಪ ಕಾಣಿಕೆ ಕೊಟ್ಟವರು ಎರಡರಷ್ಟಾದರೂ ಮರಳಿ ಪಡೆಯಬೇಕಲ್ಲ ಎಂಬ ಪರೋಕ್ಷ ಕುಮ್ಮಕ್ಕು ವ್ಯವಸ್ಥೆಯದ್ದು. ಕೆಲವರು ಜೈಲಿಗೆ ಹೋಗಿ ಬಂದದ್ದು ಆಗಿದೆ. ಈ ಪ್ರತಿಷ್ಠಿತ ಹಗರಣ ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದೆಲ್ಲೆಡೆ ಆಗಿದೆ.
ನಾ ಖಾವುಂಗಾ, ನಾ ಖಾನೇ ದೂಂಗಾ' (ನಾನು ತಿನ್ನುವುದಿಲ್ಲ; ತಿನ್ನಲು ಬಿಡಲ್ಲ) ಎನ್ನುವ ಪ್ರಧಾನ ಮಂತ್ರಿಗಳ ಬಿಗಿ ನಿಲುವು ಕೆಳ ಮಟ್ಟದ ಆಡಳಿತ ವ್ಯವಸ್ಥೆಗಳಲ್ಲಿ, ಇಂತಹ ತಳಮಟ್ಟದ ಸ್ವಾಯತ್ತ ಸಂಸ್ಥೆಗಳಲ್ಲಿ ಜಾರಿಯಾಗುತ್ತಿಲ್ಲ ಏಕೆ? ಉನ್ನತ ಶಿಕ್ಷಣದ ಸಮಗ್ರ ಅಭ್ಯುದಯಕ್ಕಾಗಿ ಯುಜಿಸಿ ಇದೆ. ಯುಜಿಸಿ ಅಡಿಯಲ್ಲಿಯೇ ನ್ಯಾಕ್‌ನಂತಹ ಸಂಸ್ಥೆಯ ಸ್ಥಾಪನೆಯಾದದ್ದು. ದೇಶದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸಲು ನ್ಯಾಕ್ ಮಾನ್ಯತೆ ಕಡ್ಡಾಯ. ಅದಿಲ್ಲದಿದ್ದರೆ ಯುಜಿಸಿಯ ಅನುದಾನ, ಹಣಕಾಸಿನ ನೆರವು ಅಲ್ಲದೇ ಮಾನ್ಯತೆ ಪಡೆಯಲಾಗದು. ಇಷ್ಟಾಗಿಯೂ ನಕಲಿ ವಿಶ್ವವಿದ್ಯಾಲಯಗಳು ಸ್ಥಾಪನೆಯಾಗಿವೆ. ಬೋಧನೆ, ಕಲಿಕೆ, ಮೂಲ ಸೌಕರ್ಯ, ಆಡಳಿತ ವ್ಯವಸ್ಥೆ, ನಾಯಕತ್ವ, ಸಂಶೋಧನೆಯ ಚಿಕಿತ್ಸಕತೆ, ವಿದ್ಯಾರ್ಥಿಗಳ ಕಲಿಕಾ ಮಟ್ಟ ಮತ್ತು ಪ್ರಗತಿ, ಹಾಗೆಯೇ ಸಂಸ್ಥೆಯ ಒಟ್ಟಾರೆ ಮೌಲ್ಯ- ಘನತೆಗಳ ಹಿನ್ನೆಲೆಯಲ್ಲಿ ನ್ಯಾಕ್ ಸಮಿತಿ ಗ್ರೇಡ್ ಕೊಡಬೇಕು. ಈ ಗ್ರೇಡ್ ಹೆಚ್ಚಿಸಿದಂತೆ ವಿದ್ಯಾರ್ಥಿಗಳ ಶುಲ್ಕ ಹಾಗೂ ಡೊನೇಷನ್ ಹೆಚ್ಚಳವಾಗುತ್ತದೆ. ಮಾಧ್ಯಮಗಳಲ್ಲಿ ಎ+, ಎ++ ಎಂದು ದೊಡ್ಡದಾಗಿ ಪ್ರಚಾರ ಮಾಡಿ ವಿದ್ಯಾರ್ಥಿಗಳನ್ನು ಆಕರ್ಷಿಸಲು ಶಿಕ್ಷಣ ಸಂಸ್ಥೆಗಳಿಗೆ ಸಾಧ್ಯವಾಗಿ, ಇವು ಕಿರೀಟ್ ಕಟ್ಟಿಕೊಳ್ಳುತ್ತವೆ. ಅಷ್ಟೇ ಅಲ್ಲದೇ ವಿದೇಶಿ ವಿದ್ಯಾರ್ಥಿಗಳನ್ನೂ ಆಕರ್ಷಿಸುವುದು ಸುಲಭ. ನ್ಯಾಕ್- ಎಂಸಿಐ ನೇಮಕಾತಿ, ಯುಜಿಸಿ ಇವುಗಳು ರಾಜಕೀಯ ಸೋಂಕು ರಹಿತವಾಗಿದ್ದರೆ, ಎಲ್ಲವೂ ಪಾರದರ್ಶಕವಾಗಿರುತ್ತಿದ್ದರೆ ಬಹುಶಃ ಇದು ಈ ಮಟ್ಟಕ್ಕೆ ಇಳಿಯುತ್ತಿರಲಿಲ್ಲವೇನೋ? ಮೌಲ್ಯ ಮಾರಾಟವಾದಾಗ ನ್ಯಾಕ್- ಎಂಸಿಐ- ಯುಜಿಸಿ ಎಲ್ಲವೂ ಕೇವಲ ಅಣಕು- ಅಪಹಾಸ್ಯದ ಸಂಸ್ಥೆಗಳಂತೆ ಕಾಣುತ್ತಿವೆ. ಸಿಬಿಐ ನಿಜಕ್ಕೂ ಈ ಒಂದು ಪ್ರಕರಣದಲ್ಲಿ ಹೆಮ್ಮೆಯ ಕೆಲಸವನ್ನೇ ಮಾಡಿದೆ. ಇನ್ನಷ್ಟು ಬಿಗಿಗೊಳ್ಳಬೇಕಿವೆ ಅದರ ಬಾಹುಗಳು. ಕೇವಲ ಆಂಧ್ರದ ಸಂಸ್ಥೆ ಮತ್ತು ಹತ್ತು ಮಂದಿ ಬಂಧಿಸಿದ್ದಷ್ಟೇ ಅಲ್ಲ. ಈ ನಾಚಿಕೆಗೇಡು ಕೃತ್ಯ ಎಸಗಿದ ಎಲ್ಲರ ಮುಖವಾಡವನ್ನು ಬಯಲು ಮಾಡಿ ಶಿಕ್ಷಿಸಬೇಕು. ಈಗ ಸಕಾಲ. ಸರ್ಕಾರ ಹಾಗೂ ಶಿಕ್ಷಣ ತಜ್ಞರು ಗಮನಹರಿಸಲೇಬೇಕು. ಹೆಚ್ಚು ಪಾರದರ್ಶಕವಾಗಿ, ಶಿಕ್ಷಣ ಸ್ನೇಹಿಯಾಗಿ, ಮೌಲ್ಯದ ವೃದ್ಧಿಗಾಗಿ ಸಮಾಜ-ಸರ್ಕಾರ ಕಂಕಣ ತೊಡಲೇಬೇಕು. ಹೊಸ ಯುಜಿಸಿ, ಉನ್ನತ ಶಿಕ್ಷಣ ನೀತಿಗೆ ಈಗ ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ, ಕುಲಪತಿಗಳ ನೇಮಕ, ಆಡಳಿತದ ಅಧಿಕಾರಕ್ಕಾಗಿ ಕೇಂದ್ರ-ರಾಜ್ಯಗಳ ಸಂಘರ್ಷ ಶುರುವಾಗಿದೆ..ಕುಲಪತಿ’ ಸ್ಥಾನ ಈಗ `ಮೌಲ್ಯಯುತವಾದದ್ದು.. ಅದಕ್ಕೇ ಕೇಂದ್ರೀಕೃತವಾಗಿದೆ!
ಈಗ ಯಾವ ಮಟ್ಟಕ್ಕೆ ಬಂದಿದೆ ಎಂದರೆ ನ್ಯಾಕ್- ಎಂಸಿಐ ಗ್ರೇಡ್‌ಗಳನ್ನೂ ಹಣ ಪಡೆದು ಡಾಕ್ಟರೇಟ್ ನೀಡುವ, ದೇಶ ವಿದೇಶಗಳಲ್ಲಿ ಅವರಿಂದಲೇ ಹಣ ಪಡೆದು ಸನ್ಮಾನಿಸುವ, ಅವರಿಗೆ ರತ್ನ- ವಜ್ರ- ಶ್ರೇಷ್ಠ- ರಾಷ್ಟç ಮಟ್ಟದ ಪ್ರಶಸ್ತಿ ಎಂದೆಲ್ಲ ಪುರಸ್ಕಾರ ನೀಡುವ ಮಾಧ್ಯಮಗಳು, ಹತ್ತಾರು ಖಾಸಗಿ ಸಂಘಟನೆಗಳಿವೆಯಲ್ಲ, ಆ ಮಟ್ಟಕ್ಕೆ ತುಲನೆ ಮಾಡಿಕೊಳ್ಳುವ ಸ್ಥಿತಿ ಬಂದಿದೆ. ಈ ಎ+ ಪಡೆದರು ಎಂದರೆ ವ್ಯವಹಾರ ಜೋರಾಯಿತು ಎಂದು ಪ್ರಾಜ್ಞರು ತಿಳಿದುಕೊಳ್ಳುವಂತಾಗಿರುವುದು ಈಗಿನ ಕಹಿ ವಾಸ್ತವ.
ನ್ಯಾಕ್ ಮಂಡಳಿಯ ಹತ್ತು ಸದಸ್ಯರ ಬಂಧನ ಪ್ರಕರಣ ಈ ದೇಶದ ಶಿಕ್ಷಣ ವ್ಯವಸ್ಥೆಯಷ್ಟೇ ನಾಚಿಕೆ ಪಡೆಬೇಕಾದದ್ದಲ್ಲ. ಇಡೀ ವಿಶ್ವದಲ್ಲಿಯೇ ಭಾರತ ತಲೆ ತಗ್ಗಿಸಬೇಕಾಯಿತಲ್ಲ. ಎಷ್ಟು ಅಸಹ್ಯ?

Exit mobile version